Skip to main content

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.

  ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.

  ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.

 ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ  ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ ಚಿಕ್ಕ ಮಕ್ಕಳು ಒಂದು ಬೆರಳು ಮೇಲೆತ್ತಿದರೆ,ನನ್ನ ಬಂಗಾರ! ಸುಸ್ಸು ಆದರೆ ಹೇಳುತ್ತಾನೆ ಎಂದು ಪ್ರೀತಿಯಿಂದ  ಕರೆದುಕೊಂಡು ಹೋಗುವ ಹಿರಿಯರು ಮಗು ಎರಡು ಬೆರಳು ತೋರಿಸಿದರೆ ಅಮ್ಮನ ಹತ್ತಿರ ಹೋಗು ಪುಟ್ಟಾ ಎಂದು ನುಣುಚಿಕೊಳ್ಳುತ್ತಾರೆ.

 ಸಾಧನೆ  ಮೊದಲನೆಯವನದ್ದೇ , ಆದರೆ ಸ್ವಲ್ಪ ಸಮಯದ ನಂತರ ಅಷ್ಟೇ ಆದರೂ  ಪ್ರಪಂಚ ಯಾವತ್ತೂ ಎರಡನೇಯವನಾದವನನ್ನು ನೆನಪು ಇಟ್ಟುಕೊಳ್ಳುವುದಿಲ್ಲ.ಎಲ್ಲರೂ ಒಂದಾದರೆ ಒಗ್ಗಟ್ಟು ಎಂದು  ಶಕ್ತಿ ಪ್ರದರ್ಶನ ಮಾಡುವ ರಾಜಕೀಯ ನಾಯಕರು ಯಾರಾದರೂ ಎರಡು ಬಗೆದರೆ,ಅವನು ಎರಡು ನಾಲಗೆಯವನು,ಇಮ್ಮಂಡೆ ಹಾವೆಂದು ಹೇಳಿ ಅವನನ್ನು ಮೋಸಗಾರನೆಂದು ಬಿಂಬಿಸುತ್ತಾರೆ.

  ನನ್ನ ಸಹೋದರರಾದ ಸಮ ಸಂಖ್ಯೆಗಳೆಲ್ಲವೂ "ನೀನೊಬ್ಬ ಕುಲಕ್ಕೆ ಮೃತ್ಯು ಕೊಡಲಿ ಕಾವು" ,"ನಿನ್ನಿಂದಾಗೇ  ನಾವೆಲ್ಲಾ ಅವಿಭಾಜ್ಯ ಸಂಖ್ಯೆ ಆಗಲು ಸಾಧ್ಯವಿಲ್ಲ ಎಂದಾಗ ನನಗೆ ಎಲ್ಲಿಲ್ಲದ ಸಂಕಟವಾಗುತ್ತದೆ.ನನ್ನನ್ನು,ನನ್ನ ಪ್ರತಿಭೆಯನ್ನು ಅರ್ಥ ಮಾಡಿಕೊಂಡ ಕೆಲವು ಸಂಖ್ಯೆಗಳು ನನ್ನನ್ನು ತಲೆಯ ಮೇಲೆ ಏರಿಸಿಕೊಂಡಾಗ ಗಣಿತಜ್ಞರು ಅವರನ್ನು ವರ್ಗ ಮಾಡಿದ್ದು (ಉದಾಹರೆಣೆಗೆ ೮^೨=64)ನನಗೆ ಬಹಳ ಬೇಸರ ತಂದಿತು.

 ಪರಭಾಷೆಗಳಲ್ಲೂ ನನಗೆ ಅವಮಾನ ತಪ್ಪಿದ್ದಲ್ಲ.ನನ್ನ ಐಡೆಂಟಿಟಿಯನ್ನು ಮರೆಮಾಚಿ 'ಪ್ರಿ-ಒನ್ಡ ಕಾರ'ನ್ನು ಖರೀದಿಸಿ ಅದು ಎಷ್ಟೇ ಚೆನ್ನಾಗಿದ್ದರೂ ಬಂಧುಮಿತ್ರರ 'ಸೆಕೆಂಡ್ ಹ್ಯಾಂಡಾ?'ಎಂಬ ಅನುನಾಸಿಕ ಪ್ರಯೋಗಕ್ಕೆ ಗುರಿಯಾಗಬೇಕು.ಹಿಂದಿಯಲ್ಲೂ ಕಾನೂನು ಬಾಹಿರವಾಗಿ ಸಂಪಾದಿಸಿದ/ನಡೆಸುತ್ತಿರುವ ವ್ಯವಹಾರಕ್ಕೆ ದೋ ನಂಬರ್ ಕಾ ಧ೦ದಾ ಎಂದು ಹೇಳುತ್ತಾರೆ.

   ಚಿಕ್ಕ ಮಕ್ಕಳಿಗೆ ತಂದೆ ತಾಯಿಯರು  ಗದರುವಾಗ "ನೋಡು ಒಂದು ಸಲ ಪ್ರೀತಿಯಿಂದ ಹೇಳುತ್ತೇನೆ ಎರಡನೇ ಸಲ ಏಟು ಬೀಳುತ್ತದೆ "ಎಂದಾಗ ನನಗೆ ಎಲ್ಲಿಲ್ಲದ ನೋವಾಗುತ್ತದೆ.ಯಾಕೆ?ಮೊದಲ ಸಲ ಏಟು ಹೊಡೆದು ಎರಡನೇ ಸಲ ಪ್ರೀತಿ ಮಾಡಬಹುದು ಅಲ್ಲವೇ?ಏಕೀ ತಾರತಮ್ಯ?

 ಹೀಗೊಮ್ಮೆ ಯಾರೋ ನೀರಿನಲ್ಲಿ ಬಿದ್ದಾಗ ಅವನ ಸಹಾಯಕ್ಕೆ  ಹಗ್ಗದ ಒಂದು ತುದಿಯನ್ನು ಅವನೆಡೆಗೆ ಎಸೆದರು.ಅವನ ಮೇಲೆ ಕನಿಕರ ಹುಟ್ಟಿ ಹಗ್ಗದ ಎರಡನೇ ತುದಿಯಾದ ನಾನು ಕೂಡ ಅವನ ಸಹಾಯಕ್ಕೆ ಧಾವಿಸಿದೆ.ಆದರೆ ಹಗ್ಗ ಹಿಡಿದವನನ್ನು ಜನರು ಹಿಗ್ಗಾಮುಗ್ಗಾ ಥಳಿಸಿದಾಗ ಒಳ್ಳೆಯವರಿಗೆ ಇದು ಕಾಲವಲ್ಲ ಎಂದು ಅರ್ಥವಾಯಿತು.

 ನನ್ನನ್ನು ಸರಿಸಮಾನವಾಗಿ ನೋಡದೇ ಕೆಳದಬ್ಬುವ ಪ್ರಯತ್ನ ಮೊದಲಿನಿಂದಲೂ ನಡೆಯುತ್ತಲೇ ಇದೆ.ನಾನು ಯಾವುದೇ  ಸಾಮಗ್ರಿಯ ಬೆಲೆಯ ಪಕ್ಕ ನಿಂತು ಅದರ ಬೆಲೆ ಎರಡರಷ್ಟಾದರೆ ಅಮ್ಮಮ್ಮೋ!ಎಂದು ಹುಬ್ಬೇರಿಸಿ ಕರಚಾಮರದಲ್ಲಿ ಗಾಳಿ ಬೀಸಿಕೊಳ್ಳುವ ಜನರು  ಅದೇ ನನ್ನನ್ನು ಕೆಳದಬ್ಬಿ ೧/೨ ಪ್ರೈಸ್ ಸೇಲ್ ಎಂದು ಬೋರ್ಡ್ ನೋಡಿದರೆ ಆಹಾಹಾ! ಎಂದು ಬೇಡದ್ದನ್ನು ಖರೀದಿಸುವಾಗ ನನಗೆ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ.  

   ಆದರೆ ೨೦೧೪ರಲ್ಲಿ ಮಾನ್ಯ ನರೇಂದ್ರ ಮೋದಿಯವರು ಚುನಾವಣಾ ಗೆದ್ದಾಗ ಕೈಯಲ್ಲಿ ಎರಡು ನಂಬರ್ ತೋರಿಸಿ ವಿಜಯೋತ್ಸವ ಮಾಡಿದಾಗ,ಎರಡನೇ ಬಾರಿ ಮತ್ತೆ ಗೆದ್ದು ಬಂದಾಗ ಜನರು ಪಟ್ಟ ಸಂಭ್ರಮವನ್ನು ಕಂಡು ನನ್ನ ಗುಣ ನಡತೆಯ ಮೇಲೆ ಆವರಿಸಿದ್ದ ಕಪ್ಪು ಛಾಯೆ ಹೋಯಿತೆಂದು ಕೊಂಡರೆ ಚಂದ್ರಯಾನ-೨ ಚಂದ್ರನಿಗೆ ಎರಡು ಕಿ.ಮೀ ದೂರವಿರಬೇಕಾದರೆ ಪತನಗೊಂಡ ಕರ್ಣಕಠೋರ ಸುದ್ದಿ ನನ್ನ ಎರಡೂ ಕಿವಿಗಳ ಮೇಲೆ ಬಿದ್ದಾಗ ಇದು ಎಂದೂ ಮುಗಿಯದ ಕಥೆ ಎಂದು ತಿಳಿದು ನನ್ನ ಎರಡೂ ಕಣ್ಣುಗಳಲ್ಲಿ ನೀರು ಸುರಿಯಿತು.

ಇಷ್ಟು ಹೇಳಿ ನನ್ನ ಎರಡು ಮಾತನ್ನು ಮುಗಿಸುತ್ತೇನೆ.

                                                                                                    ಇತೀ ನಿಮ್ಮ ಪ್ರೀತಿಯ
                                                                                                               ಎರಡು

                                                                                                           -ವಿಕಟಕವಿ 

Comments

Unknown said…
Eradu maathilla 👌👌
Unknown said…
Eradu maathilla👌👌
ತುಂಬಾ ಚೆನ್ನಾಗಿದೆ ....

Popular posts from this blog

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ ...

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...