Monday, December 21, 2009

ನನ್ನ ಸ್ಟೈಲು ನನ್ನದು

ನೂರಾರು ಮತವಿಹುದು ಲೋಕದುಗ್ರಾಣದಲಿ

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್


ಎಂದು ಮಂಕುತಿಮ್ಮನ ಕಗ್ಗದಲ್ಲಿ ಶ್ರೀ ಡಿ . ವಿ ಗುಂಡಪ್ಪನವರು ಹೇಳಿದ್ದಾರೆ.


ಈ ಪ್ರಪಂಚದಲ್ಲಿ ನಮಗೆ ಬೇಕಾದ ವಿಚಾರಗಳನ್ನು ನಾವು ಅನುಸರಿಸಬಹುದು. ಹಾಗೆಯೇ ಸಾಹಿತ್ಯಲೋಕದಲ್ಲಿ ಇರುವ ನೂರಾರು ಪ್ರಾಕಾರಗಳಲ್ಲಿ ನಮಗೆ ಬೇಕಾದ ಮಾರ್ಗವನ್ನು ನಾವು ಅನುಸರಿಸಬಹುದು. ಪ್ರಾಸ-ಛಂದಸ್ಸು-ಅನುಭವ-ಹಾಸ್ಯ-ಅನುವಾದ-ಕವಿತೆ-ಕವನ-ಹನಿ-ಮಿನಿ ಒಂದೇ ?? ಎರಡೆ ?? .ಆದರೆ ಯಾವುದೇ ಶೈಲಿಯಲ್ಲಿ ಬರೆದರೂ ಅದು ಮನದ ಮಾತನ್ನು ಅಕ್ಷರದ ಮೂಲಕ ಓದುಗನಿಗೆ ತಲಿಪಿಸಬೇಕು. ನನ್ನ ಹಲವು ಮಿತ್ರರು ನನಗೆ ಆಂಗ್ಲಭಾಷೆಯಲ್ಲಿ ಬರೆಯಲು ಹೇಳಿದ್ದಾರೆ. ಆದರೆ ನನಗೆ ಅದು ಅಸಾಧ್ಯ.ಯಾವುದೇ ಲೇಖನ ಬರೆಯುವಾಗ ಮನಸ್ಸಿನಲ್ಲಿ ಏನೊ ಒಂದು ವಿಷಯ ಬಂದರೆ ಅದು ಬರಹಕ್ಕೆ ಇಳಿಸುವಾಗ ಶಬ್ದಗಳಿಗೆ ತಡಕಾಡಬಾರದು ಅದು ಮುಕ್ತವಾಗಿ ಹರಿಯಬೇಕು ಆಗ ಮಾತ್ರ ಬರೆಯುವುದು ಬರಹಗಾರನಿಗೆ ಸಂತೋಷ ಕೊಡುತ್ತದೆ. ನನಗೆ ಆಂಗ್ಲಭಾಷೆಯಲ್ಲಿ ಅಷ್ಟು ಹಿಡಿತವಿಲ್ಲ. ಈಗ ನನಗೆ ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿ ಇಲ್ಲ ಎಂದು ಬರೆಯಬೇಕೆಂದುಕೊಳ್ಳಿ. ಕನ್ನಡದಲ್ಲಿ ಬರೆದರೆ ಅದಕ್ಕೆ "ಅಮ್ಮಾ... ಎಂದರೆ ಆ ಶಬ್ದ ಗಂಟಲಿನಿಂದ ಹೊರಡುವುದಿಲ್ಲ ಹೃದಯದಿಂದ ಬರುತ್ತದೆ ಎಂದೋ ಪ್ರಪಂಚದಲ್ಲಿ ಸಾಗರಕ್ಕಿಂತ ಆಳವಾದುದು ಪರ್ವತಕ್ಕಿಂತ ದೊಡ್ಡದು ಯಾವುದು ಎಂದರೆ ಅದು ತಾಯಿಯ ಪ್ರೀತಿ ಎಂದು ಕೊಂಬು ಬಾಲ ಸೇರಿಸಿ ಬರೆಯಬಹುದು. ಅದೇ ಆಂಗ್ಲ ಭಾಷೆಯಲ್ಲಾದರೆ "There is no realtive above mother and nothing tasteir than salt" ಎಂದು ಬರೆದರೆ ಓದುಗರು ಪಾದುಕೆಗಳನ್ನು ನಾ ಮುಂದು ತಾ ಮುಂದು ಎಂದೆನುತ ಎಸೆಯರೇ?? ಅದಕ್ಕೆ ಭಾಷೆಯ ಆಯ್ಕೆ ಮಾಡುವಾಗ ಯೋಚಿಸಬೇಕು. ಮತ್ತು ಶೈಲಿಯನ್ನು ಆರಿಸುವಾಗಲೂ ಯಾವುದರ ಬಗ್ಗೆ ಬರೆಯುತ್ತೇವೆ ಮತ್ತು ಆ ಶೈಲಿಯಲ್ಲಿ ನಾವು ಎಷ್ಟು ಹಿಡಿತ ಹೊಂದಿದ್ದೇವೆ ಎಂದು ಯೋಚಿಸಬೇಕಾಗುತ್ತದೆ. ಭಾರತ-ಪಾಕ್ ಗಡಿ ಬಿಕ್ಕಟ್ಟು ಬರೆಯಲು ಹನಿಗವನ ಬಳಸಿದರೆ ?? ಅಥವಾ ಪ್ರೇಮಪತ್ರವನ್ನು ಶಾರ್ದೂಲ ಛಂದಸ್ಸಿನಲ್ಲಿ ಬರೆದು ಪ್ರೇಯಸಿಗೆ ಕೊಟ್ಟರೆ?? ಅವಳದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ನಿಮ್ಮ ತಲೆಕೂದಲು ನೆರೆಯದೆ ?? ಅಂದರೆ ಆ ಶೈಲಿಯು ಬೇಕಾದ ಭಾವನೆಗಳನ್ನು ತರುವುದಿಲ್ಲ.


ಇನ್ನು ಒಂದು ಕಾಲೇಜಿಗೆ ಹೋಗಿ ಬಂದ ಅನುಭವ ಬರೆಯಬೇಕಾದರೆ ಪ್ರಾಸದ ಹುಚ್ಚಿನಲ್ಲಿ

----------------------------------------
ಕ್ಲಾಸಿನಲಿ ಯಾರು ಕೇಳುವರು ಪಾಠ??

ಕ್ಯಾಂಟೀನಿನಲಿ ಮಾಡುವೆವು ಊಟ

ದಿನವಿಡೀ ಹುಡುಗಿಯರದ್ದೇ ನೋಟ

ಕೊಡುತ್ತೇವೆ ಅವರಿಗೆ ಕಾಟ

-------------------------------------------

ಎಂದು ಏನೋ ಕಾಟಾಚಾರಕ್ಕೆ ಬರೆದಂತೆ ಬರೆದರೆ ಎಷ್ಟು ಬಾಲಿಶ ಎಂದೆನಿಸುತ್ತದೆ. ಅಲ್ಲದೆ ಇಂಥ ಲೇಖನ/ಕವನ ಮುಂದೆ ಓದಲು ಮನಸ್ಸಾಗುತ್ತದೆಯೇ ನೀವೇ ಹೇಳಿ ? ಆದರೆ ಇದೆ ವಿಷಯವನ್ನು

----------------------------------------------------------
ನಿಜವ ಹೇಳಲೆ ನನ್ನ ಗೆಳೆಯರೆ

ಮೋಜು ಮಾಡುವ ಪ್ರಾಯದಲಿ ಕಾ

ಲೇಜು ತರಗತಿ-ಪಾಠ-ಪ್ರವಚನ ಯಾರು ಕೇಳುವರು ??

ಭೋಜನದ ಸಮಯದಲಿ ನೋಡಿದ

ರೋಜ ಹೂವಿನ ಹಾಗಿರುವ ಟೀ

ನೇಜು ಬಾಲೆಯರಂದವನು ನಾ ಹೇಗೆ ಬಣ್ಣಿಸಲಿ ??

-------------------------------------------------------
ಎಂದು ಷಟ್ಪದಿಯಲ್ಲಿ ಬರೆದರೆ ಏನೋ ಒಂದು ಕಚಗುಳಿ ಇಟ್ಟಂತಾಗುವುದಿಲ್ಲವೆ ?? ಇದು ಲೇಖನವನ್ನು ಮುಂದೆ ಓದಿಸಿಕೊಂಡು ಹೋಗುತ್ತದೆ.


ನಾನು ದ್ವಿತೀಯ ಪಿಯುಸಿಯಲ್ಲಿದ್ದಾಗ ಯಾವುದೊ ಕನ್ನಡ ಮ್ಯಾಗಜೀನ್ ನಲ್ಲಿ ಛಂದಸ್ಸಿನ ಬಗ್ಗೆ ಒಂದು ಸೊಗಸಾದ ಲೇಖನ ಓದಿದ್ದೆ. ಆ ಸಾಲುಗಳು. (ಲೇಖಕರಿಗೆ ಅನಂತ ಧನ್ಯವಾದಗಳು ).

---------------------------------------------------------------
ಸಿಟಿಯ ಬಸ್ಸಲಿ ಮಾಡಿ ಪಯಣವ

ಬೂಟುಗಾಲ ಮಹಾನುಭಾವನು

ಮೆಟ್ಟಿ ಕಾಲನು ಕ್ಷಮಿಸಿರೆಂದನು ನೋಡಲಿಲ್ಲೆನುತ

ಕೆಟ್ಟೆನೈ ನೊಡದೆಲೆ ಈತನು

ಇಷ್ಟು ತುಳಿದನು ಇನ್ನು ನೋಡಿದ

ರೆಷ್ಟನರ್ಥವೊ ಎನುತ ಕಾಲನು ಹಿಂದಕೆಳಕೊಂಡೆ (ಭಾಮಿನೀ ಷಟ್ಪದಿ)

---------------------------------------------------------
ಸೌತೆಕಾಯೇ ಬೇಕಂತಾಳೇ ಎನ್ಮಾಡ್ಲೀ ನನ್ಮಗ್ಳೂ

ಸೀಜನ್ನಲ್ಲಾ ಸಿಕ್ಕೋಲ್ಲಾಮ್ಮಾ ಅಂದ್ರೂನು ಬಿಡ್ಲಾರ್ಳೂ ( ಸರ್ವ ಗುರೂ).

----------------------------------------------------------


ಇದರ ನಂತರ ನಾನು ನನ್ನ ಮೊದಲ ಎರಡು ಕವನಗಳನ್ನು ಭಾಮಿನೀ ಷಟ್ಪದಿಯಲ್ಲಿ ಬರೆದೆ. ( ನಂಬಿ ಕೆಟ್ಟವರು ಮತ್ತು ನನ್ನ ಕಾಲೇಜಿನ ಬಗ್ಗೆ ). ಅದು ಸಂಪಾದಕ ಮಂಡಳಿಯ ಮೆಚ್ಚುಗೆ ಪಡೆದು ಮೊದಲ ಪುಟದಲ್ಲೇ ಅಚ್ಚಾಯಿತು . ಅದರಲ್ಲಿ "ಧರಣಿಮಂಡಲದೆಲ್ಲೆಡೆಯಲಿಹರಿದರ ಆತ್ಮಜರು" ಎಂದು ಒಂದು ಸಾಲು ಬರೆದಿದ್ದೆ. ಹಾಸ್ಟೇಲಿನ ಗೆಳೆಯರ ಮುಂದೆ ಓದಿ ಹೇಳಿದರೆ ಏನೋ ಋಗ್ವೇದದ ಒಂದು ಪಾದವನ್ನು ಓದಿದಂತೆ ಅವರ ಮುಖಚರ್ಯೆ. ಪ್ರಶ್ನಾರ್ಥಕ ,ಆಶ್ಚರ್ಯ ಸೂಚಕ ಚಿಹ್ನೆ ಗಳೊಳಗೊಂಡು ಎಲ್ಲಾ special charecter ಗಳು ಅವರ ಮುಖದ ಮೇಲಿತ್ತು. ನನಗೆ ಪಿಚ್ಚೆನಿಸಿತು. ಷಟ್ಪದಿಯ ಆರೂ ಪಾದಗಳನ್ನು ಮುರಿದು ಒಳಗಡೆ ಇಟ್ಟೆ.


ಚುಟುಕ :-ಹಾಸ್ಯ ರಸಕ್ಕೆ ಹೇಳಿ ಮಾಡಿಸಿದ ಶೈಲಿ. ಪ್ರಾಸವೇ ಮೂಲಮಂತ್ರ. ಓದುಗರನ್ನು ರಂಜಿಸುವುದರಲ್ಲಿ ಎತ್ತಿದ ಕೈ. ಮನಸ್ಸಿನ creative thinking ನ್ನು ಒರೆಗಲ್ಲಿಗೆ ಹಚ್ಚಬೇಕು. ಚುಟುಕ ಎಂದೊಡನೆ ನೆನಪಿಗೆ ಬರುವುದು ಚುಟುಕುಬ್ರಹ್ಮ ದಿನಕರ ದೇಸಾಯಿ ಮತ್ತು ಡುಂಡಿರಾಜ್ ಅವರು.ಅವರ ಒಂದೊಂದು ಹನಿಗಳು ದಿನವಿಡೀ ನಗಲಿಕ್ಕೆ ಸಾಕಾಗುತ್ತವೆ. ನನಗೆ ಹಿಡಿಸಿದ ಚುಟುಕಗಳು (ಲೇಖಕರ ಹೆಸರು ತಿಳಿದಿಲ್ಲ )


ಹುಡುಗಿ - ಪ್ರಿಯತಮಾ ಏಕೆ ನಿನ್ನ ಮುಖ ಹೀಗೆ ಕಪ್ಪಿಟ್ಟಿದೆ ??

ಹುಡುಗ-ಏನು ಮಾಡಲಿ ಪ್ರಿಯೆ ಎದುರಿಗೆ ನೀ ಮಾಡಿದ ಉಪ್ಪಿಟ್ಟಿದೆ!!!!

ಹುಡುಗಿ ನನ್ನ ಶಾಂತಿ ಬ್ರಾಂಡ್ ನವಳು ಎಂದು ತಿಳಿಯುತ್ತದೆ.

------------------------------------------------------------

ಹೊನ್ನು-ಹಣ ಸಾಕಷ್ಟು ಕೊಟ್ಟರೆ ಸೈ

ಹುಡುಗಿ ಹೇಗಿದ್ದರೂ ಹುಡುಗನಿಗೆ ಅವಳೇ ಐಶ್ವರ್ಯ ರೈ

-------------------------------------------------

ಏನು ?? ರಸ್ತೆಗಳಲ್ಲೆಲ್ಲಾ ಹೊಂಡ ಗುಂಡಿಯಾ ??

ಒಹೊ!! ಬಹುಷಃ ಅದು ಇಂಡಿಯಾ!!!!

-------------------------------------
ಮಾತು ಮಾತಿಗೆ ಲೈಟು ಟೇಬಲ್ಲು ರೂಮು

ಪೆನ್ನು ಪೇಪರು ಬುಕ್ಕು ಕರ್ಚೀಪು ಗೇಮು

ಮುಂದುವರಿದರೆ ಇಂತಹ ಶಬ್ದಗಳ ಧಾಳಿ

ಶೀಘ್ರದಲಿ ತೆರೆಯುವುದು ಕನ್ನಡ ದಿವಾಳಿ (ದೇಸಾಯಿ)
-----------------------------------------------


ಇಬ್ಬರು ಯುವಪ್ರೇಮಿಗಳು ಪುರೋಹಿತರ ಬಳಿ ಹೋಗಿ ಜಾತಕ ಕೊಟ್ಟರಂತೆ. ನೋಡಿದರೆ ಮಾನವ-ರಾಕ್ಷಸ ಗಣ ( ಮದುವೆ ಮಾಡಲೇ ಬಾರದು ಅಂಥ ಸ್ಥಿತಿ). ಹೇಳಿದರೆ ಈ ಪ್ರೇಮಿಗಳು ಕೇಳುತ್ತಿಲ್ಲ. ಎನಾದ್ರೂ ಮಾಡಿ ಪುರೊಹಿತರೇ ಎಂದರಂತೆ. ಫುರೊಹಿತರು ಕೇಳಿದರು.

ಹುಡುಗನ ಹೆಸರೇನು ??---- ರಾಮ

ಹುಡುಗಿಯ ಹೆಸರೇನು ??-- ಪ್ರೇಮ

ಸರಿಯಪ್ಪ ರಾಮ-ಪ್ರೇಮ ಪ್ರಾಸ ಸರಿ ಹೋಗುತ್ತೆ ಮದ್ವೆ ಮಾಡ್ಕೊಳ್ಳಿ ಎಂದರಂತೆ.

ಆದರೆ ಮೊದಲೇ ಹೇಳಿದಂತೆ ಪ್ರಾಸವನ್ನು ಸರಿಯಾಗಿ ಬಳಸಬೇಕು.ಇಲ್ಲದ್ದಿದ್ದರೆ ನಮ್ಮ ಗಂಗಾವತಿ ಪ್ರಾಣೇಶ್ ಅವರು ಹೇಳಿದಂತೆ ನಮ್ಮ ನವ್ಯಕವಿಯ "ತ್ರಿಕಾಲ ಸತ್ಯ" ದಂತಾಗುತ್ತದೆ. ಅವನು ಬರೆದನಂತೆ

-------------------------------------
ಆಕಾಶದಾಗೈತೆ ಚಂದ್ರಬಿಂಬ

ಎದ್ರಿನಾಗೈತೆ ಲೈಟಿನ್ ಕಂಬ

ಅವನು ಹೊಗ್ತಾ ಇದ್ದಾನೆ ಹಿಡ್ಕೊಂಡು ಸಂಡಾಸ್ ಚೊಂಬ!!!

----------------------------------------------------

ಹೀಗೆ ಪ್ರಾಸದ ಅಪಪ್ರಯೋಗ ಕಿರಿಕಿರಿ ಉಂಟುಮಾಡುತ್ತದೆ ಹಾಗೂ ಯಾವುದೇ ಒಂದು ಸಂದೇಶವನ್ನು ಕೊಡದೆ ವ್ಯರ್ಥವಾಗುತ್ತದೆ.


ಅನುವಾದ:-

ಅನುವಾದ ನನಗೆ ಸ್ವಲ್ಪ ಕಷ್ಟ ಎಂದು ಅನಿಸುತ್ತದೆ. ಇದರಲ್ಲಿ ಮೂಲ ಲೇಖಕನ ಭಾವನೆಗಳನ್ನು ಓದುಗರಿಗೆ ತಲುಪಿಸುವ ಕೆಲಸ ಅನುವಾದಕರದ್ದು. ಪರಕಾಯ ಪ್ರವೇಶ ಮಾಡಿದಂತೆ ಮೂಲ ಲೇಖಕನೊಳಗೆ ಪ್ರವೇಶಿಸಿ ಬರೆಯಬೇಕು.ನಾನು ಓದಿದ ಅನುವಾದಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕಾಡಿನ ಕಥೆಗಳು ತುಂಬಾ ಹಿಡಿಸಿತು. ಕೆನೆತ್ ಆಂಡರ್ಸನ್ ಆಂಗ್ಲಭಾಷೆಯಲ್ಲಿ ಬರೆದ ಅವರ ಹುಲಿ ಬೇಟೆಯ ಅನುಭವಗಳನ್ನು ಮನೋಹರವಾಗಿ ಅನುವಾದಿಸಿದ್ದಾರೆ.ಓದಲು ಶುರು ಮಾಡಿದರೆ ಮುಗಿಯುವ ವರೆಗೆ ಪುಸ್ತಕ ಕೆಳಗಿಡಲಾಗದಂತಹ ಅನಿವಾರ್ಯತೆ ಬರುತ್ತದೆ.


ಆನುಭವ ಕಥನ:-ಅನುಭವ ಕಥನ ಹೇಗಿರಬೇಕೆಂದರೆ ಓದಿ ಮುಗಿಸಿದ ನಂತರ ಓದುಗನಿಗೆ ಅವನು ಸ್ವತಃ ಅನುಭವಿಸಿದಂತೆ ಅನ್ನಿಸಬೇಕು. ಓದುಗನನ್ನು ಕಲ್ಪನಾಲೋಕಕ್ಕೆ ಸೆಳೆದೊಯ್ಯಬೇಕು. ಇಡ್ಲಿ ತಿಂದ ಮೇಲೆ ಇಡ್ಲಿ ಚೆನ್ನಾಗಿತ್ತು ಅಂದರೆ ಅದರಲ್ಲೇನಿದೆ ? ಅನಿಸುತ್ತದೆ. ಅದೇ ಆಗ ತಾನೇ ಒಲೆಯಿಂದ ಕೆಳಗಿಳಿಸಿದ ಇಡ್ಲಿ ಅಟ್ಟದಿಂದ ಹಬೆಯಾಡುತ್ತಿದ್ದ ಇಡ್ಲಿ ನನ್ನ ಪ್ಲೇಟನ್ನು ಆಕ್ರಮಿಸಿದಾಗ ಬೆಳಿಗ್ಗಿನಿಂದ ಏನೂ ತಿನ್ನದ ನನ್ನ ಹೊಟ್ಟೆ ಇನ್ನೂ ಚುರುಕಾಯಿತು. ಬಿಸಿ ಬಿಸಿ ಇಡ್ಲಿಯ ಮೇಲೆ ಇಟ್ಟ ಬೆಣ್ಣೆ ಮುದ್ದೆ ಹಾಗೆ ಕರಗಿ ಕೆಳ ಜಾರುತ್ತಿರಲು ಇಂಗು-ತೆಂಗು-ಮೆಣಸನ್ನು ಹದವಾಗಿ ಅರೆದು ಕರಿಬೇವಿನ ಒಗ್ಗರಣೆ ಹಾಕಿ ತಯಾರಿಸಿದ ಕಾಯಿಚಟ್ನಿಯೊಳಗೆ ಇಡ್ಲಿಯನ್ನು ಅದ್ದಿ ಅದನ್ನು ನಾಲಗೆ ಮೇಲೆ ಇಟ್ಟಾಗ ನನ್ನ ಅಪ್ಪಣೆಗೆ ಕಾಯದೆ ಇಡ್ಲಿಯು ಹಾಗೆ ಕರಗಿ ಹೊಟ್ಟೆ ಸೇರಿತು. ಹೇಗೆ ಇಡ್ಲಿ ತಿಂದಂತೆ ಆಗಲಿಲ್ಲವೆ ?? ನೀವು ಇದನ್ನು ಒಮ್ಮೆ ಓದಿದ್ದರೆ ಇಪ್ಪತೈದು ರುಪಾಯಿ ಎರಡು ಬಾರಿ ಓದಿದರೆ ಐವತ್ತು ರೂಪಾಯಿ ನನ್ಗೆ ಕೊಡಬೇಕು.


ಹಾಸ್ಯ ಲೇಖನ-ಹಾಸ್ಯದ ವಿಚಾರದಲ್ಲಿ ನಾನು ಕಂಡುಕೊಂಡ ವಿಷಯ ಏನೆಂದರೆ ಮಾಂಸಾಹಾರಿ ಹಾಸ್ಯ (Non Veg Jokes) ಮಾಡಿ ನಗಿಸುವುದು ಸುಲಭ. ಸಮಾನಮನಸ್ಕ-ಸಮಾನಪ್ರಾಯದ ಜನರ ಗುಂಪು ಇದ್ದಾಗ ಇದು ನಗಿಸಬಹುದು. ಆದರೆ ಎಲ್ಲಾ ಬಗೆಯ ಜನರು ಇರುವಾಗ ಇದು ಸ್ವಲ್ಪ ಕಸಿವಿಸಿ-ಇರಿಸುಮುರಿಸಿನ ವಾತಾವರಣ ಸೃಷ್ಠಿಸುತ್ತದೆ. ಅಲ್ಲಿ ಎಲ್ಲರೂ ಒಬ್ಬರಿಗೊಬ್ಬರು ನೋಡಿಕೊಂಡು ನಗುವುದೊ? ಬೇಡವೋ?? ಎಂದು ಆಲೋಚಿಸುವಂತಾಗುತ್ತದೆ. ಅಲ್ಲದೇ ಇಂಥ ಹಾಸ್ಯಗಳ ಜೀವಿತಾವಧಿ ಅಲ್ಪ. ಆದರೆ ಸರಿಯಾದ ಸಂದರ್ಭದಲ್ಲಿ ಹೇಳಿದ ವಿವೇಚನಾಯುಕ್ತ ಹಾಸ್ಯ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತದೆ. ಅಲ್ಲದೇ ಮುಂದೆ ಜನರು ಅದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿರುತ್ತಾರೆ. ಇನ್ನು ಲೇಖನಕ್ಕೆ ಬಂದರೆ ಹಾಸ್ಯದಲ್ಲಿ ಲೇವಡಿ,ವಿಡಂಬನೆ,ಅನುಕರಣೆ ಹಾಗೂ ತಟಸ್ಥ ಹಾಸ್ಯ ಎಂದು ವಿಂಗಡಿಸಬಹುದು. ಕೆಲವು ಭಾವುಕ ಜೀವಿಗಳಿಗೆ ಲೇವಡಿ ನೊವುಂಟುಮಾಡುತ್ತದೆ. ಹಾಸ್ಯ ಮಾಡುವವನು ಎದುರಿಗಿರುವವನ ಮನೋಭಾವವನ್ನು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ಹಾಸ್ಯ ಮಾಡದಿದ್ದಲ್ಲಿ ಹಾಸ್ಯವು ಅನಗತ್ಯ ಕಲಹಕ್ಕೆ ಕಾರಣವಾಗಬಹುದು. ಅಭಿನಯ/ಲೇಖನದ ಮೂಲಕ ಹಾಸ್ಯ ತಲುಪಿಸಲು ಸಾಧ್ಯ. ಅಭಿನಯದ ಮುಖಾಂತರ ಹಾಸ್ಯ ಮಾಡುವುದು ಸುಲಭ. ಈಗ ನೋಡಿ ಒಬ್ಬ ಅಂಗಡಿಯವನಿಗೆ ಫೊನ್ ಮಾಡಿ ನಿಮ್ಮ ಬಳಿ ಇಷ್ಟು ದೊಡ್ಡ ತೆಂಗಿನಕಾಯಿ ಇದೆಯಾ ?? ಎಂದು ಕೇಳುತ್ತಾನೆ. ಇದನ್ನು ಅಭಿನಯದಲ್ಲಿ ತೋರಿಸುವಾಗ ಅವನು ಇಷ್ಟು ದೊಡ್ಡ ಎಂಬುದನ್ನು ಕೈಗಲಲ್ಲಿ ತೋರಿಸಬಹುದು. ಆದರೆ ಲೇಖನದಲ್ಲಿ ಬರೆಯಲು ಹೇಳಿದರೆ ?? ಒಂದು ಹಾಸ್ಯ ಯಶಸ್ವಿಯಾಗಬೇಕಾದರೆ ಲೇಖಕನೊಂದಿಗೆ ಓದುಗನ ಕಲ್ಪನೆಯೂ ಅಗತ್ಯ.ಇನ್ನು ಕೆಲವು "ನಗದು" ಎಂದು ಬೋರ್ಡ್ ಹಾಕಿಕೊಂಡವರಂತೆ ಏನೇ ಮಾಡಿದರೂ ನಗದ ಡಿಫೆಕ್ಟಿವ್ ಮಾಡೆಲ್ ಗಳನ್ನು ನಗಿಸುವ ಪ್ರಯತ್ನ ವ್ಯರ್ಥ. ಲೇಖನದಲ್ಲಿ ಬರೆದ ಹಾಸ್ಯ ಓದುಗನಿಗೆ ಅರ್ಥವಾಗದಿದ್ದಲ್ಲಿ ಲೇಖಕನಿಗೆ ಆತ್ಮಹತ್ಯೆಯೊಂದೇ ಮಾರ್ಗ. ಸ್ವತಃ ಬರೆದ ಹಾಸ್ಯ ಲೇಖನದ ಹಾಸ್ಯವನ್ನು ಅದು ಏನೆಂದು ವಿವರಿಸುವ ದುರ್ಗತಿ ನನ್ನ ವೈರಿಗೂ ಬರದಿರಲೆಂದು ಆಶಿಸುತ್ತೇನೆ. ನಾನು ಬರೆದ ಹಾಸ್ಯಲೇಖನ ಓದುವಾಗ ಮುಖದಲ್ಲಿ ಕೊಂಚವೂ ನಗುವಿಲ್ಲದೆ ಷೇಕ್ಸ್ ಪಿಯರ್ ನ ದುರಂತ ನಾಟಕದಂತೆ ಭಾವನೆ ಕೊಟ್ಟರೆ ನನಗೆ ರಾತ್ರಿ ನಿದ್ದೆ ಹೇಗೆ ಬರುತ್ತದೆ ನೀವೇ ಹೇಳಿ.


ಈಗ ನಾನು ಬರೆದ ಈ ಲೇಖನ ಯಾವ ಪ್ರಕಾರದೆಂದು ನನಗೂ ತಿಳಿದಿಲ್ಲ. ಆದ್ರೆ ಇದರಲ್ಲಿ ನಗಲು ಲಾಯಕ್ಕಾದ ಸ್ವಲ್ಪ ಅಂಶ ಇದೆ ಎಂದು ಭಾವಿಸುತ್ತೇನೆ. ಏನು ?? ಹಾಸ್ಯ ಅರ್ಥ ಆಯಿತಾ ಅಥವಾ ಲೇಖಕನಾದ ನಾನು ಇತಿಶ್ರೀ ಹಾಡಲೊ??? ಲೇಖನಕ್ಕೆ ಸ್ವಾಮಿ!!

==========================ವಿಕಟಕವಿ===================


Friday, December 11, 2009

ಇಟ್ಟಿದ್ದು ಬಟ್ಟಾದರೆ ವಾಟೆಂದರೇನು ??

ಈ ವಾಕ್ಯ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಕೇಳಿದ್ದು . ಎಲ್ಲೋ ಅಕ್ಕನಿಂದಲೋ ಅಣ್ಣನಿಂದಲೋ ಕೇಳಿ ಬಾಯಿಪಾಟ ಹೊಡೆದು ಕ್ಲಾಸಿಗೆ ಬಂದು ಸುಮಂತ್ ಇಟ್ಟಿದ್ದು ಬಟ್ಟಾದರೆ ವಾಟೆಂದರೇನು? ಎಂದು ಗೆಳೆಯರು ಕೇಳಿದಾಗ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲದ ನಾನು ಅದೇನೆಂದು ತಿಳಿಯಲು ತಿಪ್ಪರಲಾಗ ಹಾಕಿದ್ದೆ . ಆಮೇಲೆ it=ಇದು but=ಆದರೆ what ಅಂದರೆ ಏನು? ಅಂತ ತಿಳಿದಾಗ ಅಯ್ಯೋ ಇಷ್ಟೇನಾ? ಎಂದು ನಿಟ್ಟುಸಿರಿಟ್ಟಿದ್ದೆ. ಹೀಗೆ ಯಾವುದೇ ವಿಷಯವೇ ಆಗಲೀ ತಿಳಿಯುವ ಮೊದಲು ಏನೋ ಪರ್ವತದಂತೆ ಭಾಸವಾದರೂ ತಿಳಿದಮೇಲೆ ಪೀಚು ಪೀಚೆಂದೆನಿಸುವುದು ಸಹಜವೇ . ಇತ್ತೀಚೆಗೆ ದಿನಪತ್ರಿಕೆಯಲ್ಲಿ ಶತಾವಧಾನಿ ಆರ್. ಗಣೇಶ್ ಅವರ ಚಮತ್ಕಾರ ಕವಿತ್ವ ಓದಿದಾಗ ಇಂಥವೇ ಹಲವು ಸಮಸ್ಯಾ ಪೂರ್ತಿ ಶ್ಲೋಕ /ವಾಕ್ಚಾತುರ್ಯಗಳು ನೆನಪಿಗೆ ಬಂದವು . ಅಲ್ಲದೆ ಭಾಷಾ ಜ್ಞಾನವಿಲ್ಲದೇ ಆಗುವ ಅಭಾಸಗಳು ಆ ಸಂಧರ್ಭದಲ್ಲಿ ಪೇಚಿಗೆ ಸಿಲುಕಿಸಿದರೂ ಆಮೇಲೆ ಹಾಸ್ಯಕ್ಕೆ ಒಳ್ಳೆಯ ವಿಷಯಗಳಾಗುತ್ತವೆ. ಅವುಗಳ ಸಂಗ್ರಹವೇ ಈ ಲೇಖನ .
1) ನಮ್ಮ ಊರಿನಲ್ಲಿ ಯಾರಾದರೂ " ಏನಾಯ್ತೋ dull ಇದ್ದೀಯ? " ಎಂದಾಗ ನಾವು ಹೇಳುವುದು
"ದಶರಥನ ಸುತನರಸಿಯು ನಾಸಿಕದೊಳು ಪೊಕ್ಕು ಪೀಡಿಸುತಿಹಳು" ....
ಏನಿಲ್ಲ ಶೀತಕ್ಕೆ ಕುಂದಾಪುರ ಕನ್ನಡದಲ್ಲಿ ರಾಗದಿಂದ ಸೀತು/ಸೀತ ಅನ್ನುತ್ತಾರೆ . ಅದೆ ... ದಶರಥ ಸುತ -- ರಾಮ --ಅರಸಿ --- ಸೀತಾ ಮೂಗಿನಲ್ಲಿ ಸೇರಿ ಪೀಡಿಸುತ್ತಿದ್ದಾಳೆ . ಮೂಗಿನಲ್ಲಿ ಜೋಗ ಅನ್ನುವುದೇ ಇದರ ಅರ್ಥ .
2) ಹತ್ತುತಲೇ ಕೆಂಪಾದವನ ಆರುತಲೆ ಕಪ್ಪಾದವನ ಸಖನ ಸುತನ ಒಡೆಯನ ವೈರಿಯ ತಮ್ಮನ ಆಲಂಗಿಸಿಕೊಂಡವರಾರು?
ಇದು ವಾಕ್ಚಾತುರ್ಯ ಬರೆಯುವಾಗ ತಪ್ಪಾಗಿ ಕಾಣಬಹುದು . ಎಲ್ಲರೂ ಹತ್ತುತಲೇ ಎಂದೊಡನೆ ರಾವಣ ಎಂದುಕೊಂಡು ಉಳಿದ ಯೋಚನೆಗಳಿಗೆ ಬೀಗ-ಬಿಜಾಗ್ರಿ ಹಾಕಿ ಕೂರುತ್ತಾರೆ . ಆದರೆ ಅದು ಹೊತ್ತುತಲೇ (ಹೇಳುವಾಗ ಹಾಗೆ ಹೇಳಬಹುದು ) ಕೆಂಪಾದವನ ಆರುತಲೆ ಕಪ್ಪಾದವನ ಅಂದರೆ ಹೊತ್ತಿದ ಕೂಡಲೇ ಕೆಂಪಾದವ ( ಬೆಂಕಿ ) ಆರಿದಕೂಡಲೇ ಕಪ್ಪಾದವನ ( ಇದ್ದಿಲು ) ಅಂದರೆ ಅಗ್ನಿ ಸಖನ (ಗಾಳಿ) ಸುತನ (ಹನುಮಂತ ) ಒಡೆಯನ (ರಾಮ ) ವೈರಿಯ (ರಾವಣ ) ತಮ್ಮನ (ಕುಂಭಕರ್ಣ ) ಆಲಂಗಿಸಿಕೊಂಡವರು (ನಿದ್ದೆ ) ಹೀಗೆ ನಿದ್ದೆ ಎಂಬುದು ಇದರ ಉತ್ತರ .

3) "ದನವನ್ನು ಕಡಿಕಡಿದು ಭಗವಂತನಿಗೊಪ್ಪಿಸಿದರು "ಹೌಹಾರದಿರಿ. ಇದರ ಉತ್ತರ ಅವಧಾನಿಗಳು ಹೀಗೆ ಕೊಟ್ಟರು .
ಭಕುತರೆಲ್ಲರು ಬಂದು
ಊರದೇವರ ಪೂಜೆಗೆಂದು ಚಂ
ದನವನ್ನು ಕಡಿಕಡಿದು ಭಗವಂತನಿಗೊಪ್ಪಿಸಿದರು !!!
ಅದು ಚಂದನವನ್ನು ಎಂದು ತಿಳಿದಾಗ ಇಷ್ಟೇನಾ? ಎಂದು ಅನ್ನಿಸಲಿಲ್ಲವೇ?

4) ವ್ಯಾಕರಣ ಪಾಠ ಮಾಡುವಾಗ ಒಂದು ಶಬ್ದ ಓದುವಾಗ ಅದನ್ನು ಇಡಿಯಾಗಿ ಓದಬೇಕು ಅಕ್ಷರ ಸೇರಿಸುತ್ತಾ ಮಗ್ಗಿ ಲೆಕ್ಕ ಹಾಕಿ ಓದಿದರೆ ಅರ್ಥ ಆಗುವುದಿಲ್ಲ ಅಂದು ವಿವರಿಸಿ ಈ ವಾಕ್ಯ ಹೇಳಿದರು
ಅಕಬರಸಾ
ಹೇಬರುತ
ರತರತದ
ಕೋಳಿಗಳನುಸಾ
ಕಿದ್ದರು .
(ಅಕಬರ ಸಾಹೇಬರು ತರತರದ ಕೋಳಿಗಳನ್ನು ಸಾಕಿದ್ದರು) ಅಂದಾಗ ನಮಗೆ ಅಕ್ಷರ ಕಲಿತು ಶಬ್ದ ಓದಬೇಕೆಂದು ಮನದಟ್ಟಾಯಿತು.

5) ಹಿಡಿಂಬೆಯು ಸೆರಗು ಬೀಸಿ ಮಾವನನ್ನು ಕರೆಯುತ್ತಿದ್ದಾಳೆ .
( ಇದು ಸಂಸ್ಕೃತ ಸಮಸ್ಯಾಪೂರ್ತಿ ಶ್ಲೋಕದ ಅನುವಾದ )ಮೇಲ್ನೋಟಕ್ಕೆ ಸ್ವಲ್ಪ ಅಶ್ಲೀಲ ಅನ್ನಿಸಬಹುದು ಆದರೆ ನಿಜಾರ್ಥ ಬೇರೆಯೇ ಇದೆ .ಬೇಸಗೆಯ ಸುಡು ಬಿಸಿಲಿನಲ್ಲಿ ಸೆಖೆಯನ್ನು ತಾಳಲಾಗದೆ ಹಿಡಿಂಬೆಯು ಸೆರಗು ಬೀಸಿಕೊಂಡು ಮಾವ ( ಹಿಡಿಂಬೆಯ ಗಂಡ ಭೀಮ , ಭೀಮ ವಾಯುಪುತ್ರ ) ಅಂದರೆ ಗಾಳಿಯನ್ನು ಕರೆಯುತ್ತಿದ್ದಾಳೆ . ಅಂದರೆ ಸೆರಗನ್ನು ಬೀಸಿ ಗಾಳಿ ಹಾಕಿಕೊಳ್ಳುತ್ತಿದ್ದಾಳೆ ಎಂದರ್ಥ .

ಇನ್ನು ಬನ್ನಿ ಅಪಾರ್ಥಕ್ಕೆ !!!!
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೌ ( ಭಗವದ್ಗೀತೆ ಅಧ್ಯಾಯ ೧೫ ) ( ಎಲ್ಲರ ಹೃದಯದಲ್ಲೂ ನಾನು ನೆಲೆಸಿರುತ್ತೇನೆ ). ಎಂದು ಸ್ವಾಮಿಗಳು ಹೇಳಿ ಇದರ ಅರ್ಥ ಏನೆಂದು ಕೇಳಿದಾಗಸ್ಟವ್ ಮೇಲೆ ಮಾಡಿದ ಚಾ ಎಲ್ಲಕ್ಕಿಂತ ಒಳ್ಳೆಯದು ಎಂದು ನಮ್ಮ ಗುಂಡ ಕೂಗಿದನು .

" ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ " ( ನಮಗೆ ಅನೇಕ ವರಗಳನ್ನು ನೀಡಲು ಏಕದಂತ ಗಣಪತಿಯನ್ನು ಸ್ತುತಿಸುತ್ತೇನೆ" ) ಇದನ್ನು ಅನೇಕ ದಂತ ಅಂದರೆ 32 ಹಲ್ಲು ಇರುವ ಮನುಷ್ಯರು ಒಂದೇ ಹಲ್ಲಿರುವ ನಿನ್ನನ್ನು ಯಾಕೆ ಪೂಜೆ ಮಾಡುತ್ತಾರೆ? ಎಂದು ಅರ್ಥೈಸಬಹುದು .

ಹೃದಯಂಲು ಪ್ರೇಮಂ ಪೆಟ್ಕೋ ( ಹೃದಯದಲ್ಲಿ ಪ್ರೀತಿ ಇಟ್ಟುಕೊಳ್ಳಿ ) ಎಂದ ತೆಲುಗು ಭಾಷಿಗನೊಂದಿಗೆ ಕನ್ನಡದವನು " ಪ್ರೇಮಳ ಬರಿ ಬಂದರೆ ಪೆಟ್ಟು ಹೊಡೆಯುತ್ತೇನೆ" ಎಂದು ಭಾವಿಸಿ ಬಾಕ್ಸಿಂಗ್ ಗೆ ಇಳಿದರೆ?

ಕರ್ನಾಟಕದ ಜನರಲ್ಲಿ " ವಂದೇ ಮಾತರಂ " ನ ಅರ್ಥ ಏನು ಎಂದು ಕೇಳಿದರೆ ವಂದೇ ಎಂಬ ಪದವನ್ನು ನಮ್ಮ ಸಂಖ್ಯಾಶಾಸ್ತ್ರ ಪ್ರವೀಣರು ಒಂದೇ ಎಂದು ಭಾವಿಸಿ ಹತ್ತರಲ್ಲಿ ಏಳು ಮಂದಿ "ಒಬ್ಬಳೇ ತಾಯಿ " ಎಂದು ಹೇಳುತ್ತಾರೆ . ಆದರೆ ಅದು ತಾಯಿಗೆ ನಮಸ್ಕರಿಸುತ್ತೇನೆ ಎಂದರ್ಥ .

ರಾತ್ರಿ ಪಾರ್ಟಿಗೆ ಹೋಗಿ ಬಂದು ತುಂಬಾ ತಡವಾಗಿ ಮಲಗಿ ಬೇಗ ಎದ್ದು ಆಫೀಸ್ ಗೆ ಹೋದ ಮಲಯಾಳಂ ಯುವತಿ ಆಫೀಸ್ನಲ್ಲಿ ಎಲ್ಲರೂ ಯಾಕಮ್ಮ ಸುಸ್ತಾಗಿದ್ದೀಯಾ? ಎಂದಾಗ ಆಕೆ " ರಾದ್ರಿ ನಿದ್ದೆ ಇಲ್ಲೆ...... ಮಲಗುವಾಗ ಒಂದು ಗಂಡ ಏಳುವಾಗ ಐದು ಗಂಡ ( ಮಲಗುವಾಗ ಒಂದು ಗಂಟೆ ಏಳುವಾಗ ಐದು ಗಂಟೆ ) ಎಂದರೆ ಎಲ್ಲರಿಗೂ ಹೃದಯಾಘಾತ ಆಗದೆ?

ಹುಳಿ, ತೊವ್ವೆ ,ಸಾಂಬಾರು ಇತ್ಯಾದಿಗಳಲ್ಲಿ ಒಳ್ಳೆಯ ಪದಾರ್ಥ ಯಾವುದು? ಎಂದು ಕೇಳಿದಾಗ ರೀ !! ಎಲ್ಲಕ್ಕಿಂತ ಸಾರು ಒಳ್ಳೆಯದು . ನಿಮಗೆ ಗೊತ್ತಿಲ್ವ ಮೊನ್ನೆ 15 ನೇ ತಾರೀಕು TV ಯಲ್ಲಿ ಸುಮಾರು ಜನ ಹೇಳ್ತಾ ಇದ್ರು " ಸಾರೇ ಜಹಾಸೆ ಅಚ್ಚಾ" ಎಂದು ಅರ್ಧ ಹಿಂದಿ ಕಲಿತ ನನ್ನ ಶಾಂತಿ ಫರ್ಮಾಯಿಸಿದಳು .

ಇನ್ನು ಊರಿನಲ್ಲಿ ನಡೆಯುವ ಭಜನೆಗಳಲ್ಲಿ ಹಾಡುವ ಲೋಕಲ್ ಭೀಮಸೇನರು ಭಜನೆಯ ಅರ್ಥವನ್ನು ಬುಡ ಸಹಿತ ಕಿತ್ತು ಹಾಕುತ್ತಾರೆ .ಉದಾಹರಣೆಗೆ ಆಲಾಪನೆಯ ಚಟದಿಂದ ಒಬ್ಬ
" ವೈ ssssssssssssssssssss ಕುಂಟ ಪತಿಯ ಕಂಡೆನೋ ಎಂದು ಹಾಡಿದರೆ ನಮ್ಮ ವೈಕುಂಠಪತಿಯು ವೈಕುಂಠ ಬಿಟ್ಟು ಓಡಿ ಹೋಗನೆ?

ಇನೊಬ್ಬ ಚಿಂತೆಯಾತಕೋ? ಬರಿಯ ಭ್ರಾಂತಿ ಯಾತಕೋ? ದಾಸರ ಪದವನ್ನು
ಚಿಂತೆಯಾ sssssssssssssss ತಕೋ ಎಂದು ಎಂದು ಹಾಡಿದರೆ ದಾಸರು ಸ್ವರ್ಗದಿಂದ ಎದ್ದು ಬಂದು ಒದೆಯದೇ ಇರುವರೇ?

ಅಥವಾ ಅನ್ಯಭಾಷೆಯವನು ಅರ್ಥ - ಉಚ್ಚಾರ ಗೊತ್ತಿಲ್ಲದೇ
ಚಿಂದಿಯಾದಗೋ ಬರಿಯ ಬ್ರಾಂದಿಯದಗೋ? ಎಂದು ಹಾಡಿದರೆ? ಎಷ್ಟು ಸಿಟ್ಟು ಬರುವುದಿಲ್ಲ?

ಹೀಗೆ ನಿತ್ಯಜೀವನದಲ್ಲಿ ಇಂಥಹ ಹಲವಾರು ಮೋಜು / ಮುಜುಗರದ ಪ್ರಸಂಗಗಳು ನಮ್ಮೊಂದಿಗೆ ನಡೆಯುತ್ತಿರುತ್ತವೆ . ನನ್ನ ಮನಸ್ಸಿಗೆ ಬಂದ / ಓದಿದ / ಕೇಳಿದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ .

ವಂದನೆಗಳೊಂದಿಗೆ
ವಿಕಟಕವಿ

Saturday, September 19, 2009

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು .


2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!.


3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!!

4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು .

5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು .


6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು .

7) ಮಾರುಕಟ್ಟೆಯಲ್ಲಿ ಎದುರು ಸಿಕ್ಕಾಗ ನೋಡಿಯೂ ನೋಡದವನಂತೆ ಮುಖ ಹೊರಳಿಸಿ ಹೋದ ಗೆಳೆಯನು ಮನೆಗೆ ಹೋಗಿ "Hi dude !!! Whatsup ??? ಎಂದು ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿದನು .

8) " ಅಲೆಲೆ .. ಮುದ್ದುಮಲೀ ಹೊತ್ತೆ ನೋವಾ ??? " ಎಂದು ತಮ್ಮ ಪಾಪುವನ್ನು ಉಪಚರಿಸಿದ ಡಾಕ್ಟರನ್ನು ಕಂಡು ಮಗುವಿನೊಂದಿಗೆ ಮಗುವಾಗಿ ನಡೆದುಕೊಳ್ಳುತ್ತಾರೆ ಎಂದು ಸಂತೋಷಪಟ್ಟ ಹೆತ್ತವರು ಕೊನೆಗೆ ಡಾಕ್ಟರು " ನಾಲ್ಕು ಗುಲಿಗೆ ಬಲೆದು ಕೊತ್ತೀನಿ .. ಬೆಳಿಗ್ಗೆ ಮತ್ತು ಲಾತ್ಲಿ ಕೊದಿ " ಎಂದಾಗ ಕಂಗಾಲಾದರು .


9) ಆತ್ಮಹತ್ಯೆಗೆ ಪ್ರಯತ್ನಿಸಿ ಕಲಬೆರಕೆ ವಿಷದಿಂದ ಸಾಯದೆ ಹೋದ ರೈತನು ಆಸ್ಪತ್ರೆಯಲ್ಲಿ ಕೊಟ್ಟೆ ಕಲಬೆರಕೆ ಔಷಧದಿಂದ ಸತ್ತ .

10) ಸೀರೆ ತರುವುದನ್ನು ಮರೆತೆ ಎಂದು ಗಂಡ ಹೇಳಿದಾಗ " ನೀವೂ ಮನುಷ್ಯರಾ ?? ಎಂದು ಗುಡುಗಿದ ಮಡದಿ , ಗಂಡ ಅಡಗಿಸಿಟ್ಟಿದ್ದ ಸೀರೆ ಹೊರ ತೆಗೆದಾಗ "ಅಲ್ಲ ದೇವರು !!! ದೇವರು !!! " ಎಂದು ವಾಕ್ಯ ಪೂರ್ತಿ ಮಾಡಿದಳು ..

12) ಉತ್ತರ ಪತ್ರಿಕೆಯ ಮೇಲೆ ಅಧ್ಯಾಪಕರ ಕೆಂಪು ಶಾಯಿಯಲ್ಲಿ ಬರೆದದ್ದು ಏನೆಂದು ತಿಳಿಯದೆ ಅವರನ್ನೇ ಹೋಗಿ ಕೇಳಿದ ಗುಂಡನಿಗೆ ಅಧ್ಯಾಪಕರು " ಅದಾ ?? ಅದು ಕೈಬರವಣಿಗೆ ಸ್ಫುಟ ಮತ್ತು ಸುಂದರವಾಗಿರಬೇಕು ಎಂದು ಬರೆದದ್ದು " ಎಂದರು .


13) ದಿನವೂ ಒಂದು ರುಪಾಯಿ ದಾನ ಮಾಡುತ್ತಿದ ಒಬ್ಬ ಭಿಕ್ಷುಕನಿಗೆ ಒಂದು ದಿನ ಕೊಡದೆ ಹೋದಾಗ ಅವನು " ಕೊಡದೆ ಇರುವ ಪುಣ್ಯಾತ್ಮರು ಹೇಗೂ ಕೊಡುವುದಿಲ್ಲ ಇವತ್ತು ಈ ಕೊಡುವ ಬ್ಯಾವರ್ಸಿಗೆ ಏನಾಯ್ತು ??? " ಎಂದು ಗೊಣಗಿದ .

14) ನನ್ನ ಒತ್ತಾಯದ ಕಾಟಾಚಾರಕ್ಕೆ ಲೇಖನ ಓದುವ ಓದುಗರು ನಂಬರ 11 ಇಲ್ಲದೆ ಇರುವುದನ್ನು ಗಮನಿಸಲೇ ಇಲ್ಲ .

Monday, July 20, 2009

ಶಾಂತಿಮಂತ್ರ

**********************************************************
ಈ ಲೇಖನವನ್ನು ಓದುವ ಮೊದಲು ನನ್ನ "ನಾನು - ನನ್ನ ಸಂಸಾರ " ಲೇಖನ ಓದಿದರೆ ಇದರ ಹಾಸ್ಯದ ಹಿನ್ನೆಲೆಯ ಕುರಿತು ತಿಳಿಯಬಹುದು .
http://shanuisking.blogspot.com/2009/03/blog-post_17.html
**********************************************************
ಊಫ್ .. ಈ ಜನಕ್ಕೆ ಯಾವ್ ಟೈಮ್ ನಲ್ಲಿ ಏನ್ ಮಾತಾಡ್ಬೇಕು ಅನ್ನೋದೇ ಗೊತ್ತಾಗಲ್ಲ ....ಇಷ್ಟು ದಿನ ನಾನು ಶಾಂತಿ ಬಗ್ಗೆ ಬರೆದ ಎಲ್ಲ ಲೇಖನಗಳನ್ನು ಅವಳಿಗೆ ತಿಳಿಯದಂತೆ ಸೇಫ್ ಲಾಕರನಲ್ಲಿ ಇಟ್ಟಿದ್ದೆ . ಮೊನ್ನೆ ಶನಿವಾರ ಸಂತೆಗೆ ಇವಳನ್ನು ಕರೆದುಕೊಂಡು ಹೋದಾಗ ಭಾದ್ರಪದ ಮಾಸ ಬರದಿದ್ದರೂ ಸಡನ್ನಾಗಿ ಗಣೇಶ ವಕ್ಕರಿಸಿಕೊಂಡು ಬಿಟ್ಟ . "ಏನ್ ಅತ್ತಿಗೆ ?? ನುಗ್ಗೆಕಾಯಿ ಖರೀದೀನಾ ??? ಎಂದು ಕೇಳಿ ಬಿಡೋದೇ ??. ನನ್ನ ಕಣ್ಸನ್ನೆ ನೋಡ್ತಾನೆ ಇಲ್ಲ ....... ಯಾಕೋ ಗಣೇಶ ಹೀಗೆ ಯಾಕೆ ಕೇಳ್ತಾ ಇದ್ದೀಯಾ ?? ಎಂದು ಇವಳು ಕೇಳಿದಾಗ ಮಗ್ಗಿ ಕಂಠಪಾಠ ಹೊಡೆದಂತೆ ನನ್ನ ಲೇಖನದ ಎಲ್ಲ ಜೋಕುಗಳನ್ನು ಕಕ್ಕಿಬಿಟ್ಟ ..... ಏನ್ ಚೆನ್ನಾಗಿ ಬರೆದಿದ್ದಾರೆ ನಿಮ್ ಮನೆಯವರು ಅಂತ ಹೊಗಳಿಕೆ ಬೇರೆ . ನನಗೆ ನಗುವುದೋ ಅಳುವುದೋ ತಿಳಿಯಲಿಲ್ಲ . ಸಾಯಂಕಾಲ ಮನೆಯಲ್ಲಿ ನನಗೆ ನಡೆದ ಸತ್ಯನಾರಾಯಣ ಪೂಜೆಯ ಬಗ್ಗೆ ಇನ್ಯಾವತ್ತಾದರೂ ಬರೆಯುತ್ತೇನೆ . ಈಗ ಮುನಿಸಿಕೊಂಡ ಶಾಂತಿಯನ್ನು ಒಲಿಸಿಕೊಳ್ಳಲು ಈ ಶಾಂತಿಮಂತ್ರ .....

*************** ಓಂ !!!!! *************
ಮೌನ ಮುರಿದು ಮಾತನಾಡು
ನಗುತ ನನ್ನ ನಲ್ಲೆ
ಮಾತು ಬಿಟ್ಟು ಕೊಲುವೆ ಏಕೆ
ನೀನು ಮೌನದಲ್ಲೇ ??

ಸಿಟ್ಟಲ್ಲಿ ಯಾಕೆ ಮಾಡ್ಕೊಂಡಿದ್ದಿ
ನೀನ್ ಮೂತೀನ್ ಉಬ್ಬಿದ ಪೂರಿ
ನಿನ್ನೆಯಿಂದ್ ಹೇಳ್ತಿದ್ದೀನಿ
I am very sorry !!!!

ಉಹೂ ಇಲ್ಲ ... ಆ ಲೈನು ಕೆಲಸ ಮಾಡಲಿಲ್ಲ . ಕಪಾಟಿನ ಬಟ್ಟೆಗಳು ಸೂಟ್ ಕೇಸ ಒಳಗಡೆ ನುಗ್ಗುತ್ತಿವೆ . ಅದರ ಮಧ್ಯೆ ಇವಳು ಕಣ್ಣೀರು ತುಂಬಿಕೊಂಡು ಹೇಳಿದಳು ...

ಆಗ್ಲಿ ಏನೂ ನಾಳೆ ನಾನು
ಹೋಗ್ತೀನಿ ಶಿವಮೊಗ್ಗೆ
ಆಮೇಲೆ ನೀನು ತಂದುಕೊಂಡು ತಿನ್ನು
ಸೌತೆ - ಗುಳ್ಳ- ನುಗ್ಗೆ !!

ಇರಲಿ ಬತ್ತಳಿಕೆಯ ಬೇರೆ ಅಸ್ತ್ರ ಪ್ರಯೋಗ ಮಾಡಬೇಕಾಯ್ತು . ಸ್ವಲ್ಪ ಬೆಣ್ಣೆ ಹಚ್ಚಿದರೆ ಒಲಿಯುತ್ತಾಳೋ ನೋಡೋಣ ಅಂದುಕೊಂಡು ಈ ಸೆಂಟಿ ಡೈಲಾಗು ಹೊಡೆದೆ .

ತವರಿಗೆ ಹೋಗ್ತೀನಂತ ಮಾತ್ರ
ಹೇಳ್ಬೇಡ್ವೆ ನನ್
ರಾಣಿ ನೀನಿಲ್ದೆ ಬದುಕೊದಿಲ್ವೇ
ಈ ನಿನ್ ಗಂಡ ಅನ್ನೋ ಪ್ರಾಣಿ

ಅಬ್ಬಾ ... ಪರಿಸ್ಥಿತಿ ಕರ್ಫ್ಯೂನಿಂದ ಸೆಕ್ಷನ್ ೧೪೪ ಗೆ ಇಳಿಯಿತು . ಈಗ ಸೃಷ್ಟಿಯಾಗಿದ್ದ ಉದ್ವಿಗ್ನ ವಾತಾವರಣ ಹತೋಟಿಯಲ್ಲಿ ಬಂತು , ಬಟ್ಟೆಗಳು ಸೂಟ್ ಕೇಸ ನಿಂದ ಕಪಾಟು ಸೇರಿಕೊಂಡವು . ಆದರೆ ಬೆಳಿಗ್ಗೆಯಿಂದ ಒಳಗಡೆ ಜಪ್ತಿಯಾಗಿದ್ದ ಸಿಟ್ಟು ಒಮ್ಮೆಲೇ ಹೊರಬಂದಿತು .

ಊಟಕ್ಕೆ ನಾನು ಬಡ್ಸೋದಿಲ್ಲ
ಅನ್ನದ ಒಂದೂ ಅಗುಳು
ಇಲ್ಲಿವರ್ಗೂ ನನ್ನನ್ ಬೈಕೊಂಡ್
ನೀನ್ ಏನೇನ್ ಬರೆದೆ ಬೊಗಳು

ಇಷ್ಟು ಹೇಳಿ ಮುಖ ತಿರುಗಿಸಿ ಮತ್ತೆ ಮೌನವೃತ ಧಾರಣೆ ಮಾಡಿದಳು ಹೆದರಿಬಿಟ್ಟೆ !!! ಕಣ್ಣಿನಲ್ಲಿ ಜ್ವಾಲಾಮುಖಿ .... ನವರಾತ್ರಿಗೆ 3 ತಿಂಗಳು ಇರಬೇಕಾದ್ರೆನೆ ನನಗೆ ದುರ್ಗೆಯ ದರ್ಶನ. ಇರಲಿ ಇವಳ ಸಿಟ್ಟು ನನಗೆ ಗೊತ್ತಿಲ್ವೆ ??? ನಾನು ಮುಂದುವರಿಸಿದೆ .

ಶಾಂತಿ ಅನ್ನೋ ಹೆಸರಿದ್ರೂ
ನಿನಗ್ಯಾಕೆ ಇಷ್ಟೊಂದು ಕೋಪ ??
ಚಿಕ್ಕ ಪುಟ್ಟ ವಿಷಯಕ್ಕೆ ಯಾಕೆ ತಾಳ್ತಿ
ಮಾಂಕಾಳಿ ಸ್ವರೂಪ ??

ಸ್ವಲ್ಪ ಮುಂಚೆ ಕೂಗ್ತಿದ್ದೆ
ಈಗ್ಯಾಕೆ ಸೈಲೆಂಟ್ ಮೋಡು??
ಇವತ್ತಿಂದ ನಿನಗಾಗಿ ನಾನ್
ಏನೇನ್ ಮಾಡ್ತೀನಿ ನೋಡು

ರನ್ನ ಚಿನ್ನ ಬಂಗಾರಾಂತ
ಪ್ರೀತಿಯಿಂದಲೇ ಕರೀತೀನಿ
"ನನ್ ಹೆಂಡ್ತಿ ನನ್ ಪ್ರಾಣ " ಅಂತ
ಹೊಸ ಲೇಖನ ಬರೀತೀನಿ

ಉಪ್ಪೇ ಹಾಕದ ಉಪ್ಪಿಟ್
ಕೊಟ್ರು ಚಪ್ಪರಿಸ್ಕೊಂದು ತಿಂತೀನಿ
ಬೆಲ್ಲದ ನೀರಿಗೆ ಪಾಯಸ ಅಂದ್ರೂ
ಸೂಪರ್ ಅಂತ್ಲೇ ಅಂತೀನಿ

ಕಣ್ಣ ಸನ್ನೇಲೆ ಕುಣೀತೀನಿ
ನಾನ್ ನಿನ್ನ ಎಲ್ಲ ತಾಳಕ್ಕೂ
ಕಣ್ಣೀರ್ ಹಾಕದೆ ತಿಂತೀನಿ
ನೀ ಮಾಡಿದ ಪನ್ನೀರ್ ಪಾಲಕ್ಕು

ಮೈಸೂರ್ ಮಲ್ಲಿಗೆ ನಿತ್ಯ ತಂದು
ನಾ ನಿನ್ ತಲೆಗೆ ಮುಡಿಸ್ತೀನಿ
ಎಲ್ಲ ಹಬ್ಬಕ್ಕೂ ರೇಷ್ಮೆ ಸೀರೆ
ತಪ್ಪದೆ ನಾನು ಕೊಡಿಸ್ತೀನಿ

ಸಡನ್ನಾಗಿ ಇವಳಿಗೆ ಗಣೇಶನ ಮಾತುಗಳೆಲ್ಲ ನೆನಪಿಗೆ ಬಂದವೋ ಏನೋ ... ಮತ್ತೆ ಶುರು ಹಚ್ಚಿಕೊಂಡಳು

ಡ್ರೈವಿಂಗ್ ಬಗ್ಗೆ ಬರ್ದಿರೋದು
ನಂಗೆ ಚೆನ್ನಾಗಿ ಗೊತ್ತು
ಟ್ರಾಫಿಕ್ ಪೋಲಿಸ್ ಮಗಳನ್ನೇ
ನೀವ್ ಹುಡ್ಕೊಬೇಕಾಗಿತ್ತು .

ಟ್ರಾಫಿಕ್ ಪೋಲಿಸ್ ಮಗಳನ್ನ
ನಾನು ತುಂಬಾ ಪ್ರೀತಿಸ್ತಿದ್ದೆ
ನನ್ ಗ್ರಹಚಾರ ಹಾಳಾಗಿತ್ತು
ನೀನ್ ಬಂದು ನಂಗೆ ಗಂಟು ಬಿದ್ದೆ

ಅನ್ನೋಣ ಎಂದುಕೊಂಡೆ ಆಮೇಲೆ ತಮಾಷೆ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಕಷ್ಟ ಎಂದುಕೊಂಡು ಈ ಕವನ ಮತ್ತು ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಕೆಳಗಿನ ಸಾಲುಗಳನ್ನು ಹೇಳಿದೆ .

ನನಗೂ ನಿನಗೂ ಸೆಟ್ ಆಗೈತೆ
ಏಳೇಳು ಜನ್ಮದ ನಂಟು
offer expire ಆಗಲಿಕ್ಕೆ
ಇನ್ನೂ ಆರು ಜನ್ಮ ಉಂಟು !!

ಅಬ್ಬ !!! ತುಟಿಯಂಚಿನಲ್ಲಿ ಅಪ್ರಯತ್ನವಾಗಿ ಮುಗುಳ್ನಗು ಮಿಂಚಿ ಮರೆಯಾಯಿತು. ಪುನಃ ಸಿಟ್ಟಿನ ನಾಟಕ ಮಾಡತೊಡಗಿದಳು . ನಮ್ಮ ದೇವರ ಬುದ್ಧಿ ನಮಗೆ ಗೊತ್ತಿಲ್ವೆ ??? ಕಬ್ಬಿಣದಂತೆ ಇವಳ ಮುಖ ಕೂಡ ಕೆಂಪಾಗಿದೆ ಒಂದೆರಡು ಪ್ರೀತಿಯ ಮಾತಿನ ಪೆಟ್ಟು ಸಾಕಾಗುತ್ತದೆ ಎಂಬುದನ್ನು ಮನಗಂಡು ಡೈಲಾಗುಗಳನ್ನು ಮುಂದರಿಸಿದೆ.

ನಗಲು ನೀನು ಮರೆಯುವೆ ನಾನು
ಇರುವ ಎಲ್ಲ ನೋವು
ನಿನ್ನ ನಗುವೇ ನನ್ನ ಎದೆಗೆ
ಝಂಡು ಬಾಮು ಮುವೂ (moov )

ನಾನೂ ನಿಂಗೆ ಪ್ರಾಣ ಅನ್ನೋ
ಸತ್ಯಾನ್ನ ನೀನು ಒಪ್ಪಿಕೊ
ಸಿಟ್ಟನ್ ಬಿಟ್ಟು ಮುತ್ತ ನ್ ಕೊಟ್ಟು
ಒಮ್ಮೆ ನನ್ನನ್ನ ಅಪ್ಪಿಕೋ !!! :)

ಇಷ್ಟು ಹೇಳುತ್ತಲೇ ನಾಚಿ ನೀರಾಗಿ ನನ್ನವಳು slow motion ನಲ್ಲಿ ನನ್ನ ಬಳಿ ಬಂದಳು . ರೀ ..... ಏನೇ ಹೇಳಿ ಆರ್ಟಿಕಲ್ಲು ಚೆನ್ನಾಗಿತ್ತು . ನೀವು ಆಚೆ ಹೋದಾಗ ಮನಸ್ಸು ತುಂಬಿ ನಕ್ಕುಬಿಟ್ಟೆ ಅಂದಾಗ ನನ್ನ ಲೇಖನಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಯಿತು . ಹೀಗೆ ನನ್ನ ಸಮಸ್ಯೆ ದೂರವಾಯಿತು . ಒಂದು ನಿಮಿಷ ತಡೀರಿ ಈ ಗಣೇಶನ ಕುಶಲೋಪಚಾರ ಮಾಡಿ ಬರುತ್ತೇನೆ

*************** ಓಂ ಶಾಂತಿ ಶಾಂತಿ ಶಾಂತಿಃ******************** ****************************ವಿಕಟಕವಿ ********************

Monday, May 25, 2009

ಕರ್ಣಕುಂಡಲ

ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ . ಒಂದು ದಿನ ಎಡ ಕಿವಿಯ ಇಯರ್ ಪೋನ್ ನಲ್ಲಿ ಕಡಿಮೆ ಬಲ ಕಿವಿಯಲ್ಲಿ ಹೆಚ್ಚು ವೋಲ್ಯುಂ ಕೇಳಿಸತೊಡಗಿದಾಗ 4000/- ನ ಐಪೋಡ ನ ಮೇಲೆ ಎಳ್ಳಷ್ಟು ಸಂಶಯಪಡದೆ ನನ್ನ ಒಂದು ಕಿವಿ ಸ್ವಲ್ಪ ಡಮಾರ್ ಆಗಿದೆ ಎಂದು ಚಿಂತಿಸುತ್ತಿದ್ದೆ . ಹೇಳಿದರೆ ಕೆಪ್ಪ ಎನ್ನುತ್ತಾರೆ ಎಂದು ಹೆದರಿ ಯಾರಲ್ಲೂ ಹೇಳಿರಲಿಲ್ಲ . ಆಮೇಲೆ ಒಂದು ದಿನ ಅದರಲ್ಲಿ ಹಾಡು ಕೇಳಿದ ನನ್ನ ರೂಂ ಮೇಟ್ ಸುಮಂತ್ .. ಇದರ ಎಡ ಇಯರ್ ಫೋನ್ ಹಾಳಾಗಿದೆ ಅಂದಾಗ ನಾನು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ .ನನ್ನ ಕರ್ಣದ್ವಯಗಳು ಸರಿಯಾಗಿವೆ ಎಂದು ಬೀಗುತ್ತಿದ್ದೆ . ಆದರೆ ಯಾವತ್ತೂ ಗೋಡೆಗೂ ಕಿವಿ ಇರುತ್ತೆ ಎಂದು ತುಂಬಾ ಜಾಗ್ರತೆಯಿಂದ ಇರುತ್ತಿದ್ದ ನನಗೆ ನನ್ನ ಅಕ್ಕಪಕ್ಕ ಎರಡು ಇರುವುದು ಮರೆತೇ ಹೋಗಿತ್ತು . ನಾನು ಹೆಮ್ಮೆ ಪಟ್ಟುಕೊಂಡಿದ್ದು ಅದಕ್ಕೆ ಕೇಳಿಸಿತೋ ಏನೋ. ಈಗೀಗ ಸ್ವಲ್ಪ ನಖರಾ ಮಾಡತೊಡಗಿದೆ.

ಸುಮಾರು 15 ದಿನ ಹಿಂದಿನಿಂದ ಈ ಕಿವಿ ನೋವಿ ಶುರು ಆಗಿದೆ. ಮೊದಲಿಗೆ ಇದು ಮಾಮೂಲಿ ಶೀತ ಎಂದುಕೊಂಡು ನಮ್ಮ "ಮಾತ್ರೆ ರಾಜನ " ಬಳಿ ಹೋದೆ .ಮಾತ್ರೆರಾಜ ಹೆಸರು ಯಾಕೆ ಎಂದು ಕೇಳಿದಿರಾ ?? ಏನಿಲ್ಲ ನೀವು ಅವರ clinic ನ ಒಳಗೆ ಹೋಗಿ ಹೊರಬರುವಷ್ಟರಲ್ಲಿ ನಿಮ್ಮ ತೂಕ 1/2kg ಮಾತ್ರೆಗಳಿಂದ ಹೆಚ್ಚಾಗಿರುತ್ತದೆ . ಕಂದು, ಬಿಳಿ ಕೆಂಪು ನೀಲಿ ಬಣ್ಣದ ನಾಲ್ಕು ಮಾತ್ರೆಗಳು ಪಕ್ಕ ಪರಿಸ್ಥಿತಿಯ ಸೂಕ್ಷ್ಮವನ್ನರಿತು ಹಸಿರು ಬಣ್ಣದ ಮಾತ್ರೆ ಬರಬಹುದು ಇಲ್ಲದೆ ಇರಬಹುದು . ಹೀಗೆ ಅವರ ಬಳಿ ಹೋಗಿ ಅವರು ಕೇಳುವ ಮೊದಲೇ ಆ ಆ ಆ ..... ಎಂದು ಬಾಯಿ ತೆರೆದು ನಿಂತೆ. ಆಮೇಲೆ ನೀವು ಕಷ್ಟ ತೆಗೊಬೇಡಿ ಸರ್ .. ನನಗೆ ಗೊತ್ತು .. ಮಾತ್ರೆ ನಾನೇ ತೆಗೊತೀನಿ ಅಂದರೂ ಕೇಳದೆ ನನ್ನ ನಿರೀಕ್ಷೆಯನ್ನು ಹುಸಿಮಾಡದೆ ಅರ್ಧ ಕಿಲೋ ರಂಗುರಂಗಿನ ಮಾತ್ರೆಗಳನ್ನು ಕೊಟ್ಟರು . 2 ದಿನದಲ್ಲಿ ಅದನ್ನು ಖಾಲಿ ಮಾಡಿದೆ . ಆದರೆ ಕಿವಿ ನೋವು ನಿಲ್ಲಲಿಲ್ಲ . ಮತ್ತೆ ಅವರ ಬಳಿ ಹೋದೆ ಈ ಬಾರಿ ಸ್ವಲ್ಪ ಬದಲಾವಣೆ ಎಂಬಂತೆ medicals ನ ಮಾತ್ರೆ ಬರೆದು ಕೊಟ್ಟರು . ಇವಿಷ್ಟರಲ್ಲಿ ಆರು ನೂರು ರೂಪಾಯಿಗಳಿಗೆ ಗ್ರಹಣ ಹಿಡಿದಿತ್ತು.

ಸತ್ಯವಾಗಿಯೂ ಹಣದ ಯೋಚನೆ ಇರಲೇ ಇಲ್ಲ . ಆದರೆ ಇದರ ಬಳಿಕವೂ ಕಿವಿನೋವು ಒಳ್ಳೆ ಷೇರು ಮಾರುಕಟ್ಟೆಯಂತೆ ನೋವಿನ ಸೂಚ್ಯಂಕ ಏರಿಳಿತ ಪಡೆಯುತ್ತಿತ್ತು . ನಮ್ಮಮ್ಮನ ಬೆಳ್ಳುಳ್ಳಿ ಎಣ್ಣೆ , ತುಳಸಿ ರಸ ಮುಂತಾದ Home made ಆಯುರ್ವೇದದ ಪ್ರಸ್ತಾಪಕ್ಕೆ ನಕಾರವಿತ್ತೆ . ಬಿಟ್ಟಿದ್ದರೆ castrol ,petrol ಕೂಡ ಹಾಕುತ್ತಿದ್ದರೋ ಏನೋ. ಅಂತೂ ಕೊನೆಗೆ ಕಿವಿ ಗಂಟಲು ಮೂಗು (ENT) ತಜ್ಞರ ಶರಣು ಹೋಗಲು ನಿರ್ಧರಿಸಿದೆ.

ಮರುದಿನ ಒಬ್ಬ ENT specialist ಹೋದೆ . ಸರ್ ಕಿವಿ ನೋವು ಎಂದೇನು . ಆ .. ಏನು ?? ಎಂದು ಕೇಳಿದರು . ಸ್ವಲ್ಪ ಜೋರಾಗಿ "ಸರ್ ಕಿವಿ ನೋಯ್ತಾ ಇದೆ ಒಂದು ವಾರದಿಂದ " ಪುನರುಚ್ಚರಿಸಿದೆ . ಆ ಆ ... ಏನು ?? ಎಂದರು . ಈ ಕೆಪ್ಪನ ಬಳಿ ಏನು treatment ಪಡೆಯುವುದು ಎಂದು ಅಲ್ಲಿಂದ ಪಲಾಯನ ಮಾಡಿದೆ . ಮತ್ತೊಬ್ಬರ ಬಳಿ ತೆರಳಿದೆ . 10-12 ಜನರ queue ಇತ್ತು . ಇರಲಿ ಒಳ್ಳೆ ವೈದ್ಯರಿರಬೇಕೆಂದುಕೊಂಡು ಸರದಿ ಬರುವವರೆಗೆ ಕಾಯುತ್ತ ಕುಳಿತು ಆಮೇಲೆ ವೈದ್ಯರನ್ನು ಭೇಟಿ ಮಾಡಿದೆನು .

ಏನಾಗಿದೆ ?? ಎಂದರು . ಸರ್ ಕಿವಿ ನೋವು ಎಂದರು . ಹ್ಮ.... ಎಷ್ಟು ದಿನದಿಂದ ಎನ್ನುತ್ತಾ ನನ್ನ ಮೂಗು ಮೇಲೆ ಮಾಡಿ ನೋಡತೊಡಗಿದರು . ಸರ್ ಇದು ಮೂಗು ... ಕಿವಿ ಇಲ್ಲಿ ಸೈಡ್ ನಲ್ಲಿ ಇದೆ ನೋಡಿ ..... ಎಂದೆನು. ಗೊತ್ತಪ್ಪಾ .... ಅದೆಲ್ಲ ಲಿಂಕ್ ಇರ್ತಾವೆ ಎಂದು . ಏಯ್ .. ಮೀನಾಕ್ಷಿ .. ನನ್ನ ಪೆನ್ ಎಲ್ಲಿ ಹೋಯ್ತು ಎಂದು ನರ್ಸನ್ನು ಕರೆದರು . ಮತ್ತೆ ಕಿವಿಯನ್ನು ಮೇಲೆ ಕೆಳಗೆ ಆಚೆ ಈಚೆ ಎಲ್ಲ ಎಳೆದು ಒಳಗೆ ಟಾರ್ಚ್ ಹೊಡೆದು ನೋಡತೊಡಗಿದರು . ಸರ್ ಖಂಡಿತವಾಗಿತೂ ನಿಮ್ಮ ಪೆನ್ ನನ್ನ ಕಿವಿಯ ಒಳಗೆ ಇಲ್ಲ ಎಂದೆನು . ಕೆಮ್ಮಿ ... ಎಂದರು ಒಮ್ಮೆ ಕೆಮ್ಮಿದೆನು . ಹ್ಮಂ ... ಎಂದು ಏನೋ ಕಂಡುಹಿಡಿದವರಂತೆ ಬರೆಯಲಾರಂಭಿಸಿದರು . ಒಂದು ಪುಟ ಮುಗಿಸಿ ಕೆಳಗಡೆ PTO ಎಂದು ಬರೆದು ಹಿಂದಿನ ಪುಟದಲ್ಲಿ ಬರೆಯಲಾರಂಭಿಸಿದರು . ಒಮ್ಮೆ ನಿಲ್ಲಿಸಿದರು ಅಬ್ಬ !!! ಮುಗಿಯಿತು ಎಂದುಕೊಂಡರೆ ಕೈ ಬೆರಳಿನ ನಟಿಕೆ ಮುರಿದು ಮತ್ತೆ ಬರೆಯಲು ಶುರು ಮಾಡುವುದೇ ?? ತಬ್ಬಿಬ್ಬಾದೆ .... ಸರ್ ಒಂದು typist appoint ಮಾಡಿಕೊಲ್ಲಬಹುದಲ್ಲ ಎನ್ನೋಣವೆಂದುಕೊಂಡೆ . ಆಮೇಲೆ ಒಂದು ಮೊದಲು ಹೆಸರು ಎಲ್ಲ ಬರೆದು 5-6 ಪ್ರಕಾರದ ಮಾತ್ರೆ ಬರೆದು ಕೊಟ್ಟರು .

ನಾನ್ನೂರು ರುಪಾಯಿ ಎಂದರು . ಪುಣ್ಯ !!!! ಅವರು ಕೆಮ್ಮಿ ... ಅಂದಾಗ ನಾನು ಒಂದೇ ಸಲ ಕೆಮ್ಮಿದೆ . ಎರಡು ಸಲ ಕೆಮ್ಮಿದ್ದಲ್ಲಿ 800 ಹೇಳುತ್ತಿದ್ದರೋ ಏನೋ ಎಂದು ನನ್ನ ಜಾಣ್ಮೆಗೆ ಶಹಬ್ಬಾಸ್ ಹೇಳಿದೆ . ಮತ್ತೆ ದೇವರಿಗೆ ಒಂದು ನಮಸ್ಕಾರ ಹಾಕಿದೆ . ಪುಣ್ಯಕ್ಕೆ ಅವನು ಮನುಷ್ಯರಿಗೆ ಎರಡೇ ಕಿವಿ ಕೊಟ್ಟಿದ್ದಾನೆ . ಹಲ್ಲಿನ ತರಹ 32 ಕೊಟ್ಟಿದ್ದರೆ ನಾನು ICICI ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಅಪ್ಲೈ ಮಾಡಬೇಕಾಗುತ್ತಿತ್ತು .

ಈಗ ಕಳೆದ ಹತ್ತು ದಿನಗಳಿಂದ ಅನ್ನಕ್ಕಿಂತ ಹೆಚ್ಚು ಮಾತ್ರೆ ತಿನ್ನುತ್ತಿದ್ದೇನೆ . ಕಿವಿ ನೋವು ಇನ್ನೂ ಹತೋಟಿಗೆ ಬಂದಿಲ್ಲ . ಇಂದು ಹೋಗಿ X-ray scanning ಮಾಡಿಸಿಕೊಂಡು ಬಂದಿದ್ದೇನೆ .ನೋಡೋಣ ಇನ್ನೊ ಸ್ವಲ್ಪ ದಿನದಲ್ಲಿ ಸರಿ ಹೋಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ . ಮುಂದೆನಾಗುತ್ತೆಂದು ಕಾದು ನೋಡಿ ...

**************************************ವಿಕಟಕವಿ *****

Saturday, May 16, 2009

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ?
ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ

ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ
"ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು .


ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ . ರಾಮರಾಜ್ಯದಲ್ಲಿ ಇದು ನ್ಯಾಯವೇ ?? ಎಂದು ಕೇಳಿದಾಗ ರಾಮ ಹೇಳಿದ "ಎಲೈ ಸಂಜೀವಿನಿಯೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ ತಮ್ಮನ ಪ್ರಾಣ ಉಳಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ ಎಂದು ಹರಸಿದ . ಅದರ ಅವತಾರವೇ ನಮ್ಮ ಕಲಿಯುಗದ ಚಹಾ .

ಇನ್ನೂ ಸಂಶಯವೇ ??? ನೋಡಿ ಈಗಲೂ ಅಷ್ಟೇ ..... ರಾತ್ರಿಯಿಡೀ ಮೂರ್ಛೆ ತಪ್ಪಿದವರಂತೆ ನಿದ್ದೆ ಬಿದ್ದಿರುವ ನಾವು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿದು ಕ್ರಿಯಾಶೀಲರಾಗುವುದಿಲ್ಲವೇ ?? ಅದರ ಕರ್ಮಫಲ ಇನ್ನೊ ಬಿಟ್ಟಿಲ್ಲವೋ ಎಂಬಂತೆ ಚಹಾ ಮಾಡಿದ ಬಳಿಕ ಅದರ ಸೊಪ್ಪನ್ನು ಮರದ ಬೇರಿನಡಿ ಬಿಸಾಡುವುದಿಲ್ಲವೇ ?? ಅಷ್ಟೇ ಅಲ್ಲ ಸಂಜೀವಿನಿಯನ್ನು ತಂದವನು ಹನುಮಂತ ಯಾವ ಮೂಲಿಕೆ ಎಂದು ತಿಳಿಯದಿದ್ದರೂ "ದೂರ ದೃಷ್ಟಿಯಿಂದ " ಇಡೀ ಪರ್ವತ ಹೊತ್ತು ತಂದ ಹಾಗೆ ಭಾರತಕ್ಕೆ ಚಹಾ ತಂದವರು ಜೇಮ್ ಶೆಡ್ ಜೀ ಟಾಟಾ ಅವರು ಫಾರಸೀ ಆಗಿದ್ದರು. ನೋಡಿದಿರಾ ?? FAR = ದೂರ SEE = ದೃಷ್ಟಿ . ಹೀಗೆ ಇವರು ಕೂಡ ದೂರ ದೃಷ್ಟಿ ಯಿಂದಲೇ ಚಹಾವನ್ನು ಭಾರತಕ್ಕೆ ತಂದರು . ಅಲ್ಲದೆ ರಾಮನು ಕಾಡಿನಲ್ಲಿ ಈ ಸೊಪ್ಪಿಗೆ ವರದಾನ ಕೊಟ್ಟಿದ್ದರಿಂದ ಅವರು ತಂದ ಚಹಾಕ್ಕೆ "ಕಾನನ ದೇವನ ಚಹಾ " ( Kannan Devan Tea ) ಅಂದರೆ ಕಾಡಿಗೆ ಹೋಗಿ ಬಂದ ದೇವರನ್ನು ಬದುಕಿಸಿದ ಸೊಪ್ಪು ಎಂಬರ್ಥದಿಂದ ಈ ಹೆಸರು ಕೊಟ್ಟರು.

ಇದು ಚಹಾದ ಪುರಾಣವಾದರೆ ಕಾಪಿ ಇದಕ್ಕೂ ಹಳೆಯದು . ಸಮುದ್ರಮಥನ ಕಾಲದಲ್ಲಿ ಸುರಾಸುರ ಯಕ್ಷ ಗಂಧರ್ವರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿದರು. ಅದರಲ್ಲಿ ಹುಟ್ಟಿದ ಪದಾರ್ಥವನ್ನೆಲ್ಲ ಪರಸ್ಪರ ಹಂಚಿಕೊಂಡರು. ನಡುವೆ "ಕಾಲಕೂಟ" ವೆಂಬ ಖತರ್ನಾಕ್ ವಿಷ ಬರಲು ಈಶ್ವರ ಅದನ್ನು bottoms up ಮಾಡಿ ಕುಡಿದ. ನಂತರ ಪೀಯುಷ ( ಅಮೃತ ) ಹುಟ್ಟಿಕೊಂಡಿತು . ಅಸುರರಿಗೆ ಮೊಹಿನಿಯಿಂದ ಮಂಕುಬೂದಿ ಎರಚಿ ಇನ್ನೇನು ಪೀಯುಷವನ್ನು ಸ್ವರ್ಗಲೋಕಕ್ಕೆ ತೆಗೆದುಕೊಂಡು ಹೋದರು ಎನ್ನುವಷ್ಟರಲ್ಲಿ "Hello Excuse me Boss " ಎಂಬ ಸ್ವರ ಕೇಳಿಸಿತು ತಿರುಗಿ ನೋಡಿದರೆ ಮಾನವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನಾಯ್ತು ಎಂದು ಕೇಳಿದರೆ ಏನು ?? ನಮ್ಮ ಭೂಮಿಗೆ ಬಂದು , ಸಮುದ್ರ ಮಥಿಸಿ ಸಿಕ್ಕಿದ್ದನ್ನೆಲೆ ದೋಚಿ ಹೋಗ್ತಾ ಇದ್ದೀರಾ ?? ನಮ್ಮ ಭೂಮಿ ಬಳಸಿದ್ದರ ಬಾಡಿಗೆ ಯಾರು ಕೊಡ್ತಾರೆ ?? ನಮಗೂ ಅಮೃತದಲ್ಲಿ ಪಾಲು ಬೇಕು ಎಂದು ಎಲ್ಲರೂ ಜಗಳ ಶುರು ಮಾಡಿದರು . ಆಗ ದೇವರು ಓಹೋ .... ಅಮೃತ ಬೇಕಾ ?? ಕಾಲಕೂಟ ಕೂಡ ಅಲ್ಲಿಂದಾನೆ ಬಂದಿದ್ದು ಅದನ್ನೂ ನೀವು ತೆಗೆದುಕೊಳ್ಳಬೇಕು ಎಂದು ವಾದ ಮಾಡಿದರು . ಮನುಷ್ಯರು ಕಾಲಕೂಟದಿಂದ ಹೆದರಿಕೊಂಡರೂ ಪಾಲು ಸಿಗದೇ ಹೋಗಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು .

ಆಮೇಲೆ ದೇವಗುರು ಬೃಹಸ್ಪತಿ , ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮಾಸ್ಟರು ಕುಳಿತು ಒಂದು ಸಂಧಾನಕ್ಕೆ ಬಂದು " ಕಾಲಕೂಟದಿಂದ " "ಕಾ" ತೆಗೆದು "ಪೀಯೂಷದಿಂದ" "ಪೀ " ತೆಗೆದು "ಕಾಪಿ " ಮಾಡಿ ಮಾನವರಿಗೆ ಕೊಟ್ಟರು . ಈ ಸಂಧಾನದಲ್ಲಿ ಬೃಹಸ್ಪತಿಗಳು ಸ್ವಲ್ಪ ಮಾನವರ Favour ನಲ್ಲಿ ಮಾತನಾಡಿದ್ದರಿಂದ ಅವರ ಸ್ಮರಣಾರ್ಥ ಅವರ ಹೆಸರಿನ ಮೊದಲ ಮೂರು ಅಕ್ಷರ "BRU" ಎಂದು ಇದಕ್ಕೆ ನಾಮಕರಣ ಮಾಡಲಾಯಿತು . ಇದನ್ನು ಕುಡಿದು ಮನುಷ್ಯರಿಗೆ ನಶೆ ಏರಿದ್ದರಿಂದ ಅವರು ಅದನ್ನು "ನಶಾಕಾಪಿ " ಎಂದರು. ಅದೇ ಕಲಿಯುಗದ NESCAFE ಆಯಿತು.ಹೀಗೆ ಸುರ - ಅಸುರರ ಸಹಕಾರದಿಂದ ಕಾಪಿ ಭೂಮಿಗೆ ಬಂದಿದ್ದರಿಂದ ಇಂದಿಗೂ ಅದನ್ನು ಕುಡಿಯುವಾಗ ನಾವು "ಸುರ್ರ್ ರ್ರ್ ರ್ರ್ " ಎಂದು ಶಬ್ದ ಮಾಡುತ್ತಾ ಅವರನ್ನು ನೆನೆಯುತ್ತೇವೆ.

ಉಳಿದ ಪುರಾಣಗಳಲ್ಲಿ ಪೆಪ್ಸಿ ಕೋಲಾ ಗಳ ಉಲ್ಲೇಖ ಇದೆಯೋ ಎಂದು ಹುಡುಕುತ್ತಿದ್ದೇನೆ . ನಿಮಗೆಲ್ಲಾದರೂ ಏನಾದರೂ ಮಾಹಿತಿ ಸಿಕ್ಕಿದರೆ ತಿಳಿಸಿರಿ .
-------------------ಅಥ ಶ್ರೀ ತಲೆಹರಟೆ ಪುರಾಣಂ ಸಂಪೂರ್ಣಂ ----------------------

-------------------------------------------------------ವಿಕಟಕವಿ ---------------

Wednesday, March 25, 2009

ಕುಂಭಕರ್ಣನ ಡೈರಿಯಿಂದ

ಲೋ ಪಚ್ಚು ನೀನು ಮೂಲತಃ ಯಾವ ಊರಿನವನೋ ??ಬೆಳಿಗ್ಗೆ ಎದ್ದವನೇ ಪ್ರಶಾಂತನಿಗೆ ಕೇಳಿದೆ . ಯಾಕೋ ಏನಾಯ್ತು ?? ಎಂದ. ಏನಿಲ್ಲ ಗುರುವಾರ ರಾತ್ರಿ ನಿದ್ರೆಯಲ್ಲಿ ನೀನು ಕೂಚಿಪುಡಿ ಮಾಡ್ತಾ ಇದ್ದೆ ಆಗ ನೀನು ಆಂಧ್ರದವ ಎಂದುಕೊಂಡೆ . ಮೊನ್ನೆರಾತ್ರಿ ಕಥಕ್ಕಳಿಯಲ್ಲಿ ನಿನ್ನ talent ನೋಡಿ ನೀನು ಪಕ್ಕ ಮಲ್ಲು ಅಂದು ಡಿಸೈಡ್ ಮಾಡಿದೆ .ಆದರೆ ನಿನ್ನೆ ನೀನು ಮಾಡಿದ ಯಕ್ಷಗಾನ ನೋಡಿ full confuse ಆದೆ . ಏನ್ Performance ಲೇ ಅದು . ಗಣಪತಿ ಪೂಜೆ ಮುಗಿದು ಇನ್ನೇನು ಕೋಡಂಗಿ ಪ್ರವೇಶ ಮಾಡಬೇಕೆನ್ನುವಾಗ ನಿಲ್ಲಿಸಿಬಿಟ್ಟೆ . ಅದನ್ನು ನೋಡಿ ನೀನು ಕನ್ನಡಮ್ಮನ ಕಣ್ಮಣಿ ಎಂದು conclude ಮಾಡಿದ್ದೇನೆ ಸರೀನಾ?? ಏನೇ ಹೇಳು ನಿನ್ನದು ಬಹುಮುಖ ಪ್ರತಿಭೆ ಕಣೋ ಎಂದೆನು. ಏನ್ ಮಾಡ್ಲೋ ?? ಅಪ್ಪನದು Job Transfer ಆಗುತ್ತಾ ಇರುತ್ತೆ ಅದಕ್ಕೆ ಹೀಗೆ ಆಗ್ತಾ ಇದೆ ಎಂದ . ಸ್ವಲ್ಪ ದಿನದ ನಂತರ "ಲೋ ಪಚ್ಚು ನಿಮ್ಮಪ್ಪಂಗೆ ಇಂಗ್ಲೆಂಡ್ Transfer ಆಯ್ತಾ ?? ಎಂದು ಕೇಳಿದೆ . "ಯಾಕೋ ???" ಎಂದ . ಏನಿಲ್ಲ ನಿನ್ನೆ ರಾತ್ರಿ ನೀನು Brake Dance ಮಾಡ್ತಾ ಇದ್ದೆ ಅದಕ್ಕೆ Doubt ಬಂತು ಎಂದೆನು .

ನಿದ್ದೆ !!!!! ಅದರ ಸವಿಯನ್ನು ನಾನು ವರ್ಣಿಸಬೇಕೆ?? ತುರಿಕೆ ಮತ್ತು ನಿದ್ದೆ ಮಾಡಿದಷ್ಟು ಹೆಚ್ಚಾಗುವುದಲ್ಲದೆ ಇನ್ನೂ ಸ್ವಲ್ಪ ಮಾಡಿದರೆ ಹಾಯಾಗಿರುತ್ತದೆ ಎಂದೆನಿಸುತ್ತದೆ . ಎಲ್ಲಾ ದೇವರ ಅನುಗ್ರಹವಿದ್ದವನೊಡನೆ ನಿದ್ರಾದೇವಿ ಮುನಿಸಿಕೊಂಡರೆ ಅವನಿಗೆ ಜೀವನದಲ್ಲಿ ಸುಖ ಶಾಂತಿ ಉಂಟೆ ?? ಅದಕ್ಕೆ ಭಾರೀ ಕಷ್ಟಜೀವಿಯನ್ನು "ನಿದ್ದೆ ಬಿಟ್ಟು ಕೆಲಸ ಮಾಡುತ್ತಾನೆ " ಅನ್ನುತ್ತಾರೆ . "ನಿದ್ರಾಭಂಗಂ ಮಹಾಪಾಪಂ " ಎಂಬ ಮಾತು ಜೀವನದಲ್ಲಿ ನಿದ್ರೆಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ .ಚಳಿಗಾಲದಲ್ಲಿ ಮೆತ್ತನೆಯ ಹಾಸಿಗೆ ಮತ್ತು ತಲೆದಿಂಬು ,ದಪ್ಪನೆಯ ಹೊದಿಕೆ ಇದ್ದು ಫ್ಯಾನನ್ನು 2 ರಲ್ಲಿಟ್ಟು ಬೋರಲು ಮಲಗಿ ಮುಸುಕು ಹಾಕಿಕೊಂಡರೆ !!!!!! ಏನು ಸುಖ !!! ಅದರಲ್ಲೂ ಮರುದಿನ ಪರೀಕ್ಷೆ ಇದ್ದು , ತಯಾರಿ ಶೂನ್ಯವಾಗಿದ್ದು ಅನಿವಾರ್ಯವಾಗಿ ಓದಲೇ ಬೇಕೆಂಬ ಹಠ ತೊಟ್ಟು ಕೂತಿರಬೇಕಾದರೆ ಕರೆದವರಂತೆ ಬಂದು ಕಣ್ಣ ಮಂಟಪವನ್ನು ಅಲಂಕರಿಸುವ "ಮಂಪರು ನಿದ್ದೆ " !!! ಅದರ ಸವಿಯನ್ನು ವರ್ಣಿಸಲು ಶಬ್ದ ಭಂಡಾರ ಸಾಲದು . ನಿಮಗಿದರ ಅನುಭವವಿಲ್ಲದಿದ್ದರೆ ಯಾವುದಾದರೂ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ಹುಡುಗನನ್ನು ಕೇಳಿ .

ಇನ್ನು ನನ್ನ ಇನ್ನೊಬ್ಬ roommate ಗುನ್ನು ಅಲಿಯಾಸ್ Garbage ಗಿರೀಶ . ಪರಮ ದೈವಭಕ್ತ . ರಾತ್ರಿಬೆಳಗಾಗುವುದರೊಳಗೆ ಅಷ್ಟ ದಿಕ್ಪಾಲಕರಿಗೆ ಹಾಸಿಗೆ ಮೇಲಿನಿಂದಲೇ ಸಾಷ್ಟಾಂಗ ನಮಸ್ಕಾರ ಹಾಕಿ ಪ್ರಾತಃ ಕಾಲದಲ್ಲಿ ಸೂರ್ಯನಮಸ್ಕಾರಕ್ಕೆ ತಯಾರು. ನಿದ್ದೆಗಣ್ಣಲ್ಲೂ ಬಾಬಾ ರಾಮದೇವರ ಎಲ್ಲಾ ಆಸನಗಳನ್ನೂ ಹೇಳಿಕೊಟ್ಟವಂತೆ ಮಾಡಿ ಮುಗಿಸುವವ . ಅದೂ ಸ್ವಾತಿ ಮಳೆಹನಿಗೋಸ್ಕರ ತೆರೆದುಕೊಂಡಿರುವ ಚಿಪ್ಪಿನಂತೆ ಬಾಯ್ತೆರೆದು ಎದ್ದೋಡಿ ರಾಗದಲ್ಲಿ 3D Sound effect ನಲ್ಲಿ "ಗೊರ್ರ್........ ಸ್ಸ್ಸ್ಸ್ ಸ್ಸ್ಸ ...... ಎಂಬ ಸಿಂಹ ಘರ್ಜನೆಯೊಂದಿಗೆ .(ಎಂಥ ಕಿವುಡನಾದರೂ ಎದ್ದೊಡಬೇಕು ). ಒಂದು ದಿನ ಗುನ್ನು ಮತ್ತು ಪಚ್ಚು ಭರತನಾಟ್ಯದ ಜುಗಲ್ ಬಂಧಿ ಮಾಡುತ್ತಿದ್ದರು . ಮರುದಿನ ಗುನ್ನು ನ ಬಳಿ " ಅಲ್ವೋ ಪಚ್ಚುವಿನದ್ದು ನಿತ್ಯದ ಕಥೆ ಇದ್ದದ್ದೇ ....ನಿನ್ನೆ ನಿನಗೇನಾಯ್ತೋ ??" ಎಂದು ಕೇಳಿದೆ . ಎನಿಲ್ವೋ... ನಿನ್ನೆ ಆಪ್ತಮಿತ್ರ ಸಿನೆಮಾ ನೋಡಿದ್ನಲ್ವಾ ಅದ್ರಲ್ಲಿ ಆ ನಾಗವಲ್ಲಿ ಭರತನಾಟ್ಯ ಹಿಡಿಸ್ತು . ಅದಕ್ಕೆ ಹೀಗೆ ಆಗಿರಬಹುದು ಅಂದ . ಮರುದಿನ ರಾತ್ರಿ ಇವನು Football ನೋಡುತ್ತಿದ್ದದ್ದನ್ನು ಕಂಡು ರಾತ್ರಿ ಏನು ಕಾದಿದೆಯೋ ಎಂದು ಕಂಗಾಲಾದೆ. ಒಮ್ಮೆ ಶುಭ ಕಾರ್ಯನಿಮಿತ್ತ ಗುನ್ನುವಿನ ಮನೆಗೆ ಹೋದಾಗ ಎಲ್ಲರೂ ಸೇರಿ ಒಗಟು ಬಿಡಿಸುವ ಆಟ ಆಡುತ್ತಿದ್ದೆವು . ಆಗ 8 ವರ್ಷದ ಗುನ್ನುವಿನ ತಮ್ಮ " ರಾತ್ರಿ ಉಂಟು ಬೆಳಿಗ್ಗೆ ಇಲ್ಲ " ಎಂದು ಕೇಳಿದ . ನಾವೋ ಚಂದ್ರ -ನಕ್ಷತ್ರ -ಬಾವಲಿ-ಗೂಬೆ ಏನು ಹೇಳಿದರೂ ಇಲ್ಲ ಅನ್ನುತ್ತಿದ್ದಾನೆ . ಆಮೇಲೆ ಸರಿ ನೀನೆ ಹೇಳಪ್ಪ ... ಎಂದಾಗ "ಗಿರೀಶಣ್ಣನ ಲುಂಗಿ " ಎನ್ನುವುದೇ ?? ಇವನ ವಿಷಯ ಇಷ್ಟೇ ಅಲ್ಲ . ನಡುರಾತ್ರಿ ಬುದ್ಧನಂತೆ ಎದ್ದು ಕುಳಿತು 360* ಕತ್ತು ತಿರುಗಿಸಿ " ಬಾ ಮಚ್ಚಾ .... ಹೋಗೋಣಾ .... " ಎನ್ನುತ್ತಾನೆ . ಎಲ್ಲಿ ?? ಏನು?? ಎತ್ತ ?? ಗೊತ್ತಿಲ್ಲ... ನೀವೇನಾದರೂ ಆಗಲ್ಲ - ಹೋಗಲ್ಲ ಅಂದ್ರೆ ಇವನು ಪಾಗಲ್ಲಾಗಿ ಬಿಡ್ತಾನೆ . "ಇಲ್ಲ ಮಚ್ಚಾ .. ರಿಕ್ಷಾದವನು ಬರಲ್ವಂತೆ .. ನಾಳೆ Local train ನಲ್ಲಿ ಹೋಗೋಣ . ಅಂದ್ರೆ ಸುಮ್ಮನೆ ಮಲಗುತ್ತಾನೆ .

"ಸಮಾನ ಗುಣದವರು ಮಿತ್ರರಾಗುತ್ತಾರೆ " ಎಂಬ ಮಾತಿನಂತೆ ನನ್ನ Roommates ನಂತೆ ನಾನೂ ಕೂಡ ನಿದ್ರೆಯಲ್ಲಿ "ಪ್ರಚೋದನಕಾರಿ " ಭಾಷಣ ಮಾಡುತ್ತೇನೆ . ನನ್ನದು ಕೇವಲ ಶ್ರವ್ಯ ಮಾಧ್ಯಮ ಪಚ್ಚುವಿನಂತೆ ದೃಶ್ಯ ಮಾಧ್ಯಮವಲ್ಲ . "ಆಚಾರವಿಲ್ಲದ ನಾಲಿಗೆ ರಾತ್ರಿ ಮುಚ್ಕೊಂಡು ಮಲಗೋ ನಾಲಿಗೆ " ಎಂದು ಎಷ್ಟು ಹೇಳಿದರೂ ಅದು ಕೇಳುವುದಿಲ್ಲ . ಸಣ್ಣ ಪ್ರಾಯದಿಂದಲೇ ನಾನು ನಿದ್ರೆಯಲ್ಲಿ ಮಾತಾಡುತ್ತಿದ್ದೆ ಅದಕ್ಕೆ ಕಾರಣವೂ ಇದೆ . ಕೇಳಿ ....

ಅಣ್ಣನೊಡನೆ ಆಟ ಆಡುವಾಗ ಆಟದ ಮಧ್ಯೆ ವಾಗ್ಯುದ್ಧ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೈ-ಕೈ ಮಿಲಾಯಿಸುತ್ತಿದ್ದ ನಾವು ಹೇಗೋ ಅಮ್ಮನನ್ನು ಒಲಿಸಿಕೊಂಡು ಈ ವಿಷಯ ಅಪ್ಪನ ಬಳಿ ತಲುಪದಂತೆ ನೋಡಿಕೊಳ್ಳುತ್ತಿದ್ದೆವು. ಬೆಳಿಗ್ಗೆ ಅಪ್ಪನಿಂದ ತಪ್ಪಿಸಿಕೊಂಡರೂ ರಾತ್ರಿ ಕನಸಿನಲ್ಲಿ ಅಪ್ಪನ ಪಂಚಾಯ್ತಿ ಕಟ್ಟೆ ಶುರು " ಸುಮಂಥಾ ..... ಇಲ್ಲಿ ಬಾ !!!!! ಅಪ್ಪನ ಆವಾಜ್ ಗೆ ನಿದ್ದೆಯಲ್ಲೇ ಬಾಯೊಣಗುತ್ತಿತ್ತು . ಆದರೂ ಆ ಗಾಢ ನಿದ್ದೆಯಲ್ಲೂ ನನ್ನ 7th sense 6th sense ಗೆ ಹೇಳುತ್ತಿತ್ತು. " ನೋಡು ಸುಮಂತಾ ನೀನು ಮಲಗಿದ್ದೀಯಾ ಇದು ಬರೀ ಕನಸು ಬಾಯಿ ಬಿಟ್ಟು ಬಕ್ರಾ ಅನ್ನಿಸ್ಕೊಬೇಡ ತೆಪ್ಪಗೆ ಮಲಗು ಎಂದು " ಇದರ ಹಿಂದೆಯೇ " ಸುಮಂಥಾ ......ಬಂದ್ಯೋ ಹೇಗೆ ??? ಕಣ್ಣು ಕೆಂಪು ಮಾಡಿ ಅಪ್ಪನ ತಾರಕ ಸ್ವರ. ಅಂಥಾ ಸಮಯದಲ್ಲಿ ಮನಸ್ಸು ಅಪ್ಪನ ಪೆಟ್ಟಿನಿಂದ ಬದುಕಲು ಬೇರೆ ಎಲ್ಲ Sense ನ್ನು ಬದಿಗೊತ್ತುತ್ತಿತ್ತು ಹಾಗೂ ಅಪ್ರಯತ್ನವಾಗಿ ನಾನು " ಬಂದೇ....." ಎಂದು ಕೂಗಿ ಎದ್ದು ಕೂತರೆ ನೋಡುವುದೇನು ?? ಅಕ್ಕ - ಅಣ್ಣ ಇಬ್ಬರೂ ಒಳ್ಳೆ ದೊಂಬರಾಟ ನೋಡುತ್ತಿರುವಂತೆ ನನ್ನನ್ನೇ ಗುರಾಯಿಸುತ್ತಿದ್ದಾರೆ ಮುಸಿ ಮುಸಿ ನಗುತ್ತಿದ್ದಾರೆ. ಆದರೆ ಆ ಅವಮಾನದಲ್ಲೂ ನನಗೆ ಅಪ್ಪನ ಪೆಟ್ಟಿನಿಂದ ತಪ್ಪಿಸಿಕೊಂಡ ಸಂಭ್ರಮ . ಅಷ್ಟೆ ಅಲ್ಲ ರಾತ್ರಿ ರಾಮಾಯಣದಿಂದ ರಾಜಕೀಯದ ವರೆಗೆ ಎಲ್ಲ ಕಾನೂನು ಮಾತಾಡುವ ನಾನು ಕೊನೆಯಲ್ಲಿ " ಮಚ್ಚಾ ನಾನೇನು ನಿದ್ದೆಯಲ್ಲಿ ಮಾತಾಡ್ತಾ ಇದ್ದೀನಿ ಅಂದುಕೊಂಡ್ಯಾ ?? " ಎಂದು ಕೇಳುತ್ತೀನಂತೆ. ತಾನು ನಿದ್ದೆಯಲ್ಲಿದ್ದೀನ ?? ಅಥವಾ ಇವನು ನಿದ್ದೆಯಲ್ಲಿದ್ದಾನಾ ?? ಎಂದು ಅವನಿಗೇ confusion ಆಗಬೇಕು .

ಇನ್ನು ಕನಸುಗಳು . ಎಂತೆಂಥಾ ಕನಸು ಬೀಳುವುದಿಲ್ಲ ?? ಅಜ್ಜಿಗೆ ಕನಸಿನಲ್ಲಿ ಕೃಷ್ಣ ಬಂದರೆ ಮೊಮ್ಮಗನಿಗೆ ಬರೀ ಗೋಪಿಕಾ ಸ್ತ್ರೀಯರು ಬರುತ್ತಾರೆ . ಗಂಗಾವತಿಯ ಪ್ರಾಣೇಶ್ ಅವರು ಹೇಳುವಂತೆ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡವನಿಗೆ ಕನಸಿನಲ್ಲಿ ಬರೀ ನಾಯಿಯೇ ಬರುತ್ತದಂತೆ ( ನಾಯಿ - ಸಿಂಡಿಕೇಟ್ ಬ್ಯಾಂಕಿನ ಲೋಗೋ ) . ಸಮುದ್ರದ ಮಧ್ಯೆ ಸಿಕ್ಕಿಬಿದ್ದಿರುವಂತೆ ಕನಸು ಕಾಣುವ ನಮ್ಮ ಅಮ್ಮನ ಕನಸಿನ ಕೊನೆಯಲ್ಲಿ ಅಪ್ಪ ಸ್ಕೂಟರ್ ತೆಗೆದುಕೊಂಡು ಬಂದು ಅಮ್ಮನನ್ನು ಕರೆದುಕೊಂಡು ಹೋಗುತ್ತಾರಂತೆ !!!!! ಇನ್ನು ಎಷ್ಟು ಸುಂದರ ಹುಡುಗಿಯರ ಕನಸಿನಲ್ಲಿ ಬಂದು ನಾನು ಅವರ ನಿದ್ದೆಗೆಡಿಸಿದ್ದೇನೋ ನಾನರಿಯೆ . :)

ಕನಸ ಮಾರುತಿಹೆ ಬನ್ನಿ ಕನಸುಗಳ ಜಾತ್ರೆಗೆ
ಬಸಿದುಕೊಳ್ಳಿರಿ ಕನಸನು ನಿಮ್ಮ ನಿದ್ದೆಯ ಪಾತ್ರೆಗೆ
ಇದರಲ್ಲಿಹುದು ದೊಡ್ಡ ಕನಸುಗಳ ಗಂಟು
ಎಲ್ಲ ಬಗೆಯ ಜನರಿಗೂ ಕನಸು ಇದರಲ್ಲುಂಟು

ವಿದ್ಯಾರ್ಥಿಗೆ ಕಾಲೇಜಿನಲ್ಲಿ ಸೀಟು
ರಾಜಕಾರಣಿಗೆ ಜನಗಳ ಓಟು||
ಪ್ರೇಮಿಗೆ ಪ್ರೇಯಸಿಯೊಡನೆ ಪಾರ್ಕು
ಇಂಜಿನಿಯರಿಂಗ್ ವಿದ್ಯಾರ್ಥಿಗೆ 35 ಮಾರ್ಕು ||

ಕಷ್ಟಜೀವಿಗೆ ಹೊಸ ಮನೆಯ ಕಟ್ಟುವುದು
ತೆಂಡೂಲ್ಕರ್ ಗೆ ಚೆಂಡು ಹೊರಗಟ್ಟುವುದು ||
ಸೊಳ್ಳೆ ಗೆ ಜನರನ್ನು ಕಚ್ಚುವುದು
ಷೋಡಷಿಗೆ ಲಿಪ್ ಸ್ಟಿಕ್ಕು ಹಚ್ಚುವುದು ||

ಕುಡುಕನಿಗೆ ಸಂಜೆ ಬಿಟ್ಟಿ ಬೀರಿನದು
TATA ಗೆ NANO ಕಾರಿನದು .
ಮುದುಕನಿಗೆ ಕೃತಕ ಹಲ್ಲಿನದು
ನನಗೋ ಹೊಸ ಆರ್ಟಿಕಲ್ಲಿನದು . :)

ಕನಸ ಮಾರುತಿಹೆ ಬನ್ನಿ ಕನಸುಗಳ ಜಾತ್ರೆಗೆ
ಬಸಿದುಕೊಳ್ಳಿರಿ ಕನಸನು ನಿಮ್ಮ ನಿದ್ದೆಯ ಪಾತ್ರೆಗೆ

ನಮ್ಮ ಜೀವನದ ಸುಮಾರು 1/3 ಭಾಗವನ್ನು ನಾವು ಮಲಗುವುದರಲ್ಲೇ ಹಾಗೂ ಮಲಗಿ ಕನಸು ಕಾಣುವುದರಲ್ಲಿ ಕಳೆಯುತ್ತೇವೆ. ಬರೆಯಲಿಕ್ಕೆ ಇನ್ನೂ ತುಂಬಾ ಇದ್ದರೂ ಈಗ ನಿದ್ದೆ ಎಳೆಯುತ್ತಿದೆ . ಆಆ..... ಆಕಳಿಕೆ . ನಿಮಗೆಲ್ಲರಿಗೂ ಸಕಲ ಆಯಾಸ ಪರಿಹಾರಕಿ ನಿದ್ರಾದೇವಿ ಒಲಿಯಲಿ ಹಾಗೂ ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ಹಾರೈಸುತ್ತಾ ಕುಂಭಕರ್ಣನ ಡೈರಿಯನ್ನು ಮುಚ್ಚುತ್ತಿದ್ದೇನೆ . ಏನು ?? ನಾನು ಈ ಲೇಖನ ನಿದ್ದೆಯಲ್ಲಿ ಬರೆದದ್ದು ಅಂದುಕೊಂಡ್ರಾ ??? !!! ಇಲ್ಲ ಸ್ವಾ.. ಮೀ .... ಎ .. ಚ್ಚ .. ರ ...ವಿ ... ದ್ದೀ ... ನಿ .... ಅಮ್ಮಾ ......ಆಆ .......
==================ವಿಕಟಕವಿ ==================

Tuesday, March 17, 2009

ನಾನು ನನ್ನ ಸಂಸಾರ

ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . "ರೀ ... ಇವತ್ತು ಉಪ್ಪಿಟ್ಟು ಮಾಡುತ್ತೇನೆ ... ಅಡುಗೆ ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . "ಏನೋ ..... ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು ... ಹೌದು ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ ನನ್ನವಳ "ಹಸ್ತಗುಣದ" ಬಲಿಪಶುವಾಗಿದ್ದ ರಮೇಶಣ್ಣ ... ಲೋ Insurance Premium ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ .

ಒಹ್ ..... ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಸುಶಾಂತಿ . ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ "ಪಾರ್ವತಿಯ " ತರಹ ಇವಳು ಕೂಡ "ಮುದ್ದಿನ ಮನೆಮಗಳು ". " ಆರತಿ ತೆಗೊಂಡರೆ ಗರ್ಮಿ ತೀರ್ಥ ತೆಗೊಂಡರೆ ಶೀತ " ಅಂತಾರಲ್ಲ ಅದೇ ಪಂಗಡಕ್ಕೆ ಸೇರಿದವಳು . ಕಲಿತಿದ್ದು ಇಂಜಿನಿಯರಿಂಗ್ ಆದರೂ ಗಂಜಿ ನೀರು ಬೇಯಿಸಲಿಕ್ಕು ಬರುವುದಿಲ್ಲ . ಇವಳ ತಪ್ಪಿಲ್ಲ ಬಿಡಿ . ಇವಳು ಅಡುಗೆ ಮನೆ ಕಡೆ ಬಂದರೂ "ನೀನು ಓದ್ಕೋ ಪುಟ್ಟಿ " ಎಂದು ಹೇಳಿ ಹೊರಗೆ ಕಳಿಸಿದರೆ ಏನು ಮಾಡುವುದು ?? ಈ ಪುಟ್ಟಿ ಹೆಸರಿನ ಹಸ್ತಾಂತರ ಇಂದಿಗೂ ಆಗಿಲ್ಲ . ಈಗ ನಾವು ನಮ್ಮ ಮಗಳನ್ನು ಇವಳ ತವರು ಮನೆಗೆ ಕರೆದುಕೊಂಡು ಹೋದರೆ ಅವಳನ್ನು "ಪುಟ್ಟಿ ಮಗಳು " ಎಂದು ಕರೆಯುತ್ತಾರೆ . ನೋಡುವವರಿಗೆ ನಾನೇನು ಇವಳನ್ನು ಬಾಲ್ಯವಿವಾಹ ಮಾಡಿಕೊಂಡಿರುವಂತೆ ಅನಿಸುತ್ತದೆ .

ಹೌದ್ರಿ ... ನಮ್ಮ ಮನೆಯಲ್ಲಿ ನಾನೇ ಅಡಿಗೆ ಮಾಡೋದು .. ಅರೆ !!! ಅದರಲ್ಲೇನು ನಾಚಿಕೆ ?? ನೀವು ರಾಮಾಯಣ ಮಹಾಭಾರತ ಓದಿದ್ದೀರ ತಾನೇ ?? ಅದರಲ್ಲಿ ನಳಪಾಕ , ಭೀಮಪಾಕದ ಉಲ್ಲೇಖ ಬಿಟ್ಟರೆ "ದಮಯಂತಿ ಪಾಕ " "ದ್ರೌಪದಿ ಪಾಕ" ದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ?? ಮತ್ತೆ ಅಜ್ಞಾತ ವಾಸದ ಕಾಲದಲ್ಲಿ ದ್ರೌಪದಿಯನ್ನು ಅಡುಗೆ ಕೆಲಸಕ್ಕೆ ಕಳಿಸಲು ತಯಾರಿ ಮಾಡಿದ್ದರು ಆದರೆ ಅವಳು "ಏನ್ರಿ ... ನಾನು ದುರ್ಯೋಧನ ಸಾಯೋವರ್ಗೂ Comb ಮಾಡ್ಕೊಳ್ಳೋಲ್ಲ ಅಂತ ಶಪಥ ಮಾಡಿದ್ದೀನಿ ಆಮೇಲೆ ಸಾಂಬಾರಿನಲ್ಲಿ ಕೂದಲು ಬಂದ್ರೆ ಕಷ್ಟ .. ನೀವೇ ಹೋಗಿ ಬನ್ರಿ .. ಎಂದು ಭೀಮನನ್ನು ಏಮಾರಿಸಿದಳು . ಆದರೆ ನನ್ನವಳು ಹಾಗಲ್ಲ ನಾನೇ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನು ಬಿಡುವುದಿಲ್ಲ . ನಮ್ಮ ಅಡುಗೆ ಕೋಣೆಯ ಹೊಸ್ತಿಲಿನಲ್ಲಿ ಎರಡು ಲಕ್ಷ್ಮಣ ರೇಖೆ ಎಳೆದಿದ್ದೇನೆ ಒಂದು ಜಿರಳೆಗೆ ಮತ್ತೊಂದು ನನ್ನ ಹೆಂಡತಿಗೆ .

ಮದುವೆಯಾದ ಹೊಸತರಲ್ಲಿ ಪರಸ್ಪರ impress ಮಾಡುವ ಕಾರ್ಯ ಭರದಿಂದ ನಡೆಯುವುದು ಸಾಮಾನ್ಯ . ನಾನೂ ಹಾಗೇನೇ. ಆಗ ನಮ್ಮ ಮದುವೆಯಾಗಿ 2 ವಾರವಷ್ಟೇ ಕಳೆದಿತ್ತು . ಅಡುಗೆಯಲ್ಲಿ ಇವಳ ಪರಾಕ್ರಮ ಅರಿತಿರಲಿಲ್ಲ . ಆಫೀಸಿಗೆ ಹೋಗುವ ಅವಸರದಲ್ಲಿದ್ದೆ . ರೀ breakfast ಮಾಡ್ಕೊಂಡು ಹೋಗಿ ಅಂದಳು . ಸರಿ ಎಂದು ತಿಂದು impress ಮಾಡುವ ನಿಟ್ಟಿನಲ್ಲಿ "ಕಾಫಿ ಚೆನ್ನಾಗಿದೆ " ಎಂದೆನು . " ನಾನು ಟೀ ಮಾಡಿದ್ದು" ಎಂದು ಹೇಳಿ ಮುಖ ಸಣ್ಣದು ಮಾಡಿಕೊಂಡು ಒಳಗೆ ಹೋದಳು . " ಸ್ವಲ್ಪ ಸಾವರಿಸಿಕೊಂಡು "ಹಹ್ಹಹ್ಹ ... ತಮಾಷೆ ಹೇಗಿತ್ತು ??? ಎಂದು ಕೇಳಿ ಮಾತಿನ ಓಘ ಬದಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ . ಆಫೀಸಿನಿಂದ ಫೋನ್ ಮಾಡಿ ಹೀಗೆ ಮಾತಾಡುತ್ತಾ " ನಾಳೆ ಏನು ಸ್ಪೆಷಲ್ ?? ಎಂದು ಕೇಳಿದೆ . "ನೀವೇ ಹೇಳ್ರಿ " ಎಂದಳು . ಇಡ್ಲಿ ಮಾಡು ... ಬೇಳೆ ಸ್ವಲ್ಪ ಹೆಚ್ಚೇ ನೆನೆಸು ನಾಳೆ ನನ್ನ ನಾಲ್ಕು ಗೆಳೆಯರು ಮನೆಗೆ ಬರುತ್ತಾರೆ ಎಂದೆನು . ಸಂಜೆ ಮನೆಗೆ ಹೋದವನಿಗೆ ತಲೆ ತಿರುಗುವುದೊಂದು ಬಾಕಿ ನನ್ನ ಅರ್ಧಾಂಗಿ ಅರ್ಧ ಚೀಲ ತೊಗರಿಬೇಳೆ ನೆನೆಸಿ ಇಟ್ಟಿದ್ದಾಳೆ . ನನ್ನ ನೋಡಿ "ರೀ ... ಸಾಕಾ ಇಷ್ಟು ?? ಎಂದಳು . ಸಾಕಮ್ಮ ಸಾಕು ..... ನಮ್ಮ ಮದುವೆ ದಿನ ಕೂಡ ಇಷ್ಟು ಬೇಳೆ ನೆನೆಸಿಟ್ಟಿರಲಿಕ್ಕಿಲ್ಲ ಎಂದೆನು .ಅತ್ತೆ ಮಾವ ಬರುವ ನೆಪ ಮಾಡಿ ಗೆಳೆಯರ ಕಾರ್ಯಕ್ರಮವನ್ನು ಮುಂದೆ ಹಾಕಿದೆನು . ಆಮೇಲೆ ಒಂದು ವಾರ ಬೆಳಿಗ್ಗೆ ತಿಂಡಿಗೆ "ದಾಲ್ ಖಿಚಡಿ " ಊಟಕ್ಕೆ ಬೇಳೆಸಾರು .ಹೀಗೆ ದಾಲಿನ ಧಾಳಿಯಿಂದ ಹತ್ತು ದಿನ
ಹೊಟ್ಟೆಯಲ್ಲಿ ....... ಬೇಡ ಬಿಡಿ... ಅದನ್ನೆಲ್ಲಾ ಯಾಕೆ ಬರೆಯುವುದು .....ನಿಮಗೆ ಅರ್ಥವಾಯಿತಲ್ಲ ಅಷ್ಟೆ ಸಾಕು .

ರಮೇಶಣ್ಣನ ಪ್ರಸಂಗ :- ರಮೇಶಣ್ಣ ನನ್ನ ಚಡ್ಡಿ ದೋಸ್ತಿ . ಸಂಬಂಧಿ ಕೂಡ ಸ್ನೇಹಿತ ಕೂಡ . ನನಗಿಂತ 2 ವರ್ಷ ದೊಡ್ಡವನಾಗಿದ್ದರೂ ಸಣ್ಣ ಪ್ರಾಯದಿಂದ ನನ್ನ ಒಡನಾಡಿ . ಮದುವೆ ಆದ ನಂತರ ಒಂದು ದಿನ ಅವನನ್ನು ಊಟಕ್ಕೆ ಕರೆದೆ . ಅವನಿಗೆ ನುಗ್ಗೆ ಕಾಯಿ ತುಂಬಾ ಇಷ್ಟ . ಅದಕ್ಕೆ ನನ್ನಾಕೆಗೆ ನುಗ್ಗೆಕಾಯಿ ಹಾಕಿ ಸಾಂಬಾರು ಮಾಡಲು ಹೇಳಿದೆ . ಅವಳು ಮಾಡಿದಳು .ರಮೇಶಣ್ಣ ತಿಂದವನೇ .." ನುಗ್ಗೆಕಾಯಿಯನ್ನು ಯಾವ ಕಟ್ಟಿಗೆ ಡಿಪೋದಿಂದ ತಂದೆ ?? ಎಂದು ಕೇಳಿದ . ಎಲ್ಲ ಬಲಿತಿರುವ ನುಗ್ಗೆಕಾಯಿಗಳು . ಇವಳನ್ನು ಕೇಳಿದರೆ "ರೀ ಮಾರ್ಕೆಟಿಗೆ ಹೋಗಿದ್ದೆ ಆ ತರಕಾರಿ ಅಂಗಡಿಯವನು ಸಣ್ಣ ನುಗ್ಗೆಕಾಯಿ ಕೊಡಲು ಬಂದ ದಬಾಯಿಸಿ ದೊಡ್ಡ ದೊಡ್ಡ ನುಗ್ಗೆ ಕಾಯಿ ಹಾಕಿಸಿಕೊಂಡು ಬಂದೆ " ಅಂದಳು . ಅವಳ ಮುಖದ ಮೇಲೆ ದಿಗ್ವಿಜಯ ಸಾಧಿಸಿದ ಸೇನಾಧಿಕಾರಿಯ ಸಂಭ್ರಮ . ನನಗೋ ಅಪ್ಪ ಹೇಳಿದ "ದೊಡ್ಡ ಪಾವಣೆ" ಕತೆ ನೆನಪಾಯಿತು .ಇಷ್ಟ ಮಾತ್ರವಲ್ಲ ...

ಚಪಾತಿ - ಉಂಡೆ -ಒಬ್ಬಟ್ಟಿನೊಟ್ಟಿಗೆ
ಬೇಕೇ ಬೇಕು ಚಾಕು ಕತ್ತರಿ ಸುತ್ತಿಗೆ ||
ಪೂರಿಯಲಿ ಅಡಗಿಹುದು ಎಣ್ಣೆಯಾ ಗಿರಣಿ
ಅಡುಗೆ ಮಾಡಿದರೆ ಇವಳು ಮಕ್ಕಳದು ಧರಣಿ.||

ಸಾರಿನಲ್ಲಿ ಉಪ್ಪಿಲ್ಲ ಪಾಯಸದಿ ಬೆಲ್ಲ
ಬೇಳೆ ಸಾರಿನಲ್ಲಿ ಬೇಳೆ ಬೆಂದಿರುವುದಿಲ್ಲ||
ಪಲ್ಯದಲಿ ಅಡಗಿಹುದು ನೂರೆಂಟು ಸೊತ್ತು
ನನ್ನವಳ ಅಡುಗೆ ನನಗೆ ನುಂಗಲಾಗದ ತುತ್ತು ||

ಅಡುಗೆ ಮನೆಯಲ್ಲಿ ಮಾತ್ರ ಇವಳ ಕಾರ್ಯವ್ಯಾಪ್ತಿ ಮುಗಿಯೊಲ್ಲ . ಇವಳು ಮನೆಯಲ್ಲಿದ್ದರೆ ಅಥವಾ ಪಾದಚಾರಿಯಾಗಿ ಹೊರಗೆ ಬಂದರೆ ಇಡೀ ಊರಿಗೆ ಶಾಂತಿ . ಆದರೆ ಅಪ್ಪಿ - ತಪ್ಪಿ ವಾಹನ ಏರಿದರೆ ಈಕೆ ಪ್ರಳಯಾಂತಕಿ. ಊರಿನಲ್ಲಿ ಕರ್ಫ್ಯೂ ಜಾರಿ . ಹೆಸರೇನೋ ಸುಶಾಂತಿ . ಇದನ್ನು "ಶಾಂತಿ ಅಶಾಂತಿಗಳ ಇರುವಿಕೆ ಯಾರ ಮೇಲೆ ಅವಲಂಬಿತವಾಗಿದೆಯೋ ಅವಳು"(ವಾಹನ ಸಂಚಾರ ಸಮಾಸ ) ಎಂದು ಅರ್ಥೈಸಬಹುದು. ಊರಿನಲ್ಲಿನ ಎಲ್ಲ ಘಟಾನುಘಟಿಗಳು "ಜೀವ ಇದ್ರೆ ಬೆಲ್ಲ ಬೇಡಿ ತಿಂಬೆ" ಎನ್ನುತ್ತಾ ಮನೆಯಲ್ಲಿ ಕೂರುವುದು ಸತ್ಯ .

ನೀವು ಉಡುಪಿಯಿಂದ ಭಟ್ಕಳಕ್ಕೆ ಹೋಗುತ್ತಿದ್ದೀರಾ ?? ಏನು ?? via ಕುಂದಾಪುರಾನಾ ??? ಬೇಡ .... ಈಗಲೇ ಎಚ್ಚರಿಸುತ್ತಿದ್ದೇನೆ . ನೋಡಿ ಸರ್ .. ಹಣ ಹೋದರೆ ನಾಳೆ ಸಂಪಾದಿಸಬಹುದು .ಕೊಳಲಗಿರಿ -ಪೆರ್ಡೂರು-ಹೆಬ್ರಿ -ಶಿವಮೊಗ್ಗ -ಸಿದ್ದಾಪುರ -ಕೊಲ್ಲೂರು - ಬೈಂದೂರು ಮಾರ್ಗದಿಂದ ಭಟ್ಕಳಕ್ಕೆ ಬನ್ನಿ . ಯಾಕೆ ಎಂದು ಕೇಳುತ್ತಿದ್ದೀರಾ ?? " ಸುಶಾಂತಿ ಇದ್ದಾಳೆ ಎಚ್ಚರಿಕೆ " ಏನು ?? ನಮ್ಮ ಬಳಿ license ಇದೆ ನಾವು ಹೀಗೆ ಹೋಗುತ್ತೇವೆ ಅನ್ನುತ್ತೀರಾ ?? ಅವಳ ಬಳಿ ಇಲ್ಲಾ ಸ್ವಾಮೀ ...

ಏನಿಲ್ಲ ಮೊನ್ನೆ ಇವಳು ದ್ವಿಚಕ್ರ ವಾಹನ ಕಲಿಯುವ ಹುಮ್ಮಸ್ಸಿನಲ್ಲಿ ನನ್ನ Honda Activa ಏರಿದಳು ನೋಡಿ . ಇವಳು ಮೊದಲೇ ಎಲೆಕ್ಟ್ರಿಕಲ್ ಇಂಜಿನಿಯರ್ . ಅದೂ 85 % ಅಂಕಗಳೊಂದಿಗೆ . ಕಲಿತ ವಿದ್ಯೆಯನ್ನೆಲ್ಲ ವಾಹನದ ಮೇಲೆ ಪ್ರಯೋಗ ಮಾಡಿದರೆ ಹೇಗೆ ನೋಡಿ ??ವಾಹನ ಹತ್ತಿದ ತಕ್ಷಣ " When a tow wheeler is started and you twist the acceleratore the fingers which encircle the accelarator will give the direction of motion" ಎಂಬ " THUMB RULE " apply ಮಾಡಿಯೇ ಬಿಟ್ಟಳು . ಅಂದರೆ ವಾಹನ ನಿಲ್ಲಿಸಲು accelarator ನ್ನು ಹಿಂದೆ ತಿರುಗಿಸಲು ಶುರು ಮಾಡಿದಳು . ಆ ದ್ವಿಚಕ್ರ ವಾಹನಕ್ಕೆ ಈ ನಿಯಮ ಗೊತ್ತಿಲ್ಲದಿದ್ದರೆ ಅದು ಇವಳ ತಪ್ಪೇ ?? ದಿಕ್ಕಾಪಾಲಾಗಿ ಓಡಲು ಶುರು ಮಾಡಿತು . ಪುಣ್ಯಕ್ಕೆ ಮೈದಾನದಲ್ಲಿ ಬಿಡುತ್ತಿದ್ದಳು . ಇಲ್ಲದಿದ್ದರೆ ಆ ದಿನ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು " HOUSE-FULL " ಬೋರ್ಡ್ ಹಾಕುತ್ತಿದ್ದವೋ ಏನೋ . !!!!!!!!!! ದೂರದಿಂದಲೇ ಇದನ್ನು ನೋಡಿದ ಊರ ಜನರು ಮರುದಿನದಿಂದ ಇವಳು ಮನೆಯಿಂದ ಹೊರನಡೆದರೆ ನಡೆದುಕೊಂಡು ಹೋಗುತ್ತಿದ್ದಾಳೋ ಅಥವಾ ವಾಹನದಲ್ಲೋ ಎಂದು ಮನೆಯ ಕಿಟಕಿಯಿಂದಲೇ confirm ಮಾಡಿಕೊಂಡು ಆಮೇಲೆ ಮನೆಯಿಂದ ಹೊರಬೀಳುತ್ತಿದ್ದರು .

ಇನ್ನು ಇವಳು ಕಾರು ಕಲಿಯ ಹೊರಟಳು . ಆ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ನೋಡಿ ಮೇಡಂ
10 km speed --1st gear
20km speed --second gear
30 km speed -- 3rd grear ----- ಹೀಗೆ ಸರಳ ಲೆಕ್ಕಾಚಾರ ಹೇಳಿದ . ಅದೇ ಅವನು ಮಾಡಿದ ತಪ್ಪು . ರಸ್ತೆ ನೋಡುವುದು ಬಿಟ್ಟು ಓಡೋ ಮೀಟರ್ ನೋಡುತ್ತಾ ಕುಳಿತಳು . ಮತ್ತೆ ಇವಳು ಗಾಡಿ ಬಿಡುವಾಗ ಕಡಿಮೆ ಎಂದರೂ ಒಂದು ಮೂವರು assistants ಬೇಕು .
1) Pen - Paper ಹಿಡಿದುಕೊಂಡು ಗಾಡಿ ಯಾವ gear ನಲ್ಲಿದೆ ಮತ್ತು ಗಾಡಿಯ speed ಎಷ್ಟು ಎಂದು ಲೆಕ್ಕ ಹಾಕಿ chaart Prepare ಮಾಡಿ ಹಿಂದಿನಿಂದ ಹೇಳಲು ಒಬ್ಬ .

2)ಅವನ ಮಾತು ಕೇಳಿ ಈಕೆ gear change ಮಾಡುತ್ತಾಳಲ್ಲ ಆಗ ಸ್ಟೇರಿಂಗ್ ಹಿಡಿದುಕೊಳ್ಳಲು ಒಬ್ಬ .

3) ಗಾಡಿಯ ಮುಂದೆ ಚಲಿಸುತ್ತ ರೋಡ್ ಹಂಪ್, ಟರ್ನ್ ಪಾಯಿಂಟ್ ಎಲ್ಲಿ ಬರುತ್ತದೆ ಮುಂತಾದ ವಿಷಯಗಳ ಲೇಟೆಸ್ಟ್ update ಕೊಡಲು ಇನ್ನೊಬ್ಬ .

ಮತ್ತೆ ಬಲಕ್ಕೆ ತಿರುಗುವಾಗ ಎಡಗಡೆಯ indicator ಹಾಕುವುದು horn ಎಂದು ವೈಪರ್ ಶುರು ಮಾಡುವುದು ಇದೆಲ್ಲ ಕಾಮನ್ ಬಿಡಿ . ಮುಂದೆ RTO ದವರು license ಕೊಡುವ ಮೊದಲು ಕುಂದಾಪುರದಲ್ಲಿ 2 ತಿಂಗಳು ಡ್ರೈವ್ ಮಾಡಿ ಬಂದಿರಬೇಕೆಂಬ ಕಂಡೀಷನ್ ಹಾಕಬಹುದು.

ಹೀಗೆ ಮನೆ-ಆಫೀಸು -ಅಡುಗೆ ಎಂದು ಸುಸ್ತಾಗುತ್ತೇನೆ . ಬಳಲಿ ಬೆಂಡಾಗಿ ಮನೆಗೆ ಮರಳಿದಾಗ ಮನೆ ಬಾಗಿಲಿನಲ್ಲಿ ಗೋಣು ಉದ್ದ ಮಾಡಿಕೊಂಡ ನನ್ನವಳು " ರೀ ನಿಮಗೋಸ್ಕರ ಕಾಯ್ತಾ ಇದ್ದೆ... ಬೇಗ ಟೀ ಮಾಡ್ರಿ..... ಎಂದು ತುಟಿಯಂಚಿನಲ್ಲಿ ನಕ್ಕಾಗ ಆ ನಗುವಿನಲ್ಲಿ ಸುಸ್ತೆಲ್ಲಾ ಮರೆತು ಹೋಗುತ್ತದೆ . ಏನೇ ಹೇಳಿ "ನನ್ನವಳು ನನ್ನೆದೆಯ ಹೊನ್ನಾಡನಾಳುವಳು " . ಇದೇ ನಾನು ಮತ್ತು ನನ್ನ ಸಂಸಾರದ ಕತೆ
==============================ವಿಕಟಕವಿ==================

Saturday, March 7, 2009

ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ .....

ಲೋ ಸುಮಂತಾ ...... ತಲೆ ಒಳ್ಳೆ ಮರುಭೂಮಿ ಆಗಿ ಬಿಟ್ಟಿದೆಯಲ್ಲೋ !!!!! ನನ್ನ ಮಾನ ಮರ್ಯಾದೆಯ ಕಿಂಚಿತ್ತೂ ಪರಿವೆ ಇಲ್ಲದಂತೆ ಪಬ್ಲಿಕ್ಕಾಗಿ ನನ್ನ ಗೆಳೆಯ "ಸೈಕ್ ಪೋ " ನನ್ನ ಮಾನವನ್ನು ಬಹಿರಂಗ ಹರಾಜಿಗಿಟ್ಟಾಗ ಏನು ಮಾಡುವುದು ತಿಳಿಯದೆ ತಬ್ಬಿಬ್ಬಾದೆ . ತಕ್ಷಣ ಸುಧಾರಿಸಿಕೊಂಡು " ಹೌದೋ ನನ್ನ ತಲೆಯಲ್ಲಿ ಒಳ್ಳೆ ಬುದ್ಧಿ ತುಂಬಿದೆ ನಿನ್ನ ಥರ ಗೊಬ್ರ ಸಗಣಿ ತುಂಬಿದ್ದರೆ ನನ್ನ ಕೂದಲಿಗೂ ಪೋಷಣೆ ಸಿಕ್ಕಿ ಸೊಂಪಾಗಿ ಬೆಳೆದಿರೋದು" ಅಂಥ ಆವಾಜ್ ಹಾಕಿ ಅವನ ಬಾಯಿ ಮುಚ್ಚಿಸಿದೆ .ಇರಲಿ ಬಿಡಿ ಮೊದಮೊದಲು ಹೀಗೆ ಯಾರಾದರೂ ಹೇಳಿದರೆ ನನಗೆ ಸ್ವಲ್ಪ ಬೇಜಾರಾಗ್ತಿತ್ತು ಈಗ ಅಭ್ಯಾಸ ಆಗಿ ಹೋಗಿ ಬಿಟ್ಟಿದೆ . ಅದೇನೋ ಹೇಳ್ತಾರಲ್ಲ "ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಹಾಗೇನೆ . ದಿನಾ ಹೋಗೋ ನನ್ನ ಕೂದಲಿಗೆ ಬೇಜಾರ್ ಮಾಡ್ಕೋಳ್ಲೋದಕ್ಕೂ ಸಮಯ ಇಲ್ಲದಾಗಿದೆ .

ಮೊನ್ನೆ "ಥಟ್ ಅಂತ ಹೇಳಿ " ನೋಡ್ತಾ ಇದ್ದೆ ಅದರ ನಿರೂಪಕರು "ಪ್ರತಿದಿನ ಮನುಷ್ಯರ 40 ಕೂದಲು ಉದುರುತ್ತದೆ ಹಾಗೆ ಬೆಳೆಯುತ್ತದೆ "ಅಂಥ ಹೇಳಿದ್ರು . ನನ್ನ ವಿಷಯದಲ್ಲಿ ಇದು ಸ್ವಲ್ಪ ಎಡವಟ್ಟಾಗಿದೆ . ಬ್ರಹ್ಮನ Program ನ್ನು testing ಮಾಡದೆ production ಗೆ release ಮಾಡಿರಬೇಕು . ಉದುರೋ ವಿಷಯದಲ್ಲಿ ನಲವತ್ತಕ್ಕೆ ಒಂದು ಹತ್ತು ಸೇರಿಸಿಯೇ ಉದುರುತ್ತದೆ ಆದರೆ ಬೆಳೆಯೋ program ಕೆಲಸ ಮಾಡುತ್ತಿಲ್ಲ . ಇದು ತಪ್ಪಲ್ಲವೇ ??. ಈ ಕೂದಲಿನ ಮೇಲೆ ಕಾಮೆಂಟರಿ ಕೇಳಿ ಕೇಳಿ ಸುಸ್ತಾಗಿದ್ದೇನೆ .ಕೆಲವೊಮ್ಮೆ ಕೊಲೆ ಮಾಡುವಷ್ಟು ಸಿಟ್ಟು ಬರುತ್ತದೆ .ಈಗ ನೀವೇ ನೋಡಿ .....

ಮೊನ್ನೆ ನಮ್ಮ ಮನೆಯ rent Agreement renew ಮಾಡುವಾಗ ಕಾರ್ಯನಿಮಿತ್ತ ಬ್ರೋಕರ್ ಬಳಿ ಹೋಗಿದ್ದೆ . ಅವನು ಅವನ ಹೊಸ Client ಗೆ " ಇಲ್ಲಿ ಮತ್ತೊಂದು plot ಖಾಲಿ ಇದೆ " ಎಂದು ಹೇಳಿ ನನ್ನ ತಲೆಯನ್ನು ನೋಡುತ್ತಾ ಕೂತರೆ ??? ಸಿಟ್ಟು ಬರುವುದಿಲ್ಲವೆ ???ನಾನೇನು ಮಾಡಲಿ ?? ಹಣೆಯ ಮೇಲೆ "Not for sale" ಎಂದು ಬೋರ್ಡ್ ಹಾಕಿ ತಿರುಗಲೇ??

ಕ್ಷೌರಕ್ಕೆಂದು ಹೋದಾಗ " ಗುರೂ ... ಜೋನ್ ಅಬ್ರಾಹಂ ,ಶಾರುಕ್ ಖಾನ್ ಥರ Fomous personality ಗಳ Hair Style ಮಾಡೋ ಅಂದರೆ ಆ ಬಡ್ಡೀಮಗ " ಸಾರ್ .... Natural ಆಗಿ ನಿಮ್ಮದು ಘಜಿನಿ ಕಟ್ ಇದೆ ಇದು ಬಿಟ್ಟು ಬೇರೆ Fomous Personality ಬೇಕು ಅಂದರೆ ಗಾಂಧೀಜೀದು ಮಾಡಬಹುದು " ಅನ್ನೋದೇ ??? ಸಿಟ್ಟು ಬಂದು ಅಲ್ಲಿಂದ ಹೊರನಡೆದು ಬೇರೆ ಸೆಲೂನ್ ಗೆ ಹೋದೆ . ದೊಡ್ಡ ಕ್ಯೂ ಇತ್ತು . ಆದರೂ ನಾನೂ ಹೋಗುತ್ತಲೇ ಸೇಲೂನಿನವನು ಮೊದಲು ನಿಮಗೆ ಕಟ್ಟಿಂಗ್ ಮಾಡುತ್ತೇನೆ ಬನ್ನಿ ಸಾರ್ ... ಅಂದ . ಆಯ್ತೆಂದು ಕೂತು "ಏನಪ್ಪಾ ನಂಗೆ ಯಾಕೆ First Preference ಕೊಟ್ಟೆ ಎಂದು ಕೇಳಿದರೆ ಸಾರ್ ...ಅವರಿಗೆ ಕಟ್ಟಿಂಗ್ ಮಾಡ್ಲಿಕ್ಕೆ ಅರ್ಧ ಗಂಟೆ ಆಗುತ್ತೆ ನಿಮ್ಮದು ಎರಡು ನಿಮಿಷದಲ್ಲಿ ಮುಗಿಯುತ್ತಲ್ಲ ... ಅದಕ್ಕೆ ಅನ್ನುವುದೇ ??? ಅಷ್ಟಲ್ಲದೆ ಕಟ್ಟಿಂಗ್ ಆದ ಮೇಲೆ ನಿತ್ಯದಂತೆ 50/- ಕೊಟ್ಟೆ . ಸಾರ್ ... ನಾನು ಕೆಲಸಕ್ಕೆ ಸರಿಯಾಗಿ ಹಣ ತಗೊಳ್ಲೋನು. ಅಂಥ ಹೇಳಿ 20/- ವಾಪಾಸ್ ಕೊಡುವುದೇ ??? ಅವನ ನಿಯತ್ತಿಗೆ ಶಾಪ ಹಾಕುತ್ತ ಮನೆಗೆ ಹೋದೆ .

ಇತ್ತೀಚಿಗೆ ತಿರುಪತಿಗೆ ಹೋಗಿ ಗುಂಡು ಹೊಡೆಸಿಕೊಂಡು ಬಂದ ನನ್ನ ಒಬ್ಬ ಗೆಳೆಯನೊಟ್ಟಿಗೆ ನಾನು ತಿರುಗುತ್ತಿದ್ದೆ . ಅಕಸ್ಮಾತ್ ಆಗಿ ದಾರಿಯಲ್ಲಿ ಸಿಕ್ಕಿದ ನಮ್ಮ ಗೆಳೆಯನೊಬ್ಬ ಏನೋ ಇಬ್ಬರೂ ಒಟ್ಟಿಗೆ ತಿರುಪತಿಗೆ ಹೋಗಿ ಬಂದಿರಾ ?? ನನ್ನನ್ನು ಕರೆಯಲೇ ಇಲ್ಲ ಎಂದರೆ ನಾನು ಏನು ಹೇಳಲಿ ?? ಇಲ್ವೋ ... ಇವನು ಮಾತ್ರ ತಿರುಪತಿಗೆ ಹೋಗಿ ಕೂದಲೊಪ್ಪಿಸಿ ಬಂದ ನನಗೆ ಹೋಗಲು ಟೈಮ್ ಇರಲಿಲ್ಲ ಅದಕ್ಕೆ ಆ ತಿಮ್ಮಪ್ಪ ಅವನೇ ಖುದ್ದಾಗಿ ನನ್ನ ಕೂದಲು ತೆಗೆದುಕೊಂಡ ಎಂದೆನು.

ನವೆಂಬರ್ ನಲ್ಲಿ ಕಾರ್ಯನಿಮಿತ್ತ ಬಿಜಾಪುರಕ್ಕೆ ಹೋಗಿದ್ದೆ . ಅಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಾಗ ಒಬ್ಬ ಮುದುಕ ನನ್ನನ್ನು ಕಂಡವನೇ ನನ್ನನ್ನು ಬಿಗಿದಪ್ಪಿಕೊಂಡು ಗೊಳೋ ಎಂದು ಅಳಲಾರಂಭಿಸಿದ. ನಾನು ಎಲ್ಲೋ ಅವರಿಗೆ ನನ್ನನ್ನು ಕಂಡು ಮನೆ ಬಿಟ್ಟು ಓಡಿ ಹೋದ / ಮನೆಯಿಂದ ದೂರ ಇರುವ ತಮ್ಮ ಮಗನ ನೆನಪಾಗಿರಬೇಕು ಎಂದು ಭಾವಿಸಿ, " ಏನ್ ಸಾರ್ ಇಷ್ಟಕ್ಕೆಲ್ಲ ಅತ್ತರೆ ಹೇಗೆ ?? ಹುಡುಗ್ರು ಪ್ರಾಯಕ್ಕೆ ಬಂದ ಮೇಲೆ ಕೆಲಸಕ್ಕಂತ ಊರೂರು ಅಲೆಯದೇ ಮನೆಯಲ್ಲೇ ಕೂತರೆ ಸಂಸಾರ ಸಾಗುವುದು ಹೇಗೆ ?? ಇವತ್ತೋ ನಾಳೆನೋ ಬರ್ತಾನೆ ಸಾರ್ ನಿಮ್ಮ ಮಗ .. ಖಂಡಿತ .... ಎಂದು ಸಮಾಧಾನ ಮಾಡಿದೆ . ಅದಕ್ಕವನು ರೀ ಯಪ್ಪಾ ... ನನ್ನ ಮಗ ನಮ್ ಜೊತೆಗೆ ಮನೆಯಾಗೆ ಅವ್ನೆ .... ಆದ್ರ ನಿನ್ ತಲಿ ನೋಡಿ ಈ ಸಾರಿ ಬರಗಾಲದಿಂದ ಒಣಗಿ ಹೋದ ನಮ್ ಕಬ್ಬಿನ ಗದ್ದೆ ಜ್ಞಾಪಕ ಬಂತ್ರಿ ..... ಎಂದು ಕಣ್ಣು ಮೂಗು ಒರೆಸಿಕೊಂಡು ಮತ್ತೆ ಅಳಲು ಶುರು ಮಾಡಿದರೆ ?? ಆ ರಾತ್ರಿ ನನಗೆ ನಿದ್ದೆ ಹೇಗೆ ಬರಬೇಕು ನೀವೇ ಹೇಳಿ .


ಈಗ ಈ ಉದುರೋ ಕೂದಲಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ . ಅಲೋಪತಿ ,ಹೋಮಿಯೋಪತಿ , ಆಯುರ್ವೇದ ,ವಿಜ್ಞಾನ , ಹಿಮಾನಿ , ಪ್ಯಾರಾಶೂಟ್, ನವರತ್ನ ತೈಲ, ತೆಂಗಿನೆಣ್ಣೆ ,ಹರಳೆಣ್ಣೆ ,ಸೀಗೆಕಾಯಿ ಪುಡಿ , ಕ್ಲಿನಿಕ್ ಪ್ಲಸ್ , ಆಲ್ ಕ್ಲೀಯರ್ ,ಅಪ್ನಾ ಖಯಾಲ್ ರಖ್ನಾ ಅನ್ನುತ್ತಾ ಗಾರ್ನೀರ್ , ತಲೆ ಮತ್ತು ಭುಜ (Head and shoulders) , ಯೋಗ, ಧ್ಯಾನ ಇವೆಲ್ಲದರ ಪ್ರಯೋಗ ನಡೆಸಿ ಸೋತು ಹೋದೆ . ಜಪ್ಪಯ್ಯ ಅಂದರೂ ಒಂದು ಕೂದಲು ಜನ್ಮ ಪಡೆಯಲಿಲ್ಲ . ಇನ್ನು Fevicol ಹಾಕಿ ಅಂಟಿಸಿ ಕೊಳ್ಳೋದು ಮತ್ತು ಯೂರಿಯಾ ಸುಫಲಾ ದಂತಹ ರಸಗೊಬ್ಬರ ಹಾಕಿಕೊಳ್ಳುವುದು ಮಾತ್ರ ಬಾಕಿ .ಅಥವಾ ಮೋಡ ಬಿತ್ತನೆಯಂತೆ ಕೇಶ ಬಿತ್ತನೆಯನ್ನು ಸರ್ಕಾರ ಹಮ್ಮಿಕೊಳ್ಳುತ್ತದೋ ಎಂದು ಕಾದು ನೋಡುತ್ತಿದ್ದೇನೆ .

"Dude.... ನಮ್ಮ ಮನೆಯ ಹತ್ರ ಒಬ್ರು ನಾಟಿ ವೈದ್ಯರಿದ್ದಾರೆ . ಅವರು ದನದ ಜೊಲ್ಲು ತಾಗಿದರೆ ಕೂದಲು ಬೆಳೆಯುತ್ತೆ ಅಂದ್ರು" ರಂಗ ಅರುಹಿದ . ಇಡೀ ಮುಳುಗಿದವನಿಗೆ ಚಳಿ ಏನು ?? ಇದೂ ಕೂಡ ನೋಡಿಯೇ ಬಿಡೋಣ .. ಎಂದು 2 ವಾರ ಬೆಳಿಗ್ಗೆ ಬೇಗ ಎದ್ದು ಪಕ್ಕದ ಮನೆಯವರ ಕೊಟ್ಟಿಗೆಗೆ ದೌಡಾಯಿಸಿದೆ . ದನವೋ .... ಸಿಕ್ಕಿದ್ದೇ ಛಾನ್ಸು ಎಂದು ನನ್ನ ತಲೆಯನ್ನು ನೆಕ್ಕಿದ್ದೇ ನೆಕ್ಕಿದ್ದು . ಉಹೂಂ .... ಅರ್ಧ ಕೂದಲು ಬರಲಿಲ್ಲ . ಸ್ವಲ್ಪ ದಿನದ ನಂತರ ಪಕ್ಕದ ಮನೆಯ ಅಂಕಲ್ ಮನೆಗೆ ಕರೆದರು . ಹೋದ ತಕ್ಷಣ ಕಾಫಿ ಕೊಟ್ಟು . "ಏನ್ ತಲೆ ಸಾರ್ ನಿಮ್ಮದು .... ಅಂದರು . ನಾನು ಇವರೆಲ್ಲೋ ನನ್ನ ಲೇಖನಗಳನ್ನು ಓದಿ ಮೆಚ್ಚಿರಬೇಕು ಎಂದುಕೊಂಡು ಧನ್ಯವಾದ ಅನ್ನುವುದಕ್ಕೆ ಮೊದಲೇ .... ಒಂದು ವಾರದಿಂದ ನಮ್ಮ ಹಸು ಒಂದೂವರೆ ಲೀಟರ್ ಹಾಲು ಹೆಚ್ಚಿಗೆ ಕರೀತಾ ಇದೆ ಎನ್ನುವುದೇ ??? ಬಿಸಿ ಇಲ್ಲದಿದ್ದರೂ ಕಾಫಿ ಲೋಟ "ತಡಾಲ್"... ಎಂದು ಕೆಳಗೆ ಬಿತ್ತು.

"ಮಚ್ಚಾ .. ಮಚ್ಚಾ ....ಮೊನ್ನೆ ನಾನು ಕುಂದಾಪುರಕ್ಕೆ ನಮ್ಮಜ್ಜಿ ಮನೆಗೆ ಹೋಗಿದ್ದೆ . ಕರಡಿ ಕೈಯಲ್ಲಿ ಆಶೀರ್ವಾದ ಮಾಡಿಸಿಕೊಂಡರೆ ಕೂದಲು ಬರುತ್ತೆ ಅಂಥ ಅಜ್ಜಿ ಹೇಳಿದ್ರು " ಸೇಟು ಫರ್ಮಾಯಿಸಿದ. ಲೋ ....ಏನೋ ?? ಆನೆ ಕೈಯಲ್ಲಿ ಕೋಲೆ ಬಸವನ ಕೈಯಲ್ಲಿ ಆಶೀರ್ವಾದ ಮಾಡಿಸ್ಕೊಳ್ಳೋದು ಕೇಳಿದ್ದೀನಿ ಇದೇನೋ ಕರಡಿ ಕೈಯಲ್ಲಿ ?? ಮತ್ತೆ ಆಮೇಲೆ ಕರಡಿ ಥರಾ ಮೈತುಂಬಾ ಕೂದಲು ಬಂದ್ರೆ ಕಷ್ಟ ಎಂದೆ . ಏಯ್ ಗುಬಾಲು..... ಇಲ್ಲಿವರ್ಗೂ ಯಾವ್ದಾದ್ರೂ ಬೋಳು ತಲೆ ಕರಡಿಯನ್ನ ನೋಡಿದ್ದೀಯಾ ??? ಮತ್ತೆ ಅದು ಆಶೀರ್ವಾದ ಮಾಡೋವಾಗ ತಲೆ ಮೇಲೆ ಕೈ ಇಡುತ್ತೆ ತಾನೆ ?? ಅಲ್ಲಿ ಮಾತ್ರ ಕೂದಲು ಬರುತ್ತೆ ಅಂಥ ಹೇಳಿದ . ಸರಿ ... ಇರಲಿ ಮುಳುಗುವವನಿಗೆ ಹುಲ್ಲು ಕಡ್ಡಿ ಆಧಾರ ಅಂತೆ . ಹಾಗೆಯೇ ಊರಿಗೆ ಬಂದ ಕರಡಿ ಕುಣಿಸುವವನಿಗೆ ನೂರು ರುಪಾಯಿ ಕೊಟ್ಟು "ನೋಡು ಈ ಆಶೀರ್ವಾದ ತಲೆಗೆ ಮಾತ್ರ ಅಂಥ ನಿನ್ನ ಕರಡಿಗೆ ಹೇಳು " ಎಂದು ತಾಕೀತು ಮಾಡಿ ಆಶೀರ್ವಾದ ಮಾಡಿಸಿಕೊಂಡೆ.ಕರಡಿ ತಲೆ ಮೇಲೆ ಕೂದಲು ಬಂತೋ ಇಲ್ಲವೊ ತಿಳಿಯದು ನನ್ನ ತಲೆ ಮೇಲೆ ವಾರ ಕಳೆದರೂ ಕೂದಲು ಚಿಗುರಲಿಲ್ಲ .

ಈಗ ಇದೆಲ್ಲ ಬಿಟ್ಟು Root Cause analysis ಮಾಡಿ ಗೋಳಿ ಮರದಡಿ ಕೂತು ಧ್ಯಾನ ಮಾಡಿದಾಗ "ಕೂದಲಿರುವುದೇ ಕೂದಲುದುರಲು ಮೂಲ " ಎಂಬ ಜ್ಞಾನೋದಯವಾಗಿದೆ . ಇನ್ನು ಸ್ವಲ್ಪ ದಿನ ಕಳೆದ ಮೇಲೆ ತಲೆಯ ಮೇಲೆ ಒಂದೂ ಕೂದಲು ಇಲ್ಲದಂತಾದಾಗ ಕೂದಲು ಹೇಗೆ ಉದುರುತ್ತದೆ ಎಂದು ನಾನೂ ನೋಡುತ್ತೇನೆ . ಆದರೂ ಎಲ್ಲ ದೇವಸ್ಥಾನಗಳಿಗೆ ಹೋದಾಗ ನಾನು ಬೇಡುವುದೊಂದೇ " ನಾ ನಿನಗೇನೂ ಬೇಡುವುದಿಲ್ಲ ಹೃದಯ ಮಂಟಪದೊಳು ನೆಲೆಸಿರು ಹರಿಯೇ.... ಮತ್ತು ಶಿರವೆಂಬ ಗುಡಿಯೊಳಗೆ ನೆಲೆಸಿರೋ "ಕೇಶ "ವಾ ..... ಎಂದು .

***********************ವಿಕಟಕವಿ *****************

Wednesday, February 25, 2009

ಅಪಾರ್ಥ ಕೋಶ

ಒಂದು 6-7 ವರ್ಷ ಹಿಂದಿನ ಮಾತು . ಅಗತ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆ . ಅಪ್ಪನೊಂದಿಗೆ ಬಸವನಗುಡಿ ಬಳಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ರಸ್ತೆ ದಾಟಲು ಕಾಯುತ್ತಿದ್ದೆವು . ಎದುರಿನಿಂದ ಟ್ಯಾಂಕರ್ ಒಂದು ಹೋಯಿತು . ಥಟ್ಟನೆ
ನಾನು-ಅಪ್ಪ ಪರಸ್ಪರ ನೋಡಿ ನಕ್ಕೆವು . ಯಾಕೆಂದು ಕೇಳುತ್ತೀರಾ ?? ಏನಿಲ್ಲ ಆ ಟ್ಯಾಂಕರು " ನೀರು ಸರಬುರುಜು ವಾಹನ " ಆಗಿತ್ತು . ( ಅದು ನೀರು ಸರಬರಾಜು ವಾಹನ ಆಗಬೇಕಿತ್ತು ). ಅದರ ಅರ್ಥ ಏನೆಂದು ದೇವರೇ ಬಲ್ಲ . ಮುಂದೆ ಬಸ್ ನಿಲ್ದಾಣದಲ್ಲಿ ನಿಂತಾಗ ಬಸ್ ನ ಬೋರ್ಡ್ ನಲ್ಲಿ "ಕೆ . ಆರ್ ಪೇಟೆ , ಕಂ. ಬ .ನಿ " ಎಂದು ಬರೆದದ್ದು ಓದಿ ನಿಜಕ್ಕೂ ಕಂಬನಿ ಹರಿಯಿತು. (ಅದು ಕೆಂ .ಬ .ನಿ :- ಕೆಂಪೇಗೌಡ ಬಸ್ ನಿಲ್ದಾಣ ಆಗಬೇಕಿತ್ತು ) . ಆ Painter ಗೆ ಸ್ವಲ್ಪ ಕಡಿಮೆ ಹಣ ಕೊಟ್ಟಿರಬೇಕು ಅವನು ಹೀಗೆ ಸೇಡು ತೀರಿಸಿಕೊಂಡಿದ್ದ . ಇದು ಸಣ್ಣ ಅಳತೆಯ ತಪ್ಪುಗಳು "ಅಪಾರ್ಥ " ಅನ್ನುವಂತದ್ದೇನೂ ಇಲ್ಲ . ಭಾರೀ ಅಪಾರ್ಥಕ್ಕೆ ಎಡೆ ಮಾಡುವಂಥ ತಪ್ಪುಗಳನ್ನು ಗಮನಿಸಿದ್ದೇನೆ . ನೆನಪಾದಷ್ಟನ್ನು ಇಲ್ಲಿ ಬರೆದಿದ್ದೇನೆ .

ಮೊನ್ನೆ ಸುಭಾಷಿತ ಪುಸ್ತಕ ಅರ್ಥ ( ಅಪಾರ್ಥ ) ಸಮೇತ ಓದುತ್ತಿದ್ದೆ . ಅದರ ಒಂದು ಶ್ಲೋಕ ಮತ್ತು ಅದರ ಅರ್ಥ ಹೀಗೆ ಕೊಟ್ಟಿದ್ದರು .
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ||

ಸಾರಾಂಶ : ಎಲ್ಲಿ ನಾರಿಯರು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸುತ್ತಾನೆ .
ಅಯ್ಯೋ ದೇವ್ರೇ ..... ದೇವರಿಗೆ ಗಂಡಸರನ್ನ ಕಂಡರೆ ಆಗುವುದಿಲ್ಲ ಎಂದು ಗೊತ್ತಿರಲಿಲ್ಲ . ಇದನ್ನು ಓದಿದರೆ ಮರುದಿನದಿಂದ ಎಲ್ಲ ಅರ್ಚಕರ ಪತ್ನಿಯರು ದೇವಸ್ಥಾನಕ್ಕೆ ದೌಡಾಯಿಸುವುದು ಖಾತ್ರಿ .
ನಿಜವಾದ ಅರ್ಥ :- ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಎಲ್ಲಿ ಅವರನ್ನು ಗೌರವಾದರಗಳೊಂದಿಗೆ ಕಾಣಲಾಗುತ್ತದೋ ಅಲ್ಲಿ ದೇವರು ನೆಲೆಸುತ್ತಾನೆ .

ಇರಲಿ.... ಇದೆಲ್ಲ ಚಿನಕುರುಳಿಗಳು . ನ್ಯೂಕ್ಲಿಯರ್ ಬಾಂಬ್ ಬೇಕೆ ??? ನೋಡಿ

1 ) ಹುಡುಗಿಯರು ಮಾರಾಟಕ್ಕೆ ಬೇಕಾಗಿದ್ದಾರೆ. ( Sales Girls required)
............... ಜಾಮೀನು ಸಿಗದ ಕೇಸ್ ಆದೀತು ಸ್ವಾಮೀ .. ಹುಷಾರ್ !!!!!!

2) ಇಲ್ಲಿ ರೆಡಿಮೇಡ್ ಮಕ್ಕಳ ಬಟ್ಟೆಗಳು ಸಿಗುತ್ತವೆ .( Ready made dress for childern available here)
................ ದೇವ್ರೇ !!!!... ಮಕ್ಕಳು ಕೂಡ ರೆಡಿಮೇಡ್ ಬರಲು ಶುರುವಾದವೇ ??

3) ಹೋಟೆಲ್
ಮೀನು ಊಟ ಪ್ರಿಯಾಂಕಾ
ತಯಾರಿದೆ

.......... ಶಾಂತಿ !!!! ಸಮಾಧಾನ !!! ತಯಾರಿರುವುದು ಮೀನು ಊಟ ....... ಪ್ರಿಯಾಂಕ ಹೋಟೆಲಿನ ಹೆಸರು ಸ್ವಾಮೀ ....

ಇನ್ನು ಒಂದು ಗ್ಯಾರೇಜಿನ ಮೇಲೆ ಬರೆದಿತ್ತು "ಇಲ್ಲಿ ಶೋಕಬ್ಸರ ಮಾಡಲಾಗುವುದು "
ಸ್ವತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ನನಗೆ ಇದು ವಾಹನದ ಯಾವ ಭಾಗ . ಯಾಕೆ ಶೋಕ ಯಾವ ಅಪ್ಸರೆ ಎಂದು ತಿಳಿಯಲಿಲ್ಲ ( ಅದು Shock Absorber ರಿಪೇರಿ ಮಾಡುವ ಗ್ಯಾರೇಜಾಗಿತ್ತು )

" ನೂತನ ಗ್ರಹ ಪ್ರವೇಶದ " ಆಮಂತ್ರಣ ಪತ್ರಿಗೆ ಸಿಕ್ಕಾಗ ಹುರ್ರೇ !!!!!!..... ನಾಳೆ ನಾನು ಹೊಸ ಗ್ರಹ ನೋಡುತ್ತೇನೆ ಎಂಬ ಖುಷಿಯಲ್ಲಿ ಸುರೇಕಾ !!!!ಸುರೇಕಾ!!!! ಎಂದು ಓಡಲೇ ?? ಅಥವಾ ಯಾವುದೀ ಸೌರವ್ಯೂಹದ ಹತ್ತನೇ ಗ್ರಹ ?? ISRO- NASA ದವರು ಮಾಡಲಾಗದ್ದನ್ನು ನಮ್ಮ ಊರಿನವರು ಮಾಡಿದರೆಂದು ಹೆಮ್ಮೆ ಪಡಲೇ ?? (ಅದು ಗೃಹ ಪ್ರವೇಶ )

"ಸಾರ್ವಜನಿಕ ಶೌಚಲಾಯ " ನೋಡಿದ್ದೀರಾ ?? ನಾನು ನೋಡಿದ್ದೇನೆ . ಆದರೆ ಅದು ಮನುಷ್ಯರಿಗೋ ಅಥವಾ ಕುದುರೆಗಳಿಗೋ ಎಂದು ತಿಳಿಯಲಿಲ್ಲ .

ಕಾರಿನ ಮೇಲೆ " SHIVA KURPA" ಎಂದು ಬರೆದದ್ದನ್ನು ನೋಡಿ ದಂಗಾದೆ . ಆಮೇಲೆ ಅದು ಕಾರಿನ ಮಾಲೀಕನ ಹೆಸರು ಮತ್ತು Surname ಆಗಿರಬೇಕೆಂದುಕೊಂಡು ಭಾವಿಸಿ ಸಮಾಧಾನ ಮಾಡಿಕೊಂಡೆ .

"ಏವರೇಸ್ಟ್ ಸ್ಟೀಲ್ ಅಂಡ್ ಹಾರ್ಡ್ ವೇರ್ " ( ಎವೆರೆಸ್ಟ್ ) ಊಫ್ ... ನಿಜವಾದ ಮೌಂಟ್ ಎವೆರೆಸ್ಟ್ ಕೂಡ ಇಷ್ಟು ಎತ್ತರ ಇರಲಿಕ್ಕಿಲ್ಲ.

ಒಮ್ಮೆ ಆಫೀಸಿನಲ್ಲಿ ಬೆಂಗಳೂರಿನ ಒಂದು ಶಾಖೆಯಿಂದ ದೂರವಾಣಿ ಕರೆ ಬಂದಿತು . ನೋಡಿ ಖುಷಿಯಾಯಿತು . ಇರಪ್ಪ ... ನಾನು attend ಮಾಡುತ್ತೇನೆ ಎಂದು ಸ್ನೇಹಿತನಿಗೆ ಹೇಳಿ ಫುಲ್ ಸ್ಟೈಲ್ ನಿಂದ " ಹಾ ಹೇಳಿ ಸರ್ ಏನಾಗಿದೆ ??" ಎಂದು ಕೇಳಿದೆ ."ಸರ್ ಮುಜೆ ಕನ್ನಡ ನಹಿ ಆತಾ ಹೈ " ಎಂಬ ಉತ್ತರ ಕೇಳಿ ಇಂಗು ತಿಂದ ಮಂಗನಂತಾದೆ . " ಜೈ ಕನ್ನಡಾಂಬೆ " ಎಂದು ಹಿಂದಿಯಲ್ಲಿ ಸಂಭಾಷಣೆ ಮುಂದುವರಿಸಿದೆ .

ಇನ್ನು ಕೆಲವೊಮ್ಮೆ ಅತಿಯಾದ ಕನ್ನಡ ಪ್ರೇಮ ಕಂಟಕ ತರುತ್ತದೆ . ನೀವೇ ನೋಡಿ .... ಸೈಕಲ್ಲಿನ " Valve Tube" ಕೊಡಪ್ಪ ಎಂದರೆ ಸುಮ್ಮನೆ ಕೊಡುವ ಅವನು "ಸ್ವಾಮೀ .. ನನಗೆ ದ್ವಿಚಕ್ರ ವಾಹನದ ಗಾಲಿಯ ಸ್ಥಿತಿಸ್ಥಾಪಕ ಗುಣದ ವಾಯುರೇಚಕ ನಳಿಗೆಯನ್ನು ಕೊಡಿ " ಅಂದರೆ ಅವನು ಬಡವನಾದರೂ ಸ್ವಂತ ಖರ್ಚಿನಲ್ಲಿ ನಿಮ್ಮನ್ನು ಕಂಕನಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಮನೋರೋಗ ಆಸ್ಪತ್ರೆಯಲ್ಲಿ ಭರ್ತಿ ಮಾಡಿಸುವುದು ಖಂಡಿತ . ಹಾಗೆಯೇ ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದುಕೊಂಡು Medicals, Stores ನ್ನು "ಮೆಡಿಕಲ್ಸ್" " ಸ್ಟೋರ್ಸ್ " ಎಂದು ಬರೆಯುತ್ತಾರೆ ಒಳ್ಳೆಯದು ಆದರೆ ಕೆಲವೊಮ್ಮೆ ಇದು ಅತೀ ಆಗುತ್ತದೆ . XYZ Brothers ನ್ನು ಇಂಗ್ಲೀಷಿನಲ್ಲಿ XYZ Bros ಎಂದು ಬರೆಯುತ್ತಾರೆ ಹಾಗೆಂದು ಅದನ್ನೇ ಕನ್ನಡೀಕರಿಸಿ "ಬ್ರೋಸ್ " ಎಂದು ಬರೆದರೆ ಅಥವಾ "Bhaskar & co" ಎಂಬ ಫಲಕವನ್ನು ಪಂಡಿತರು ತಮ್ಮ ವಾಙ್ಮಯ ಜ್ಞಾನವನ್ನೆಲ್ಲಾ ಧಾರೆ ಒತ್ತಿ "ಭಾಸ್ಕರ ಅಂಡ್ ಕೋ" ಎಂದು ಬರೆದರೆ ಹಿಂಸೆ ಆಗುವುದಿಲ್ಲವೇ ?? ಕುಂದಾಪುರದ ಯಾವುದೇ ಭಾಸ್ಕರನು ಇದನ್ನು ಓದಿದಲ್ಲಿ ಅವನು ಹೆದರಿ ಅಡಗಿ ಕೂತಾನು .( ಕುಂದಾಪ್ರ ಕನ್ನಡದಲ್ಲಿ ಅಂಡ್ ಕೋ ಅಂದರೆ ಅಡಗಿಕೋ ಎಂದರ್ಥ ). ಮತ್ತು "Bright Power Laundry" ಯನ್ನು " ಬ್ರಾಯಿಟ ಪವರ ಲಾಂಡರಿ " ಎಂದು ಬರೆದರೆ ಮೈಯೆಲ್ಲಾ ಪರಚಿಕೊಳ್ಳುವಂತಾಗುತ್ತದೆ .

ಇನ್ನು ಅಪ್ಪಟ ಕನ್ನಡ ಪ್ರೇಮಿಗಳನ್ನು ನೋಡಬೇಕೇ ?? ನಮ್ಮ ಊರಿಗೆ ಬನ್ನಿ . ಬೇಸಗೆಯ ಒಂದು ಶನಿವಾರ - ಭಾನುವಾರದಂದು ಗಣಪಯ್ಯನವರ ಗದ್ದೆಯಲ್ಲಿ , "ಗಿರಿಜಾ ಫ್ಲವರ್ ಸ್ಟಾಲ್ " ಮತ್ತು "ಗಣಪತಿ ವೆಲ್ಡಿಂಗ್ ವರ್ಕ್ಸ್ " ನವರ ಜಂಟಿ ಪ್ರಾಯೋಜಕತ್ವದಲ್ಲಿ ನಡೆಯುವ ಮೂವತ್ತು ಗಜಗಳ ( ಸೀರೆ ಅಳತೆ ಮಾಡುತ್ತಿಲ್ಲ ಸ್ವಾಮೀ ಇದು 30 Yards ) ಕ್ರಿಕೆಟ್ ಪಂದ್ಯಾಟ "ರೀಗಲ್ ಕಪ್ " ನೋಡಬೇಕು ಮತ್ತು ಆಗ ಇಲ್ಲಿನ ಲೋಕಲ್ ರವಿಶಾಸ್ತ್ರಿಗಳ ಕಾಮೆಂಟ್ರಿ ಕೇಳಬೇಕು .ಆಹಾ ... ಕೆಲವು Terminology ಗಳನ್ನು ವಿವರಿಸುತ್ತೇನೆ .
1) Wide ball = ಅಗಲವಾದ ಎಸೆತ . ( ಬೇಕಾದರೆ ಹೋಗಿ ಅಳತೆ ಮಾಡಿ )
2) No ball = ಇಲ್ಲದ ಎಸೆತ (ಇಂಗ್ಲೀಶ್ ವ್ಯಾಕರಣದಲ್ಲಿ ಇವನಿಗೆ 100% ಅಂಕ )
3) dot ball = ಚುಕ್ಕೆ ಎಸೆತ ( ಬೇಕಾದರೆ ರಂಗೋಲಿ ಹಾಕಿಕೊಳ್ಳಿ )
4)Batsman = ದಾಂಡಿಗ ( ಏನು ?? ಇದು ಕ್ರಿಕೆಟೋ ??ಕುಸ್ತಿನೋ ?? ಎಂದು ಕೇಳಬೇಡಿ )
5)fielder,keeper = ಕ್ಷೇತ್ರರಕ್ಷಕ , ಗೂಟ ರಕ್ಷಕ .. ( ಆಟದ ಮೈದಾನವನ್ನು ಕಾಯುವ ಗ್ರಾಮದೈವ ಮತ್ತದರ ಪರಿವಾರ ಗಣ )

ಬನ್ನಿ ಒಂದು Typical commetry ಹೇಳುತ್ತೇನೆ
" ಈ ಬಾರಿ ಮತ್ತೊಮ್ಮೆ ಅಂಕಣದ ಒಳಭಾಗದಲ್ಲಿ "ಗಿರಿಜಾ ಫ್ಲವರ್ ಸ್ಟಾಲ್ " ಮತ್ತು "ಗಣಪತಿ ವೆಲ್ಡಿಂಗ್ ವರ್ಕ್ಸ್ " ಈ ಒಂದು ಜಾಹೀರಾತು ಫಲಕದ ತುದಿಯಿಂದ ಮನೋಜ್ ಅವರು ಪ್ರಕಾಶ್ ಅವರಿಗೆ ನಾಲ್ಕೈದು ಹೆಜ್ಜೆ ಓಡಿ ಬಂದು ಎಸೆದಂತಹ ಎಸೆತ ಊತ್ತಮವಾದಂತ ( ಅದು ಉತ್ತಮ ಅಲ್ಲ ಊತ್ತಮ !!!!) ಆದರೆ ಆಫ್ ಸ್ಟಂಪ್ ನ ಹೊರ ಅಂಚನ್ನು ದಾಟಿದ ಎಸೆತಕ್ಕೆ ಅಗಲವಾದಂತಹ ಎಸೆತ ಎಂಬ ಸೂಚನೆ ಹದ್ದಿನ ಕಣ್ಣಿನ ತೀರ್ಮಾನಕಾರಕ ಗುರು ಅವರಿಂದ . ಚೆಂಡಿಗೆ ಒಳ ತಿರುವನ್ನು ಕೊಡುವಲ್ಲಿ ಎಸೆತಗಾರ ಮನೋಜ್ ವಿಫಲತೆಯನ್ನು ಕಂಡಿದ್ರು .... ಚೆಂಡು ಗೂಟರಕ್ಷಕ ಅಮೃತ ಹಸ್ತಗಳಲ್ಲಿ .

ಈ ಬಾರಿ ಮತ್ತೊಮ್ಮೆ ಎಸೆತಗಾರ ಮನೋಜ್ ಅವರು ಪ್ರಕಾಶ್ ಅವರಿಗೆ ನಾಲ್ಕೈದು ಹೆಜ್ಜೆ ಓಡಿ ಬಂದು ಎಸೆದಂತಹ ಎಸೆತ ಊತ್ತಮವಾದಂತಹ ಎಸೆತ ತಟ್ಟಿ ಮುಟ್ಟಿ ಓಡುವ ಯತ್ನ ಪ್ರಕಾಶ್ ಅವರಿಂದ.... ಕ್ಷೇತ್ರ ರಕ್ಷಣೆಯಲ್ಲಿ ಕೊಂಚ ಗಲಿಬಿಲಿ . ಈ ಮೂಲಕ ತಂಡದ ಖಾತೆಯಲ್ಲಿ ಒಂದು ಓಟದ ಹೆಚ್ಚಳ ಕಾಣುತ್ತ ಇದ್ದೇವೆ . ತಂಡದ ಮೊತ್ತ 36 ಇನ್ನು ಉಳಿದಿರುವ 3 ಓವರ್ ಗಳಲ್ಲಿ ಜೈ ಗಣೇಶ್ ಬಸ್ರೂರು ತಂಡ ಅದೆಷ್ಟು ಓಟಗಳನ್ನು ಕಲೆ ಹಾಕುತ್ತದೆ ಅಂದು ಕಾದು ನೋಡೋಣ . ಈ ಸಮಯದಲ್ಲಿ ನಮ್ಮೊಂದಿಗಿದ್ದಾರೆ ಕುಂದಾಪುರದ ಹೆಸರಾಂತ ಉದ್ಯಮಿ ಲಕ್ಷ್ಮೀಪತಿ ಉರಾಳ . Sir ನಿಮ್ಮ ಇರುವಿಕೆಯನ್ನು ಗಮನಿಸುತ್ತಿದ್ದೇವೆ . ಈ ನಡುವೆ ಸತತ 3 ಒಡ್ಡಿ ಸಂಪಾದಿಸಿದ ( hat trick fours) ದಾಂಡಿಗನಿಗೆ ಗಣೇಶ್ ಶೆಟ್ಟಿ ಅವರು 100/- ಬಹುಮಾನ ಘೋಷಿಸಿದ್ದಾರೆ . ಮುಂದೆ ಆಂಗ್ಲ ಭಾಷೆಯಲ್ಲಿ ವೀಕ್ಷಕ ವಿವರಣೆ ಕೊಡಲು ಬರುತ್ತಿದ್ದಾರೆ ಪ್ರಖ್ಯಾತ ವೀಕ್ಷಕ ವಿವರಣೆಕಾರ ರೋಹಿತ್ ಪಿಂಟೋ ....ಹೀಗೆ ಇದು ಮುಂದುವರೆಯುತ್ತದೆ .......

ಹೀಗೆ ನಿತ್ಯಜೀವನದಲ್ಲಿ ಅಲ್ಲಿಲ್ಲಿ ತಿರುಗುವಾಗ ಇಂಥ ಹಲವಾರು ದೋಷಗಳು ಕಂಡು ಬರುತ್ತವೆ . ಈಗ ನನ್ನ ಈ ಲೇಖನದಲ್ಲಿ ತಪ್ಪು ಹುಡುಕಿ ಯಾರಾದರೂ ಹೊಸ ಲೇಖನ ಬರೆಯಲೂ ಸಾಧ್ಯ . ಅದರ ಅಪಾರ್ಥವು ಅರ್ಥವಾದಲ್ಲಿ ಬಿಟ್ಟಿ ಮನರಂಜನೆಯಂತೂ ಸಿಗುತ್ತದೆ . ಅದರೊಂದಿಗೆ ಕನ್ನಡಮ್ಮನ ಮೇಲಾಗುವ ಶೋಷಣೆ ನೋಡಿ ಬೇಸರವೂ ಆಗುತ್ತದೆ .
ಇಲ್ಲಿಗೆ ನನ್ನ ಲೇಖನ ಮುಗಿಸುತ್ತಿದ್ದೇನೆ . ನೀವೇ ಹೇಳಿ ಹೇಗಿದೆ ಈ ಆರ್ಟಿ "ಕಲ್ಲು " ??

********************************************* ವಿಕಟಕವಿ ************************

Monday, February 9, 2009

ಸರಸ -ವಿರಸ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ??
ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ ||
ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ
ಅಪಾರ್ಥವಾದರೆ ಗತಿಯು ಕೋದಂಡರಾಮ ||

ಹಮ್... ಹಾಸ್ಯ ಇದೊಂದು ಬ್ರಹ್ಮಾಸ್ತ್ರ . ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು . ಆದರೆ ಪರಿಣಾಮದಲ್ಲಿ ಇದು ಸ್ನೇಹಕ್ಕೂ ಸೈ ಸಮರಕ್ಕೂ ಜೈ .ಸಂದರ್ಭೋಚಿತ ಹಾಸ್ಯವೂ ಸೃಷ್ಟಿಯಾಗಬಹುದಾದಂತ ಉದ್ವಿಗ್ನ ವಾತಾವರಣವನ್ನು ಕ್ಷಣಮಾತ್ರದಲ್ಲಿ ತಿಳಿಗೊಳಿಸಬಹುದು ಅಂತೆಯೇ ಅಪಾರ್ಥವಾದ ಹಾಸ್ಯವೂ ಸ್ನೇಹದಲ್ಲಿ ಭಾರೀ ಬಿರುಕು ಸೃಷ್ಟಿಸಬಹುದು.ಈಗ ನೀವೇ ನೋಡಿ , call,chat,email,orkut ಎಂದು ಸದಾ ಸಂಪರ್ಕದಲ್ಲಿರುತ್ತಿದ್ದ ನನ್ನ ಕೆಲವು ಗೆಳೆಯರು ನನ್ನ ಹಾಸ್ಯದ ಬಲಿಪಶುಗಳಾಗಿ ಇಂದು ಒಂದು missed call ಕೂಡ ಕೊಡದೆ ಇರುವುದು ಕಹಿ ಸತ್ಯ . ಅದು ಬಿಡಿ ನನ್ನ ಪ್ರೇಮದಲ್ಲಿ ನನ್ನ ಹಾಸ್ಯ ಹೇಗೆ ಹೇಗೆ ಅಡ್ಡಗಾಲಾಯಿತೆಂಬ ದುರಂತ ಕತೆಯನ್ನು ಹಾಸ್ಯದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ .

ಹೌದು .. ನಂಬಿದ್ರೆ ನಂಬಿ ಬಿಟ್ರೆ ಬಿಡಿ , ನಾನೂ love ಮಾಡಿದ್ದೀನಿ . ಒಂದಲ್ಲ ಎರಡು ಬಾರಿ ಮತ್ತೆ ಮೂರನೇ ಬಾರಿ attempt ಕೂಡ ಮಾಡಿದ್ದೆ . ಆದರೆ ಪ್ರಥಮ ದ್ವಿತೀಯ ತೃತೀಯ ಎಲ್ಲ ಚುಂಬನದಲ್ಲೂ ದಂತಭಗ್ನವಾಗಿ " ಹಲ್ಲಿಲ್ಲದ ಸರದಾರನಾಗಿ " ಈಗ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘ (ರಿ) ದ ಸದಸ್ಯನಾಗಿದ್ದೇನೆ . ಏನು ??? ಏನಾಯ್ತು ಎಂದು ಕೇಳುತ್ತಿದ್ದೀರಾ ??... ಆಗಿದ್ದಿಷ್ಟೆ .....ಓದಿ ಮತ್ತು ಹೀಗಾದರೆ ನಾನೇನು ಮಾಡ್ಲಿ ನೀವೇ ಹೇಳಿ ??

ಮೊದಲನೆಯವಳು ಐಶ್ವರ್ಯ . ನನ್ನ ಪಂಚಪ್ರಾಣದಲ್ಲಿ ಆರನೇಯವಳಾಗಿದ್ದಳು. ಎರಡು ಜೀವ ಒಂದು ದೇಹ .. ಕ್ಷಮಿಸಿ .. ಎರಡು ದೇಹ ಒಂದು ಜೀವ ಅನ್ನೋ ಥರ ಇದ್ವಿ . ಅವಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೆ .ಒಂದು ಸುಂದರ ಸಂಜೆ ಭೇಟಿ ಮಾಡಿದಾಗ ಲೋ.. ಸುಮ್ಮು .. ನಂಗೆ ಕಬ್ಬನ್ ಪಾರ್ಕ್ ನಲ್ಲಿ ಕಬ್ಬಿನ್ ಜ್ಯೂಸ್ ಕುಡಿಸು ರಾತ್ರಿ " ಮುಂಗಾರು ಮಳೆ " ಕರೆದುಕೊಂಡು ಹೋಗು ಅಂದಳು . ಅವಳು ಕೇಳುವ ಮೊದಲೇ ಬೆಳಿಗ್ಗೆ ರಂಜಿತ್ ಹತ್ರ ಬೈಕ್ arrange ಮಾಡಿದ್ದೆ ಹಾಗೂ ನನ್ನ ಜೇಬಿನಲ್ಲಿ ಬ್ಲಾಕ್ ನಲ್ಲಿ 250/- ಕೊಟ್ಟು ತಂದ ಎರಡು ಟಿಕೆಟ್ ಇತ್ತು . ಸುಮ್ಮನೆ ಕಾಲೆಳೆಯೋಣ ಅಂಥ " ನೋಡೇ .. ಜ್ಯೂಸ್ ಎಲ್ಲ ಕುಡಿಸಲ್ಲ ನಾನು ಕಂಜೂಸು ,,,,, ಮತ್ತೆ ಏನು ?? ಮುಂಗಾರು ಮಳೆನಾ ?? ಈಗ ಆಷಾಡಿ ಮಳೆ ಕೆಟ್ಟದಾಗಿ ಬರ್ತಾ ಇದೆ 8 ಗಂಟೆ ಬೇರೆ ಆಗಿ ಹೋಗಿದೆ . ರಿಕ್ಷಾ ದವನು ಒಂದೂವರೆ ಮೀಟರ್ ಚಾರ್ಜ್ ಕೇಳುತ್ತಾನೆ ... ಯಾಕೆ ಸುಮ್ನೆ ?? ನೋಡು ಪ್ರೀತಿಯಲ್ಲಿ ತಾಳ್ಮೆ ಇರಬೇಕು . ಇನ್ನು ಒಂದೆರಡು ತಿಂಗಳಿನಲ್ಲೇ ಉದಯ ಟೀವಿ ಯಲ್ಲಿ ಸೂಪರ್ ಹಿಟ್ ಚಲನಚಿತ್ರವಾಗಿ ಬರುತ್ತೆ ಆಗ ಒಟ್ಟಿಗೆ ಕೂತು ನೋಡೋಣ ಎಂದೆ . ಅವಳು ಏನೂ ಹೇಳಲಿಲ್ಲ ..... ಕೂಗಿದರೂ ತಿರುಗದೆ ನಾಗಮ್ಮನಂತೆ ಬುಸುಗುಡುತ್ತ ಓಡಿ ಹೋದಳು . ಮರುದಿನ ನನ್ನ ಕಪಾಳಕ್ಕೆ ಹೊಡೆದಂತೆ ಕಣ್ಣ ಮುಂದೆ ಆ ಶೆಟ್ರ ಮಗ ಸುಪ್ರೀತ್ ಜೊತೆ ಬೈಕ್ ನಲ್ಲಿ ಕೂತು ಹೋಗ್ತಾ ಇದ್ದಳು . ನಾನೇನು ಮಾಡ್ಲಿ ನೀವೇ ಹೇಳಿ??

ಇನ್ನು ಎರಡನೆಯವಳು ಶಶಿಕಲ . ಇವಳ ಬಗ್ಗೆ ಏನು ಹೇಳಲಿ ..... ಪ್ರೀತಿಯಿಂದ ನನ್ನನ್ನು 'ಸು ' ಎನ್ನುತ್ತಿದ್ದಳು ನಾನೂ ಕೂಡ ಪ್ರೀತಿಯಿಂದ 'ಶ್ಶ...' ಎಂದು ಕರೆಯುತ್ತಿದ್ದೆ . ಒಂದು ದಿನ " ಏನೋ ಸು ... ರೈಲು , ಹೋಟ್ಲು ಅಂಥ ಏನೇನೋ ಲೇಖನ ಬರೀತೀಯ . ನನ್ನ ಮೇಲೆ ಒಂದು ಕವನ ಬರೀಬಾರ್ದ ?? ಅಂದಳು . ಸರಿ ತೊಂಡೆ ಬೆಂಡೆ ಎಂದು ಒಂದು ನಾಲ್ಕು ತರಕಾರಿ ಹಾಕಿ ಕವನ ಬರೆದ್ರೆ ಆಯಿತು ಅಂದುಕೊಂಡೆ .ನೋಡು .. ಬರೆದ್ರೆ ಒಂದು ಥರಾ Different ಆಗಿ ಇರಬೇಕು ಅಂಥ Condition ಹಾಕಿದಳು .ಸರಿ 'ಶ್ಶ...' ನಾಳೆ ಕೊಡ್ತೀನಿ ಎಂದೆ . ರಾತ್ರಿಯಿಡೀ ಯೋಚಿಸಿ ಈ ಕವನ ಬರೆದೆ...

ಓ ನನ್ನ ಶನೀ.... ( ಅದು 'ಶ್ಶ.. + Honey = ಶನಿ ----> ಕಪಾಳಮೋಕ್ಷ ಸಂಧಿ )
ನಾನು ನಿನ್ನ ಪ್ರೇಮದ ಅಭಿಮಾನಿ
ಹಗಲಿರುಳೂ ಇರಲಿ ನಿನ್ನ ಒಲುಮೆ
ಅದೇ ನನ್ನ ಪಾಲಿನ ಜೀವ ವಿಮೆ ||

ನಿನ್ನ ನಡೆಯೋ ದಸರಾದ ಆನೆ |
ಕುಣಿತ ಮಂಗನಿಂದ ಕಲಿತಿದ್ದು ತಾನೆ ??
ಹಾಡಿದರೆ ಸತ್ತೆ ಓಡುವುದು ಕತ್ತೆ
ಹಾಡು ಕೇಳಿದ ಕೆಪ್ಪ ಇಂದು ನಾಪತ್ತೆ ||

ನಿನ್ನ ತುಟಿಯು ಮಟ್ಟಿಗುಳ್ಳ
ನಿನ್ನ ನಡುವೋ ಬೂದು ಗುಂಬ್ಳ ||
ಕಪ್ಪೆಯಂತೆ ನಿನ್ನ ಕಣ್ಣು
ನಿನ್ನ ಮುಖವೋ ಹಲಸಿನ ಹಣ್ಣು ||


ಮತ್ತೆ ನೋಡಿ ಆ ದಿನ ಮಾರ್ಕೆಟ್ ನಲ್ಲಿ ತೊಂಡೆಕಾಯಿ 5/- Kg ಮಟ್ಟಿಗುಳ್ಳ 30/- Kg . ಯಾಕೆ ನನ್ನವಳನ್ನು Cheap ತರಕಾರಿಗೆ ಯಾಕೆ ಹೋಲಿಸಲೆಂದು ತಮಾಷೆಗೆ ಮಟ್ಟಿಗುಳ್ಳಕ್ಕೆ ಹೋಲಿಸಿದೆನು .ಮತ್ತೆ ಮೀನಾಕ್ಷಿ ಎಂದು ಎಲ್ಲ ಕಡೆ ಕರೀತಾರೆ ಮೀನು ಮತ್ತು ಕಪ್ಪೆ ನೀರಿನಲ್ಲಿ ಅಕ್ಕ -ತಂಗಿ ಅಲ್ವಾ ?? ಅದಕ್ಕೆ ಹೀಗೆ ಬರೆದೆ .ನೀವು ಯಾರದ್ರೂ ಇಂಥ ಕವನ ಬರೆದಿದ್ರಾ ?? ಹೇಗೆ different ಆಗಿಲ್ವಾ ?? ಆದರೆ ಇಲ್ಲ .. ಮುಖ ಅರ್ಧ ಬೆಂದ ಆಲೂಗಡ್ಡೆ ಥರ ಮಾಡಿಕೊಂಡು ಅಡ್ರೆಸ್ ಕೂಡ ಕೊಡದೆ ಓಡಿ ಹೋದಳು . ನಾನೇನು ಮಾಡಲಿ ನೀವೇ ಹೇಳಿ??? .....

ಇನ್ನು ಮೂರನೆಯವಳು orkut ನಲ್ಲಿ ಸಿಕ್ಕಿದಳು . ಲತಾ ..... ಮೊದಲು ಸ್ವಲ್ಪ tragedy ಅನ್ನಿಸಿತು . ಎರಡನೇ ವಾರಕ್ಕೆ ಆಕೆಯಿಂದ "Dear" "Honey" ಸಂಬೋಧನೆ ಶುರುವಾಯಿತು . ಆಮೇಲೆ ಲವ್ ಅಂಥಾ ಏನೂ ಇಲ್ಲದಿದ್ದರೂ ಮಾತಿನಲ್ಲಿ ಸ್ವಲ್ಪ ಸಲುಗೆ ಬೆಳೆಯಿತು . ಒಮ್ಮೆ ಹೀಗೆ ಭೇಟಿ ಮಾಡೋಣ ಎಂದು ಅವಳ ಮನೆಗೆ ಹೋದೆನು . ಲತಾ .. ಬಂದಳು .... ಉಡುಪಿಯಲ್ಲಿ ರಥಬೀದಿ ತುಂಬಾ ರಂಪಾಟ ಮಾಡಿದ "ಲಕ್ಷ್ಮೀಶ " ನ ( ಆನೆ ) ಅಪರಾವತಾರದಂತಿದ್ದಳು. ಮನೆಯ ಗೋಡೆ ತುಂಬ ಇವಳ solo photo ಇತ್ತು . ಯಾಕೆ ಸರ್ ಎಲ್ಲ ಫೋಟೋ ದಲ್ಲಿ ಒಬ್ಳೇ ಇದ್ದಾಳೆ ಎಂದು ಅವಳ ಅಪ್ಪನನ್ನು ಕೇಳಿದೆ . ಇಲ್ಲಪ್ಪ ಅದು ಗ್ರೂಪ್ ಫೋಟೋ ನೆ ಆದ್ರೆ ಒಂದೇ ಫ್ರೇಮ್ ನಲ್ಲಿ ಎಲ್ಲರು ಬಂದಿಲ್ಲ , ಎಂಟು ಮಂದಿ ಅವಳ ಹಿಂದೆ ನಿಂತಿದ್ದಾರೆ ಅಂದರು . Corner ನಲ್ಲಿ ಅವಳ ಮತ್ತು ಅವಳ ತಾಯಿಯ ಫೋಟೋ ನೋಡಿ ಅದು ಹೇಗೆ ಸರ್ ... ಕೇಳಿದೆ.... ಅದಾ ?? adobe Photoshop ನಲ್ಲಿ edit ಮಾಡಿ ಪ್ರಿಂಟ್ ಹೊಡೆಸಿದ್ದು ಅಂದರು . ಇವಳ ತಾಯಿ ಗರ್ಭಿಣಿ ಇರಬೇಕಾದರೆ ಬಸ್ಸಿನಲ್ಲಿ ಒಂದೂವರೆ ಟಿಕೆಟ್ ತೆಗೊತಿದ್ರಂತೆ . ಸರಿ ಎಂದು ಅವಳ ಅಪ್ಪನಿಗೆ ಕಿಟ್ಟೆಲ್ ಡಿಕ್ಷನರಿ ಗಿಫ್ಟ್ ಕೊಟ್ಟು (ಕೂಷ್ಮಾಂಡ ಅಂಥ ಹೆಸರಿಡೋದು ಬಿಟ್ಟು ಲತಾ ಅಂಥ ಹೆಸರು ಇಟ್ಟಿದ್ದಾನೆ ) ಅವಳಿಗೆ ಮನದಲ್ಲೇ ಒಂದು ಸೌತೆಕಾಯಿ ಬೆಲ್ಲದ ಅಚ್ಚು ಮತ್ತು ಐದು ರುಪಾಯಿ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆದು ಹೊರಡಲನುವಾದೆ . ಕೂರಪ್ಪ ..... ಮೊದಲನೆ ಬಾರಿ ಬಂದಿದ್ದೀಯಾ ಮನೆಗೆ.... ಏನು ತೆಗೊತೀಯಾ ?? ಎಂದರು . ಸರ್ ನಿಮ್ಮ ಮಗಳನ್ನ ಬಿಟ್ಟು ಬೇರೆ ಏನು ಕೊಟ್ರು ತೆಗೊತೀನಿ ಎಂದು ಹೇಳಿ ಕಹಿ ಕಾಪಿ ಕುಡಿದು ಗೂಡು ಸೇರಿಕೊಂಡೆ . ನಾನೇನು ಮಾಡಲಿ ನೀವೇ ಹೇಳಿ?? .....

ಇರಲಿ ಈಗ ಫೆಬ್ರವರಿ ೧೪ ಹತ್ರ ಬರುತ್ತಿದೆ . ನನ್ನ ಜಾತಕ ನೋಡಿದ ಪುರೋಹಿತರು " ಈ ವರ್ಷ ಚಾನ್ಸ್ ಇದೆ " ಎಂದಿದ್ದಾರೆ.ಮನಸ್ಸು ಕನಸಿನ ಗೋಪುರ ಕಟ್ಟಲು ಆರಂಭಿಸಿದೆ . ಕಾತರ ಕಳವಳಗಳೊಂದಿಗೆ ಫೆಬ್ರವರಿ 14 ನ್ನು ಎದುರು ನೋಡುತ್ತಿದ್ದೇನೆ .ಸಲಹೆಗೆ ನಿಮ್ಮನ್ನು ಸಂಪರ್ಕಿಸುತ್ತೇನೆ ಆಗ ನಾನೇನು ಮಾಡ್ಲಿ ನೀವೇ ಹೇಳಿ ಹಾಗೆ ಮಾಡುತ್ತೇನೆ ಆಯ್ತಾ ??
==========================ವಿಕಟಕವಿ =======================

Saturday, January 31, 2009

ರಜತ ಪರದೆಯ ಹಿಂದೆ

******ಏನು ?? ....ಏನು ??..... ಏನು ??.....********
(ನನ್ನ ಕುತ್ತಿಗೆ 0-180 degree 3 ಸಲ ತಿರುಗಿದೆ )
ನಾನು ಬರೆದ ಲೇಖನ ನೀವು ಓದುವುದಿಲ್ಲವಾ ??
ಇಷ್ಟು ದಿನ ನನ್ನ ಸ್ನೇಹಿತರಾಗಿದ್ದಕ್ಕೆ ಒಳ್ಳೆ ಪ್ರಶಸ್ತಿ ಸಿಕ್ಕಿತು .....
Tension ತೆಗೊಬೇಡಿ .... ಇದು ಕನ್ನಡ ಧಾರಾವಾಹಿ ನೋಡಿ ಕಲಿತಿದ್ದು ಅಷ್ಟೆ .

ಕಲ್ಯಾಣರೇಖೆ ,ಕುಂಕುಮಭಾಗ್ಯ ,ಕಾದಂಬರಿ , ನಾಕುತಂತಿ ,ಶುಭಲಗ್ನ ,ರಂಗೋಲಿ ,ಸುಕನ್ಯಾ ,ಸುಮತಿ ,ಮಾಂಗಲ್ಯ , ಪಾರ್ವತಿ (ನಿಮ್ಮ ಮನೆ ಮಗಳು ), ಗಂಗೋತ್ರಿ ,ಕಸ್ತೂರಿ ನಿವಾಸ..... ಮತ್ತೆ ಕೊನೆಗೆ ಬುಸ್ಸ್ಸ್ ...."ನಾಗಮ್ಮ " .ಇಷ್ಟು ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಒಬ್ಬ ನಟ ಅಥವಾ ಒಬ್ಬ ವೀಕ್ಷಕ ಖಂಡಿತ ಸಾಯುತ್ತಾನೆ . ಅದು ಕೊನೆಗೆ Crime Diary ಯಲ್ಲಿ ಬರುತ್ತದೆ .

ಹಮ್.... ಶುರು ಮಾಡೋಣ . ಮೊದಲಿಗೆ "Title song ". ಇದು ತುಂಬಾ important . ಇದರ ರಚನೆ ತುಂಬಾ ಸುಲಭ . ಈ ಕೆಳಗಿನ ದೃಶ್ಯಗಳು ಇದ್ದೆ ಇರುತ್ತವೆ .
1) ಒಬ್ಬಳು ಹುಡುಗಿ ಶಾಲು ಹಿಡಿದುಕೊಂಡು ಗದ್ದೆಯಲ್ಲಿ ಓಡುತ್ತಾಳೆ.
2)ಹುಡುಗಿಯು ಮದರಂಗಿ ಹಚ್ಚಿದ ಕೈಯ್ಯಲ್ಲಿ ಹಣತೆ ಆರಿ ಹೋಗುವುದನ್ನು ತಡೆಯುತ್ತಾಳೆ.
3) ಹೋಳಿಯ ದೃಶ್ಯ ಹುಡುಗ ಹುಡುಗಿಗೆ ಪಿಚಕಾರಿ ಹೊಡೆಯುತ್ತಾನೆ .
4) ಹುಡುಗಿಗೆ ಅವಳ ತಾಯಿ ಕಪಾಳಕ್ಕೆ ಬಾರಿಸುತ್ತಾಳೆ.
5)ಕೊನೆಗೆ ಹುಡುಗಿ 32 ಹಲ್ಲು ತೋರಿಸಿ ನಗುತ್ತಾಳೆ ಅದರ ಪಕ್ಕ ಧಾರಾವಾಹಿಯ ಹೆಸರು ಬರುತ್ತದೆ .

ಸುಮತಿ ,ಸುಕನ್ಯ , ಪಾರ್ವತಿ ಇದ್ದ ಹುಡುಗಿಯರೆಲ್ಲರ ಹೆಸರಿನ ಧಾರವಾಹಿ . ಅದಕ್ಕೆ ನಿಮ್ಮ ಮನೆ ಮಗಳು,
ಸೊಸೆ ,ತಂಗಿ ,ನಾದಿನಿ ಎಂದು tag line ಗಳು . ಇನ್ನು ಪೌರಾಣಿಕ ಧಾರಾವಾಹಿಗಳು ಕೃಷ್ಣ ,ರಾಮ ,ಈಶ್ವರ ,ಗಣಪತಿ ,ಹನುಮಂತ ಇವರು most happening ದೇವರುಗಳು . ಆಮೇಲೆ ನಾರದ, ಕರ್ಣ , ಕುಂತಿ , ಅರ್ಜುನ ಕೆಲವು ಚಾನೆಲ್ ಗಳಲ್ಲಿ . ಇನ್ನು next Generation ಧಾರಾವಾಹಿಗಳು ಹೀಗಿರಬಹುದು
1) ಗಣೇಶ (ನಿಮ್ಮ ಮನೆ ಅಳಿಯ )
2)ಮಹಾಬಲಿ ಶಿಖಂಡಿ .
3)ಬೊಬ್ಬರ್ಯ ಮಹಾಪುರಾಣ .

ಮತ್ತೆ ಕಥೆಗಳೋ ಕೇಳಬೇಡಿ . ವ್ಯಾಸಮಹರ್ಷಿಗಳು ಧರೆಗಿಳಿದು ಬಂದರೆ ಅವಾಕ್ಕಾದಾರು . ಸ್ವತಂತ್ರ ಭಾರತದಲ್ಲಿ 250 ಮಂದಿ ವ್ಯಾಸರು , ವಾಲ್ಮೀಕಿಗಳು ಹುಟ್ಟಿದ್ದಾರೆ. ಅವನ ಜೀವನದಲ್ಲಿ ಅವನಿಗೆ ಗೊತ್ತಿರದ ವಿಷಯಗಳನ್ನು ಧಾರಾವಾಹಿಯಲ್ಲಿ ನೋಡಿ ಕೃಷ್ಣ ತುಂಬಾ tension ತೆಗೊಂಡಿರಬಹುದು . ಕಳೆದ 8 ವಾರಗಳಿಂದ ಕೃಷ್ಣ ಕುಂಟಾಬಿಲ್ಲೆ ಆಡುವುದು ,ಮೊಸರಿಗೆ ಕಲ್ಲು ಹೊಡೆಯುವುದು ಬಿಟ್ಟರೆ ಬಿಟ್ಟರೆ ಬೇರೆ ಏನೂ ಮಾಡಲೇ ಇಲ್ಲ . ಬಾಲಕೃಷ್ಣನ ತುಂಟಾಟಕ್ಕಿಂತ ಅವನ ಅಪ್ಪನ ನಖರಾಗಳೇ ಹೆಚ್ಚು . ಮೊನ್ನೆ ಒಂದು ಪೌರಾಣಿಕ ಧಾರಾವಾಹಿ ನೋಡುತ್ತಿದ್ದೆ . "ಮಚ್ಚಾ .. ಕರ್ಣ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾನೆ ಎಂದು ಹೇಳಿದೆ " . ಎಲ್ಲರೂ ನಗಲು ಶುರುಮಾಡಿದರು . ನಡೆಯುತ್ತಿದ್ದದ್ದು ರಾಮಾಯಣ ಅವನು ಹನುಮಂತ , ಕರ್ಣ ಅಲ್ಲ ಎಂದು ನನಗೆ ಆಮೇಲೆ ತಿಳಿಯಿತು.ಮರುದಿನ ಆ ಧಾರಾವಾಹಿ ಮತ್ತೆ ನೋಡಿದೆ . ಅಯ್ಯೋ ದೇವರೇ ...... ಒಂದೂವರೆ ಅಡಿ ಉದ್ದದ ಬಾಲ ಬಿಟ್ಟರೆ ಹನುಮಂತನಿಗೂ ಆ ನಟನಿಗೂ ಯಾವ ಹೋಲಿಕೆ ಇರಲಿಲ್ಲ . ವಜ್ರಕಾಯದ ಹನುಮಂತ Dieting ಶುರು ಮಾಡಿರಬೇಕು. ತುಂಬ ಸ್ಲಿಮ್ ಆಗಿದ್ದ .ಮತ್ತು ಮುಖದ Plastic surgery ಮಾಡಿಸಿಕೊಂಡಿರಬೇಕು Full Dude ಆಗಿದ್ದ .

ಆಲಿಗೆ ಉಳಿ ಇಂಡುವುದನ್ನು ಕೇಳಿದ್ದೀರಾ ?? ಕನ್ನಡ ಧಾರಾವಾಹಿಗಳಲ್ಲಿ ಮಾಡುತ್ತಾರೆ . ವಿಕ್ರಮಾದಿತ್ಯ ಎಂಬ ಹೆಸರಿನ ವ್ಯಕ್ತಿಯನ್ನು ವಿಕ್ಕಿ ,ಆದಿ ,ವಿಕ್ರಮ್ ಎಂದು ಕರೆಯುವುದು ಕೇಳಿರಬಹುದು ಆದರೆ ಇಲ್ಲಿ ಅವನನ್ನು ವಿಕ್ಸ್ ಎಂದು ಕರೆಯುವಾಗ ನಾವು ಅಮೃತಾಂಜನ್ ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ದೆವ್ವದ ಧಾರಾವಾಹಿಗಳನ್ನು ನೋಡಿ ಚಿಕ್ಕ ಮಕ್ಕಳೂ ಹೆದರುವುದಿಲ್ಲ . 3cm ತ್ರಿಜ್ಯದ ಕುಂಕುಮ ಮತ್ತು ಬಿಳಿ ಸೀರೆ ಉಡುವುದು ಬಿಟ್ಟರೆ ಬೇರೆ ಯಾವ ತಂತ್ರಗಳೂ ಇವರಿಗೆ ಗೊತ್ತೇ ಇಲ್ಲ . ನಾಯಕನಿಗೆ ನಾಯಕಿ ಕುಂಕುಮದ ತಟ್ಟೆ ತೆಗೆದುಕೊಂಡು ಬರುತ್ತಿದಬೇಕಾದರೆ ಕಣ್ಣು ನೆತ್ತಿ ಮೇಲೆ ಶಿಫ್ಟ್ ಆಗುತ್ತದೆ . 3 ಎಪಿಸೋಡ್ ನಷ್ಟು ಸಮಯ ನಾಯಕ ನಾಯಕಿಗೆ ಢಿಕ್ಕಿ ಹೊಡೆದು ನಾಯಕಿಯ ಮೇಲೆ ಬೀಳುತ್ತಾನೆ .

ಲಕ್ಷಾಂತರ ರುಪಾಯಿ ಹಾಕಿ ಧಾರಾವಾಹಿ ತೆಗೆಯುವ ನಿರ್ಮಾಪಕರಿಗೆ ನಾಯಕಿಯ ಶಾಲಿಗೆ ಒಂದು safety pin ಕೊಡಲಿಕ್ಕೆ ಆಗುವುದಿಲ್ಲವೇ ?? ಜೋರಾಗಿ ಗಾಳಿ ಬೀಸಿ ಆಕೆಯ ಶಾಲು ಗೋಳಿಮರದ ತುದಿಯಲ್ಲಿ ಸಿಕ್ಕಿ ಬೀಳುತ್ತದೆ ಮತ್ತು ನಾಯಕ 4 ಎಪಿಸೋಡ್ ಕಾಲ ಮರ ಹತ್ತಿ ಶಾಲು ತೆಗೆದುಕೊಂಡು ಬರುತ್ತಾನೆ. ಆಗ ಹಿನ್ನೆಲೆಯಲ್ಲಿ ದೇವಾನಂದ್ ಕಾಲದ ಒಂದು ಹಾಡು ಗುನುಗುತ್ತಿರುತ್ತದೆ . ಮುಂದೆ ನಾಯಕ ನಾಯಕಿಗೆ ಮನಸ್ತಾಪ ಬಂದಾಗ ಈ ದೃಶ್ಯ photo negetive ಥರ 25 ಬಾರಿ repeat ಆಗುತ್ತದೆ . ಮತ್ತೆ ಅಪ್ಪಿ ತಪ್ಪಿ ಎಲ್ಲಾದರೂ ನಾಯಕಿ ಸತ್ತರೆ tension ತೆಗೆದುಕೊಳ್ಳಬೇಡಿ . ಅವಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮರಳಿ ಬರುತ್ತಾಳೆ.

ಇದು ರಜತ ಪರದೆಯ ಕಥೆಯಾದರೆ ದೊಡ್ಡ ಪರದೆಯ ಕಥೆಯೇ ಬೇರೆ . ಬೆಂಗಳೂರಿನ ಪ್ರತಿ ಗಲ್ಲಿಯಲ್ಲಿ ಒಬ್ಬ ಒಬ್ಬ ನಾಯಕ ಅಥವಾ ನಾಯಕಿ ಸಿಗುತ್ತಾರೆ . ಕನ್ನಡ ಚಲನಚಿತ್ರ ನೋಡುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ .
1) ನಾಯಕ ನಾಯಕಿಯನ್ನೇ ಮದುವೆಯಾಗುತ್ತಾನೆ .
2)ಸಾಹಸ ದೃಶ್ಯ ಗಳಲ್ಲಿ ನಾಯಕನೇ ಗೆಲ್ಲುತ್ತಾನೆ .ಗೂಂಡಾಗಳೋ ಒಮ್ಮೆಲೇ ಮುಗಿಬೀಳುವುದಿಲ್ಲ, ಶಿಸ್ತಿನ ಸಿಪಾಯಿಗಳಂತೆ ಸರದಿಯಲ್ಲಿ ಬರುತ್ತಾರೆ . .ಒಬ್ಬ ಪೆಟ್ಟು ತಿನ್ನುತ್ತಿರಬೇಕಾದರೆ ಇನ್ನೊಬ್ಬ shirt ನ ಕಾಲರ್ ಸರಿ ಮಾಡಿಕೊಳ್ಳುವುದನ್ನು ನೋಡಿದ್ದೇನೆ . ನಾಯಕ ಮುಟ್ಟಿದರೆ ಸಾಕು ಹಾ sss ಫ್ ...ಹಾ sss ಫ್ ...ಹಾ sss ಫ್ , ಯೀ ... ಯೀ ...ಯೀ ಎಂದು matrix effect ನೊಂದಿಗೆ ಮೂರು ಪಲ್ಟಿ ಹೊಡೆದು ಬೀಳುತ್ತಾರೆ . ನಾಯಕನಿಗೆ ರಕ್ತದ outlet port ಹಣೆಯಲ್ಲಿ ಮಾತ್ರ ಇದೆ ಬೆನ್ನು ಭುಜ ಕಾಲು ಸೊಂಟ ಎಲ್ಲಿ ಪೆಟ್ಟು ಬಿದ್ದರೂ ರಕ್ತ ಹಣೆಯಿಂದ ಮಾತ್ರ ಬರುತ್ತದೆ ಆಗ ನಾಯಕಿ ಓಡಿ ಬಂದು ತನ್ನ ಕಾಂಜೀವರಂ ಸೀರೆ ಹರಿದು ಅವನ ಹಣೆಗೆ ಪಟ್ಟಿ ಕಟ್ಟುತ್ತಾಳೆ.
3)ನಾಯಕ ಮತ್ತು ನಾಯಕಿ ಸಮುದ್ರಕ್ಕೆ ಹಾರಿದರೂ ಅಲ್ಲಿ ಸೊಂಟಕ್ಕಿಂತ ಹೆಚ್ಚು ಆಳದ ನೀರು ಇರುವುದಿಲ್ಲ .
4)ನಾಯಕ ನಾಯಕಿಯರ ನಡುವೆ ಪ್ರೇಮಾಂಕುರವಾಗುವಾಗ ಒಂದು ಹಾಡು ಇರುತ್ತದೆ .
5)ಚಿತ್ರದ ಕೊನೆಯಲ್ಲಿ ಖಳನಾಯಕ ನಾಯಕನಿಗೆ ಹೊಡೆದ ಗುಂಡಿಗೆ ಖಳನಾಯಕನ ತಾಯಿ ಅಡ್ಡ ಬರುತ್ತಾಳೆ ಮತ್ತು ಖಳನಾಯಕನಿಗೆ ಜ್ಞಾನೋದಯವಾಗುತ್ತದೆ .

ನಮ್ಮ ವೈದ್ಯಕೀಯ ವಿಜ್ಞಾನ ಎಷ್ಟು ಮುಂದೆ ಹೋದರೆ ಏನಂತೆ ??ಒಬ್ಬಳು ನಾಯಕಿಯ ,ನಾನು ನೋಡಿದ 8 ಚಲನಚಿತ್ರಗಳಲ್ಲಿ ಎಂಟೂ ಚಿತ್ರಗಳಲ್ಲಿ ಅವಳು ಗರ್ಭಿಣಿ ಆಗಿದ್ದಾಳೆ ಆದರೆ ಒಂದರಲ್ಲೂ ಸಸೂತ್ರ ಬಾಣಂತನ ಆಗಿದ್ದಿಲ್ಲ . ಇನ್ನು ಹಾಸ್ಯ ನಟರೋ .... ಅವರನ್ನು ನೋಡಿ ನಗಬೇಕೆ ವಿನಃ ಅವರ ಹಾಸ್ಯಕ್ಕೆ ಅಳು ಬರುತ್ತದೆ . ಆದರೆ ಏನೇ ಹೇಳಿ theatre ಗಳಲ್ಲಿ ಒಂದೂ ದಿನ ಓಡದ ಚಿತ್ರ 2 ತಿಂಗಳ ನಂತರ " ಮೊತ್ತ ಮೊದಲ ಬಾರಿಗೆ ಸೂಪರ್ ಹಿಟ್ " ಚಲನಚಿತ್ರವಾಗಿ ದೂರದರ್ಶನದಲ್ಲಿ ಬರುತ್ತದೆ . ಟಾಕೀಸಿನಲ್ಲಿ ನೋಡಿದ್ದರೂ ಮತ್ತೆ ಅದನ್ನು ದೂರದರ್ಶನದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಜಾಹೀರಾತನ್ನೂ ಬಿಡದೆ ನೋಡುತ್ತಾನೆ. ನಾನೂ ಅಷ್ಟೆ . ಒಹ್ ... 8:30 .....ನನ್ನ ಧಾರಾವಾಹಿ ಶುರುವಾಯಿತು .... ಮತ್ತೆ ಸಿಗೋಣ .. ಸರೀನಾ ??

================================ವಿಕಟಕವಿ =================

Friday, January 2, 2009

ಎಲ್ಲಾರು ಮಾಡುವುದು ಹೊಟ್ಟೆಗಾಗಿ

*********************************ಪುಟಕ್ಕಿಳಿಸುವ ಮುನ್ನ ************************
ನಾನು ಲೇಖಕ - ಕವಿ ಏನೂ ಅಲ್ಲ . ಒಬ್ಬ ಹವ್ಯಾಸಿ ಬರಹಗಾರ ಅಷ್ಟೆ . ಬಹಳಷ್ಟು ಲೇಖನಗಳಲ್ಲಿ "ಸಂಧ್ಯಾಕಾಲ ನೇಸರನು ಅಸ್ತಮಿಸುವಾಗ , ವಸಂತಕಾಲದ ಕೋಗಿಲೆಯ ಕುಹೂ ಕುಹೂ ದನಿಯಲ್ಲಿ ಜನರಿಗೆ ಅದೇನೋ "ಸ್ಪೂರ್ತಿ " ಸಿಗುತ್ತದಂತೆ . ಅದೆಲ್ಲ ನನಗೆ ತಿಳಿಯದು . ಆದರೆ ನಾನು 2nd PUC ನಲ್ಲಿ ಇದ್ದಾಗ ಬರೆದ ಒಂದು ಕವಿತೆ (ನನ್ನ ಬ್ಲಾಗ್ ನಲ್ಲಿ ಮೊದಲನೆ ಕವಿತೆ ) 2 ತಿಂಗಳ ಕಾಲ ಅಜ್ಞಾತವಾಸದಲ್ಲಿತ್ತು. ಕಣ್ತಪ್ಪಿನಿಂದ ಅದನ್ನು ಓದಿದ ನನ್ನ ಅಕ್ಕ ಒಂದು ವೇಳೆ ಅನುನಾಸಿಕ ಪ್ರಯೋಗ ಮಾಡಿದ್ದಲ್ಲಿ ನಾನು ಆ ಕ್ಷಣವೇ ನನ್ನ ಬರವಣಿಗೆಗೆ ಪೂರ್ಣವಿರಾಮ ಇಡುತ್ತಿದ್ದೆ . ಆದರೆ ಅವಳು ತಾನು ಓದಿ ಹೊಗಳಿದ್ದಲ್ಲದೆ ಅಣ್ಣ, ಅಪ್ಪ ಅಮ್ಮ ಎಲ್ಲರಿಗೂ ತೋರಿಸಿದಳು . ಇನ್ನು ನಮ್ಮ ಅಪ್ಪ ...... ನನ್ನ ಆದರ್ಶ ವ್ಯಕ್ತಿ .ಇಂದು ನನ್ನ ಕನ್ನಡಕ್ಕೆ 7/10 ಸಿಕ್ಕಿದರೆ ಅದರಲ್ಲಿ 5 ಅಂಕ ಸೀದಾ ಅಪ್ಪನ Account ಗೆ ಹೋಗುತ್ತದೆ . ಭಾನುವಾರ ಉದಯವಾಣಿ ಸಾಪ್ತಾಹಿಕ ಪುರವಣಿಯ "ಪದಬಂಧ " ಪ್ರತೀವಾರ ಒಟ್ಟಿಗೆ ಕುಳಿತು ಮಾಡುತ್ತಿದ್ದೆವು . ಒಂದು ಚೌಕವೂ ಖಾಲೀ ಉಳಿಯೋಲ್ಲ . ಅವರೋ ನಿಸ್ಸೀಮರು . ನಾನು
L - Board . ಒಂದು ಶಬ್ದ ಗೊತ್ತಿಲ್ಲ ಅಂದರೆ ಒಂದು ಪೆಟ್ಟು :) . ಹೀಗೆ ಅವರ ಮುಂದೆ
" ಮೆರೆಯುವ " ನಿಟ್ಟಿನಲ್ಲಿ (ಕುಂದಾಪ್ರ ಕನ್ನಡದಲ್ಲಿ ಹೇಳುವುದಾದರೆ ರೈಸುವುದು ಅಥವಾ ಜಾಪ್ ಮಾಡುವುದು ) ಯಾವುದೋ ಪುಸ್ತಕದ ಒಂದು corner ನಲ್ಲಿ ಓದಿದ ಶಬ್ದಗಳನ್ನು ನೆನಪಿಟ್ಟು ಕೊಳ್ಳುತ್ತಿದ್ದೆ . ಅದು ಬಿಟ್ಟರೆ ಕನ್ನಡವನ್ನು ಶಾಲೆಯಲ್ಲಿ 3 ನೇ ಭಾಷೆಯಾಗಿ ಓದಿದವನು ನಾನು . ಆಮೇಲೆ ಕಾಲೇಜಿನಲ್ಲಿ ಕನ್ನಡ ಇಲ್ಲ .ಇಂಜಿನಿಯರಿಂಗ್ ಕಾಲೇಜಿಗೆ ಹೋದ ಮೇಲೆ ನನ್ನ ಕಥೆ ಯಾರಿಗೆ ಹೇಳಲಿ ?? ಕನ್ನಡ ಬರುವುದಿಲ್ಲ english ತಿಳಿಯುವುದಿಲ್ಲ . Bonafied Certificate ಗಾಗಿ ಅರ್ಜಿ ಬರೆಯಲು ಹೇಳಿದಾಗ ನಾನು ಪಿಳಿಪಿಳಿ ಕಣ್ಣು ಬಿಡುತ್ತಿದ್ದರೆ ನನ್ನ ಅಪ್ಪ ಆಂಗ್ಲ ಭಾಷೆಯಲ್ಲಿ ಅರ್ಜಿ ಬರೆಯುವುದನ್ನು ಕಂಡು ನಾಚಿ ನೀರಾಗಿದ್ದೆ. ( ಅವರು 1965 ರ 8 ನೇ ತರಗತಿ ನಾನು 2003 ರ 2nd PUC !!!!! ). ಅಲ್ಲಿಂದ ನನ್ನ ಯೋಚನಾಲಹರಿ ಬದಲಾಯಿತು . ಭಾಷಾ ವಿಷಯವಾಗಲಿ ಅಥವಾ ತಂತ್ರಜ್ಞಾನದ ವಿಷಯವಾಗಲಿ ಸುಮ್ಮನೆ ಓದುವುದನ್ನು ಬಿಟ್ಟು ಸ್ವಲ್ಪ ಗಮನ -ವಿಮರ್ಶೆ ( Observation and Analysis ) ಮಾಡುವುದನ್ನು ಶುರು ಮಾಡಿದೆ . ಹಾಸ್ಯವೋ... ಅಪ್ಪ - ಅಣ್ಣ ಇವರಿಂದ ಬಳುವಳಿಯಾಗಿ ಬಂದಿತ್ತು . ಇನ್ನು ಅಲ್ಲಿ -ಇಲ್ಲಿ ನೋಡಿದ್ದಕ್ಕೆ ನನ್ನ ಮಸಾಲೆ ಬೆರೆಸಿ ಉಪ್ಪು ಮೆಣಸು ಒಗ್ಗರಣೆ ಹಾಕಿ ( ಒಗ್ಗರಣೆ ಹಾಕುವುದನ್ನು ಅಮ್ಮ ಕಲಿಸಿದ್ದು :) :) . ಪಾಕಶಾಸ್ತ್ರ ಪ್ರವೀಣೆ .ನವರಸ ನಾಯಕಿ :) :) . ಎಣ್ಣೆ -ಸಾಸಿವೆ ಇಲ್ಲದೆ ಒಗ್ಗರಣೆ ಹಾಕುವುದು , ಹಾಲು ಇಲ್ಲದೆ ಚಾ , ತೆಂಗಿನ ಕಾಯಿ - ಮೆಣಸು ಇಲ್ಲದೆ ಮಸಾಲೆ ಮಾಡಬೇಕೆ ?? ನನ್ನ ಅಮ್ಮನನ್ನು ಸಂಪರ್ಕಿಸಿ ). ಹೀಗೆ ನನ್ನ ಮನೆಯೇ ನನಗೆ ಮೊದಲ ಪಾಠಶಾಲೆ .

ನಂತರ ನನ್ನ ಮೊದಲ ಲೇಖನ ಸೌಂದರ್ಯೋಪಾಸನೆ......ಇದನ್ನು ಬರೆಯುವುದು ಯಾವುದೇ Boys-Hostel ವಿದ್ಯಾರ್ಥಿಗೆ ಕಷ್ಟವಲ್ಲ. ಆಮೇಲೆ ಹಾಸ್ಟೇಲಿನ ಅನುಭವಗಳು, ಮುಂಬೈ ಗೆ ಬಂದ ಮೇಲೆ ರೈಲಿನೊಳಗಿನ ಪಡಿಪಾಟಲುಗಳು ಎಲ್ಲ "Reality Based" ಲೇಖನ . ಎಂಥವನೂ ಈ ಲೇಖನ ಬರೀಬಹುದು . ನನ್ನ ಲೇಖನದಲ್ಲಿ ಇಲ್ಲಿಯವರೆಗೆ ಯಾವುದೇ ಸ್ಪೂರ್ತಿಯ ಕೈವಾಡವಿಲ್ಲ . ಆದರೆ ಇದರ ನಂತರ ನನಗೆ ಲೇಖನ ಬರೆಯಲು ಸ್ಫೂರ್ತಿಯ ಸಾಗರವೇ ಸಿಕ್ಕಿತ್ತು . ಈಗ ನನ್ನ ಗೆಳೆಯರನ್ನು ನೆನಪಿಸಿಕೊಳ್ಳದಿದ್ದರೆ ಅದು ಮೋಸವಾದೀತು . ನನ್ನ ರೈಲಿನ ಲೇಖನವನ್ನು ಓದಿದ ಆಪ್ತರು ಲೇಖನ ಓದಿದ ತಕ್ಷಣ ನಡುರಾತ್ರಿ 12 ಗಂಟೆಗೆ

" ಸುಮಂತಾ ..... article ssssss ಸ್ತ ಲಾಯ್ಕದಾಲ್ಲಾ " ( ಸುಮಂತ article ತುಂಬಾ ಚೆನ್ನಾಗಿತ್ತು )ಎಂದು Voice SMS ಕಳಿಸಿದರೆ ??

"Yaar i need your autograph ... its Urgent ... Next time when we meet Pen in your hand autograph book in my hand..... " ಎಂದು mail ಮಾಡಿದರೆ ??

"Till now i didnt have Kannada Font in my PC ....now i understood what i missed all these days" ಎಂದು Orkut ನಲ್ಲಿ Scrap ಮಾಡಿದರೆ ??

ಇನ್ನು ನನ್ನ ಥರ ಹಾಸ್ಟೆಲ್ನಲ್ಲಿ ಇದ್ದವರು ಓದಿ "ಯಾಪಾ ssss...... ಏನ್ ಬರೀತೀಲೆ ಬೇವರ್ಸಿ !!!! ಸಕತ್ತಾಗಿತ್ತು ಮಚ್ಚಾ ..You rock dude "ಎಂದು SMS ಮಾಡಿದರೆ ??

ಎಷ್ಟು ಸಂತೋಷವಾಗುತ್ತದೆ ಗೊತ್ತಾ??? ಈ ಸ್ಪೂರ್ತಿಯ ಮುಂದೆ ಸೂರ್ಯ - ಚಂದ್ರ -ಕಾಗೆ - ಕೋಗಿಲೆ -ಕೋಳಿ ಎಲ್ಲವನ್ನೂ dont care condition ನಲ್ಲಿ ಇಡಬೇಕು . ಇಂತಹ ಗೆಳೆಯರನ್ನು ಪಡೆದ ನಾನೇ ಧನ್ಯ . ಎಲ್ಲರಿಗೂ ನಾನು ಚಿರಋಣಿ . ಹಾಗೂ ಈ ಲೇಖನ ನಿಮಗೆ ಅರ್ಪಣೆ .
********************************ಧನ್ಯವಾದಗಳೊಂದಿಗೆ ***************************
***********************************ವಿಕಟಕವಿ *********************************
ಏನಿದೆಯಪ್ಪಾ???......................

ಖಾಲಿ ದೋಸೆ , ಮಸಾಲೆದೋಸೆ, ತುಪ್ಪ ದೋಸೆ ,ಸೆಟ್ ದೋಸೆ ,ಇಡ್ಲಿ -ಸಾಂಬಾರ್ , ಚಪಾತಿ ,ಪೂರಿ,ಪರೋಟ ,ಉಪ್ಪಿಟ್ಟು ,ಗೋಳಿಬಜೆ ....... ಕುಂದಾಪುರದ ಸಾಗರ್ ಹೋಟೆಲಿನಲ್ಲಿ ಅರಳು ಹುರಿದಂತೆ ಪಟ್ ಪಟ್ ಎಂದು ಮಾಣಿ ಹೇಳುವುದನ್ನು ಕೇಳುವುದೇ ಕರ್ಣಾನಂದ. ಅರ್ಧ ಹೊಟ್ಟೆ ಅಲ್ಲೇ ತುಂಬುತ್ತದೆ . ಇನ್ನು ಒಂದು ಪ್ಲೇಟ್ ಇಡ್ಲಿ (5 ರೂಪಾಯಿ ) ತಿಂದು ಬೈ ಟೂ ಕಾಪಿ ( Its not coffee its "ಕಾಪಿ" "ಕಾ sssss ಪಿ " ಗೊತ್ತಾಯ್ತಾ ?? ) ಕುಡಿದರೆ ಬೆಳಿಗ್ಗಿನ ತಿಂಡಿ ಏಳೂವರೆ ರುಪಾಯಿಯೊಳಗೆ ಆಗಿ ಹೋಯಿತು .ಆದರೂ ಸಾಗರ್ ಸ್ವಲ್ಪ "COSTLY" . ನಾನು ಕುಂದಾಪುರದಲ್ಲಿದ್ದಾಗ ಹೋಟೆಲಿಗೆ ಹೋಗಿದ್ದೆ ಕಡಿಮೆ . ಅಕಸ್ಮಾತ್ ಹೋದರು ಬೊಬ್ಬರ್ಯನ ಕಟ್ಟೆ ಪಕ್ಕದ "ಸುಂದ್ರಯ್ಯನ " ಹೋಟೆಲಿಗೆ ಹೋಗುವುದು . ಬೆಳಿಗ್ಗೆ 5:30 ಕ್ಕೆ ಹೋದರೆ 6 item ಲಭ್ಯ . ಅವು
1) ಉಪ್ಪಿಟ್ಟು - ಅವಲಕ್ಕಿ
2)ಅವಲಕ್ಕಿ - ಉಪ್ಪಿಟ್ಟು
3)ಉಪ್ಪಿಟ್ಟು -ಅವಲಕ್ಕಿ ಒಟ್ಟ್-ಒಟ್ಟಿಗೆ
4)ಉಪ್ಪಿಟ್ಟು - ಅವಲಕ್ಕಿ ಬೇರೆ -ಬೇರೆ
5)ಉಪ್ಪಿಟ್ಟು ಮಾತ್ರ
6)ಅವಲಕ್ಕಿ ಮಾತ್ರ

7 ಗಂಟೆಗೆ ಇಡ್ಲಿ- ದೋಸೆ- ಬನ್ಸು ಸಿಗುತ್ತದೆ .

ಆದರೆ ಆ ರುಚಿಯನ್ನು ನಾನು ಮುಂಬೈ ಯ ಸ್ಟಾರ್ ಹೋಟೆಲ್ ನಲ್ಲೂ ಪಡೆದಿಲ್ಲ . ಯಾಕೆಂದರೆ ನಾವು "Hotel Mahesh Prasad" ಗೆ ಹೋಗುತ್ತಿರಲಿಲ್ಲ ನಾವು ಹೋಗುವುದು "ಸುಂದ್ರಯ್ಯನ" ಹೋಟೆಲಿಗೆ. ಮತ್ತು ಅವರ ಹೋಟೆಲಿಗೆ "ಗಿರಾಕಿಗಳು" ಬರುತ್ತಿರಲಿಲ್ಲ ಬರುವುದು ಶ್ಯಾನುಭಾಗರು ,ಸುರೇಶ್ ಮೇಸ್ತ ,ಕಾರಂತರ ಮಗ,ಐತಾಳರ ಅಳಿಯ ಇಂತವರು . ನಮ್ಮ ನಡುವೆ Owner-Customer ಸಂಬಂಧವಿರಲಿಲ್ಲ . ನಮ್ಮೆಲ್ಲರನ್ನೂ ಅವರು ಹೆಸರಿನಿಂದ ಬಲ್ಲರು ಮತ್ತು ಆ ತಿಂಡಿಯಲ್ಲಿ ಪ್ರೀತಿಯನ್ನೂ ಬೆರೆಸಿ ಕೊಡುತ್ತಿದ್ದರು . ಮತ್ತೆ ಈ ಟಿಪ್ಸು -ಗಿಪ್ಸು ಎಲ್ಲ ನಾನು ನಿನ್ನೆಯೋ ಮೊನ್ನೆಯೋ ಕಲಿತಿದ್ದು . ಕುಂದಾಪುರದಲ್ಲಿ ಊಟದ ಬಿಲ್ಲು ಒಂದಂಕಿ ಯಲ್ಲಿರುವಾಗ ಟಿಪ್ಸ್ ಯಾರು ಕೊಡುತ್ತಾರೆ ?? ನೀವು ಒಬ್ಬರೇ ಹೋಗಿ 15 ಮಂದಿ ಹೋಗಿ ಮುನ್ನ ( ಮೋಹನ -- ಹೋಟೆಲ್ ಮಾಣಿ .. 18 ವರ್ಷದವನು ) ಎಲ್ಲರಿಗೂ ಒಂದೇ ಕೈಯಲ್ಲಿ ನೀರಿನ ಲೋಟ ತಂದು ಇಡುತ್ತಾನೆ . ಲೇ ಮುನ್ನಾ .... ಸಂಜೆ ಮೈದಾನಕ್ಕೆ ಬಾ.... ಕ್ರಿಕೆಟ್ ಆಡೋಣ .. ನಮ್ಮ ಆಹ್ವಾನ . ಒಳಗೆ ಪಾಂಡುರಂಗಣ್ಣ -- ಅಡುಗೆಯವರು . ಅವರು ಹೊರಗೆ ಬರೋಲ್ಲ .ಇಲ್ಲಿಗೆ ಹೋಟೆಲ್ ಸಿಬ್ಬಂದಿ ವರ್ಗ ಮುಗಿಯಿತು . ಮುನ್ನ ರಜೆ ತಗೊಂಡರೆ ಸುಂದ್ರಯ್ಯನವರ ಏಕಪಾತ್ರಾಭಿನಯ . ಹಾ .... ಒಂದು ಪ್ಲೇಟ್ ಇಡ್ಲಿ ತಾ.... ಎಂದು ಕೂಗಿ ತಾವೇ ಒಳಗೆ ಹೋಗಿ ಇಡ್ಲಿ ತಂದು ಆಮೇಲೆ .... ಏಯ್ ಎಲ್ ಹೋದ್ಯೋ ಮುನ್ನ .. ಇಲ್ಲಿ ಕ್ಲೀನ್ ಮಾಡು .. ಎಂದು ಕೂಗಿ ... ಈ ಮಾಣಿಯೊಂದು... ಹೇಳಿದ್ ಕೆಲಸ ಮಾಡಲ್ಲಾ ......ಎಂದು ಬೈಯುತ್ತ ತಾವೇ ಕ್ಲೀನ್ ಮಾಡುವರು . ಕೆಲಸದವರಿಲ್ಲ ಎಂದು ಯಾರಿಗೂ ತಿಳಿಯೋಲ್ಲ .

ನಾನು ಮುಂಬೈ ಗೆ ಬಂದ ಹೊಸದರಲ್ಲಿ ಊಟ -ತಿಂಡಿಯ ವಿಷಯದಲ್ಲಿ ನನ್ನ ಅನುಭವವನ್ನು ಬರೆಯುತ್ತಿದ್ದೇನೆ . "ಹೊಟ್ಟೆ ತುಂಬಿಸಿಕೊಳ್ಳುವುದು " ನಿಜಕ್ಕೂ ಕಷ್ಟ ಎಂದು ನನಗೆ ಆಗ ತಿಳಿಯಿತು . ಆದರೆ ಗುಣದಲ್ಲಿ ಕಡಿಮೆಯಾದರೂ ಹಣದಲ್ಲಿ ಮುಂಬೈ ದೊಡ್ಡದು .ಮುಂಬಯಿಯಲ್ಲಿ ನನ್ನ ಒಂದು ತಿಂಡಿಯ ಬಿಲ್ಲಿನ ಹಣದಲ್ಲಿ ಕುಂದಾಪುರದಲ್ಲಿ 6 ಮಂದಿ 2 ದಿನ ಹೊಟ್ಟೆ ತುಂಬಾ ತಿನ್ನಬಹುದು . ಈಗ ನೋಡಿ ..... ನಾನು ಮುಂಬಯಿಯ ಪ್ರಸಿದ್ಧ ಪಂಚತಾರಾ ಹೋಟೆಲಿನೊಳಗೆ ಪ್ರವೇಶಿಸಿದ್ದೇನೆ .

ಮಚ್ಚಾ ..... ಇಲ್ಲಿ ಯಾರದ್ದೋ ಮದ್ವೆ ಇರಬೇಕು ಬೇರೆ ಕಡೆ ಹೋಗೋಣ ಎಂದೆನು .ಏಯ್ ಗುಬಾಲ್ ... ಅವ್ನು ಬಾಗಿಲು ತೆಗೆಯುವವನು ಬಾಸಿಂಗ ಹಾಕಿ ನಿಂತಿದ್ದಾನೆ ಅಷ್ಟೆ ..... ಮುಚ್ಕೊಂಡು ಬಾ..... ಬಬ್ಲು ಉಸುರಿದ . ಒಳಗೆ ಹೋಗಿ ಕುಳಿತೆವು . Transperent ಗ್ಲಾಸ್ ನಲ್ಲಿ 2 ಲೋಟ ನೀರು ಬಂತು . ಬರೀ ಮೌನ . ಇವನು ಯಾವುದೋ ಪುಸ್ತಕ ಓದುತ್ತ ಕುಳಿತಿದ್ದಾನೆ . ಲೇ .. ಮನೆಗ್ ಹೋಗಿ ಓದ್ಕೋ ... ಈಗ ಏನಿದೆ ತಿನ್ನೋಕ್ಕೆ ಅಂತ ಕೇಳು ಅಂದೆ. ಅದೇ ಮಾಡ್ತಾ ಇದ್ದೀನಿ ಇದು Menu ಎಂದ . ಉಪ್ಪಿಟ್ಟು -ಅವಲಕ್ಕಿ ಉಂಟಾ ನೋಡು ಎಂದೆನು . ಬಬ್ಲು ಗುರಾಯಿಸಿದ . ನಾನು ಸುಮ್ಮನಾದೆ . ಮಚ್ಚಾ ..... ನಾನ್ ಹೇಳಲಾ ?? ಕೇಳಿದ . ಆಯಿತಪ್ಪ ನೀನೆ ಹೇಳು ಅಂದೆನು. ಅಲ್ವೋ...... Nan ಹೇಳಲಾ Butter Roti ಹೇಳಲಾ ?? ಅಂದ . ನನಗೇನೂ ಗೊತ್ತಿಲ್ಲಪ್ಪ . ನೀನು ನಂಗೆ ಇಡ್ಲಿ -ವಡಾ-ಸಾಂಬಾರ್ ಹೇಳು ಅಂದೆನು . ಮತ್ತೆ starter ಏನು ಹೇಳಲಿ ಅಂದ . ನಾನೇನೂ ಹಳೆ ಲಾರಿ ಇಂಜಿನ್ ಅಲ್ಲ.... ಅದೆಲ್ಲ ಏನೂ ಬೇಡ.... ನಾನು ಯಾವತ್ತು ರೆಡಿ ಇರ್ತೀನಿ ಎಂದೆ... ಹೇಗಿರತ್ತೆ ನೋಡೋಣ ಎಂದು ಒಂದು Veg Manchow Soup ಆರ್ಡರ್ ಮಾಡಿದ . 10 ನಿಮಿಷದ ನಂತರ ಮಾಣಿ ... sorry "WAITER" ಎರಡು ಪಾತ್ರೆಯಲ್ಲಿ ( ಆ ಪಾತ್ರೆಗೆ ಬೌಲ್ ಅಂತಾರಂತೆ ) ಕಂದು ಬಣ್ಣದ ದ್ರವ ತಂದಿಟ್ಟ .

ಲೇ ಏನೋ ಇದು Phenoil ಥರ ಇದೆ ಅಂದೆನು . ಏಯ್ ... ಅದು ಸೂಪು .ಸುಮ್ನೆ ಕುಡಿ ಎಂದ . ಆಯಿತು ಎಂದು Bowl ಎತ್ತಿದೆ . ಲೇ.... ಹಾಗಲ್ಲ ಸ್ಪೂನ್ ನಿಂದ ಸ್ವಲ್ಪ ಸ್ವಲ್ಪ ಕುಡಿಯಬೇಕು ಅಂದನು ..... ಇದೇನು ಜ್ವರದ tonic ಏನೋ ಹಾಗೆ ಕುಡಿಯಕ್ಕೆ ಅಂದೆನು ?? ಅಲ್ವಂತೆ ಅದು Table Manners ಅಂತೆ . ಸರಿ ಎಂದು ಸ್ವಲ್ಪ ಬಾಯಿಗೆ ಹಾಕಿಕೊಂಡೆ . ಅಜ್ಜಿ ನೆನಪಾದಳು . ಸಣ್ಣವನಿರುವಾಗ ಅಜ್ಜಿ ಕಿರಾಥಕಡ್ಡಿ ಕಷಾಯ ಮಾಡಿದ ದಿನ ಮನೆಯಲ್ಲಿ ನಾನು ನಾಪತ್ತೆ . ಬೆಳಿಗ್ಗೆ ಅಜ್ಜಿ ದೇವರ ಪೂಜೆ ಮಾಡುತ್ತಿರಬೇಕಾದರೆ ಹೊರಗೆ ಹೋಗುತ್ತಿದ್ದ ನಾನು ರಾತ್ರಿ ಅಜ್ಜಿ ಮಲಗಿದ ನಂತರ ವಾಪಾಸ್ ಬರುತ್ತಿದ್ದೆ . ಈಗ ಏನು ಹಣೆಬರಹ ನೋಡಿ . ದುಡ್ಡು ಕೊಟ್ಟು ಕಾಷಾಯ ಕುಡಿಯುತ್ತಿದ್ದೇನೆ ಅನ್ನಿಸಿತು . ಆಮೇಲೆ ಅವನು Coconut-rice ಹೇಳಿದ ನನಗೆ ವಡಾ- ಸಾಂಬಾರ್ ಹೇಳಿದ . 15 ನಿಮಿಷದಲ್ಲಿ ನಮ್ಮ ಎದುರು 2 ದೊಡ್ಡ ಪ್ಲೇಟ್ ಬಂತು . ಅರ್ಧ ಗಂಟೆ ನಂತರ ವಡಾ -ಸಾಂಬಾರ್ Coconut Rice ಬಂದಿತು . ವಡಾ ನೋಡಿ ದಂಗಾದೆನು . ಅದಕ್ಕೆ ಭಾರೀ ನಿತ್ರಾಣವಾದಂತಿತ್ತು . ಅದರಲ್ಲಿ ತೂತು ಬಿಟ್ಟರೆ ಮತ್ತೇನೂ ಇರಲೇ ಇಲ್ಲ . ಒಂದು ವೇಳೆ ಶಿಶುನಾಳ ಶರೀಫರು ಆ ವಡಾ ನೋಡಿದ್ದಲ್ಲಿ " ವಡಾವನ್ನು ತೂತೆ ನುಂಗಿತ್ತಾ...." ಎಂದು ಹಾಡುತ್ತಿದ್ದರು . ನಾನು ಒಂದು ಸಲ "ಅಮ್ಮಾ ... ಪ್ಲೀಸ್ ....." ಅಂದರೆ ನನ್ನ ಅಮ್ಮ ಅದಕ್ಕಿಂತ ದೊಡ್ಡ ಕೋಡುಬಳೆ ಮಾಡಿ ಕೊಡುತ್ತಿದ್ದರು . ಅದನ್ನು ಚಮಚದಲ್ಲಿ ತಿನ್ನುವುದೋ ಅಥವಾ saridon ಮಾತ್ರೆ ಥರಾ ನುಂಗಿ ನೀರು ಕುಡಿಯುವುದೋ ತಿಳಿಯಲಿಲ್ಲ . ಮತ್ತೆ ಸಾಂಬಾರ್ ಬೇರೆ ಪಾತ್ರೆಯಲ್ಲಿ . ಅಯ್ಯೋ ವಡೆಗೆ ಸಾಂಬಾರಿನ ಅಭಿಷೇಕ ಮಾಡಬೇಕು . ಆ ಪಾತ್ರೆಯಲ್ಲಿ ವಡಾ ಪೂರ್ತಿ ಮುಳುಗಿರಬೇಕು . ಆಮೇಲೆ ಚಮಚದಿದಂದ ಪಾತ್ರೆಯೊಳಗೆ "ವಡಾ ಶೋಧನೆ " ಮಾಡಿ ತಿನ್ನಬೇಕು . ಇದು ವಡೆ ತಿನ್ನುವ ಶಾಸ್ತ್ರ . ಇರಲೆಂದು ಮನದಲ್ಲೇ ಬೈಯ್ಯುತ್ತಾ ತಿಂದು ಮುಗಿಸಿದೆ . ಇನ್ನು ಅವನ So called Coconut Rice ಹೇಗಿದೆ ಎಂದು ನೋಡಲು ಸ್ವಲ್ಪ ತೆಗೆದುಕೊಂಡೆ . ಹೃದಯದಲ್ಲಿ ಭಕ್ತಿ ತುಂಬಿ ಹರಿಯಿತು . ನಮ್ಮ ಕುಂದಾಪುರದ "ಅಯ್ಯಪ್ಪ ಸ್ವಾಮೀ ಭಕ್ತ ವೃಂದ" ದವರು ಹಂಚುವ ಪಂಚಕಜ್ಜಾಯದಂತಿತ್ತು . ಕಣ್ಣಿಗೆ ಒತ್ತಿಕೊಂಡು ತಿಂದೆನು. ಆಮೇಲೆ ಒಂದು Tea ಒಂದು ಕಾಪಿ sorry.... Coffee ಹೇಳಿದೆವು . 10 ನಿಮಿಷದಲ್ಲಿ ಬಂದಿತು .ಲೋಟ ನೋಡಿ Rotomac ಪೆನ್ನಿನ top ನೆನಪಾಯಿತು . ಒಹ್.... ದೊಡ್ಡ ಹೋಟೆಲ್ ಅಲ್ವಾ ಮೊದಲು sample ಕೊಟ್ಟು ಆಮೇಲೆ ದೊಡ್ಡ ಲೋಟದಲ್ಲಿ coffee ಕೊಡುತ್ತಾರೆ ಅಂದುಕೊಂಡೆ. ಅಲ್ವಂತೆ ಅದೇ full and final ಲೋಟ ಅಂದ. ನಮ್ಮ ಕುಂದೇಶ್ವರ ದೇವಸ್ಥಾನದ ಭಟ್ಟರು ಅದಕ್ಕಿಂತ ಹೆಚ್ಚು ತೀರ್ಥ ಕೊಡುತ್ತಿದ್ದರು . "ಕುಡಿಯುವಾಗ ಶಬ್ದ ಮಾಡಬೇಡ " ಬಬ್ಲು ತಾಕೀತು ಮಾಡಿದ . ಅರೆ .... ಇದೊಳ್ಳೆ ಕತೆಯಾಯ್ತಲ್ಲ .... ಪಾಯಸ ತಿನ್ನುವಾಗ ಕಾಪಿ ಕುಡಿಯುವಾಗ ಸುರ್ರರ್...... ಎಂದು ಶಬ್ದ ಶೃತಿಬದ್ಧವಾಗಿ ಹೊರಡದಿದ್ದರೆ ಅದು ಪಾಯಸ -ಕಾಪಿಗೆ ಅವಮಾನ ಮಾಡಿದಂತೆ . ಕಷ್ಟಪಟ್ಟು ಹೇಗೋ ಸೈಲೆಂಟ್ ಮೋಡ್ ನಲ್ಲಿ ಕುಡಿದು ಮುಗಿಸಿದೆ . ಮತ್ತೆ Tea .... ಹಾಲು ,ಸಕ್ಕರೆ , ಚಾ ಪುಡಿಯ ಒಂದು ಸಣ್ಣ ಚೀಲ ತಂದುಕೊಟ್ಟರು . 25 ರೂಪಾಯಿ ಕೊಟ್ಟಿದ್ದಲ್ಲದೆ ನಾವೇ ಚಾ ಮಾಡಿಕೊಳ್ಳಬೇಕು . ನಮ್ಮ ಸುಂದ್ರಯ್ಯನ ಹೋಟೆಲ್ ನಲ್ಲಿ 2 ರೂಪಾಯಿ ಗೆ 2 ಮೀಟರ್ ಮೇಲಿನಿಂದ "ಹೊಡೆದು" ಕಡಕ್ ಚಾ ಮಾಡಿ ಕೊಡುತ್ತಿದ್ದ . ಆಮೇಲೆ ಬಿಲ್ ಬಂದಿತು . ಬ್ರಿಯಾನ್ ಲಾರಾನ ಟೆಸ್ಟ್ record break ಮಾಡಿತ್ತು. ನನ್ನ ಎದೆ 72 ಕ್ಕೆ ಒಂದೆರಡು ಸೊನ್ನೆ ಸೇರಿಸಿ ಬಡಿಯಲು ಆರಂಭಿಸಿತು .ಕಾಷಾಯಕ್ಕೆ 120 , ವಡಾ ಸಾಂಬಾರ್ 60 ಪಂಚಕಜ್ಜಾಯಕ್ಕೆ 180 ಆಮೇಲೆ ಕಾಪಿ -ಚಾ -ಟಿಪ್ಸು- ಟ್ಯಾಕ್ಸು ಸೇರಿಸಿ 450 ಆಗಿತ್ತು .

ಇದರಿಂದ ಪಾಠ ಕಲಿತ ನಾನು ನಂತರ ಯಾವುದೇ ಹೋಟೆಲ್ ಗೆ ಹೋದರೂ ಮೊದಲು ಮೆನು ಕಾರ್ಡಿನ ಬಲಭಾಗದಲ್ಲಿರುವ ಅಂಕಿ - ಅಂಶಗಳ ಗುಣಾಕಾರ ಮಾಡಿಕೊಂಡು ಆಮೇಲೆ ಆರ್ಡರ್ ಮಾಡುತ್ತಿದ್ದೆ. ಮತ್ತೆ ಕೆಲವು ಹೆಸರು ನೋಡಿ ನಗುವುರೋ ಅಳುವುದೋ ತಿಳಿಯುವುದಿಲ್ಲ . ಮಸಾಲಾ ಪಾಪಡ್ 25/- . ಅಶೋಕ ಹಪ್ಪಳದ ಮೇಲೆ ದೂರದಿಂದ 4 ನೀರುಳ್ಳಿ ,ಟೊಮೇಟೊ ಬಿಸಾಕಿ ತಂದುಕೊಡುತ್ತಾರೆ. ಮತ್ತೆ ಲೆಮನ್ ರೈಸ್ ಅಂತೆ . ದಿಗಿಲಾಗಬೇಡಿ .. ನಿನ್ನೆಯ ಅನ್ನ ಉಳಿದರೆ ಅಮ್ಮ ಚಿತ್ರಾನ್ನ ಮಾಡುವುದಿಲ್ಲವೇ ?? ಇದು ಅದರದ್ದೇ ಅವತಾರ . ಆದರೆ 45/- ಮಾತ್ರ . ಊರಿನಲ್ಲಿ ಚಪಾತಿಗೂ ಭಾಜೀಗೂ , ಪೂರಿ ಕುರ್ಮಾ ಕ್ಕೂ Registered Marriage ಆಗಿದೆ . ಚಪಾತಿ,ಪೂರಿ ಹೇಳಿದ್ರೆ ಅದರೊಟ್ಟಿಗೆ ಭಾಜೀ ಕುರ್ಮಾ ಫ್ರೀ. ಇಲ್ಲಿ ಹಾಗಲ್ಲ ಚಪಾತಿ ರೋಟಿ ಬ್ರಹ್ಮಚಾರಿಗಳು . ಅದಕ್ಕೆ ಮಸಾಲೆ seperate ಹೇಳಬೇಕು .ರೋಟಿಯ ಸ್ಥಿತಿಯಂತೂ ಮಳೆಗಾಲದಲ್ಲಿ ಕಳಪೆ ಕಾಮಗಾರಿಯ ರಸ್ತೆಯಂತೆ ಇರುತ್ತದೆ . ಪನ್ನೀರ್ ಗೆ ಇದ್ದ ಊರಿನ ಹೆಸರನ್ನೆಲ್ಲ ಸೇರಿಸಿ ಇವರ ಮಸಾಲೆಗಳು . ಹೈದ್ರಾಬಾದಿ,ಕೊಲ್ಲಾಪುರಿ , ಕಾಶ್ಮೀರಿ , ಪಂಜಾಬಿ , ಮತ್ತೆ ಅದರಲ್ಲೂ ಟಿಕ್ಕಾ, ಟುಕ್ಕ , ಹಂಡಿ ಹುಂಡಿ ಎಲ್ಲ ಸೇರಿಸಿ ಮತ್ತಿಷ್ಟು ಬಗೆ . ಉತ್ತರಭಾರತದಲ್ಲಿ ಹೋಟೆಲಿನಲ್ಲಿ ವೆಜ್ ಕೋಟೇಶ್ವರಿ , ದಾಲ್ ಗಂಗೊಳ್ಳಿ , ಪನ್ನೀರ್ ಬೈಂದೂರೀ ಎಲ್ಲ ಚಾಲ್ತಿಯಲ್ಲಿವೆಯೋ ಏನೋ..?? Menu ನ ಬಲಭಾಗದಲ್ಲೋ ಒಂದಂಕಿಯ ಸಂಖ್ಯೆ ಕಾಣಸಿಗದು . ಆಮ್ಲೆಟ್ ಪಕ್ಕದಲ್ಲಿ 60 /- ಬರೆದದ್ದನ್ನು ನೋಡಿ waiter ನನ್ನು ಕರೆದು "ಏನಪ್ಪಾ ... ಇಲ್ಲಿ ಆಮ್ಲೆಟ್ ಗೆ ಯಾವುದರ ಮೊಟ್ಟೆ ಹಾಕುತ್ತಾರೆ ಕೇಳಿದೆ . ಕೊಳೀದು ಸಾರ್ .. ಯಾಕೆ ??ಎಂದ . ಅಲ್ಲಪ್ಪಾ ಇಲ್ಲಿ 60 /- ಬರೆದಿದ್ದಾರೆ. ನಾನು ಉಷ್ಟ್ರ ಪಕ್ಷಿಯ ಮೊಟ್ಟೆ ತಿನ್ನುವುದಿಲ್ಲ ಅದಕ್ಕೆ ಕೇಳಿದೆ ಎಂದೆ .

ಒಮ್ಮೆ ಹಣ ಉಳಿಸುವ ಯತ್ನದಲ್ಲಿ ಸಂಖ್ಯಾಶಾಸ್ತ್ರ ಲೆಕ್ಕ ಹಾಕಿ ಕಡಿಮೆ ಹಣದ "ದಾಲ್ ತರ್ಡ್ ಕ್ಲಾಸ್ "( ದಾಲ್ ತಡ್ಕಾ ) ಆರ್ಡರ್ ಮಾಡಿದೆನು . ಹಿತ್ತಾಳೆ ಬಣ್ಣದ ಬಾಲ್ದಿಯಲ್ಲಿ ತೊವ್ವೆ ತಂದು ಕೊಟ್ಟರು . ಬಾಲ್ದಿಯೆಂದರೆ ... ಚಿಕ್ಕ ಮಕ್ಕಳು ಡ್ರಾಯಿಂಗ್ ಬುಕ್ ನಲ್ಲಿ ಚಿತ್ರ ಬಿಡಿಸುತ್ತಾರಲ್ಲ ಅಂಥ typical shape-size ನಲ್ಲಿತ್ತು . ಊಹಿಸಲು ಕಷ್ಟವಾಗುತ್ತಿದೆಯೇ ?? ಸರಿ .... ಹಮ್ .... ಹಾ .... ಸಾರ್ವಜನಿಕ ಶೌಚಾಲಯಗಳಲ್ಲಿ ಇರುತ್ತದಲ್ಲ .... ಹಾ ... ಅದೇ shape . ಕೆಳಗಡೆ ತೂತು ಇರಲಿಲ್ಲ ಅಷ್ಟೆ . ಕಷ್ಟಪಟ್ಟು ತಿಂದೆನು. ರಾತ್ರಿ ನಿದ್ದೆ ಬರಲಿಲ್ಲ . ಸೊಳ್ಳೆ ಪರದೆಯ ಸಣ್ಣ ಸಂದಿಯೊಳಗಿಂದ ಸೊಳ್ಳೆಗಳು ಶಿಸ್ತಿನ ಸಿಪಾಯಿಗಳಂತೆ march-fast ಮಾಡಿ ಒಳಗೆ ಬಂದು DTS ಸೌಂಡ್ ಎಫೆಕ್ಟ್ ನೊಂದಿಗೆ ಗುಂಯ್ ಗುಡುತ್ತಿವೆ . ಗುಡ್ ನೈಟ್ ನ liquid evaporator ನ್ನು perfume ಥರ ಬಳಸಿಕೊಳ್ಳುತ್ತಿವೆ . ಹೊಟ್ಟೆಯಲ್ಲಿ ದಾಲ್ ನ ಅಸಹಕಾರ ಚಳುವಳಿ ಚಾಲ್ತಿ . ಟಾಯ್ಲೆಟ್ ಗೆ ಹತ್ತಿರವಿರುವ ರೂಮಿಗೆ ಶಿಫ್ಟ್ ಆದೆನು . 24 ಗಂಟೆ ನನ್ನ ಕೈ ಒಣಗಲಿಲ್ಲ . ಮರುದಿನ ಹೋಟೆಲ್ ಗೆ ಹೋಗಿ "ಅಪ್ಪಾ ನಿಮ್ಮ ಹೋಟೆಲ್ owner ಎಲ್ಲಿದ್ದಾರೆ ಕೇಳಿದೆ . ಪಕ್ಕದ ಹೋಟೆಲಿಗೆ ಊಟಕ್ಕೆ ಹೋಗಿದ್ದಾರೆ ಸರ್ . ಎಂಬ ಉತ್ತರ ಬಂತು . ಪಕ್ಕದ ಹೋಟೆಲಿನಲ್ಲಿ "Our owner eats Here only " ಎಂಬ ಬೋರ್ಡ್ ನೋಡಿ ಸಂತೋಷವಾಯಿತು . ಅಂತೂ ನಾನು ಬಯಸಿದಂಥ ಹೋಟೆಲ್ ಸಿಕ್ಕಿತು ಎಂಬ ಸಂತೋಷದಿಂದ waiter ಬಳಿ ನಿಮ್ಮ Owner ಎಲ್ಲಿದ್ದಾರೆ ಎಂದು ಕೇಳಿದೆನು . ಇವತ್ತು ಬಂದಿಲ್ಲ ಸಾರ್ .... 3 ದಿನದಿಂದ ಸಿಕ್ಕಾಪಟ್ಟೆ ಹೊಟ್ಟೆನೋವು ಸಾರ್ ಅವ್ರಿಗೆ .... ಎಂಬ ಉತ್ತರ ಕೇಳಿ ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದೆ .

ಸರೀ ... ಒಳ್ಳೆ ಅಡುಗೆ ಮಾಡುವ ಹೆಂಡತಿಯಾದರೂ ಸಿಗಲೆಂದು ಹತ್ತಿರದ ರಾಮ ಮಂದಿರಕ್ಕೆ ಹೋಗಿ ದೇವರಲ್ಲಿ ಪ್ರಾರ್ಥಿಸಿದೆನು . ರಾಮನೋ " ನೋಡಪ್ಪ ಹೆಂಡತಿ ಹುಡುಕಿ ಕೊಡುವುದರಲ್ಲಿ ಅವನು expert , ನನ್ನ ಹೆಂಡತಿಯನ್ನು ಅವನೇ ಹುಡುಕಿ ಕೊಟ್ಟಿದ್ದು ಎಂದು ಹನುಮಂತನ ಬಳಿ ಕಳಿಸಿದನು. ಹನುಮಂತನ ಬಳಿ ಬಂದು "ದೇವಾ ... ಒಳ್ಳೆಯ ಗುಣದ, ನನ್ನನ್ನು ಅರಿತು ನಡೆಯುವ , ಒಳ್ಳೆ ಅಡುಗೆ ಮಾಡುವ ಹೆಂಡತಿಯನ್ನು ಕರುಣಿಸು ಎಂದು ಬೇಡಿಕೊಂಡೆನು " . ಲೇ ನಿಮ್ಮಜ್ಜಿ .... ಅಂಥ ಹುಡುಗಿ ಇದ್ದಿದ್ರೆ ನಾನ್ಯಾಕೋ ಬ್ರಹ್ಮಚಾರಿ ಆಗಿ ಇರ್ತಿದ್ದೆ ?? ಎಂಬ ಅಶರೀರವಾಣಿ ಮೊಳಗಿತು . ತಣ್ಣೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡು ಮನೆಗೆ ಹೋಗಿ ಅಮ್ಮ ಮಾಡಿದ ಗಂಜಿ - ಉಪ್ಪಿನಕಾಯಿ ತಿಂದು ಮಲಗಿದೆನು .

--------------------------------ವಿಕಟಕವಿ --------------------------------