Monday, October 27, 2008

ನೆನಪಿನ ಬುತ್ತಿಯಿಂದ........

ವಚನ ಬ್ರಹ್ಮ ಸರ್ವಜ್ಞ ಇಂದು ಬದುಕಿದ್ದು ಒಂದು ವೇಳೆ ನಮ್ಮ ಕಾಲೇಜಿನ ದರ್ಶನ ಮಾಡಿದ್ದಲ್ಲಿ
" ಜೇಸಿಯಲಿ ಸೀಟಿರಲು ಮೆಸ್ಸಿನಲಿ ಪ್ಲೇಟಿರಲು
ಹಾಸ್ಟೇಲಿನ ಬೆಡ್ಡಿನಲಿ ಮಲಗಿರಲು ಸ್ವರ್ಗವೂ
ಠುಸ್ಸ .... ಎಂದ - ಸರ್ವಜ್ಞ
ಎಂದು ಹೇಳುತಿದ್ದ ಎಂಬುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ .ನನ್ನ ಜೀವನದ ಅವಿಸ್ಮರಣೀಯ ಕಾಲ ಯಾವುದೆಂದು ಯಾರಾದರೂ ಕೇಳಿದರೆ ಈ ನಾಲ್ಕು ವರ್ಷಗಳ ಹಾಸ್ಟೇಲ್ ಜೀವನ ಎನ್ನಲು ಬಹಳ ಸಂತೋಷಪಡುತ್ತೇನೆ .

ಈಗ ನೀವೇ ನೋಡಿ, ನಮ್ಮ ಕಾಲೇಜಿನ End-to-End ದರ್ಶನ ಮಾಡಬೇಕಾದರೆ ಬಲ ತುದಿಯ Boys Hostel ನಿಂದ ಎಡ ತುದಿಯ Girls Hostel ತನಕ ನೋಡಬೇಕು .ಹೀಗೆ ಹಾಸ್ಟೇಲ್ ನೋಡದೆ ಜೇಸಿಯ ದರ್ಶನ ಪರಿಪೂರ್ಣವಾಗದು. ನನ್ನ ಎಲ್ಲ ಅನುಭವಗಳನ್ನು ಬರೆಯುತ್ತ ಹೋದರೆ ಒಂದು ಸಂಪುಟ ರಚಿಸುವಷ್ಟು ವಿಷಯಗಳಿದ್ದರೂ ಬಹಳ ಕಷ್ಟಪಟ್ಟು 2 ಪುಟಗಳಿಗೆ ಭಟ್ಟಿ ಇಳಿಸಿ ನನ್ನ ಅನುಭವ ಹಾಗೂ ಹಾಸ್ಟೇಲಿನ ಹಿರಿಮೆಯನ್ನು ಹಂಚಿಕೊಳ್ಳುವ ಕಿರುಪ್ರಯತ್ನ ಮಾಡಿದ್ದೇನೆ .

"ಪುಷ್ಪ ಮಹಲ್ " ನಲ್ಲಿ ಕಳೆದ ಮೊದಲನೆ ವರ್ಷ ನಿಜಕ್ಕೂ ಅವಿಸ್ಮರಣೀಯ ನೆನಪಿನ ಬುತ್ತಿ . ಮೊದಲ ಎರಡು ವಾರ ಹೊಸ ಮುಖಗಳ ಪರಿಚಯದಲ್ಲೇ ಕಳೆದರೂ ,ಒಂದೇ ತಿಂಗಳಿನಲ್ಲಿ ಎಲ್ಲರೂ ಪರಸ್ಪರ ಅಡ್ಡ ಹೆಸರಿನ ಸಂಬೋಧನೆ ಶುರು ಮಾಡಿದ್ದೆವು .ಜೆ.ಎಸ್.ಎಸ್ ,ಕೋಳ್ಯ,ಅನ್ಯ ,ಸ್ಲಮ್,ಸೇಟು,ಸೈಕೋ,ಹೈವಾನ್ ,ಜಾಂಬೂ,ದೇಸಿ, ದೊಡ್ಡು,ಕುಮಟಾ ಎಲ್ಲ ಈ ಗರಡಿಯವರೇ. ಕಾರಿಡಾರ್ ಕ್ರಿಕೆಟ್ ನಿಂದ ಹಿಡಿದು ರೋಡ್ ಲಗೋರಿಯವರೆಗೆ ಎಲ್ಲ ಆಟಗಳನ್ನು ಆಡಿದ್ದೆವು . ನಮ್ಮ ಆಟಗಳಿಗೆ ವಿಘ್ನವಾಗಿ ಬರುತ್ತಿದ್ದ ಸೆಕ್ಯುರಿಟಿಗೆ ರಾತ್ರಿ ೧೨ ಗಂಟೆಗೆ " ತಾತಪ್ಪ ಕಾಪಾಡೀ ....." ಎಂದು ಚೀರಿ ಅವರು ಮೇಲೆ ಹತ್ತಿ ಬರುವುದರೊಳಗೆ ಲೈಟ್ ಆಫ್ ಮಾಡಿ ಮಲಗುತ್ತಿದ್ದೆವು .9:30 ಕ್ಕೆ ನಿದ್ರಾದೇವಿಯ ವಶವಾಗುವವರಿಂದ ಹಿಡಿದು 3 ಗಂಟೆಯ ತನಕ TV channel ತಿರುಗಿಸಿ ನಿರಾಶರಾಗಿ ಮಲಗುವವರೂ ಇದ್ದರು . ತಾನು ತಂದ Super focus Bynacular ನಿಂದ ತನ್ನ ರೂಮಿನಿಂದ 281/2* ದಕ್ಷಿಣಕ್ಕೆ Focus ಮಾಡಿ Girls Hostel ಎಂದು ಭಾವಿಸಿ ಮನಸ್ಸಿನ ಮಂಡಿಗೆ ತಿನುತ್ತಿದ್ದ ಕೊಳ್ಯನಿಗೆ ಅದು ತಿರುಮಲ ಟವರ್ಸ್ ಎಂದು ತಿಳಿದ ಮೇಲೆ ಭಾರೀ ರಸಭಂಗವಾಗಿದ್ದು ದೇವರಾಣೆಗೂ ನಿಜ . 2 ರೂಪಾಯಿ ಚಂದಾ ವಸೂಲಿ ಮಾಡಿ ತಂದು ನೋಡಿದ ಸಿನೆಮಾಗಳಿಗೆ ಲೆಕ್ಕವೇ ಇಲ್ಲ . ಪಾಪದ ಮನೋಹರನಿಗೆ ನಾಲ್ಕು ಜನ ಕಣ್ಣು ಕೆಂಪು ಮಾಡಿ ಡಾನ್ಸ್ ಮಾಡಿಸಿದ್ದೂ ನಿಜ .ಮಾತಿಗೆರಡು ನಗೆ ಚಟಾಕಿ ಹೇಳುತ್ತಿದ್ದ ನಾನು ಜಗದ್ಗುರು ಸುಮಂತ ಶ್ಯಾನುಭಾಗನಾಗಿ P.J. ಪೀಠ ಸ್ವೀಕಾರ ಮಾಡಿದ್ದೂ ಇಲ್ಲೇ .

ಎರಡನೇ ವರ್ಷ ಕ್ಯಾಂಪಸ್ ಹಾಸ್ಟೆಲಿಗೆ ಆಗಮನ . ಪಂಚತಾರಾ ಹೋಟೆಲಿನಂತೆ ಇದ್ದ "ಪುಷ್ಪ ಮಹಲ್ " ನಿಂದ ಇಲ್ಲಿಗೆ ಬಂದು ಇಲ್ಲಿನ bathroom - toilet ನೋಡಿ ಮೂಗುಮುರಿದ ಸ್ನೇಹಿತರಿಗೆ ಸೀನಿಯರ್ ಗಳು "ಏನೋ ಹಾಸ್ಟೆಲಿಗೆ ಓದಲಿಕ್ಕೆ ಬರ್ತೀಯಾ ?? ಅಥವಾ ಸುಸ್ಸು ಮಾಡಕ್ಕೆ ಬರ್ತೀಯಾ?? ಎಂದಿದ್ದರು . ನಮಗೋ Branch entry ಯಾ ಸಂಭ್ರಮ . "ಗುಬಾಲ್" - "ಪಂಟ" ಹೊಸ ಶಬ್ದಗಳ ಪರಿಚಯ .ಪತ್ರಿಕೆಗಳಲ್ಲಿ ಪ್ರಕಟವಾದಂತೆ ಯಾವುದೇ ರೀತಿಯ ಅಹಿತಕರ Ragging ಘಟನೆಗಳು ಇಲ್ಲಿ ಎಂದಿಗೂ ನಡೆದಿಲ್ಲ .ಮೆಸ್ಸಿನ ಊಟಕ್ಕೆ ಲೊಟ್ಟೆ ಹೊಡೆದ ನಮಗೆ "ಹೊಸದರಲ್ಲಿ ಎಲ್ಲ ಹೀಗೆ .... ಎಂದು seniours ಎಚ್ಚರಿಸಿದ್ದರು .

"ಏಯ್ ...... ಒಂದ್ ಅತ್ನಿಮಿಸ ಕಾಯ್ಬೇಕು...... ನಾಗರಾಜನ ಆವಾಜ್ ಗೆ ಎದುರು ಮಾತಿಲ್ಲ . ಹೌದು ..... ಈಗ ನಾವಿರಿವುದು ಹಾಸ್ಟೆಲಿನ ಮೆಸ್ಸ್ ನಲ್ಲಿ . ಒಳಗೆ ಬರುತ್ತಿದ್ದಂತೆ ಸಿದ್ದಮಲ್ಲಪ್ಪ ಕಾಣುತ್ತಾರೆ . Long Account Book ನಲ್ಲಿ 24><7 ಲೈನ್ ಹೊಡೆಯುವುದೇ ಇವರ ಕೆಲಸ . ಅದು ಬಿಟ್ಟರೆ ನಾಗರಾಜನದ್ದೆ ದರ್ಬಾರು . "First Come First Serve" ಇವನ Principle . ಆದರೆ ಕೆಂಪ ಬಂದರೆ ಆವಾಜ್ ಹಾಕಿದವರಿಗೆ ಮೊದಲು ಚಪಾತಿ . ಇವರೊಂದಿಗೆ ಕೆಲಸದಲ್ಲಿ ಮಲ್ಲಪ್ಪನದ್ದೂ ಒಂದು ಪಾಲು . ಆದರೆ ಗಿರೀಶ ಮಹೇಶ ಶಾರುಕ್ ಇವರಿಗೆ ಮೆಸ್ಸ್ ಕೆಲಸಕ್ಕಿಂತ Mobile RingTone ಕೆಲಸಗಳೇ ಹೆಚ್ಚು .ಇನ್ನು ಮೆಸ್ಸಿನಿಂದ ಹೊರಗೆ ಬಂದರೆ ಪ್ಲೇಟ್ ಗೋಸ್ಕರ ಕಾಯುತ್ತಿರುವವರ ದಂಡು . ದಿನಕ್ಕೊಂದು ಪ್ಲೇಟ್ ನಲ್ಲಿ ಊಟ ಮಾಡುವವರು ಕೆಲವರಾದರೆ ತಮ್ಮ ಮೊದಲ ವರ್ಷದ ಪ್ಲೇಟನ್ನೇ ಧರ್ಮಪತ್ನಿಯಂತೆ ಕಾಪಾಡಿಕೊಂಡು ಬರುವವರೂ ಇದ್ದಾರೆ . ಇವರು ತಮ್ಮ Room Number ,Address ಎಲ್ಲಾ ಕೊಟ್ಟೂ ಪ್ಲೇಟ್ ಹಿಂದಿರುಗಿ ಬರದಿದ್ದಾಗ Police Complaint/Paper Advertisement ಬಿಟ್ಟು ಬಾಕಿ ಎಲ್ಲಾ ರೀತಿಯ Enquiry ಮಾಡುತ್ತಿದ್ದರು .

ಇನ್ನು ಮೂರನೇ ವರ್ಷ ಎಲ್ಲರಿಗೂ Placement ಗರ್ಮಿ ಹತ್ತಿತ್ತು . 5 ನೇ ಸೆಮ್ ಕೊನೆಯಲ್ಲಿ mini .micro,major Project ಶುರು ಮಾಡಿದವರು ಕೆಲವರಾದರೆ CAT/CRT ಎಂದು ಟೈಮ್ ಕ್ಲಾಸಿಗೆ ಇನ್ನೊಂದು ಪಾಳಿ . Project ಶುರು ಮಾಡಿದವರು Complete ಮಾಡಿದ್ದನ್ನು ನಾನು ಇದುವರೆಗೂ ಕಂಡಿಲ್ಲ . ಮೆಸ್ಸಿನಲ್ಲಿ ನಾವೇನು Junior ಗಳನ್ನೇ ತಿನ್ನಲು ಹೋಗುತ್ತೇವೋ ಎಂಬಂತೆ ನಾಗರಾಜ್ &Co ಇವರಿಂದ Junior ಗಳಿಗೆ ಸರ್ಪಗಾವಲು . ನಾವೋ "ಮೆಸ್ಸಿಗೆ ಬಂದವನು ಡೌನ್ಸ ಗೆ ಬರದೆ ಇರ್ತಾನಾ ...?? " ಎಂದು ಮನಸ್ಸಿನಲ್ಲೇ ನಗುತ್ತಿದ್ದೆವು . ಹೀಗೆ ಜೇಸಿಯಾನ, "ಮಂಡೇಲಾ ..... ಓಹೋಹೋ ..... " "ಅಷ್ಟೆ ಅಷ್ಟೆ " ,"ಆಗ್ ಹೋಗ್ಲಿ ",ಲಕಾ ರೆ ಲಕಾ ಲಕಾ ಲಕಾ ... ಹೂ ಹಾ ಹೂ ಹಾ ..... ಕೇಕೆಗಳ ನಡುವೆ ,Trip ,Placement.Treat ಗಳೊಂದಿಗೆ 3 ನೇ ವರ್ಷವೂ ಕಳೆಯಿತು .

ಈಗ ಕೊನೆಯ ವರ್ಷ ಇಂಜಿನಿಯರಿಂಗ್ ಜೀವನದ ಸನ್ಯಾಸಾಶ್ರಮ . ಕಾಲೇಜಿನಲ್ಲಿ ಸೀನಿಯರ್ ಪಟ್ಟ . IEEE, CSI, Student Council ಗಳಲ್ಲಿ ಸ್ಥಾನ ಗಳಿಸಿ Stud ಗಳಾಗುವ ಬಯಕೆ ಕೆಲವರಿಗಾದರೆ Dream Job ನ ಕನಸಿನಲ್ಲಿ ಕೆಲವರು . ಉಳಿದವರೋ " ಏನ್ ಮಚ್ಚಾ .... 4 ವರ್ಷ ಆಯ್ತು ಇನ್ನೂ ಒಂದ್ ಹುಡುಗೀನ್ನ ಪಟಾಯ್ಸಿಲ್ಲ" ಎಂದು ನಿಟ್ಟುಸಿರಿಟ್ಟು ಯಂಪಾ ದಲ್ಲಿ ಒಂದು ಛೊಟಾ ಟೀ ಹೇಳಿ 3 ಗಂಟೆ ಅಲ್ಲೇ ಕೂತು ಅಲ್ಲಿಗೆ ಬರದೆ ಇರುವವರನ್ನು ಕಾಯುತ್ತಿದ್ದರು .

ಹೀಗೆ ನಮ್ಮ seniour ಗಳಿಗೆ ವಿದಾಯ ಹೇಳಿದ ನೆನಪು ಹಸಿರಾಗಿರುವಾಗಲೇ ನಮ್ಮ Ticket Ready ಆಗಿದೆ. ತುಂಬು ಉತ್ಸಾಹದಿಂದ ಬರೆಯಲು ಶುರುಮಾಡಿದ ನನ್ನ ಹೃದಯ ಏಕೋ ಭಾರವಾಗಿದೆ . ಗೇಟು ದಾಟಿದ ಮೇಲೆ ಒಮ್ಮೆ ಹಿಂದಿರುಗಿ ನೋಡಿದರೆ ಹಾಸ್ಟೇಲಿನ ಸಿಹಿ ನೆನಪುಗಳಿಂದಲೇ ಕಣ್ಣು ಮಂಜಾಗುವುದು . ಈ ನಾಲ್ಕು ವರ್ಷಗಳ ಕಾಲ ನಮಗೆ ಆಶ್ರಯ ನೀಡಿದ ಹಾಸ್ಟೆಲ್ ಗೂ ವಿದ್ಯೆ ನೀಡಿದ ಕಾಲೇಜು ಹಾಗೂ ಅಧ್ಯಾಪಕರಿಗೂ ಪ್ರೀತಿ -ವಿಶ್ವಾಸ ತೋರಿದ ನನ್ನ ಗೆಳೆಯ ಗೆಳತಿಯರಿಗೂ ಭಾವಪೂರ್ಣ ವಿದಾಯ ಹಾಗೂ ಎಲ್ಲರಿಗೂ ನನ್ನ Jadoo Ki Chappi .

---ವಿಕಟಕವಿ ----

Monday, October 13, 2008

ಸೌಂದರ್ಯೋಪಾಸನೆ

**********************************************************************************
ಸೈಕಲ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮನಿಸಲೇಬೇಕೆಂಬ ಹಠ ತೊಟ್ಟಿದ್ದಳೋ ಏನೋ , ಏರುದನಿಯಲ್ಲಿ ಅವಳ ಮಾತು - ನಗು ಸಾಗಿತ್ತು .ಆದರೂ ನಾನು ಗಮನಿಸದವನಂತೆ ನಿಂತಿದ್ದೆನು. ಆದರೆ ಅವಳೂ ಬಿಡದೆ ಹತ್ತಿರ ಬಂದು ಟೈಮ್ ಎಷ್ಟು ಎಂದು ಕೇಳಿದಳು .ನಾನು 4:20 ಎಂದೆನು. ಅದಕ್ಕವಳು ನಿಮ್ಮ ವಾಚ್ 10 ನಿಮಿಷ ಮುಂದಿದೆ ಸರಿಮಾಡಿಕೊಳ್ಳಿ ಎಂದು ಹೇಳಿ ಗೆಳತಿಯರೊಡನೆ ನನ್ನನ್ನು ಅಣಕಿಸುತ್ತಾ ನಡೆದಳು . ಮತ್ತೆ ಹಿಂದಿರುಗಿ " ಕ್ಷಮಿಸಿ , ನೀವು ಕವನ ಬರೆಯುತ್ತೀರಲ್ಲಾ ??" ಎಂದು ಕೇಳಿದಳು .ನಾನು ಇವಳು ಎಲ್ಲೋ ನನ್ನ ಕವನಗಳನ್ನು ಓದಿರಬೇಕೆಂದುಕೊಂಡು ಪ್ರಶಂಸೆಯನ್ನು ನಿರೀಕ್ಷಿಸುತ್ತಾ ಹೌದು ಎಂದೆನು. ಆಗ ಅವಳು " ನನ್ನ ಬಗ್ಗೆ ಕವನ ಬರೆಯುತ್ತೀರಾ ?" ಎಂದು ವ್ಯಂಗ್ಯವಾಗಿ ಅನುನಾಸಿಕದಲ್ಲಿ ಕುಹಕವಾಡುತ್ತಾ ಹೋದಳು . ಹೀಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎರಡು ಬಾರಿ ನನ್ನನ್ನು ತಬ್ಬಿಬ್ಬಾಗಿಸಿ ಹೋದಳು . ನನಗೋ ಕೆಟ್ಟ ಕೋಪ ಬಂತು . ಅವಳ ಸೊಕ್ಕನಡಗಿಸಿ ನನ್ನ ಲೇಖನಿ ಎಷ್ಟು ಹರಿತ ಎಂದು ಅವಳಿಗೆ ಮನದಟ್ಟು ಮಾಡುವ ಸಂಕಲ್ಪ ತೊಟ್ಟೆನು .
ಮರುದಿನ ಬೆಳಿಗ್ಗೆ ಎದ್ದವನೇ ದಿನಪತ್ರಿಕೆಯ ಗ್ರಹಗತಿ ಅಂಕಣದ ಮೇಲೆ ಕಣ್ಣಾಡಿಸಿದೆ . ನನ್ನ ಭವಿಷ್ಯದಲ್ಲಿ ಸುಂದರ ಸಂಜೆ ಎಂದು ಬರೆದಿತ್ತು . ಮೊದಲೇ ನನ್ನದು ಕನ್ಯಾರಾಶಿ ....... ಹೀಗೆ ಸಾವಿರ ಕನಸುಗಳ ಸ್ವಪ್ನಲೋಕದಲ್ಲಿ ತೇಲುತ್ತಾ ಕ್ಯಾಂಟೀನ್ ಕಡೆಗೆ ಹೋಗುತ್ತಿದ್ದೆನು. ಆ ಸೈಕಲ್ ಸ್ಟ್ಯಾಂಡ್ ಹುಡುಗಿ ಗೆಳತಿಯರೊಡನೆ ಬರುತ್ತಿದ್ದಳು . ಮೊದಲನೆ ಬಾರಿ ಅವಳನ್ನು ಅಷ್ಟಾಗಿ ಗಮನಿಸಿರಲಿಲ್ಲ . ಈಗ ಒಮ್ಮೆ ಆಪಾದಮಸ್ತಕ ಗಮನಿಸಿದೆನು . ಒಮ್ಮೆಲೇ ಕಣ್ಣಿಗೆ ಕತ್ತಲೆ ಕವಿದಂತಾಯಿತು . ನೆರಳಿನಲ್ಲಿ ಕುಳಿತು ಸ್ವಲ್ಪ ಸುಧಾರಿಸಿಕೊಂಡೆನು .ನಾನು ರಾಹುಕಾಲದಲ್ಲಿ ಎದ್ದೆನೋ ಅಥವಾಆ ಜ್ಯೋತಿಷಿ ಯಾವ ಡಿಫೆಕ್ಟಿವ್ ಕವಡೆ ಉರುಳಿಸಿ ಗುಣಾಕಾರ ಹಾಕಿದನೋ ತಿಳಿಯದು , ನನ್ನ ದಿನಭವಿಷ್ಯ ತಲೆಕೆಳಗಾಗಿತ್ತು . ಆಕೆಯನ್ನು ನೋಡುತ್ತಿದ್ದಂತೆ ನಮ್ಮ ಕುಲಪುರೋಹಿತ ನಾಗೇಶ ಭಟ್ಟರು ಹೇಳುತ್ತಿದ್ದ ಮಾರಿಯಮ್ಮ ಜಟಕಾ ಉಮ್ಮಲ್ತಿ ಭೂತಗಳ ಚಿತ್ರಣ ಸ್ಲೋ ಮೋಶನ್ ನಲ್ಲಿ ಸ್ಮ್ರತಿಪಟಲದಲ್ಲಿ ಹಾದುಹೋಯಿತು . ಆದರೂ..... ಅವಮಾನ .... ಸೇಡು... ಬಿಡಲಾಗುತ್ತದೆಯೇ ?? ಆಕೆಯ ಬಗ್ಗೆ ಬರೆಯಬೇಕೆಂದರೆ ಮಾಹಿತಿ ಬೇಕು . ಹಾಗೋ ಹೀಗೋ ಹುಚ್ಚು ಧೈರ್ಯ ಮಾಡಿಕೊಂಡು ಬಾಲ್ಯದಲ್ಲಿ ಅಪ್ಪನ ಒತ್ತಾಯಕ್ಕೆ ಮಣಿದು ಕಂಠಪಾಠ ಮಾಡಿದ್ದ ರಾಮರಕ್ಷಾ ಸ್ತೋತ್ರ ಪಠಿಸುತ್ತಾ ಆಕೆಯ ಬಳಿ ಹೋದೆನು .

Excuse me ...... ಎಂದೆನು .ಅದಕ್ಕವಳು Yes... What can i do for u ?? ಎಂದು ವ್ಯಂಗ್ಯವಾಗಿ ನಕ್ಕಳು . ಅವಳ ದ್ವನಿಯನ್ನು ಕೇಳಬೇಕಿತ್ತು ........ ನಾನು ಉಪಮೆಯಲ್ಲಿ ಸ್ವಲ್ಪ weak .... ಆದರೂ ಶಕ್ತಿ ಮೀರಿ ಉಪಮೆ ಕೊಡುವುದಾದರೆ 3 ದಿನ ಉಪವಾಸವಿದ್ದ ನಾಯಿಗೆ ಕಲ್ಲು ಹೊಡೆದರೆ ಅದು ಅಳುವ ದ್ವನಿಯನ್ನು ಹೋಲುತ್ತಿತ್ತು . ನಿನ್ನ ಹೆಸರೆನಮ್ಮಾ ........?? ಎಂದು ಕೇಳಿದೆನು . "ಶುಭಾಂಗಿ" ಎಂದು ಉಲಿದಳು. ಇಂತಹ ಸುಂದರ ಶಬ್ದಗಳ ಅಪಪ್ರಯೋಗದಿಂದ ಕನ್ನಡಮ್ಮನ ಮೇಲಾಗುತ್ತಿದ್ದ ಅವ್ಯಾಹತ ಶೋಷಣೆಗೆ ಮರುಗಿದೆನು . ಯಾರಮ್ಮಾ ಈ ಹೆಸರಿಟ್ಟಿದ್ದು ?? ಎಂದು ಕೇಳಿದೆನು .ಅದಕ್ಕವಳು ನನ್ನ ಹಿರಿಯಕ್ಕನ ಹೆಸರು ಶ್ವೇತಾಂಗಿ ಎರಡನೇ ಅಕ್ಕ ಲತಾಂಗಿ ಹೀಗೆ ಕರೆಯಲು ಪ್ರಾಸಬದ್ದ ಹಾಗೂ ಇಂಪಾಗಿರಲೆಂದು ನನ್ನ ಅತ್ತೆ ನನಗೆ ಶುಭಾಂಗಿ ಎಂದು ಹೆಸರಿಟ್ಟರು ಎಂದಳು . ಪ್ರಾಸದ ಅಷ್ಟೊಂದು ಹುಚ್ಚಿದ್ದರೆ "ಕೋಡಂಗಿ " ಎಂದಾದರೂ ಹೆಸರಿಡಬಹುದಾಗಿತ್ತು ಎಂದು ಯೋಚಿಸಿದೆನು .

ನಿನ್ನ ವಯಸ್ಸೆಷ್ಟು ?? ಎಂದು ಕೇಳಬಾರದ ಪ್ರಶ್ನೆಯನ್ನು ಕೇಳಿಬಿಟ್ಟೆನು . ಅವಳು ಸ್ವಲ್ಪ ದುರುಗುಟ್ಟಿ ನೋಡಿ 21 ವರ್ಷ ಕೆಲವು ತಿಂಗಳು ಮತ್ತು ಕೆಲವು ದಿನ ಎಂದಳು . ನಾನು ಇನ್ನೂ ನೇರವಾಗಿ ಎಷ್ಟು ತಿಂಗಳು ಎಷ್ಟು ದಿನ ಎಂದು ಕೇಳಿದೆನು . 37 ತಿಂಗಳು 420 ದಿನ ಎಂದು ಉತ್ತರ ಬಂದಿತು . ಇಷ್ಟು ಹೇಳಿ ಆಕೆ ನೀರು ಕುಡಿಯುವ ನೆಪದಿಂದ ಆಚೆ ಹೋದಳು .ನಾನು ಆಕೆಯ ಸ್ನೇಹಿತೆಯರಿಂದ ಈ ವಿಚಾರಗಳನ್ನು ತಿಳಿದೆನು ....

ಸೆಪ್ಟೆಂಬರ್ 11 ನೇ ತಾರೀಕು "ಕುದುರೆಮುಖ" ದಲ್ಲಿ "ಮೃಗಶಿರಾ" ನಕ್ಷತ್ರದಲ್ಲಿ ಈಕೆಯ ಜನನವಾಯಿತು .ಬ್ರಹ್ಮ ಆ ದಿನ ಕೆಟ್ಟ ಮೂಡ್ ನಲ್ಲಿದ್ದ ಎಂದು ಕಾಣುತ್ತದೆ ,ಇವಳ assembly ಯಲ್ಲಿ ತುಂಬಾ ತಪ್ಪು ಮಾಡಿಬಿಟ್ಟ. ಹೆಸರು ಕೇವಲ ಅಂಕಿತವಾಗಿದ್ದರೂ ಊರು ನಕ್ಷತ್ರಗಳು ಅನ್ವರ್ಥವಾಗಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರಿಟ್ಟೆನು . ಹಾಗೂ WTC ದುರಂತಕ್ಕೆ ಎರಡು ದಶಕಗಳ ಹಿಂದೆ ಭಾರತದಲ್ಲಾಗಿದ್ದ ಈ ದುರಂತಕ್ಕೆ ಅಷ್ಟು ಪ್ರಚಾರ ಯಾಕೆ ಸಿಗಲಿಲ್ಲವೆಂದು ಯೋಚಿಸಿದೆನು .

ಇವಳ ಜನನವಾದ ತಕ್ಷಣ ಇವಳ ತಾಯಿಯ ಶುಶ್ರೂಷೆಯಲ್ಲಿದ್ದ ನರ್ಸ್ ಕಿಟಾರೆಂದು ಕಿರುಚಿ ಪ್ರಜ್ಞಾಹೀನಳಾಗಿದ್ದಳಂತೆ . ಆಮೇಲೆ ಶಾಕ್ ಟ್ರೀಟ್ ಮೆಂಟ್ ನಿಂದ ಸರಿಪಡಿಸಿದರಂತೆ . ಮೊನ್ನೆ ಇವಳು ಬೆಂಗಳೊರಿಗೆ ಹೋದಾಗ NASA ವಿಜ್ಞಾನಿಯೊಬ್ಬ ಇವಳನ್ನು ಅನ್ಯಗ್ರಹವಾಸಿಯೆಂದು ತಿಳಿದು ಹಿಡಿಯಲು ಹೋಗಿ ಜನರಿಂದ ಧರ್ಮದೇಟು ಹೊಡೆಸಿಕೊಂಡನಂತೆ. "Koi Mil Gaya" ಸಿನೆಮಾ ನೋಡಿ ಬಂದ ಈಕೆಯ ನೆರೆಹೊರೆಯ ಮಕ್ಕಳು ಈಕೆಯನ್ನು ಜಾದೂ ...... ಎಂದು ಕರೆದು ಮಾಯ-ಮಂತ್ರ ಮಾಡಲು ಪೀಡಿಸುತ್ತಿದ್ದರಂತೆ . ಇವಳು ಒಮ್ಮೆ ಮೈಸೂರು ಮೃಗಾಲಯಕ್ಕೆ ಹೋದಾಗ ಅಲ್ಲಿದ್ದ ಗೊರಿಲ್ಲಾವೊಂದು ಇವಳು ಕಣ್ಣಿಗೆ ಕಾಣುವಷ್ಟು ಕಾಲ ಇವಳನ್ನೇ ದುರುಗುಟ್ಟಿ ನೋಡಿದ್ದಲ್ಲದೆ ಬಳಿಕ 2 ದಿನ ಇವಳ ನೆನಪಿನಲ್ಲಿ ನಿದ್ರಾಹಾರಗಳನ್ನು ತ್ಯಜಿಸಿದ್ದು ವಿಚಿತ್ರವಾದರೂ ಸತ್ಯ .

ಆಕೆಯ ಕಣ್ಣುಗಳು ಕಮಲದ ಹೂವಿನಂತೆ ಇತ್ತು . ತುಟಿ ತೊಂಡೆ ಹಣ್ಣಿನಂತೆ ಇತ್ತು ನಿಜ ... ಆದರೆ ಯಾವ ಹಣ್ಣು - ಹೂವು ತಾನೆ 25 ವರ್ಷ ತಾಜಾ ಇರುತ್ತದೆ ನೀವೇ ಹೇಳಿ ..... ಮಾತಿನ ಮಧ್ಯೆ ಅವಳೊಮ್ಮೆ ಮುಗುಳ್ನಕ್ಕಳು ನೋಡಿ ....... ನನಗೆ ಬ್ರಹ್ಮಾಂಡ ದರ್ಶನವಾಯಿತು . 5 ಜನ ದಂತವೈದ್ಯರು ಒಂದು ತಿಂಗಳ ಅಹರ್ನಿಶಿ ಕ್ಯಾಂಪ್ ಹಾಕಿ ಮಾಡುವಷ್ಟು ಕೆಲಸ ಅಲ್ಲಿತ್ತು . Asian Paint ನ ಕಲರ್ ಲ್ಯಾಬ್ ನಲ್ಲಿ ಇಲ್ಲದ ಕೆಲವು ಬಣ್ಣಗಳು ಆಕೆಯ ದಂತಪಂಕ್ತಿಯಲ್ಲಿದ್ದವು . ಒಮ್ಮೆ ಇವಳ ದಂತಚಿಕಿತ್ಸೆಗೆ ಬಂದ ವೈದ್ಯರು ತಲೆ ತಿರುಗಿ ಬಿದ್ದು ಆಮೇಲೆ ಅವರಿಗೆ ಕಣ್ಣು - ಮೂಗುಗಳಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟು ICU ದಲ್ಲಿ admit ಮಾಡಿದ್ದರಂತೆ . ಇದರ ನಂತರ ಉಳಿದ ದಂತವೈದ್ಯರು No Risk Ceritificate ತರದೇ ಈಕೆಯ ಚಿಕಿತ್ಸೆಗೆ ಒಪ್ಪುವುದಿಲ್ಲವೆಂದು ಶಪಥ ತೊಟ್ಟಿದ್ದಲ್ಲದೆ ಈಕೆ ನಗುವುದರ ವಿರುದ್ಧ ಕೋರ್ಟ್ ನಿಂದ Stay-Order ತಂದಿದ್ದಾರಂತೆ !!! ಮೊನ್ನೆ ಇವಳು ತನ್ನ ಸಂಬಂಧಿಯೊಬ್ಬರನ್ನು ನೋಡಲು ಪೋಲೀಸ್ ಸ್ಟೇಶನ್ ಗೆ ಹೋದಾಗ ಅಲ್ಲಿ ಜೈಲಿನಲ್ಲಿದ್ದ ಭಾರಿ ಭಯೋತ್ಪಾದಕ ಸತ್ಯವನ್ನೆಲ್ಲಾ ಹೇಳಲು ಒಪ್ಪಿದನಂತೆ . ಇದನ್ನು ತಿಳಿದ ಮಾನವ ಸಂಘಟನೆಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು .

ಇಷ್ಟರಲ್ಲಿ ಅವಳು ಪದೇ ಪದೇ ವಾಚ್ ನೋಡುತ್ತಿದ್ದುದನ್ನು ನಾನು ಗಮನಿಸಿದೆ . ಯಾಕೆ ಎಲ್ಲಾದರೂ ಹೋಗುವುದಿದೆಯಾ ?? ಎಂದು ಕೇಳಿದೆನು .ಹೌದು ಕಳೆದ ತಿಂಗಳು ತನ್ನ ನಿಶ್ಚಿತಾರ್ಥವಾಗಿದ್ದು ,ಎಪ್ರಿಲ್ 1 ರಂದು ತನ್ನ ಮದುವೆಯಿದೆ ,ಈ ದಿನ ತನ್ನ ಭಾವೀ ಪತಿಯೊಂದಿಗೆ Date Fix ಆಗಿದೆ ಎಂದಳು . ಆ ಮಹಾನುಭಾವನ ಗ್ರಹಚಾರಕ್ಕೆ ಕನಿಕರಿಸುತ್ತಾ ,ನಿನ್ನ ಭಾವೀ ಪತಿ ಏನು ಮಾಡುತ್ತಿದ್ದಾನೆ ?? ಎಂದು ಕೇಳಿದೆನು . ನಾಚಿಕೆಯಿಂದ ಓಡಿ ಹೋದಳು . ಕೆನ್ನೆಗಳು ಕೃಷ್ಣವರ್ಣದವಾಗಿದ್ದರಿಂದ ಕೆಂಪೇರಿದ್ದು ಕಾಣಿಸಲಿಲ್ಲ . ಅವಳ ಭಾವೀ ಪತಿ "ಪ್ರಾಣಿ ದಯಾ ಸಂಘದ ಅಧ್ಯಕ್ಷ " ಎಂದು ಅವಳ ಗೆಳತಿಯರಿಂದ ತಿಳಿಯಿತು . ಆದರೆ ಅವಳಿಗಾಗಿ ಬರೆದ " ಈ ಹಲಸಿನ ಹಣ್ಣಿನಂಥ ಹುಡುಗಿ ಬಂತು ನೋಡು " ಎಂಬ ಕವನದ ಬಗ್ಗೆ ಅವಳಿಗೆ ಹೇಳಲು ಮರೆತೇ ಹೋಗಿತ್ತು .


***********************************************************--ವಿಕಟಕವಿ ****

Wednesday, October 8, 2008

JCE ROCKS!!!!!

************************************************************
ಸುತ್ತ ಕವಿದಿರೆ ಅಂಧಕಾರವು
ಮತ್ತೆ ಇರದಿರೆ ಜ್ಞಾನದೀಪವು
ಬಿತ್ತಿದರು ಸುತ್ತೂರು ಸ್ವಾಮಿಗಳಿಲ್ಲಿ ಬೆಳಕನ್ನು ||
ಕತ್ತಲದು ಕಾಲ್ಕಿತ್ತು ಓಡಿತು
ಮತ್ತೆ ಹರಿಯಿತು ಜ್ಞಾನದೀಪ ಸ
ಮಸ್ತ ಲೋಕಕೆ ಬೆಳಕು ಬೀರಿದ ನಿಮಗೆ ವಂದಿಪೆವು ||

ಮಾನವನೋ ?? ಇವ ದೇವದೂತನೋ ??
ನಾನು ಅರಿಯೆನು ಇದನು ದಿಟದಿಂ
ಜ್ಞಾನಸಾಗರ ಹರಿಸಿದೀತನು ದೇವನವತಾರಿ ||
ಜ್ಞಾನಶಿಖರದ ತುತ್ತತುದಿಯಲಿ
ಮಿನುಗು ತಾರೆಯ ತೆರದಿ ಮಿನುಗುತ
ಜನರ ಮನದೊಳು ಮನೆಯ ಮಾಡಿದೆ ನಮ್ಮ ಜೆ ಸಿ ಇ ||

ನುರಿತ ಅಧ್ಯಾಪಕರ ತಂಡವು
ಸರುವಸಜ್ಜಿತ ಪ್ರಯೋಗಾಲಯ
ಗರುವದಲಿ ನಾ ಹೇಳಿಕೊಳ್ಳುವೆ ಎಲ್ಲ ಇಲ್ಲಿಹುದು ||
ಗರಡಿ ಮನೆಯಿದು ಹೊರಗೆ ತರುವುದು
ತರುಣ ಪ್ರತಿಭೆಗಳನ್ನು ವರುಷಕು
ಧರಣಿಮಂಡಲದೆಲ್ಲೆಡೆಯಲಿಹರಿದರ ಆತ್ಮಜರು ||

ಜೇಸಿ ಮಹಿಮೆಯ ಹೇಳ ಹೋದರೆ
ಮಾಸಗಳು ಹಲವಾರು ಸಾಲದು
ಮೀಸೆ ತಿರುವುತ ಹೇಳುವೆನು ನಾ ನಾನು ಜೇಸಿಯವ||
ಹಾಸು ಹೊಕ್ಕಿದೆ ಇದರಲೆಲ್ಲವು
ಪ್ಲೇಸುಮೆಂಟಾಗುವುದು ಖಚಿತವು
ಏಸು ಜನುಮದ ಪುಣ್ಯವೋ ?? ನಾನಿಲ್ಲಿ ಬಂದಿರುವೆ ||

**********************************************---ವಿಕಟಕವಿ

Tuesday, October 7, 2008

ನಂಬಿ ಕೆಟ್ಟವರು

******************************************************
ಹಣವ ಗಳಿಸಿದೆ ಬೆವರ ಸುರಿಸುತ
ರಣದ ಸೈನಿಕನಂದದಿಂ ಕಂ
ಕಣವ ತೊಟ್ಟೆನು ಮನೆಯ ಕಟ್ಟಲು ನಮ್ಮ ಊರಿನಲಿ||
ತೃಣದಿ ನಾ ಕಂಡೆನು ಸುಖವ ಚಣ
ಚಣವು ಕಷ್ಟದಿ ದುಡಿದೆ ನಾ ಕಡಿ
ವಾಣವಿಕ್ಕಿದೆ ನನ್ನ ಖರ್ಚಿಗೆ ಗುರಿಯ ಸಾಧಿಸಲು ||

ಚಲಿಸಿದೆನು ಕಾಲ್ಗಳಲಿ ನಡೆಯುತ
ಉಳಿಸಿದೆನು ಹಣವನ್ನು ವ್ಯಯಿಸದೆ
ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ||
ಮುಳುಗಿ ಹೋಯಿತು ಎಲ್ಲ ಹಣ ನಾ
ಕಳೆದುಕೊಂಡೆನು ನನ್ನ ಕನಸನು
ಹಳಿದುಕೊಂಡೆನು ಹಲುಬಿದೆನು ನಾ ನನ್ನ ದುರ್ವಿಧಿಗೆ ||

ಹರನು ಮೆಚ್ಚುವುದಿಲ್ಲ ಇವರನು
ನರರು ಚಚ್ಚದೆ ಬಿಡುವರೆನ್ ಸರ
ಕಾರ ಕಣ್ಣನು ಮುಚ್ಚಿಕೊಳ್ಳುತ ಶಿಕ್ಷೆ ಕೊಡದಿರಲು||
ಪರರ ಸೊತ್ತನು ದೋಚುತಿಹ ತಸ್
ಕರರ ನಂಬಿದ ನಾವು ಕೆಟ್ಟೆವು
ಕರುಮವೆಮ್ಮದು ಎನುತ ನಾವ್ಗಳು ಸಹಿಸಿಕೊಳಬೇಕು ||


************************************--ವಿಕಟಕವಿ