Monday, October 13, 2008

ಸೌಂದರ್ಯೋಪಾಸನೆ

**********************************************************************************
ಸೈಕಲ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮನಿಸಲೇಬೇಕೆಂಬ ಹಠ ತೊಟ್ಟಿದ್ದಳೋ ಏನೋ , ಏರುದನಿಯಲ್ಲಿ ಅವಳ ಮಾತು - ನಗು ಸಾಗಿತ್ತು .ಆದರೂ ನಾನು ಗಮನಿಸದವನಂತೆ ನಿಂತಿದ್ದೆನು. ಆದರೆ ಅವಳೂ ಬಿಡದೆ ಹತ್ತಿರ ಬಂದು ಟೈಮ್ ಎಷ್ಟು ಎಂದು ಕೇಳಿದಳು .ನಾನು 4:20 ಎಂದೆನು. ಅದಕ್ಕವಳು ನಿಮ್ಮ ವಾಚ್ 10 ನಿಮಿಷ ಮುಂದಿದೆ ಸರಿಮಾಡಿಕೊಳ್ಳಿ ಎಂದು ಹೇಳಿ ಗೆಳತಿಯರೊಡನೆ ನನ್ನನ್ನು ಅಣಕಿಸುತ್ತಾ ನಡೆದಳು . ಮತ್ತೆ ಹಿಂದಿರುಗಿ " ಕ್ಷಮಿಸಿ , ನೀವು ಕವನ ಬರೆಯುತ್ತೀರಲ್ಲಾ ??" ಎಂದು ಕೇಳಿದಳು .ನಾನು ಇವಳು ಎಲ್ಲೋ ನನ್ನ ಕವನಗಳನ್ನು ಓದಿರಬೇಕೆಂದುಕೊಂಡು ಪ್ರಶಂಸೆಯನ್ನು ನಿರೀಕ್ಷಿಸುತ್ತಾ ಹೌದು ಎಂದೆನು. ಆಗ ಅವಳು " ನನ್ನ ಬಗ್ಗೆ ಕವನ ಬರೆಯುತ್ತೀರಾ ?" ಎಂದು ವ್ಯಂಗ್ಯವಾಗಿ ಅನುನಾಸಿಕದಲ್ಲಿ ಕುಹಕವಾಡುತ್ತಾ ಹೋದಳು . ಹೀಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎರಡು ಬಾರಿ ನನ್ನನ್ನು ತಬ್ಬಿಬ್ಬಾಗಿಸಿ ಹೋದಳು . ನನಗೋ ಕೆಟ್ಟ ಕೋಪ ಬಂತು . ಅವಳ ಸೊಕ್ಕನಡಗಿಸಿ ನನ್ನ ಲೇಖನಿ ಎಷ್ಟು ಹರಿತ ಎಂದು ಅವಳಿಗೆ ಮನದಟ್ಟು ಮಾಡುವ ಸಂಕಲ್ಪ ತೊಟ್ಟೆನು .
ಮರುದಿನ ಬೆಳಿಗ್ಗೆ ಎದ್ದವನೇ ದಿನಪತ್ರಿಕೆಯ ಗ್ರಹಗತಿ ಅಂಕಣದ ಮೇಲೆ ಕಣ್ಣಾಡಿಸಿದೆ . ನನ್ನ ಭವಿಷ್ಯದಲ್ಲಿ ಸುಂದರ ಸಂಜೆ ಎಂದು ಬರೆದಿತ್ತು . ಮೊದಲೇ ನನ್ನದು ಕನ್ಯಾರಾಶಿ ....... ಹೀಗೆ ಸಾವಿರ ಕನಸುಗಳ ಸ್ವಪ್ನಲೋಕದಲ್ಲಿ ತೇಲುತ್ತಾ ಕ್ಯಾಂಟೀನ್ ಕಡೆಗೆ ಹೋಗುತ್ತಿದ್ದೆನು. ಆ ಸೈಕಲ್ ಸ್ಟ್ಯಾಂಡ್ ಹುಡುಗಿ ಗೆಳತಿಯರೊಡನೆ ಬರುತ್ತಿದ್ದಳು . ಮೊದಲನೆ ಬಾರಿ ಅವಳನ್ನು ಅಷ್ಟಾಗಿ ಗಮನಿಸಿರಲಿಲ್ಲ . ಈಗ ಒಮ್ಮೆ ಆಪಾದಮಸ್ತಕ ಗಮನಿಸಿದೆನು . ಒಮ್ಮೆಲೇ ಕಣ್ಣಿಗೆ ಕತ್ತಲೆ ಕವಿದಂತಾಯಿತು . ನೆರಳಿನಲ್ಲಿ ಕುಳಿತು ಸ್ವಲ್ಪ ಸುಧಾರಿಸಿಕೊಂಡೆನು .ನಾನು ರಾಹುಕಾಲದಲ್ಲಿ ಎದ್ದೆನೋ ಅಥವಾಆ ಜ್ಯೋತಿಷಿ ಯಾವ ಡಿಫೆಕ್ಟಿವ್ ಕವಡೆ ಉರುಳಿಸಿ ಗುಣಾಕಾರ ಹಾಕಿದನೋ ತಿಳಿಯದು , ನನ್ನ ದಿನಭವಿಷ್ಯ ತಲೆಕೆಳಗಾಗಿತ್ತು . ಆಕೆಯನ್ನು ನೋಡುತ್ತಿದ್ದಂತೆ ನಮ್ಮ ಕುಲಪುರೋಹಿತ ನಾಗೇಶ ಭಟ್ಟರು ಹೇಳುತ್ತಿದ್ದ ಮಾರಿಯಮ್ಮ ಜಟಕಾ ಉಮ್ಮಲ್ತಿ ಭೂತಗಳ ಚಿತ್ರಣ ಸ್ಲೋ ಮೋಶನ್ ನಲ್ಲಿ ಸ್ಮ್ರತಿಪಟಲದಲ್ಲಿ ಹಾದುಹೋಯಿತು . ಆದರೂ..... ಅವಮಾನ .... ಸೇಡು... ಬಿಡಲಾಗುತ್ತದೆಯೇ ?? ಆಕೆಯ ಬಗ್ಗೆ ಬರೆಯಬೇಕೆಂದರೆ ಮಾಹಿತಿ ಬೇಕು . ಹಾಗೋ ಹೀಗೋ ಹುಚ್ಚು ಧೈರ್ಯ ಮಾಡಿಕೊಂಡು ಬಾಲ್ಯದಲ್ಲಿ ಅಪ್ಪನ ಒತ್ತಾಯಕ್ಕೆ ಮಣಿದು ಕಂಠಪಾಠ ಮಾಡಿದ್ದ ರಾಮರಕ್ಷಾ ಸ್ತೋತ್ರ ಪಠಿಸುತ್ತಾ ಆಕೆಯ ಬಳಿ ಹೋದೆನು .

Excuse me ...... ಎಂದೆನು .ಅದಕ್ಕವಳು Yes... What can i do for u ?? ಎಂದು ವ್ಯಂಗ್ಯವಾಗಿ ನಕ್ಕಳು . ಅವಳ ದ್ವನಿಯನ್ನು ಕೇಳಬೇಕಿತ್ತು ........ ನಾನು ಉಪಮೆಯಲ್ಲಿ ಸ್ವಲ್ಪ weak .... ಆದರೂ ಶಕ್ತಿ ಮೀರಿ ಉಪಮೆ ಕೊಡುವುದಾದರೆ 3 ದಿನ ಉಪವಾಸವಿದ್ದ ನಾಯಿಗೆ ಕಲ್ಲು ಹೊಡೆದರೆ ಅದು ಅಳುವ ದ್ವನಿಯನ್ನು ಹೋಲುತ್ತಿತ್ತು . ನಿನ್ನ ಹೆಸರೆನಮ್ಮಾ ........?? ಎಂದು ಕೇಳಿದೆನು . "ಶುಭಾಂಗಿ" ಎಂದು ಉಲಿದಳು. ಇಂತಹ ಸುಂದರ ಶಬ್ದಗಳ ಅಪಪ್ರಯೋಗದಿಂದ ಕನ್ನಡಮ್ಮನ ಮೇಲಾಗುತ್ತಿದ್ದ ಅವ್ಯಾಹತ ಶೋಷಣೆಗೆ ಮರುಗಿದೆನು . ಯಾರಮ್ಮಾ ಈ ಹೆಸರಿಟ್ಟಿದ್ದು ?? ಎಂದು ಕೇಳಿದೆನು .ಅದಕ್ಕವಳು ನನ್ನ ಹಿರಿಯಕ್ಕನ ಹೆಸರು ಶ್ವೇತಾಂಗಿ ಎರಡನೇ ಅಕ್ಕ ಲತಾಂಗಿ ಹೀಗೆ ಕರೆಯಲು ಪ್ರಾಸಬದ್ದ ಹಾಗೂ ಇಂಪಾಗಿರಲೆಂದು ನನ್ನ ಅತ್ತೆ ನನಗೆ ಶುಭಾಂಗಿ ಎಂದು ಹೆಸರಿಟ್ಟರು ಎಂದಳು . ಪ್ರಾಸದ ಅಷ್ಟೊಂದು ಹುಚ್ಚಿದ್ದರೆ "ಕೋಡಂಗಿ " ಎಂದಾದರೂ ಹೆಸರಿಡಬಹುದಾಗಿತ್ತು ಎಂದು ಯೋಚಿಸಿದೆನು .

ನಿನ್ನ ವಯಸ್ಸೆಷ್ಟು ?? ಎಂದು ಕೇಳಬಾರದ ಪ್ರಶ್ನೆಯನ್ನು ಕೇಳಿಬಿಟ್ಟೆನು . ಅವಳು ಸ್ವಲ್ಪ ದುರುಗುಟ್ಟಿ ನೋಡಿ 21 ವರ್ಷ ಕೆಲವು ತಿಂಗಳು ಮತ್ತು ಕೆಲವು ದಿನ ಎಂದಳು . ನಾನು ಇನ್ನೂ ನೇರವಾಗಿ ಎಷ್ಟು ತಿಂಗಳು ಎಷ್ಟು ದಿನ ಎಂದು ಕೇಳಿದೆನು . 37 ತಿಂಗಳು 420 ದಿನ ಎಂದು ಉತ್ತರ ಬಂದಿತು . ಇಷ್ಟು ಹೇಳಿ ಆಕೆ ನೀರು ಕುಡಿಯುವ ನೆಪದಿಂದ ಆಚೆ ಹೋದಳು .ನಾನು ಆಕೆಯ ಸ್ನೇಹಿತೆಯರಿಂದ ಈ ವಿಚಾರಗಳನ್ನು ತಿಳಿದೆನು ....

ಸೆಪ್ಟೆಂಬರ್ 11 ನೇ ತಾರೀಕು "ಕುದುರೆಮುಖ" ದಲ್ಲಿ "ಮೃಗಶಿರಾ" ನಕ್ಷತ್ರದಲ್ಲಿ ಈಕೆಯ ಜನನವಾಯಿತು .ಬ್ರಹ್ಮ ಆ ದಿನ ಕೆಟ್ಟ ಮೂಡ್ ನಲ್ಲಿದ್ದ ಎಂದು ಕಾಣುತ್ತದೆ ,ಇವಳ assembly ಯಲ್ಲಿ ತುಂಬಾ ತಪ್ಪು ಮಾಡಿಬಿಟ್ಟ. ಹೆಸರು ಕೇವಲ ಅಂಕಿತವಾಗಿದ್ದರೂ ಊರು ನಕ್ಷತ್ರಗಳು ಅನ್ವರ್ಥವಾಗಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರಿಟ್ಟೆನು . ಹಾಗೂ WTC ದುರಂತಕ್ಕೆ ಎರಡು ದಶಕಗಳ ಹಿಂದೆ ಭಾರತದಲ್ಲಾಗಿದ್ದ ಈ ದುರಂತಕ್ಕೆ ಅಷ್ಟು ಪ್ರಚಾರ ಯಾಕೆ ಸಿಗಲಿಲ್ಲವೆಂದು ಯೋಚಿಸಿದೆನು .

ಇವಳ ಜನನವಾದ ತಕ್ಷಣ ಇವಳ ತಾಯಿಯ ಶುಶ್ರೂಷೆಯಲ್ಲಿದ್ದ ನರ್ಸ್ ಕಿಟಾರೆಂದು ಕಿರುಚಿ ಪ್ರಜ್ಞಾಹೀನಳಾಗಿದ್ದಳಂತೆ . ಆಮೇಲೆ ಶಾಕ್ ಟ್ರೀಟ್ ಮೆಂಟ್ ನಿಂದ ಸರಿಪಡಿಸಿದರಂತೆ . ಮೊನ್ನೆ ಇವಳು ಬೆಂಗಳೊರಿಗೆ ಹೋದಾಗ NASA ವಿಜ್ಞಾನಿಯೊಬ್ಬ ಇವಳನ್ನು ಅನ್ಯಗ್ರಹವಾಸಿಯೆಂದು ತಿಳಿದು ಹಿಡಿಯಲು ಹೋಗಿ ಜನರಿಂದ ಧರ್ಮದೇಟು ಹೊಡೆಸಿಕೊಂಡನಂತೆ. "Koi Mil Gaya" ಸಿನೆಮಾ ನೋಡಿ ಬಂದ ಈಕೆಯ ನೆರೆಹೊರೆಯ ಮಕ್ಕಳು ಈಕೆಯನ್ನು ಜಾದೂ ...... ಎಂದು ಕರೆದು ಮಾಯ-ಮಂತ್ರ ಮಾಡಲು ಪೀಡಿಸುತ್ತಿದ್ದರಂತೆ . ಇವಳು ಒಮ್ಮೆ ಮೈಸೂರು ಮೃಗಾಲಯಕ್ಕೆ ಹೋದಾಗ ಅಲ್ಲಿದ್ದ ಗೊರಿಲ್ಲಾವೊಂದು ಇವಳು ಕಣ್ಣಿಗೆ ಕಾಣುವಷ್ಟು ಕಾಲ ಇವಳನ್ನೇ ದುರುಗುಟ್ಟಿ ನೋಡಿದ್ದಲ್ಲದೆ ಬಳಿಕ 2 ದಿನ ಇವಳ ನೆನಪಿನಲ್ಲಿ ನಿದ್ರಾಹಾರಗಳನ್ನು ತ್ಯಜಿಸಿದ್ದು ವಿಚಿತ್ರವಾದರೂ ಸತ್ಯ .

ಆಕೆಯ ಕಣ್ಣುಗಳು ಕಮಲದ ಹೂವಿನಂತೆ ಇತ್ತು . ತುಟಿ ತೊಂಡೆ ಹಣ್ಣಿನಂತೆ ಇತ್ತು ನಿಜ ... ಆದರೆ ಯಾವ ಹಣ್ಣು - ಹೂವು ತಾನೆ 25 ವರ್ಷ ತಾಜಾ ಇರುತ್ತದೆ ನೀವೇ ಹೇಳಿ ..... ಮಾತಿನ ಮಧ್ಯೆ ಅವಳೊಮ್ಮೆ ಮುಗುಳ್ನಕ್ಕಳು ನೋಡಿ ....... ನನಗೆ ಬ್ರಹ್ಮಾಂಡ ದರ್ಶನವಾಯಿತು . 5 ಜನ ದಂತವೈದ್ಯರು ಒಂದು ತಿಂಗಳ ಅಹರ್ನಿಶಿ ಕ್ಯಾಂಪ್ ಹಾಕಿ ಮಾಡುವಷ್ಟು ಕೆಲಸ ಅಲ್ಲಿತ್ತು . Asian Paint ನ ಕಲರ್ ಲ್ಯಾಬ್ ನಲ್ಲಿ ಇಲ್ಲದ ಕೆಲವು ಬಣ್ಣಗಳು ಆಕೆಯ ದಂತಪಂಕ್ತಿಯಲ್ಲಿದ್ದವು . ಒಮ್ಮೆ ಇವಳ ದಂತಚಿಕಿತ್ಸೆಗೆ ಬಂದ ವೈದ್ಯರು ತಲೆ ತಿರುಗಿ ಬಿದ್ದು ಆಮೇಲೆ ಅವರಿಗೆ ಕಣ್ಣು - ಮೂಗುಗಳಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟು ICU ದಲ್ಲಿ admit ಮಾಡಿದ್ದರಂತೆ . ಇದರ ನಂತರ ಉಳಿದ ದಂತವೈದ್ಯರು No Risk Ceritificate ತರದೇ ಈಕೆಯ ಚಿಕಿತ್ಸೆಗೆ ಒಪ್ಪುವುದಿಲ್ಲವೆಂದು ಶಪಥ ತೊಟ್ಟಿದ್ದಲ್ಲದೆ ಈಕೆ ನಗುವುದರ ವಿರುದ್ಧ ಕೋರ್ಟ್ ನಿಂದ Stay-Order ತಂದಿದ್ದಾರಂತೆ !!! ಮೊನ್ನೆ ಇವಳು ತನ್ನ ಸಂಬಂಧಿಯೊಬ್ಬರನ್ನು ನೋಡಲು ಪೋಲೀಸ್ ಸ್ಟೇಶನ್ ಗೆ ಹೋದಾಗ ಅಲ್ಲಿ ಜೈಲಿನಲ್ಲಿದ್ದ ಭಾರಿ ಭಯೋತ್ಪಾದಕ ಸತ್ಯವನ್ನೆಲ್ಲಾ ಹೇಳಲು ಒಪ್ಪಿದನಂತೆ . ಇದನ್ನು ತಿಳಿದ ಮಾನವ ಸಂಘಟನೆಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು .

ಇಷ್ಟರಲ್ಲಿ ಅವಳು ಪದೇ ಪದೇ ವಾಚ್ ನೋಡುತ್ತಿದ್ದುದನ್ನು ನಾನು ಗಮನಿಸಿದೆ . ಯಾಕೆ ಎಲ್ಲಾದರೂ ಹೋಗುವುದಿದೆಯಾ ?? ಎಂದು ಕೇಳಿದೆನು .ಹೌದು ಕಳೆದ ತಿಂಗಳು ತನ್ನ ನಿಶ್ಚಿತಾರ್ಥವಾಗಿದ್ದು ,ಎಪ್ರಿಲ್ 1 ರಂದು ತನ್ನ ಮದುವೆಯಿದೆ ,ಈ ದಿನ ತನ್ನ ಭಾವೀ ಪತಿಯೊಂದಿಗೆ Date Fix ಆಗಿದೆ ಎಂದಳು . ಆ ಮಹಾನುಭಾವನ ಗ್ರಹಚಾರಕ್ಕೆ ಕನಿಕರಿಸುತ್ತಾ ,ನಿನ್ನ ಭಾವೀ ಪತಿ ಏನು ಮಾಡುತ್ತಿದ್ದಾನೆ ?? ಎಂದು ಕೇಳಿದೆನು . ನಾಚಿಕೆಯಿಂದ ಓಡಿ ಹೋದಳು . ಕೆನ್ನೆಗಳು ಕೃಷ್ಣವರ್ಣದವಾಗಿದ್ದರಿಂದ ಕೆಂಪೇರಿದ್ದು ಕಾಣಿಸಲಿಲ್ಲ . ಅವಳ ಭಾವೀ ಪತಿ "ಪ್ರಾಣಿ ದಯಾ ಸಂಘದ ಅಧ್ಯಕ್ಷ " ಎಂದು ಅವಳ ಗೆಳತಿಯರಿಂದ ತಿಳಿಯಿತು . ಆದರೆ ಅವಳಿಗಾಗಿ ಬರೆದ " ಈ ಹಲಸಿನ ಹಣ್ಣಿನಂಥ ಹುಡುಗಿ ಬಂತು ನೋಡು " ಎಂಬ ಕವನದ ಬಗ್ಗೆ ಅವಳಿಗೆ ಹೇಳಲು ಮರೆತೇ ಹೋಗಿತ್ತು .


***********************************************************--ವಿಕಟಕವಿ ****

5 comments:

ಶ್ರೀರಂಗ ದೊಡ್ಡಿಹಾಳ said...

ಲೇ ವಿಕಟಕವಿ. ಎಲ್ಲಾ ಕಾಲೇಜ್ ಸ್ಕಿಟ್ ಜೋಕ್ ಎತ್ತಿ ಇಲ್ಲಿ ಒಂದು ಬ್ಲಾಗ್ ಪೋಸ್ಟ್ ಮಾಡಿದ್ಯಾ ಮಗನೇ. ಇರ್ಲಿ ಇರ್ಲಿ, ಬೇಜಾರಿಲ್ಲ.

ಎನೇ ಇರ್ಲಿ ಪೋಸ್ಟ್ ಅಂತ್ರೂ ಭಾರಿ ಅದ.ಓದ್ಲಿಕ್ಕೇ ಮಸ್ತ ಮಜಾ ಬಂತು. ಹಿಂಗೇ ಬರೀತಿರು.

JSS ಗೇ .... ಜೈ..

disha said...

Thumbaa chennagithu. Nimma hasya prajne prashamsaneeya.

deepak said...

thumba chennagidhe.... ;)

Harish - ಹರೀಶ said...

ಒಂದು ವೇಳೆ ಈ ಘಟನೆ ನಿಜವಾಗಿದ್ದು, ಆಕೆ ನಿಮ್ಮ ಈ ಲೇಖನವನ್ನು ಓದಿದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ

Anonymous said...

:-)
hehe more like wickedkavi.
:-)
ms