Tuesday, December 16, 2008

ನಾನು --ನನ್ನೂರು --ನನ್ನ ಜನ

***********************************DISCLAIMER***********************
ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ.ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ .
***************************************************************************


ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ.

This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನೇಶನ dialogbaazi ಖತರ್ನಾಕ್ಕಾಗಿ ಸಾಗಿತ್ತು .ನನಗೋ ನಗಬೇಕೋ ಅಳಬೇಕೋ ತಿಳಿಯಲಿಲ್ಲ . ಅಯ್ಯೋ ದೇವ್ರೇ ........450 ರೂಪಾಯಿ entry fee ಕೊಟ್ಟು ಒಳಗೆ ಬಂದಿದ್ದಲ್ಲದೆ 5ft ಆಳದ ನೀರಿಗೆ 2ft ಮೇಲಿಂದ ಹಾರಿದ್ದಕ್ಕೆ ಹೀಗೆ ಕುಣಿದಾಡುವ ಇವನು ಇನ್ನು ನಮ್ಮ ಶಿವಮೊಗ್ಗಕ್ಕೆ ಬಂದು free-flow ತುಂಗೆಯಲ್ಲಿ ನಮ್ಮ ದೇವಿ ಕಟ್ಟೆ ಮೇಲಿಂದ 4 ಡುಬ್ಕಿ ಹೊಡೆದರೆ ಏನು ಹೇಳಿಯಾನು ಅಂದು ಯೋಚಿಸತೊಡಗಿದೆ .ನನ್ನ ಗೆಳೆಯರು "ಮಚ್ಚಾ....ನೀನು Mango Tree ಹತ್ತಿದ್ದೀಯಾ ??River ನಲ್ಲಿ ಈಜಿದ್ದೀಯಾ ?? ಒಬ್ರಿಗೆ ಈಜೋದಕ್ಕೆ ಟಿಕೆಟ್ ದರ ಎಷ್ಟು ?? Dude.... Jackfruit Tree ನಲ್ಲಿ ಆಗುತ್ತ ಅಥವಾ Groundnut ಥರ Underground ಆಗುತ್ತಾ ??" ಇಂಥ ಪೆದಂಬು ಪ್ರಶ್ನೆಗಳನ್ನು ಕೇಳುವಾಗ ನಾನು ಶಿವಮೊಗ್ಗದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಲೋ ಅಥವಾ ಬೆಂಗಳೂರಿನ ವ್ಯಾಪಾರೀಕರಣದ ಮಾಡರ್ನ್ ಪರಿಸರದಲ್ಲಿ ಬೆಳೆದ ಇವರ ದೌರ್ಭಾಗ್ಯಕ್ಕೆ ಕನಿಕರಿಸಲೋ ಅಂದು ತಿಳಿಯುವುದಿಲ್ಲ . ಆದರೆ ಏನೇ ಹೇಳಿ ಇಂಥಾ ವಿಷಯಗಳು ನನ್ನನ್ನು ನನ್ನ ಬಾಲ್ಯಕ್ಕೆ ಸೆಳೆದೊಯ್ಯುತ್ತವೆ .

ತುಂಗಾ ನೀರು, ಜೋಗ ಫಾಲ್ಸ್ , ಆಗುಂಬೆ ಮಳೆ ,ತೀರ್ಥಹಳ್ಳಿ ಅಡಕೆ,ಗೋಪಿ ಸರ್ಕಲ್ ಫ್ರೈಡ್ ರೈಸ್ , ಮೀನಾಕ್ಷಿ ಭವನದ ದೋಸೆ ,ಡಿವಿಎಸ್ ಸರ್ಕಲ್ ಪಾನಿಪುರಿ ,ಪವನ್ ಗೋಬಿ ,ಕೋಟೆ ರೋಡ್ ಮಸಾಲ ಮುಂಡಕ್ಕಿ ,ಬ್ರೈಟ್ ನ ಪರೋಟ , ವೆಂಕಟೇಶ್ವರ ಸ್ವೀಟ್ಸ್ ನ ಸ್ಪೆಷಲ್ ಮೈಸೂರ್ ಪಾಕ್ ,ನಮ್ಮ ಸಹ್ಯಾದ್ರಿ , ಭಟ್ರ ಪಾನಿಪುರಿ ,ಪ್ರಾಣ ಕೊಡೊ ಫ್ರೆಂಡ್ಸು , ಅಹಾ .. ಇದೆ ನನ್ನ ಶಿವಮೊಗ್ಗ ,ಇದೆ ನನಗೆ ಸ್ವರ್ಗ .ಮುಂದಿನ ನನ್ನ ಜನ್ಮ ಬರೆದಿಡಲಿ ಬ್ರಹ್ಮ ... ಇಲ್ಲಿಯೇ ... ಇಲ್ಲಿಯೇ .. ಎಂದಿಗೂ ನಾನಿಲ್ಲಿಯೇ ......

ಅಂತೂ -ಇಂತೂ ನಾನು ಕೂಡ decide ಮಾಡಿ ಬಿಟ್ಟಿದ್ದೇನೆ . ಮದುವೆ ಆದ್ರೆ ಶಿವಮೊಗ್ಗದ ಹುಡುಗಿಯನ್ನೇ ಮದುವೆ ಆಗೋದು ಅಂಥ .ಇಲ್ಲದಿದ್ರೆ ಆಮೇಲೆ ಉದ್ದಿನ ಬೇಳೆ ಯಾವ್ದು ?? ತೊಗ್ರಿ ಬೇಳೆ ಯಾವ್ದು ?? ತೆಂಗಿನ ಕಾಯಿ ಮರದಲ್ಲಿ ಆಗುತ್ತಾ?? ಬಳ್ಳಿಯಲ್ಲಿ ಆಗುತ್ತಾ?? ಎಂದು explain ಮಾಡೋ ಗ್ರಹಚಾರ ಯಾರಿಗೆ ಬೇಕು??.ಇವರು ನವಿಲು ,ಅಳಿಲು ,ಎಲ್ಲ ಫೋಟೋದಲ್ಲಿ ನೋಡಿ ಬಲ್ಲರು ಅಷ್ಟೆ .ಮತ್ತೆ ಇವರ ಆಟಗಳು ....... ಆಹಾಹಾ .... ಆಲಸ್ಯದ ಏಜನ್ಸಿ ಖರೀದಿ ಮಾಡಿದ್ದಾರೆ. ಇಸ್ಪೀಟು ಇವರಿಗೆ ದೊಡ್ಡ ಆಟ. 4 ಗೋಡೆ ಬಿಟ್ಟು ಹೊರಗೆ ಬರಲಾರರು . ನಾವೋ... ಬಿಡಿ .... ಮನೆಗೆ complaint ಬಂದು ಅಪ್ಪನ ಹತ್ರ ಹೊಡೆಸಿಕೊಂಡರೂ ಮರುದಿನ ಪುನಃ ಅಡಿಗರ ಹಿತ್ತಲಿನಲ್ಲಿ ಆಡಿದ ಮರಕೋತಿ ಲಗೋರಿಗಳು ಮರೆಯಲು ಸಾಧ್ಯವೇ ?? ನರಪೇತಲ ನಾರಾಯಣನಾಗಿದ್ದರೂ ಪಂಥ ಕಟ್ಟಿ ಆ ಪೈಲ್ವಾನ್ ಬಾಬುವಿನ ಕಾಲು ಎಳೆದು ಬೀಳಿಸಿ ಗೆದ್ದ ಕಬಡ್ಡಿ ಆಟದ ಸುಖವನ್ನು ಇವರೇನು ಬಲ್ಲರು?? ಆ ದಿನ ನನಗೋ ಸಾವಿರ ಯುದ್ಧ ಗೆದ್ದು ಬಂದ ಸೇನಾಧಿಕಾರಿಯ ಸಂತಸ .McDonald ನ Pizza ಗೆ ಲೊಟ್ಟೆ ಹೊಡೆಯುವ ಇವರಿಗೆ ಪೋಲಿಸ್ ಚೌಕಿಯ ಸ್ಪೆಷಲ್ ಮುಂಡಕ್ಕಿ ಉಪ್ಕರಿಯ ರುಚಿ ಏನು ಗೊತ್ತು ?? ಸಿಗರೇಟು ಸೇದದಿದ್ದರೂ ಸಂಜೆ ರಾಮ ನಾಯ್ಕನ ಪಾನ್ ಶಾಪ್ ಹತ್ತಿರ ಕಾಣಿಸಿ ಕೊಂಡಿದ್ದಕ್ಕೆ ರಾತ್ರಿ ಅಪ್ಪ ಕೊಟ್ಟ ಬಾಸುಂಡೆಗಳು ಇನ್ನೂ ಮನಸ್ಸಿನಲ್ಲಿ ಹಸಿರಾಗಿವೆ ( ಬೆನ್ನ ಮೇಲೆ ಕೆಂಪಾಗಿವೆ ... ) ಇಂದಿಗೂ ಬೆಂಗಳೂರಿನಲ್ಲಿ ಪಾನ್ ಶಾಪ್ ಎದುರು ನಡೆಯುವಾಗ ನನಗರಿವಿಲ್ಲದಂತೆ ನನ್ನ ಕಣ್ಣುಗಳು ಅಪ್ಪನನ್ನು ಹುಡುಕುತ್ತವೆ .ಆದರೆ ಇವರೋ... ಅಪ್ಪನ ಜೊತೆಯಲ್ಲಿ ಕುಳಿತು ಪೆಗ್ ಹೊಡೆಯುವಾಗ ಇದೇನಾ ಸಭ್ಯತೆ ?? ಇದೇನಾ ಸಂಸ್ಕೃತಿ ?? ಎಂದು ಅನಿಸುತ್ತದೆ .

ಇನ್ನು ನನ್ನ ಬಾಲ್ಯ . ಎಸ್ .ವಿ.ಎಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ . ಕನ್ನಡ medium . 4 ನೆ ತರಗತಿಯಲ್ಲೇ ಹದಿನಾರ್ ಹತ್ಲಿ ವರೆಗಿನ ಮಗ್ಗಿ ಕಂಠಪಾಠ . ಇನ್ನು ಆಹಾಹಾ ಎಂಥ ಪದ್ಯಗಳು ನೋಡಿ ....
======================
ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ
ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೋಚಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಟ್ಟದ ಗಾಳಿಪಟ
ದಾರವ ಜಗ್ಗಿ ದೂರದಿ ಬಗ್ಗಿ
ತಾರೆಯ ನಗಿಸುವ ನನ್ನ ಪಟ
==================

ನನ್ನಯ ಬುಗುರಿ ಬಣ್ಣದ ಬುಗುರಿ
ಗುರುಗುರು ಸದ್ದನು ಮಾಡುವ ಬುಗುರಿ
ದಾರವ ಸುತ್ತಿ ಕೈಯನು ಎತ್ತಿ
ಬೀಸಲು ಭರದಿ ಸುತ್ತುವ ಬುಗುರಿ

ಕೆಲಸಕೆ ಅಂಜದೆ ಕೆಚ್ಚೆದೆಯಿಂದಲಿ
ಗಿರಿಗಿರಿ ತಿರುಗುವ ಮೆಚ್ಚಿನ ಬುಗುರಿ
ಅಂಗೈ ಮೇಲೆ ಆಡುವ ಬುಗುರಿ
ಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು ಭೂಮಿಗೆ ಇಳಿಸಿ
ಗರಗರ ಸುತ್ತುವ ಬಣ್ಣದ ಬುಗುರಿ
=======================
ಯಾವ " Twincle Twincle little star " ಗೆ ಕಡಿಮೆ ಇದೆ ನೀವೇ ಹೇಳಿ .

ಇನ್ನು ನನ್ನ ದಿನಚರಿ . ಬೆಳಿಗ್ಗೆ 6 ಗಂಟೆಗೆ ಏಳುವುದು . ಎದ್ದ ಕೂಡಲೇ ಹಲ್ಲುಜ್ಜಿ ಸ್ತೋತ್ರ ಹೇಳುವುದು . ಆಮೇಲೆ ಪಾರ್ಲೇಜೀ ಬಿಸ್ಕೆಟ್ ಮತ್ತು ಖಾಲಿ ಚಾ . 8 ಗಂಟೆಗೆ ಸ್ನಾನ ಮಾಡಿ ಇಡ್ಲಿ/ದೋಸೆ/ಉಪ್ಪಿಟ್ಟು/ಗಂಜಿ ಯಾವುದಾದರೂ ಒಂದು . ಬೆಂಗಳೂರಿನವರ ಥರ ಬ್ರೆಡ್ಡು -ಬನ್ನು ಉಹೂಂ .... ಚಾನ್ಸೇ ಇಲ್ಲ ......ಜ್ವರ ಬಂದರೆ ಮಾತ್ರ ಕಲ್ಕೂರ ಡಾಕ್ಟರು ಕೊಟ್ಟ ಕೆಂಪು ಔಷಧ , ಬ್ರೆಡ್ಡು ಮತ್ತು 2 ಲೋಟ ಚಾ ( ಒಂದು ಬ್ರೆಡ್ಡನ್ನು ಮುಳುಗಿಸಿ ತಿನ್ನಲು ). 8:30 ಕ್ಕೆ ಪಚ್ಚು , ಮುನ್ನ, ಸೀನ , ಶಾಲಿನಿ ಅಕ್ಕ , ಮತ್ತು ಲಲ್ಲಿ ನಮ್ಮ ಮನೆ ಮುಂದೆ ಪ್ರತ್ಯಕ್ಷ . ಹೆಗಲ ಮೇಲೆ ಕೈ ಹಾಕಿಕೊಂಡು ಒಂದೂವರೆ ಕಿಲೋಮೀಟರ್ ನಡೆಯುವುದು . ಸ್ಕೂಲ್ ಬಸ್ - ರಿಕ್ಷಾ ಗೊತ್ತೇ ಇಲ್ಲ . ಮಧ್ಯಾನ್ನ ಊಟಕ್ಕೆ ಮನೆಗೆ ಬಂದು ಮತ್ತೆ ವಾಪಸ್ . ಸಂಜೆ 50 p ಕೊಟ್ಟು ಶಾಲೆಯ ಹೊರಗೆ ಅಜ್ಜಿ ಮಾರುತ್ತಿದ್ದ ಕಡ್ಲೇಕಾಯಿ ತೆಗೆದುಕೊಂಡು ತಿನ್ನುತ್ತಾ ಮನೆಗೆ ವಾಪಸ್ .ಮನೆ ಇನ್ನೇನು ಬಂತು ಅನ್ನುವಾಗ ಪಚ್ಚುವಿಗೆ " ಶಾಲೆ ಗುದ್ದು ,ಮನೆ ಗುದ್ದು " ಎಂದು ಎರಡು ಗುದ್ದು ಕೊಟ್ಟು ಮನೆಯ ಒಳಗೆ ಓಡುವುದು.ಬಂದವರೇ 10 ನಿಮಿಷದಲ್ಲಿ copy ಬರೆದು ಮುಗಿಸುವುದು. ( ಹಿಂದಿ ಟೀಚರ್ ಒಳ್ಳೆಯವರು ಬರೀ 3 line maatra , ಆದರೆ ಕನ್ನಡದ ಸುಶೀಲ ಟೀಚರ್ ಮತ್ತೆ ಇಂಗ್ಲಿಷ್ ನ ದಿವಾಕರ್ ಮಾಸ್ತರಿಗೆ ದಿನಕ್ಕೆ ಒಂದು ಪುಟ ಆಗಬೇಕಂತೆ . ಅದೂ neat ಆಗದಿದ್ದರೆ ಮರುದಿನ 2 ಪುಟ .). 5:30 ರಿಂದ 7 ರ ತನಕ ಗಾಂಧೀ ಮೈದಾನದಲ್ಲಿ ಆಟ. ಆಟದ ಮಧ್ಯೆ ಜಗಳ . ದೋಸ್ತಿ ಕಟ್ . ( ಕಣ್ಣ ಮುಚ್ಚಾಲೆ ಆಟದಲ್ಲಿ ನನ್ನ ಸರದಿ ಬಂದಾಗ ಕಣ್ಣು ಮುಚ್ಚಿ 50 ರ ತನಕ ಎಣಿಸುವಾಗ ನನ್ನದು 20 ಆದ ಮೇಲೆ 41 ಶುರು ಆಗುತ್ತಿತ್ತು .ಮೊದಲಿನಿಂದಲೂ ನನ್ನ ಗಣಿತ ಸ್ವಲ್ಪ weak ). ಸ್ವಲ್ಪ ಹೊತ್ತಿನ ನಂತರ ಪಚ್ಚು ಮಾತಾಡಿಸ್ಲಿಕ್ಕೆ ಬಂದರೆ " ದೋಸ್ತಿ ಇಲ್ಲದಿದ್ದವ ಆಸ್ತಿ ಮಾಡ್ತಾನೆ " ಎಂದು ಅನುನಾಸಿಕದಲ್ಲಿ ಲೇವಡಿ .ಆದರೆ ಮರುದಿನ ಬೆಳಿಗ್ಗೆ ಏನೂ ನಡೆದೇ ಇಲ್ಲವೋ ಎಂಬಂತೆ ಮತ್ತೆ ಜೋಡಿ . ಭಾನುವಾರ ಅಡಿಗರ ತೋಟದಲ್ಲಿ ಮರಕೋತಿ -ಲಗೋರಿ . ನಿಜವಾದ ಕೋತಿಗಳೇ ಅವರ ತೋಟಕ್ಕೆ ನಮ್ಮಷ್ಟು ಹಾನಿ ಮಾಡಿರಲಾರವು .

"ನಿಮ್ಮ ಮಾಣಿ ನಮ್ಮ ಹಿತ್ತಲಿನ ಕಟ್ಟೆ ಪೂರಾ ಹಾಳು ಮಾಡಿತು ". ಅಪ್ಪನ ಬಳಿ ಅಡಿಗರ complaint . ಆ ದಿನ ನಾಗರಬೆತ್ತಕ್ಕೆ full duty. 2-3 ದಿನ ಅಡಿಗರ ತೋಟಕ್ಕೆ ಗೈರುಹಾಜರಿ .4 ನೇ ದಿನ ಶಾಲೆಯಿಂದ ಬರ್ತಾ ಇರಬೇಕಾದ್ರೆ ಗಾಯತ್ರಿ ಮಾಮಿ (ಅಡಿಗರ ಹೆಂಡತಿ ) ಸಿಕ್ಕಿ " ಅಪ್ಪ ಹೊಡೆದ್ರ ಪುಟ್ಟಾ ?? ಜಾಣ ಮರೀ.... ನಾಳೆಯಿಂದ ಆಡಿಕೊಳ್ಳಿ ... ನಾನು ಇವರಿಗೆ ಹೇಳ್ತೀನಿ.... ಎಂಬ ಆಶ್ವಾಸನೆಯೊಂದಿಗೆ ಕೆನ್ನೆ ತುಂಬಾ ಮುತ್ತು ಮತ್ತು ಕಿಸೆ ತುಂಬಾ LactoKing ಚಾಕಲೇಟು ಕೊಟ್ಟು ಕಳಿಸುವರು. ನಮ್ಮ ಮುಷ್ಕರ ಅಂತ್ಯ . ಮರುದಿನದಿಂದ ಲಂಕೆಗೆ ಮತ್ತೆ ವಾನರಸೇನೆಯ ಧಾಳಿ . ಅಡಿಗರು ಹೈರಾಣ . ಮಳೆಗಾಲದಲ್ಲಿ ಗೋಲಿ-ಚಿನ್ನಿ ದಾಂಡು -ಚೆನ್ನೆಮಣೆ . ಎಲ್ಲ ಆಟದಲ್ಲೂ ಜಗಳ -ರಾಜಿ ಇದ್ದದ್ದೇ .

8 ನೇ ತರಗತಿಗೆ ಸೈಕಲ್ ಬಂದಿತು . Bathroom Toile ಬಿಟ್ಟು ಬಾಕಿ ಎಲ್ಲ ಕಡೆ ಸೈಕಲ್ ನಲ್ಲೆ ಸವಾರಿ. ಸೈಕಲ್ ಬಿಡೋ ಹುಚ್ಚಿನಿಂದ ಶಾಲೆಗೆ 100 % ಹಾಜರಿ . ಗಣಿತ ಪ್ರಮೇಯಗಳನ್ನು ನಡುನಿದ್ದೆಯಲ್ಲೂ ಹೇಳುವಂತೆ ಗಣಪತಿ ಮಾಷ್ಟ್ರು ಹೇಳಿ ಕೊಟ್ಟಿದ್ದರು . ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳ ಆಗಮನ . ಹೊಸ ಗೆಳೆಯರು , ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನಕ್ಕೆ ಸ್ಪರ್ಧೆ . ಗಣಿತ ನಾನು ಪ್ರಥಮ ಬಂದರೆ ಸಮಾಜದಲ್ಲಿ ಗಿರೀಶ . ಆದರೆ ಯಾವತ್ತೂ ಈ ವಿಷಯದಲ್ಲಿ ಜಗಳ ಮಾಡಿದ್ದಿಲ್ಲ .ಜೊತೆಯಲ್ಲೇ ಓದಿಕೊಳ್ಳುತ್ತಿದ್ದೆವು . ವಾರ್ಷಿಕೋತ್ಸವದಲ್ಲಿ ಆಟೋಟಗಳಲ್ಲಿ ಭಾಗವಹಿಸಿ ಭಾರೀ ಮುಖಭಂಗ . 800 ಮೀಟರ್ ಓಟವನ್ನು ಓಡಲಾಗದೆ ಅರ್ಧದಲ್ಲೇ ಬಿಟ್ಟರೆ ಹೈ ಜಂಪ್ ನಲ್ಲಿ ಪ್ರತೀ ಬಾರಿ foul .ಆದರೆ ಚೆಸ್ ನಲ್ಲಿ ಸೆಮಿಫೈನಲ್ ತನಕ ಹೋಗಿದ್ದೆ . ಚತುರ್ಥಿ , ರಾಮನವಮಿ ಸಮಯದಲ್ಲಿ ಪೇಟೆ ದೊಡ್ಡ ಗಣಪತಿ ದೇವಸ್ಥಾನದ ಎದುರು ಓಕುಳಿ ಆಡಿ " ಗಜಾನನ ವಾದ್ಯ ವೃಂದ ದವರ " ರಿದಂ ಗೆ ಪಕ್ಕಾ ಕುಣಿತ . ಎಲ್ಲರೂ ಮೆಚ್ಚಿ SONY TV ಯ BOOGIE_WOOGIE ಗೆ Reccommond ಮಾಡುವವರಿದ್ದರು .10ನೇ ತರಗತಿಯಲ್ಲಿ ಶಾಲಾ ವಿದ್ಯಾರ್ಥಿ ಮುಖಂಡ . ಸಣ್ಣ ಪ್ರಾಯದಲ್ಲೇ ರಾಜಕೀಯ ಪ್ರವೇಶ . ಆಪ್ತರೊಂದಿಗೆ ದ್ವೇಷ .( ಶನಿವಾರ ಸ್ಪೆಷಲ್ ಕ್ಲಾಸ್ cancel ಮಾಡಿಸಲಿಲ್ಲವೆಂದು ). Public exam . 590/625. ತಾಲ್ಲೂಕಿಗೆ ಪ್ರಥಮ . ಅಭಿನಂದನೆಗಳ ಸುರಿಮಳೆ .

ಆಮೇಲೆ ಕಾಲೇಜು ಪ್ರವೇಶ . ವಿಜ್ಞಾನ ವಿಭಾಗದ ಆಯ್ಕೆ . ಅವಳೊಡನೆ ಪ್ರೇಮ ( ಈ "ಅವಳು" ಕೇವಲ ಕಾಲ್ಪನಿಕ ). ಯೌವನದ ಹುಮ್ಮಸ್ಸಿನಲ್ಲಿ ಕನಸಿನ ಗೋಪುರಗಳನ್ನು ಕಟ್ಟತೊಡಗಿದೆನು .ಅವಳ ಗಲ್ಲದ ಹೊಂಡದಲ್ಲೇ ಬಿದ್ದು ಹೋಗಿದ್ದೆ. ನನ್ನೊಳಗಿನ ಕವಿಯನ್ನು ಬಡಿದೆಬ್ಬಿಸಿದವಳು ಅವಳೇ . ನನ್ನ ತಲೆಗೆ ಜೆಲ್ಲು (Gel) ಕೈಯಲ್ಲಿ ಸೆಲ್ಲು ವೇಷಭೂಷಣಗಳಲ್ಲಿ ಸ್ಟೈಲು ಶುರುವಾಯಿತು. ಯಾವತ್ತೂ ಕಾಲೇಜ್ bunk ಮಾಡದ ನಾನು ರಕ್ಷಾಬಂಧನದ ದಿನ ಹೆದರಿ ಊರಿನ ಹೊರಗೆ ನದಿಯ ದಂಡೆಯ ಮೇಲೆ ಇಡೀ ದಿನ ಸುಮ್ಮನೆ ಕುಳಿತಿದ್ದು ಸತ್ಯ. Lab ನಲ್ಲಿ ಅವಳು ನನ್ನ Partner ಆದಾಗ ಸ್ವರ್ಗಕ್ಕೆ ಒಂದೇ ಗೇಣು ಅನ್ನಿಸಿತ್ತು .ಅವಳನ್ನು ಗುರಾಯಿಸುತ್ತಿದ್ದ ವಿಜಯನ ಸೈಕಲ್ ಚಕ್ರದಲ್ಲಿನ ಗಾಳಿಗೆ ಸ್ವಾತಂತ್ಯ್ರ ಕೊಟ್ಟಿದ್ದೆ . ಜಾಣ ಹುಡುಗ ಬೇಗನೆ ಅರ್ಥ ಮಾಡಿಕೊಂಡು ನನಗೆ side ಬಿಟ್ಟುಕೊಟ್ಟ . ಅವಳೂ ಕೂಡ ಸುತ್ತಿ ಬಳಸಿ ಸನ್ನೆ ಕೊಡುತ್ತಿದ್ದಳು . . ಒಟ್ಟಿಗೆ ತ್ಯಾವರೆಕೊಪ್ಪ ಅಭಯಾರಣ್ಯಕ್ಕೆ ಪ್ರವಾಸ ಹೋದಾಗ ಅಂತಾಕ್ಷರಿ ಆಡುವಾಗ ಅವಳು " ಎಲ್ಲೆಲ್ಲಿ ನೋಡಲಿ.. .....ನಿನ್ನನ್ನೇ ಕಾಣುವೆ..... " ಎಂದು ಹಾಡಿ ನನ್ನನ್ನು ನೋಡಿ ತುಟಿಯಂಚಿನಲ್ಲಿ ನಕ್ಕಾಗ ನಾನು ಕಂಡ ಕನಸುಗಳನ್ನು ಲೆಕ್ಕ ಹಾಕಲು 3 Scintific calculator ಬೇಕು. ನಾನೋ ನಮ್ಮ ಮಗನಿಗೆ LKG application form ತರುವುದೊಂದೇ ಬಾಕಿ . ಆದರೆ ಮನದ ಭಾವನೆಗಳನ್ನು ಹೇಳುವ ಧೈರ್ಯ ಕೊನೆಗೂ ಬರಲಿಲ್ಲ ಇಂದಿಗೂ ಆ ಧೈರ್ಯ ಇಲ್ಲ . ಮೊನ್ನೆ ( after 8 long years ) ಶಿವಮೊಗ್ಗದಲ್ಲಿ ಅವಳ ಮನೆಗೆ ಹೋದಾಗ "ಮಾಮಾ............." ಎಂದು ಅವಳ ಮಗ Slow motion ನಲ್ಲಿ ಬಂದು ನನ್ನ ಕಾಲ ಮೇಲೆ ಕುಳಿತಾಗ 10 ಜನ ಭಯೋತ್ಪಾದಕರು ನನ್ನ ಮೇಲೆ ಸಶಸ್ತ್ರ ಧಾಳಿ ಮಾಡಿದಂತೆ ಅನಿಸಿದ್ದು ನಿಜ .

ಆಮೇಲೆ CET ಪರೀಕ್ಷೆ . B.E ಗೋಸ್ಕರ ಮೈಸೂರು S.J.C.E. ನಲ್ಲಿ ಸೀಟು ಸಿಕ್ಕಿತು . ಮೊದಲ ಬಾರಿಗೆ
ಮನೆಯಿಂದ ದೂರ ಹೋಗುತಿದ್ದೆ . ಅಲ್ಲಿ ಹೋಗಿ ಮೊದಲಿಗೆ ಅಮ್ಮನ ನೆನಪು ,ಕಷ್ಟಕರ ಪಾಠಗಳು ಇದರಿಂದ ಕಂಗಾಲಾದ ನಾನು ಅಪ್ಪನಿಗೆ ಫೋನಾಯಿಸಿ "ಅಪ್ಪ ನಾನು ಇಂಜಿನಿಯರಿಂಗ್ ಬಿಟ್ಟು ನಿನ್ನ ಜೊತೆ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ "ಎಂದಿದ್ದೆ . ಆಮೇಲೆ ಅಲ್ಲಿನ ಹಾಸ್ಟೆಲು ವಾತಾವರಣ ಒಗ್ಗಿ ಹೋಯಿತು . ಪುನಃ ಹೊಸ ವಿಚಾರ, ಹೊಸ ಗೆಳೆಯರು . ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಕೆಲಸ ಕೂಡ ಸಿಕ್ಕಿತು . ಈಗ ಬೆಂಗಳೂರಿನಲ್ಲಿ ಕೆಲಸ ಈ ಸಂಸ್ಥೆಯಲ್ಲಿ ನಿಜಾರ್ಥದಲ್ಲಿ "ಹಗಲಿರುಳೂ " ಕೆಲಸ . ಹೇಳುತ್ತಾರಲ್ಲ "ಪ್ರಪಂಚವೇ ಮಲಗಿರಬೇಕಾದರೆ ಬುದ್ಧ ಎದ್ದ ". ಈಗ ನಾನು ಕೂಡ ಒಂದು ರೀತಿಯಲ್ಲಿ ಬುದ್ಧನೇ . ಗೆಳೆಯರೆಲ್ಲರೂ ಮನೆಯಲ್ಲಿ ಸುಖವಾಗಿ ಮಲಗಿರಬೇಕಾದರೆ ನಾನು ಆಫೀಸಿನಲ್ಲಿ Night Shift ಮಾಡುತ್ತಾ ಇರುತ್ತೇನೆ .ಕೆಲಸ ಸಿಕ್ಕಿದೆ . ಒಳ್ಳೆಯ ಸಂಬಳವಿದೆ .ಹಣಕ್ಕೆ ಯಾವ ಕೊರತೆಯೂ ಇಲ್ಲ . ಎಲ್ಲ ಸರಿ . ಆದರೆ " ಹರುಷ ಅಂಗಡಿ ಸರಕೇ ?? ಹೃದಯ ದೇಶ ಚಿಲುಮೆಯದು " ಎನ್ನುವಂತೆ , ಸುತ್ತಲೂ ನೂರು ಜನರಿದ್ದರೂ " ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು ?? ಎಂದು ಅನ್ನಿಸುವಾಗ ಪ್ರತೀ ದಿನ ಪ್ರತೀ ಕ್ಷಣ ನನ್ನೂರು ನನ್ನ ಜನರು ನನ್ನ ಕುಂದಾಪುರ Oops Sorry ನನ್ನ ಶಿವಮೊಗ್ಗ ನೆನಪಾಗುತ್ತದೆ

*********************************************
** ವಿಕಟಕವಿ *************************

Friday, December 5, 2008

ಕಲ್ಯಾಣಮಸ್ತು............

ಹೌದು...ನಾನೀಗ ಬರೆಯುತ್ತಿರುವುದು ಮದುವೆ ಬಗ್ಗೆ. ಸ್ವಂತ ಅನುಭವ ಇಲ್ಲ ನಿಜ ಆದರೆ ಅಲ್ಲಿ -ಇಲ್ಲಿ ಕೇಳಿ -ಓದಿ- ನೋಡಿ ಮದುವೆ ಬಗ್ಗೆ ತುಂಬಾ ತಿಳಿದುಕೊಂಡಿದ್ದೇನೆ . "ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡಿ" ಎಂಬ ಗಾದೆಯೇ ಇದೆ . ಸ್ವಂತ ಅನುಭವದ ಮೇಲೆ ಒಂದು ಸಂಪುಟವನ್ನೇ ರಚಿಸುತ್ತೇನೆ . ಈಗ ಅದರ Trailors ನೋಡಿ ಆನಂದಿಸಿ . ಯಾಕೆಂದರೆ Picture abhi bhi baaki hai mere dost ......

ಮದುವೆ ಗೆ ಅಗತ್ಯ ಜನರು :
ಮದುವೆ ಗಂಡು ಯಾನೆ ವರ : "ಸಾಯೋ ಕುರಿಗೆ ಮೇಯೋದೆ ಕೆಲಸ " ಅನ್ನುತ್ತಾರಲ್ಲ ಹಾಗೆ ಇವನು . ನಕ್ಕು - ನಲಿದಾಡುತ್ತ ಭಾರೀ ಸಂತೋಷದಿಂದಿರುತ್ತಾನೆ . ಅದೇ ಅವನ ಕೊನೆಯ ನಗು . ನಗದು ತೆಗೆದುಕೊಂಡು ನಗುವುದ ಮರೆಯುವ ಭೂಪನೆಂದರೆ ಇವನೇ .

ಮದುವೆ ಹೆಣ್ಣು urf ವಧು :- ಜಿರಳೆಗೆ ಮೀಸೆ ತೂರಿಸ್ಲಿಕ್ಕೆ ಜಾಗ ಕೊಟ್ಟರೆ ಆಮೇಲೆ ಇಡೀ ಜೀವ ನುಗ್ಗುತ್ತದಂತೆ . ಅಂತೆಯೇ ಮದುವೆಗೆ ಮುನ್ನ ತಗ್ಗಿ ಬಗ್ಗಿ ನಡೆಯುವ ಮದುವೆಯ ನಂತರ "Ring Master" ನಂತೆ ಗಂಡನೆಂಬ ಬಡಪಾಯಿಯನ್ನು ಕಣ್ಣ ಸನ್ನೆಯಲ್ಲೇ ಕುಣಿಸುವ ಕನ್ಯಾಮಣಿ .

ಸಂಬಂಧಿಗಳು:-
2)ಅಪ್ಪ-ಅಮ್ಮ :ಹುಡುಗ ಹುಡುಗಿಯ ನಡುವೆ ಮುಂದೆ ನಡೆಯುವ Boxing ಪಂದ್ಯಾಟಕ್ಕೆ referee ಗಳು . Boxing ಪಂದ್ಯಕ್ಕೆ ಮೊದಲು ಸ್ಪರ್ಧಾಳುಗಳು shake hand ಮಾಡುವಂತೆ ವಧು -ವರರ ಕೈ ಮಿಲಾಯಿಸಿ ಶಾಸ್ತ್ರೋಕ್ತವಾಗಿ ವಾದ್ಯದವರ ಮುಖಾಂತರ ರಣಕಹಳೆ ಮೊಳಗಿಸುವವರು .
3) ಇತರರು :- ವಧುವಿನ ವಿದಾಯದ ಸಮಯದಲ್ಲಿ ಕಣ್ಣೀರು ಹಾಕಲು ಸ್ಪೆಷಲ್ ಬುಲಾವ್ ನಿಂದ ಬಂದ ಮಹಿಳೆಯರು . ಸ್ವಂತ ಕಾಲ ಮೇಲೆ ಕೊಡಲಿಯೇಟು ಹಾಕಿಕೊಳ್ಳುತ್ತಿರುವ ವರನ ಗ್ರಹಚಾರಕ್ಕೆ ಕನಿಕರಿಸುತ್ತಾ ಮೂಕಪ್ರೇಕ್ಷಕರಾಗಿ ನೋಡುತ್ತಿರುವ "ಹಿತೈಷಿಗಳು ".
4)ಕಲ್ಯಾಣ ಮಂಟಪ : ಕುಸ್ತಿ ಅಖಾಡ
5) ಪುರೋಹಿತರು : ಸಂಸ್ಕೃತದಲ್ಲಿ match ನ running commentry ಕೊಡುವವರು .

**************************** TYPES OF MARRIAGE ****************************

1)ಸ್ವಯಂವರ : ಪುರಾಣ ಕಾಲದಲ್ಲಿ ಮಹಾರಾಜರು ತಮ್ಮ ಮಗಳಿಗೆ ತಕ್ಕ ವರ ಹುಡುಕಲು ಬಳಸುತ್ತಿದ್ದ ವಿಧಾನ . ಎಲ್ಲ ಅತಿರಥ -ಮಹಾರಥರನ್ನು ಒಂದು common auditorium ನಲ್ಲಿ ಕರೆದು " All the participents are requested to come to the dias and show their talents.The winner is awarded with my daughter" ಎಂದು ಮಹಾರಾಜ announce ಮಾಡುತ್ತಿದ್ದ. SMS voting ಮತ್ತು commercial break ಇರಲಿಲ್ಲ ಅಷ್ಟೆ . ಅದು ಬಿಟ್ಟರೆ ಇದೂ ಒಂದು ರೀತಿಯ reality show.

2) ಇನ್ನು ನಮ್ಮ ಕೃಷ್ಣನದ್ದೋ ಒಂದು ಹೊಸ ಕೇಸ್ . ನಮ್ಮ MNC ಥರ mass recuitment. ಒಂದೇ ಸಲ 16000 ಮಂದಿ . ಮದುವೆ ಕಾರ್ಯ ಪೂರೈಸಲು ಕೆಲವಾರು ವರ್ಷ ಕಳೆದಿರಬಹುದು . ಆಮೇಲೆ ರಾಜಮನೆತನವೆಂದರೆ ಸಾಮಾನ್ಯವೇ ?? reception ,party ಅದು ಇದು ಎಂದು ಇನ್ನೊಂದಿಷ್ಟು ವರ್ಷ . ಮದುವೆಗೋ ಊಟಕ್ಕೆ ಬಂದವರಿಗಿಂತ ವಧುಗಳೇ ಹೆಚ್ಚು . Offset Printers ನವರು ಒಂದು C Programme ಬರೆದು ಅದರಲ್ಲಿ bride_name ಎಂದು variable declare ಮಾಡಿ ಆಮಂತ್ರಣ ಪತ್ರ print ಮಾಡಿರಬಹುದು. ವಾದ್ಯದವರ 25 ತಂಡ shift basis ನಲ್ಲಿ ಕೆಲಸ ಮಾಡುತ್ತಿದ್ದರಂತೆ . ಪುರೋಹಿತರೋ "ಹಾ ಸುಶೀಲ ನಿನ್ನ ಮದುವೆ ಮುಗಿಯಿತು ಮುಂದಿನ ತಿಂಗಳು 21 ನೇ ತಾರೀಕು ಸಂಜೆ 5:30 ಕ್ಕೆ ಬಾ ಅರಿಶಿನ -ಕುಂಕುಮ ಕಾರ್ಯಕ್ರಮ ಇದೆ ಎಂದು ಹೇಳಿ Processed list ನಲ್ಲಿ tick ಮಾಡಿಕೊಂಡು ,ಹಾ ..... next candidate ...... ಎಂದು ಕೂಗುತ್ತಿದ್ದರಂತೆ .ಇನ್ನು ಅಳುವವರಿಗೆ seperate ಛತ್ರ . ಇತ್ತ ಪುರೋಹಿತರು ಮದುವೆ ಮುಗಿಯಿತು ಅಂದ ಕೂಡಲೇ respective family ಯ ಮಹಿಳಾ ಮಣಿಯರು ಅಲ್ಲಿಗೆ ಹೋಗಿ ಅಳುವ ಕಾರ್ಯಕ್ರಮ ಶುರು ಮಾಡುತ್ತಿದ್ದರು .ಕೃಷ್ಣನೋ ದಿನಕ್ಕೆ 500 ರಂತೆ 32 ದಿನ ಕುಳಿತು ತನ್ನ ಹೆಂಡತಿಯರ ಹೆಸರು ಬಾಯಿಪಾಠ ಮಾಡುತ್ತಿದ್ದನಂತೆ . ಮೊದಲ ದೀಪಾವಳಿಗೆ ಅದೆಷ್ಟು ಸಲ ಎಣ್ಣೆ ಸ್ನಾನ ಮಾಡಿದನೋ ತಿಳಿಯದು . ಈ ಕಾಲದಲ್ಲಾಗಿದ್ದರೆ TCS -Infy ಯವರು ಈ ಹೆಂಡತಿಯ ಹೆಸರಿಗೋಸ್ಕರ ಹೊಸ database ,ಎಲ್ಲಾ ಹೆಂಡತಿಯರಿಗೆ ಒಂದೊಂದು access-card Login-ID ,password ಕೊಟ್ಟು ಹೊಸ software create ಮಾಡುತ್ತಿದರು .

ಇನ್ನು ಎಂತೆಂಥವರು ಜೋಡಿಯಾಗುತ್ತಾರೆ ನೋಡಿ ...............

ಅವಳೋ ಮಹಾತಾಟಕಿ ಅವನೋ ಒರಟು ಜಗಳಗಂಟ .ಪ್ರತೀ ದಿನ ಹಾವು-ಮುಂಗುಸಿ ಥರ ಜಗಳ .ಇವರಿಬ್ಬರಿಗೆ ಮದುವೆಯೆಂದು ತಿಳಿದ ಕೆಲವರು ಬೆಚ್ಚಿ ಬಿದ್ದರೆ ಇನ್ನು ಕೆಲವರು ಊರು ಬಿಟ್ಟರು . ಮದುವೆಯ ದಿನ hall ನ ಸುತ್ತ STF ನವರ ಪಹರೆ .ಯಾಕೆಂದರೆ ಇವರಿಬ್ಬರು ಒಂದೇ ಸೂರಿನಡಿ ಇದ್ದರೆ ಸುತ್ತ-ಮುತ್ತ 200 ಮೀಟರ್ ವಲಯ ಜನವಸತಿಗೆ ಯೋಗ್ಯವಲ್ಲ ಅಲ್ಲಿ ಸದಾ ಕಾಲ ಕರ್ಫ್ಯೂ ಇರುತ್ತದೆ ಎಂದು ಭಾವಿಸಿದ್ದರೆ ಮದುವೆಯ ನಂತರ ಅವರಿಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಾರೆ . ಇನ್ನೊಂದೆಡೆ ಮದುವೆಗೆ ಮೊದಲು ಶೀತವಾದರೆ ಆ ssssss ಕ್ಷೀ ssss ಎಂದು ಸೀನದೆ ಲೋಕಲ್ ಬಾಜಲ್ ಬಾಟ್ಲಿ ಓಪನ್ ಮಾಡಿದಂತೆ "ಇಚೀ" ಎಂದು ಸೀನುವ ಹುಡುಗಿಯನ್ನು ಕಂಡು "ಹುಡುಗಿ ಸ್ವಲ್ಪ ಮೌನಿ ತಣ್ಣೀರನ್ನು ತಣಿಸಿ ಕುಡಿಯುವವಳೆಂದುಕೊಂಡರೆ ಮದುವೆಯ ನಂತರ ಮನೆಯ ಹೆಂಚು ಹಾರಿ ಹೋಗುವ ರೀತಿಯಲ್ಲಿ ತಾರಕಸ್ವರದಲ್ಲಿ ಚೀರುವ ಹೆಂಡತಿಯನ್ನು ಕಂಡು ಅಕ್ಕ - ಪಕ್ಕದವರು "ಏನಪ್ಪಾ .. ಇವಳು ನಿನ್ನ ಎರಡನೇ ಸಂಸಾರಾನಾ ??" ಎಂದು ಕೇಳಿದಾಗ " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯೀ " ಅಂದುಕೊಂಡು ಮದುವೆಯಾದೆನು ಆದರೆ ಕೋಟಿ ರುಪಾಯಿ ಖರ್ಚು ಎಂದು ಆಮೇಲೆ ತಿಳಿಯಿತು ಎನ್ನುತ್ತಾನೆ .

3)ಇನ್ನೊಂದೆಂದರೆ ಕಲಿಯುಗದ Love-marriage. ಕಾಡಿಗೆಗೆ ಸವಾಲೆಸೆಯುವಂತೆ ಕೃಷ್ಣವರ್ಣದ ಹುಡುಗ ಬೆಳದಿಂಗಳನ್ನೂ ನಾಚಿಸುವಂತೆ ಶ್ವೇತವರ್ಣದ ಹುಡುಗಿಯನ್ನು ಮದುವೆಯಾದಾಗ ಹುಟ್ಟುವ ಮಗುವಿನ ಮೇಲೆ Zebra ಥರ ಪಟ್ಟಿಗಳಿರುತ್ತವೆ ಎಂಬುದು ಊರ ಜನರ ಭಾವನೆ .ಅದರ ಮೇಲೆ ದಂಪತಿಗಳು ನಮ್ಮದು Love Marriage ಎಂದಾಗ ಪ್ರೇಮ ಕುರುಡು ಮಾತ್ರವಲ್ಲ ಕುಂಟು ಕಿವುಡು ಮೂಕ ಎಲ್ಲವೂ ಆಗಿದ್ದು ಪ್ರೇಮದ ಯಾವುದಾದರೂ part working condition ನಲ್ಲಿ ಇದೆಯೋ ಇಲ್ಲವೋ ಎಂದು ಸಂಶಯ ಬರುವುದು ಸಹಜ .

ವಿದೇಶಗಳಲ್ಲಿ ದಿನಕ್ಕೊಬ್ಬ ಜೀವನ ಸಂಗಾತಿಯಾದರೆ ನಮ್ಮ ದೇಶದಲ್ಲಿ ಜೀವನಕ್ಕೊಬ್ಬ ಸಂಗಾತಿ . ಅದಲ್ಲದೆ 7 ಜನ್ಮಗಳ contract ಬೇರೆ . ಹೀಗೆ ಮದುವೆಯೆಂಬುದು ಎಲ್ಲರ ಜೀವನದ ಒಂದು ತಿರುವು . ಆ ತಿರುವು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದು ಪರಸ್ಪರ ಹೊಂದಾಣಿಕೆಯ ಮೇಲೆ ನಿಂತಿದೆ .
ಬೆಚ್ಚನೆಯ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಚೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ -ಸರ್ವಜ್ಞ
ಎಂಬ ತ್ರಿಪದಿಯಂತೆ ಎಲ್ಲರ ವೈವಾಹಿಕ ಜೀವನ ಸುಖಮಯವಾಗಲಿ ಎಂದು ಹಾರೈಸುತ್ತೇನೆ .
So, In short ಎಲ್ಲರಿಗೂ ಕಲ್ಯಾಣಮಸ್ತು !!!!!!!!!!!!
******************************************** ವಿಕಟಕವಿ **********************

Tuesday, November 25, 2008

ಮುಂಬೈಯೊಳಗೊಂದು ಮನೆಯ ಮಾಡಿ ರೈಲಿಗಂಜಿದೊಡೆಂತಯ್ಯಾ ????
********** "Platform ಕ್ರಮಾಂಕ್ ಚಾರ್ ವರ್ ಆಲೇಲಿ ಲೋಕಲ್ ಆಟ್ ವಾಜ್ಹೂನ್ ಇಕುನ್ ಚಾಲಿಸ್ ಮಿನಿಟಾಂಚಿ ಹಾರ್ಬರ್ ಲೈನ್ ವರೂನ್ ಶಿವಾಜಿ ಟರ್ಮಿನಸ್ ಲಾ ಜ್ಹಾಣಾರಿ ಧೀಮಿ ಲೋಕಲ್ ಆಹೇ "

--------------7:30 ಕ್ಕೆ ರೈಲ್ವೆ ಸ್ಟೇಶನ್ ನಲ್ಲಿದ್ದ ನಾನು ಬಿಕೋ ಎನ್ನುತ್ತಿದ್ದ ಸ್ಟೇಷನ್ನನ್ನು ನೋಡಿ ,ಅಬ್ಬಾ.... ಇಂದಾದರೂ ಸುಖವಾಗಿ ಕುಳಿತು ಹೋಗಬಹುದು ಎಂದು ಮನಸ್ಸಿನ ಮಂಡಿಗೆ ತಿನ್ನುತ್ತಿದ್ದೆ . ಆದರೆ .... ಎಲ್ಲಿ ? ಏನು ?ಹೇಗೆ? ಎತ್ತ ? ತಿಳಿಯದು ರೈಲಿನ ಆಗಮನಕ್ಕೆ 2 ನಿಮಿಷ ಮೊದಲು ಇರುವ 10 ದಿಕ್ಕು ಸಾಲದೇ ಇನ್ನೆರಡು extra ದಿಕ್ಕುಗಳನ್ನು ಸೃಷ್ಠಿಸಿಕೊಂಡು ಜನಪ್ರವಾಹ ಹರಿದು ರೈಲಿನಲ್ಲಿ ಬಿಡಿ platform ನಲ್ಲೂ ನಿಲ್ಲಲು ಜಾಗ ಇಲ್ಲದಾಯಿತು . " ಹ್ಹಾ .... ಚಲಾ .... " " ಉತರ್ಕೆ ಚಡೋ ಭಾಯಿ" ಕೂಗು. Engineering college ,love ಮತ್ತು local train ಈ ಮೂರು ವಿಷಯಗಳಲ್ಲಿ common ಏನೆಂದರೆ ಒಳಗಿರುವವರು ಹೊರಗೆ ಬಂದರೆ ಸಾಕೆಂದುಕೊಂಡರೆ ಹೊರಗಿರುವವರು ಒಳಗೆ ಸೇರುವ ತವಕದಿಂದಿರುತ್ತಾರೆ . Mechanical ನಲ್ಲಿ Engineering ಮಾಡಿರುವ ನಾನು Ph.D ಗಾಗಿ “Physical analytical psychological and logical study on Mubai-Local trains and the crowd,Arrival-Departure timings,Handling the crowd, Tragedies included and strategies to get in and get out in a safe and secured way” ಎಂಬ ಮಹಾಪ್ರಬಂಧವನ್ನು Railway University ಗೆ ಮಂಡಿಸಿರುತ್ತೇನೆ . ಅದರ ಆಯ್ದ ಭಾಗಗಳನ್ನು ಈ ಲೇಖನದಲ್ಲಿ ಪ್ರಕಟಿಸಿರುತ್ತೇನೆ .
--------------------------------© Copyrights Reserved .----------------

ಮುಂಬೈ -ಮಹಾನಗರಿ -ವ್ಯಾಪಾರ ವಹಿವಾಟುಗಳ ಕೇಂದ್ರ -ಭಾರತದ ಆರ್ಥಿಕ ರಾಜಧಾನಿ ಇನ್ನೂ ದೊಡ್ಡ ಉಪಮಾಲಂಕಾರ ಬಳಸಿ ಮುಂಬೈ ನಗರವನ್ನು ವರ್ಣಿಸಬಹುದು . ಆದರೆ " History is always written by the winner" ಎಂಬ ಕಟು ಸತ್ಯ ಇಲ್ಲಿ ಬಂದಾಗಲೇ ತಿಳಿಯುತ್ತದೆ . ತಾಜ್ ಹೋಟೆಲ್ ನ ರೂಮಿನಲ್ಲಿ A/c temperature 25* ಇದೆ,ಗರ್ಮಿ ಹೆಚ್ಚಾಗಿದೆ temperature ಕಡಿಮೆ ಮಾಡಿ ಎಂದು complaint ಮಾಡುವವರು ಕೆಲವರಾದರೆ "ಸೋರುತಿಹುದು ಮನೆಯ ಮಾಳಿಗೆ ...... ಬಡತನದಿಂದ ... ಎಂದು ಹರಕು ಗುಡಿಸಲಿನಲ್ಲಿ ಬರಿ ನೆಲದ ಮೇಲೆ ಬರಿಮೈಯಲ್ಲಿ ಮಲಗುವವರು ಕೆಲವರು . Mrine drive ನ Queen's necklace,Juhu beach,Gateway of india ದ ವರ್ಣನೆಯನ್ನು ಬಹಳಷ್ಟು ಲೇಖನಗಳಲ್ಲಿ ನೀವು ಓದಿರಬಹುದು . ಆದರೆ ಬೊರಿವಿಲಿ ,ಅಂಧೇರಿ ,ಕುರ್ಲಾ ದ ಸ್ಟೇಷನ್ ಪಕ್ಕದ slum area ದಲ್ಲಿರುವ ಜನರ ಕಂಡು ಕೇಳರಿಯದ ದಾರುಣ ಬದುಕಿನ ಉಲ್ಲೇಖ ನೀವೆಲ್ಲೂ ನೋಡಿರಲಾರಿರಿ . ಐಷಾರಾಮದ ಶೋಕಿಯ ಬದುಕಿನಲ್ಲಿ ಕೆಲವರಿದ್ದರೆ ಅದರ ಎರಡರಷ್ಟು ಜನ ಕಿತ್ತು ತಿನ್ನುವ ಬಡತನದ ಬೇಗೆಯಲ್ಲಿ ಒಪ್ಪತ್ತಿನ ಊಟಕ್ಕೆ ದಿನವಿಡೀ ಬೆವರಿಳಿಸುತ್ತಾರೆ. ದಿನಬೆಳಗಾದಂತೆ Nature's call ಗಳಿಗೆ ಓಗೊಟ್ಟು ನಿರ್ಲಜ್ಜರಾಗಿ ರೈಲ್ವೇ ಹಳಿಯ ಪಕ್ಕದಲ್ಲಿ ಪುರುಷರು call attend ಮಾಡಿದರೆ ಮಹಿಳೆಯರು call on hold ಇಟ್ಟು ರೈಲಿನ ನಿರ್ಗಮನಕ್ಕೆ ಕಾಯುತ್ತಿರುತ್ತಾರೆ . ಹೀಗೆ A/c ರೂಮಿಗಿಂತ ಬಿಸಿ-ಬಿಸಿ ಜೋಪಡಿಗಳಲ್ಲಿ ಮಲಗುವವರೇ ಹೆಚ್ಚು . ಇದೆ ಹಾಸ್ಯ ಲಹರಿಯಲ್ಲಿ ಮುಂಬೈ ನಗರದ ನೈಜ ಚಿತ್ರಣ .

------ಇನ್ನು ಉಳಿದವರ ಜೀವನ ಒಂದು ಶೃತಿ - ಲಯಕ್ಕೆ ಸೆಟ್ ಆಗಿರುತ್ತದೆ . ಬೆಳಿಗ್ಗೆ 6am ಏಳುವುದು ,7:10ಕ್ಕೆ Direct ಅಂಧೇರಿ ಲೋಕಲ್ ,08:45 ಕ್ಕೆ office . ಸಂಜೆ 06:30 ಕ್ಕೆ office ನಿಂದ ಹೊರಟು ನಡುವೆ ಮಾರ್ಕೆಟ್ ನಿಂದ ಹಣ್ಣು - ತರಕಾರಿ ತೆಗೆದುಕೊಂಡು 9 pm ಗೆ ಮನೆಗೆ ಹೋಗುವುದು . Weekend ನಲ್ಲಿ ಯಾವುದೋ ಒಂದು mall ನಲ್ಲಿ ಸಪರಿವಾರ ಸಮೇತ Shopping . ಇದೆ ಕ್ಯಾಸೆಟ್ಟನ್ನು ಪ್ರತೀ ದಿನ ಪ್ರತೀ ವಾರ Rewind and Play ಮಾಡುವ ಒಂದು ರೀತಿಯ ಯಾಂತ್ರಿಕ ಬದುಕು . ಇನ್ನು ಅವಿವಾಹಿತರಾದರೆ ಗುಂಡು-ತುಂಡಿನೊಂದಿಗೆ ಕೆಲವರಾದರೆ ಇಡೀ ವಾರದ pending ನಿದ್ರೆಯ balancing ನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಕೆಲವರು . ತಿಂಗಳ ಮೊದಲ sunday ಸಂಬಳ ಬಂದ ಹುಮ್ಮಸ್ಸಿನಲ್ಲಿ ಸ್ಟಾರ್ ಹೋಟೆಲ್ ನಲ್ಲಿ ಚಿಕನ್ ತಂದೂರಿ ತಿಂದರೆ month end ನಲ್ಲಿ " ಸ್ವಲ್ಪ tight ಮಗಾ ....." ಎಂದೋ ಅಥವಾ " Stomach upset " ನ ನೆಪ ಮಾಡಿಯೋ ಪರಿಶುದ್ಧ ಸಸ್ಯಾಹಾರಿಗಳಾಗಿ ಲೋಕಲ್ ಜಂಬೋ ವಡಾ-ಪಾವ್ ಗೆ ಶರಣಾಗತಿ .

************ ENTER==MISSION==LOCAL==TRAIN***********

*******Local Train , ಮುಂಬೈ ನಗರದ ಜೀವನಾಡಿ . ಮುಂಬಾ ದೇವಿಯ Official transport Vehicle. ಈ ಮುಂಬ ದೇವಿಯನ್ನು ಒಲಿಸಿಕೊಳ್ಳಲು ಭಾರೀ ಕಠೋರ ತಪಸ್ಸು ಅಗತ್ಯ . ಅದೇನೆಂದರೆ 2 ವರ್ಷ ವಿರಾರ್ ನಿಂದ ಬೊರಿವಿಲಿಯ ತನಕ ಬೆಳಿಗ್ಗೆ 9 ರಿಂದ 10:30 ರೊಳಗೆ 2nd class ನಲ್ಲಿ ಪಯಣಿಸಿ ಸಂಜೆ 6:30 ರಿಂದ ಗ 8 ರೊಳಗೆ ವಾಪಸ್ ಬರಬೇಕಂತೆ . ನಿರಾಹಾರ ನಿರ್ಜಲ ತಪಸ್ಸಿಗಿಂತ ಇದು ತುಂಬಾ ಕಠಿಣ ಯಾಕೆಂದರೆ ಬದುಕಿ ಉಳಿಯುವ Probability ತುಂಬಾ ಕಡಿಮೆ . ಪುರಾಣ ಕಾಲದ ರಾಕ್ಷಸರು ತಾವು ಅಮರರಾಗಲು ತಮ್ಮ ಎಲ್ಲಾ talent use ಮಾಡಿ ಏನೇನೋ ವರ ಕೇಳಿದರೂ ದೇವರು ಅದರಲ್ಲಿ ಒಂದಲ್ಲ ಒಂದು Loop-Hole ಹುಡುಕಿ ಅದನ್ನು ಬಳಸಿ ಅವರ ಸಂಹಾರ ಮಾಡುತ್ತಿದ್ದ .ಆದರೆ ಯಾವುದೇ ರಾಕ್ಷಸ "ಮುಂಬೈ ನ ಒಂದು ಲೋಕಲ್ ಟ್ರೈನ್ ಬೆಳಿಗ್ಗೆ 9 ಕ್ಕೆ ವಿರಾರ್ ನಿಂದ CST ತನಕ ಒಬ್ಬನೂ ಪ್ರಯಾಣಿಕನಿಲ್ಲದೆ ಚಲಿಸಿದ ದಿನ ನನ್ನ ಮರಣ ಬರಲಿ ಎಂದಿದ್ದಲ್ಲಿ ಅವನು ಖಂಡಿತಾ ಅಮರನಾಗುತ್ತಿದ್ದ .ಹೀಗೆ ಲೋಕಲ್ ಟ್ರೈನ್ ಇಲ್ಲದ ಮುಂಬೈ ನಗರ ಲಾಡಿ ಇಲ್ಲದ ಪೈಜಾಮದಂತೆ ಅಪೂರ್ಣ ಮತ್ತು ಅನೂಹ್ಯ .

ಇನ್ನು ರೈಲ್ವೇ ಸ್ಟೇಷನ್ನನ್ನು ವರ್ಣಿಸುವುದಾದರೆ ಅದು ಹೀಗಿದ್ದೀತು.....

Train ನ ನಿರೀಕ್ಷೆಯಲ್ಲಿ ಪ್ರಯಾಣಿಕರು , 24><7 ಗಸ್ತು ತಿರುಗುವ ಪೇದೆ . ದೂರದಲ್ಲಿ ಮಲಗಿರುವ ಭಿಕ್ಷುಕ & family . ಒಂದು ವಡಾ-ಪಾವ್ ಅಂಗಡಿ . ಬುಟ್ಟಿಯಲ್ಲಿ ಹೆಚ್ಚಿದ ನೀರುಳ್ಳಿ -ನಿಂಬೆ ಮಸಾಲೆಯೊಂದಿಗೆ ಚುರುಮುರಿಯವನು . ನೀರು ಚಿಮುಕಿಸಿ Platform clean ಮಾಡುವ Railway department ಕೆಲಸದವರು . ಕಿತ್ತಳೆ -ಮುಸುಂಬಿ -ಕರ್ಚೀಪು-ಆಟಿಕೆ -Train Schedule Book ಮಾರುವವರು ಇತ್ಯಾದಿ . ಇನ್ನು ಹೊಸದಾಗಿ ಮುಂಬೈ ಗೆ ಬಂದು ಯಾವ ರೈಲು ಹಿಡಿಯಬೇಕೆಂದು ತಿಳಿಯದೆ ಹತ್ತು ಜನರ ದಿಗ್ದರ್ಶನದಿದಂದ ದಿಕ್ಕುತಪ್ಪಿ Display Board ನ 10:57 BR ನಲ್ಲಿ BR ನ ಅರ್ಥ ಬೇಲಾಪೂರ್ ,ಬದ್ಲಾಪೂರ್ , ಬೊರಿವಿಲಿ, ಬಾಂದ್ರಾ ಇವುಗಳಲ್ಲಿ ಯಾವುದೆಂದು ತಿಳಿಯದೆ ಕಣ್ಣು ಮಿಟುಕಿಸುತ್ತಾ ಕಂಗಾಲಾಗಿರುವ ನವ-ಪ್ರಯಾಣಿಕ . Track ನ ಮೇಲೆ ಎಲ್ಲ Brand ನ ಗುಟ್ಕಾ ಪ್ಯಾಕೆಟ್ ಮತ್ತು ಅದರ ಕೆಂಪು ರಂಗೋಲಿ .
ರೈಲಿನ ಒಳಗಿನ ವರ್ಣನೆ ಬಹಳ ಸುಲಭ . "ಜನರು ". ನ್ಯೂಟನ್ ನ ಚಲನೆಯ ಯಾವ ನಿಯಮಗಳೂ ಇಲ್ಲಿ ಅನ್ವಯಿಸುವುದಿಲ್ಲ . ಇಲ್ಲಿ ಒಂದೇ ನಿಯಮ Might is Right . ಒಂದು ವೇಳೆ ವಿಜ್ಞಾನ -ತಂತ್ರಜ್ಞಾನಗಳೊಂದಿಗೆ ತರ್ಕ -ಗಣಿತ -ಛಂದಸ್ಸನ್ನು ಮೇಳೈಸಿ ಐನಸ್ಟೀನ್ -ನ್ಯೂಟನ್-ರಾಮನ್ ರ ಕೊಡುಗೆಗಳ ಸಹಕಾರದಿದಂದ ಒಂದು ಹೊಸ ನಿಯಮ ಸೃಷ್ಟಿಸಿದರೆ ಅದು
"The probability of a person getting down in a specific station is directly proportional to the number of people getting down the train in that station and inversly proportional to the number of people getting into of the train in the same station for a given train hault time ಎಂದಾಗಬಹುದು
So,
P = K (People in ) / (Peopleout )
K = 0.5 for borivili to Virar .
K = 0.7 Andheri, Thane.
K = 0.63 for Kurla Dadar.
K = 0.95 for Harbour line beyond Vashi.

ಜನ -ಜನ-ಜನ ನೂಕು-ನುಗ್ಗಾಟ . First class,Second class, Ladies compartment,Goods compartment ಎಂಬ ಯಾವ ಮುಲಾಜು - ತಾರತಮ್ಯವಿಲ್ಲದೆ ಟ್ರೈನ್ ನೊಳಗಿನ ತ್ರಿಕಾಲ ಸತ್ಯ "The eternal Truth" . ಒಳಗೆ ಹತ್ತಿದ ನಂತರ ಮತ್ತು ಕೆಳಗೆ ಇಳಿದ ನಂತರ ನಿಮ್ಮ ದೇಹದ ಎಲ್ಲ ಪಾರ್ಟ್ ಗಳು ನಿಮ್ಮೊಂದಿಗಿದೆಯೋ ಇಲ್ಲವೊ ಎಂದು check ಮಾಡಿಕೊಳ್ಳಬೇಕು . ಒಳಗೆ ಹತ್ತುವ ಮುನ್ನ High Risk Coverage ಇರುವ LIC Policy ಹೊಂದಿರುವುದು Must and Should. ಟ್ರೈನ್ ನಲ್ಲಿ ಪ್ರಯಾಣಿಸುವಾಗಲೋ ನಿಮಗೆ ಬ್ರಹ್ಮಾನಂದ ಪ್ರಾಪ್ತಿ . ಯಾಕೆಂದರೆ ನಿಮ್ಮ ಹೆಗಲ ಮೇಲೆ 4 ತಲೆ ಕಾಣಿಸಿಕೊಂಡು ತಾವು ಸ್ವಯಂ ಚತುರ್ಮುಖ ಬ್ರಹ್ಮನಾಗಿರುತ್ತೀರಿ ಹಾಗೂ ನಿಮ್ಮ ಸೊಂಟದ ಕೆಳಗೆ ಕನಿಷ್ಠ 8 ಕಾಲುಗಳಿರುತ್ತವೆ . ತುರಿಕೆ ಶುರುವಾದಲ್ಲಿ Trail And Error method ನಿಂದ ನಿಮ್ಮ ಕಾಲು ಯಾವುದೆಂದು ಹುಡುಕಿಕೊಳ್ಳಬೇಕಾದ ಪರಿಸ್ಥಿತಿ .ಕುತ್ತಿಗೆ ನೋವೆಂದು ಅಪ್ಪಿ ತಪ್ಪಿ ಕುತ್ತಿಗೆಯನ್ನು 28 1/2 * ತಿರುಗಿಸಿದರೆ ಎರಡೂ ಕೆನ್ನೆಗೆ 4 Kiss ಸಿಗುವುದು ಖಂಡಿತ. ನಂಬಿಕೆಯಲ್ಲಿ ಇಲ್ಲಿಯವರು #1 . ಕಂಬ ಹಿಡಿದು ಒಬ್ಬ ನೇತಾಡುತ್ತಿದ್ದರೆ ಅವನ ಕೈ ಹಿಡಿದು ಇಬ್ಬರು ಉಯ್ಯಾಲೆ ಆಡುತ್ತಿರುತ್ತಾರೆ.ಇನ್ನು ಟ್ರೈನಿನಲ್ಲಿ ಜಂಟಿಯಾಗಿ ಹೋಗುವ ಬಂಟಿ - ಬಬ್ಲಿ ಜೋಡಿಯಲ್ಲಿ ಬಂಟಿ - ಬಬ್ಲಿ ನಡುವೆ Fevicol Bond ಇರುತ್ತದೆ . ಜನಜಂಗುಳಿಯನ್ನು ನಿಜವಾಗಿ ಪ್ರೀತಿಸುವರೆಂದರೆ ಇವರೇ . ಜನ ಹೆಚ್ಚಿದ್ದಷ್ಟು ಇವರ ನಡುವಿನ ಬೆಸುಗೆ ಬಲವಾಗುತ್ತದೆ. ಸ್ಥೂಲಕಾಯಕ್ಕೆ ಲೋಕಲ್ ಟ್ರೈನ್ ರಾಮಬಾಣ .ಒಂದೇ ತಿಂಗಳಿನಲ್ಲಿ ಬೊಜ್ಜು ಕರಗಿ ಆಮೇಲೆ ದಪ್ಪವಾಗಲು ಚ್ಯವನಾಪ್ರಾಶ್ ಸೇವಿಸಬೇಕಾಗಬಹುದು. 2 ಬೋಗಿಗಳ ನಡುವೆ sandwich ಆಗಿ ಪಯಣಿಸುವವರಿಂದ ಟ್ರೈನ್ ನ ಮೇಲೆ ಹತ್ತಿ ಪಯಣಿಸುವ "ಮಾಣಿಕ್ ಚಂದ್ " ಬ್ರಾಂಡ್ ನವರೂ ಇದ್ದಾರೆ .

ಕರ್ಣಾಟಕದ ಕವಿಮಹಾಶಯರು ಲೋಕಲ್ ಟ್ರೈನ್ ನಲ್ಲಿ ಪಯಣಿಸಿದಲ್ಲಿ ಅವರ ಭಾವನೆ ಅವರದೇ ಆದ ಶೈಲಿಯಲ್ಲಿ ಹೀಗಿದ್ದೀತು ....... ( ಎಲ್ಲರ ಕ್ಷಮೆ ಕೋರುತ್ತಾ....... )

1) ಭಾಮಿನೀ ಷಟ್ಪದಿಯ ರಾಜ ಕುಮಾರವ್ಯಾಸ ಹೀಗೆಂದಾನು......
ಜನರ ಹಿತವಚನವನು ಕೇಳದೆ
ಮನದಿ ಮಾಡುತ ಮರುಳು ಧೈರ್ಯವ
ಜನನಿಬಿಡ ರೈಲಿನಲಿ ಚಲಿಸುವ ತಪ್ಪು ಮಾಡಿದೆನು.
ಬೆನ್ನು ಮುರಿಯಿತು ಪರ್ಸು ಕಳೆಯಿತು
ಪ್ರಾಣ ಉಳಿದರೆ ಸಾಕೆನುತ ಕಂ
ಬನಿಯ ಸುರಿಸುತ ನಿಟ್ಟುಸಿರಿಡುತ ಮನೆಗೆ ತೆರಳಿದೆನು .

2) *********************************** ದಾಸರು ************************
ಈ ಪರಿಯ ಸೊಬಗಾವ ನಗರದಲಿ ನಾ ಕಾಣೆ .. ಮುಂಬಾ ದೇವಿಯ ನಗರ ಬೊಂಬಾಯಿಗಲ್ಲದೆ ......

3) ************************ ಸರ್ವಜ್ಞ ***************************
ರೈಲಿನಲ್ಲಿ ಚಲಿಸುವುದು ಹುಲಿಯೊಡನೆ ಸೆಣಸುವುದು
ಹಾಲಹಲವ ಕುಡಿಯುವುದು ಕೆರಳಿಸುತ
ಕಾಲನನು ಕರೆದಂತೆ --ಸರ್ವಜ್ಞ

4) ***************************** ಡಿ. ವಿ. ಜಿ. **********************
ಹಳಿಯ ಮೇಲಿನ ಬದುಕು ರಗಳೆಗಳು ನೂರೆಂಟು
ಹಳಿಯುವುದು ತುಳಿಯುವುದು ಸರ್ವೇಸಾಮಾನ್ಯ
ಉಳುಕಿದರೆ ಕೈಕಾಲು ಕಳೆದುಹೋದರೆ ಸೊತ್ತು
ಅಳುತ ಇಳಿಯುವುದೇ ಗತಿ --ಮಂಕುತಿಮ್ಮ

5) ****************** ದಿನಕರ ದೇಸಾಯಿ ******************
ಪ್ರೇಮಿಸಲು ಇದಕು ಸುಸ್ಥಳವೆಲ್ಲಿ ಹೇಳಿ
ಪ್ರೇಯಸಿಗೆ ಪ್ರಿಯತಮನ ಅಪ್ಪುಗೆಯ ಬೇಲಿ
ಕಳ್ಳರೋ ನಿಮಗಿಲ್ಲಿ ಹಾಕುವರು ನಾಮ
ಇಳಿಯುತಿರೆ ಜೋಕೆ ಜಾರೀತು ಪೈಜಾಮ

6)*************************ದ . ರಾ . ಬೇಂದ್ರೆ *************************
ನೀ ಹೀಂಗ ದೂಡ ಬ್ಯಾಡ ನನ್ನ ,ನೀ ಹೀಂಗ ದೂಡ ಬ್ಯಾಡ ನನ್ನ ,
ನೀ ಹೀಂಗ ದೂಡಿದರ ನನ್ನ ಗೆಳೆಯ ನಾ ಹೇಂಗ ಹತ್ತಲಿ ಟ್ರೈನ ..............

7)********************** ಕುವೆಂಪು ***********************
ಅಡಿಯ ಕೀಲು ಉಳುಕಿ ಕಾಲು
ನೋವು ನಿನಗೆ ಬರುತಿರೆ
ಜನರು ಬರೆ ನುಗ್ಗುತಿರೆ
ಪುಣ್ಯ ಪ್ರಾಣ ಉಳಿದರೆ

ಹತ್ತು ಇಳಿದು ನೂರು ಏರಿ
ಇಳಿಯಲಿಕ್ಕೆ ಇಲ್ಲ ದಾರಿ
ಕುರ್ಲಾದಲ್ಲಿ ಇಳಿವ ನಾನು ದಾದರ್ ಹೋಗಿ ಇಳಿದೆನು
ರೈಲ ಸಂಗ ಬಿಟ್ಟು ಬಸ್ಸಿನಲ್ಲಿ ಮರಳಿ ಹೋದೆನು

ಓ ನನ್ನ ಚೇತನ ..... ಆಗು ನೀ ಅನಿಕೇತನ

ಮುಂಬೈ ಗೆ ಹೋಗದಿರು
ರೈಲನೆಂದು ಹತ್ತದಿರು
ಕುರ್ಲಾದಲ್ಲಿ ಇಳಿಯದಿರು
ನೀ ಜೀವಂತವಾಗಿರು ................

************** ಕೆ . ಎಸ್ . ನರಸಿಂಹಸ್ವಾಮಿ ******************
ರೈಲು ಬಂದು ನಿಮಿಷವಿಲ್ಲ ನೋಡಿರಣ್ಣ ಹೇಗಿದೆ
ಯಾವ ಬೋಗಿಯಲ್ಲಿ ಕೂಡ ಜಾಗ ಇಲ್ಲದಾಗಿದೆ
ಹತ್ತು ರೈಲು ಹೋಗಿದೆ ಮತ್ತೆ ನಾಲ್ಕು ಬಂದಿದೆ
ಯಾವ ರೈಲಿನಲ್ಲಿ ಕೂಡ ಜಾಗ ಇಲ್ಲದಾಗಿದೆ

ಜಾಗ ಇಲ್ಲ ನಿಲ್ಲಲಿಕ್ಕು
ಮಾರುತಿಹರು ಸೇಬು- ಚಿಕ್ಕು
ಸುಮ್ಮನಿರುವೆ ಕಾಲು ತುಳಿಯೇ
ದಾದರಲ್ಲಿ ಹೋಗಿ ಇಳಿಯೇ
ಪ್ರಾಣ ನನದು ಉಳಿದಿದೆ .... ರೈಲು ಪಯಣ ಹಾಸ್ಯವೇ ???

**************** ಕನ್ನಡ ಚಿತ್ರ ನಿರ್ದೇಶಕ *******************
ರೈಲು ಹೋಗಿ ಆದ ಮೇಲೆ ಟಿಕೆಟ್ ಒಂದು ದಕ್ಕಿದೆ
ಇಳಿವ ಜಾಗ ಬಂದ ಮೇಲೆ ಖಾಲಿ ಸೀಟು ಸಿಕ್ಕಿದೆ
ಕಿಸೆಯಲಿದ್ದ ಪರ್ಸು ಕಳೆದು ಹೋಗಿದೆ
ಮಾಡುವುದು ಏನು ತಿಳಿಯದಾಗಿದೆ

*********************************************************

ಹೀಗೆ ಒಟ್ಟಿನಲ್ಲಿ ಹೇಳುವದಾದರೆ ಮುಂಬೈ ನಗರದಲ್ಲಿ ಬದುಕುವವನು ಪ್ರಪಂಚದ ಯಾವ ಭಾಗದಲ್ಲೂ ಜೀವನ ಸಾಗಿಸಬಲ್ಲ.ತುಂಬಾ ವೇಗದ ಜೀವನ ಶೈಲಿಗೆ ಮುಂಬೈಯವರು ಒಗ್ಗಿ ಹೋಗಿದ್ದಾರೆ .ಇಲ್ಲಿ ಜನರ ಬಳಿ ಸಮಯವೊಂದು ಬಿಟ್ಟು ಇನ್ನೆಲ್ಲವೂಸಿಗುತ್ತದೆ . ಟ್ರೈನ್ ನಲ್ಲಿ ಬಂದು ಓದುವ,ತಿನ್ನುವ ,ಭಜನೆ ಮಾಡುವ ಎಲ್ಲ ರೀತಿಯ ಜನರೂ ಸಿಗುತ್ತಾರೆ. Pen friend, Classmate, Coligue ಇವು ಸ್ನೇಹಿತರಾಗುವ ಕೆಲವು ಬಗೆಯಾದರೆ ಮುಂಬಯಿಯಲ್ಲಿ Train friend ಎಂಬ ಹೊಸ ಮಾರ್ಗಚಾಲ್ತಿಯಲ್ಲಿದೆ. ಲೇಖನದ ಆರಂಭದಿಂದ ಜನ-ಜಂಗುಳಿ ಎನ್ನುತ್ತಿರುವ ನಾನು ಅದೇ ಜನಜಂಗುಳಿಯ ಒಂದು ಭಾಗವಾಗಿದ್ದೇನೆ . ನನ್ನಂತಹ 10 ತಲೆ ಸೇರಿಯೇ ಆ ಜನಜಂಗುಳಿ ಸೃಷ್ಟಿಯಾಗುತ್ತದೆ . ಮೃತ್ಯು ಮತ್ತು ಮುಂಬೈ ಗೆ ಹೋದವ ವಾಪಸ್ ಬರಲಾರ ಎಂಬಭಾವನೆಯಿಂದ ತಮ್ಮ ಮಗ/ಮಗಳಿಗೆ ಮುಂಬೈ ನಲ್ಲಿ job posting ಅಥವಾ college seat ಸಿಕ್ಕಿದರೆ ಕಳವಳಗೊಳ್ಳುವ ಪೋಷಕರಿಗೆ ನಾ ಹೇಳಬಯಸುವುದೆನೆಂದರೆ ಮುಂಬೈ ಗೆ ಬಂದು Basic ಶಿಸ್ತು -ಸಂಯಮ -ಜಾಗ್ರತೆಯಲ್ಲಿದ್ದರೆ ನಿಮ್ಮವ್ಯಕ್ತಿತ್ವಕ್ಕೆ ಸಾಣೆ ಹಿಡಿದಂತಾಗುತ್ತದೆ . ನೇತ್ಯಾತ್ಮಕ ವಿಚಾರಗಳಿಗೆ ಹೋಗದೆ ಇದ್ದಲ್ಲಿ ಜೀವನ ಸುಖಮಯವಾಗುತ್ತದೆ ಮತ್ತುಜೀವನದ ಎಲ್ಲಾ ಮುಖಗಳ ಪರಿಚಯವಾಗುತ್ತದೆ . ಹೀಗೆ ಮುಂಬೈ ಎಂಬ ಮಿಂಚು ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ . ಅದಕ್ಕೆ ಹೇಳುತ್ತೇನೆ "ಕಾಲು ಗಟ್ಟಿ ಇರುವಾಗ ಲೋ"ಕಾಲು" ಟ್ರೈನಿನಲ್ಲಿ ಚಲಿಸಿ ಮುಂಬೈ ದರ್ಶನ ಮಾಡಿರಿ.

====================================ವಿಕಟಕವಿ ==============

Monday, October 27, 2008

ನೆನಪಿನ ಬುತ್ತಿಯಿಂದ........

ವಚನ ಬ್ರಹ್ಮ ಸರ್ವಜ್ಞ ಇಂದು ಬದುಕಿದ್ದು ಒಂದು ವೇಳೆ ನಮ್ಮ ಕಾಲೇಜಿನ ದರ್ಶನ ಮಾಡಿದ್ದಲ್ಲಿ
" ಜೇಸಿಯಲಿ ಸೀಟಿರಲು ಮೆಸ್ಸಿನಲಿ ಪ್ಲೇಟಿರಲು
ಹಾಸ್ಟೇಲಿನ ಬೆಡ್ಡಿನಲಿ ಮಲಗಿರಲು ಸ್ವರ್ಗವೂ
ಠುಸ್ಸ .... ಎಂದ - ಸರ್ವಜ್ಞ
ಎಂದು ಹೇಳುತಿದ್ದ ಎಂಬುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ .ನನ್ನ ಜೀವನದ ಅವಿಸ್ಮರಣೀಯ ಕಾಲ ಯಾವುದೆಂದು ಯಾರಾದರೂ ಕೇಳಿದರೆ ಈ ನಾಲ್ಕು ವರ್ಷಗಳ ಹಾಸ್ಟೇಲ್ ಜೀವನ ಎನ್ನಲು ಬಹಳ ಸಂತೋಷಪಡುತ್ತೇನೆ .

ಈಗ ನೀವೇ ನೋಡಿ, ನಮ್ಮ ಕಾಲೇಜಿನ End-to-End ದರ್ಶನ ಮಾಡಬೇಕಾದರೆ ಬಲ ತುದಿಯ Boys Hostel ನಿಂದ ಎಡ ತುದಿಯ Girls Hostel ತನಕ ನೋಡಬೇಕು .ಹೀಗೆ ಹಾಸ್ಟೇಲ್ ನೋಡದೆ ಜೇಸಿಯ ದರ್ಶನ ಪರಿಪೂರ್ಣವಾಗದು. ನನ್ನ ಎಲ್ಲ ಅನುಭವಗಳನ್ನು ಬರೆಯುತ್ತ ಹೋದರೆ ಒಂದು ಸಂಪುಟ ರಚಿಸುವಷ್ಟು ವಿಷಯಗಳಿದ್ದರೂ ಬಹಳ ಕಷ್ಟಪಟ್ಟು 2 ಪುಟಗಳಿಗೆ ಭಟ್ಟಿ ಇಳಿಸಿ ನನ್ನ ಅನುಭವ ಹಾಗೂ ಹಾಸ್ಟೇಲಿನ ಹಿರಿಮೆಯನ್ನು ಹಂಚಿಕೊಳ್ಳುವ ಕಿರುಪ್ರಯತ್ನ ಮಾಡಿದ್ದೇನೆ .

"ಪುಷ್ಪ ಮಹಲ್ " ನಲ್ಲಿ ಕಳೆದ ಮೊದಲನೆ ವರ್ಷ ನಿಜಕ್ಕೂ ಅವಿಸ್ಮರಣೀಯ ನೆನಪಿನ ಬುತ್ತಿ . ಮೊದಲ ಎರಡು ವಾರ ಹೊಸ ಮುಖಗಳ ಪರಿಚಯದಲ್ಲೇ ಕಳೆದರೂ ,ಒಂದೇ ತಿಂಗಳಿನಲ್ಲಿ ಎಲ್ಲರೂ ಪರಸ್ಪರ ಅಡ್ಡ ಹೆಸರಿನ ಸಂಬೋಧನೆ ಶುರು ಮಾಡಿದ್ದೆವು .ಜೆ.ಎಸ್.ಎಸ್ ,ಕೋಳ್ಯ,ಅನ್ಯ ,ಸ್ಲಮ್,ಸೇಟು,ಸೈಕೋ,ಹೈವಾನ್ ,ಜಾಂಬೂ,ದೇಸಿ, ದೊಡ್ಡು,ಕುಮಟಾ ಎಲ್ಲ ಈ ಗರಡಿಯವರೇ. ಕಾರಿಡಾರ್ ಕ್ರಿಕೆಟ್ ನಿಂದ ಹಿಡಿದು ರೋಡ್ ಲಗೋರಿಯವರೆಗೆ ಎಲ್ಲ ಆಟಗಳನ್ನು ಆಡಿದ್ದೆವು . ನಮ್ಮ ಆಟಗಳಿಗೆ ವಿಘ್ನವಾಗಿ ಬರುತ್ತಿದ್ದ ಸೆಕ್ಯುರಿಟಿಗೆ ರಾತ್ರಿ ೧೨ ಗಂಟೆಗೆ " ತಾತಪ್ಪ ಕಾಪಾಡೀ ....." ಎಂದು ಚೀರಿ ಅವರು ಮೇಲೆ ಹತ್ತಿ ಬರುವುದರೊಳಗೆ ಲೈಟ್ ಆಫ್ ಮಾಡಿ ಮಲಗುತ್ತಿದ್ದೆವು .9:30 ಕ್ಕೆ ನಿದ್ರಾದೇವಿಯ ವಶವಾಗುವವರಿಂದ ಹಿಡಿದು 3 ಗಂಟೆಯ ತನಕ TV channel ತಿರುಗಿಸಿ ನಿರಾಶರಾಗಿ ಮಲಗುವವರೂ ಇದ್ದರು . ತಾನು ತಂದ Super focus Bynacular ನಿಂದ ತನ್ನ ರೂಮಿನಿಂದ 281/2* ದಕ್ಷಿಣಕ್ಕೆ Focus ಮಾಡಿ Girls Hostel ಎಂದು ಭಾವಿಸಿ ಮನಸ್ಸಿನ ಮಂಡಿಗೆ ತಿನುತ್ತಿದ್ದ ಕೊಳ್ಯನಿಗೆ ಅದು ತಿರುಮಲ ಟವರ್ಸ್ ಎಂದು ತಿಳಿದ ಮೇಲೆ ಭಾರೀ ರಸಭಂಗವಾಗಿದ್ದು ದೇವರಾಣೆಗೂ ನಿಜ . 2 ರೂಪಾಯಿ ಚಂದಾ ವಸೂಲಿ ಮಾಡಿ ತಂದು ನೋಡಿದ ಸಿನೆಮಾಗಳಿಗೆ ಲೆಕ್ಕವೇ ಇಲ್ಲ . ಪಾಪದ ಮನೋಹರನಿಗೆ ನಾಲ್ಕು ಜನ ಕಣ್ಣು ಕೆಂಪು ಮಾಡಿ ಡಾನ್ಸ್ ಮಾಡಿಸಿದ್ದೂ ನಿಜ .ಮಾತಿಗೆರಡು ನಗೆ ಚಟಾಕಿ ಹೇಳುತ್ತಿದ್ದ ನಾನು ಜಗದ್ಗುರು ಸುಮಂತ ಶ್ಯಾನುಭಾಗನಾಗಿ P.J. ಪೀಠ ಸ್ವೀಕಾರ ಮಾಡಿದ್ದೂ ಇಲ್ಲೇ .

ಎರಡನೇ ವರ್ಷ ಕ್ಯಾಂಪಸ್ ಹಾಸ್ಟೆಲಿಗೆ ಆಗಮನ . ಪಂಚತಾರಾ ಹೋಟೆಲಿನಂತೆ ಇದ್ದ "ಪುಷ್ಪ ಮಹಲ್ " ನಿಂದ ಇಲ್ಲಿಗೆ ಬಂದು ಇಲ್ಲಿನ bathroom - toilet ನೋಡಿ ಮೂಗುಮುರಿದ ಸ್ನೇಹಿತರಿಗೆ ಸೀನಿಯರ್ ಗಳು "ಏನೋ ಹಾಸ್ಟೆಲಿಗೆ ಓದಲಿಕ್ಕೆ ಬರ್ತೀಯಾ ?? ಅಥವಾ ಸುಸ್ಸು ಮಾಡಕ್ಕೆ ಬರ್ತೀಯಾ?? ಎಂದಿದ್ದರು . ನಮಗೋ Branch entry ಯಾ ಸಂಭ್ರಮ . "ಗುಬಾಲ್" - "ಪಂಟ" ಹೊಸ ಶಬ್ದಗಳ ಪರಿಚಯ .ಪತ್ರಿಕೆಗಳಲ್ಲಿ ಪ್ರಕಟವಾದಂತೆ ಯಾವುದೇ ರೀತಿಯ ಅಹಿತಕರ Ragging ಘಟನೆಗಳು ಇಲ್ಲಿ ಎಂದಿಗೂ ನಡೆದಿಲ್ಲ .ಮೆಸ್ಸಿನ ಊಟಕ್ಕೆ ಲೊಟ್ಟೆ ಹೊಡೆದ ನಮಗೆ "ಹೊಸದರಲ್ಲಿ ಎಲ್ಲ ಹೀಗೆ .... ಎಂದು seniours ಎಚ್ಚರಿಸಿದ್ದರು .

"ಏಯ್ ...... ಒಂದ್ ಅತ್ನಿಮಿಸ ಕಾಯ್ಬೇಕು...... ನಾಗರಾಜನ ಆವಾಜ್ ಗೆ ಎದುರು ಮಾತಿಲ್ಲ . ಹೌದು ..... ಈಗ ನಾವಿರಿವುದು ಹಾಸ್ಟೆಲಿನ ಮೆಸ್ಸ್ ನಲ್ಲಿ . ಒಳಗೆ ಬರುತ್ತಿದ್ದಂತೆ ಸಿದ್ದಮಲ್ಲಪ್ಪ ಕಾಣುತ್ತಾರೆ . Long Account Book ನಲ್ಲಿ 24><7 ಲೈನ್ ಹೊಡೆಯುವುದೇ ಇವರ ಕೆಲಸ . ಅದು ಬಿಟ್ಟರೆ ನಾಗರಾಜನದ್ದೆ ದರ್ಬಾರು . "First Come First Serve" ಇವನ Principle . ಆದರೆ ಕೆಂಪ ಬಂದರೆ ಆವಾಜ್ ಹಾಕಿದವರಿಗೆ ಮೊದಲು ಚಪಾತಿ . ಇವರೊಂದಿಗೆ ಕೆಲಸದಲ್ಲಿ ಮಲ್ಲಪ್ಪನದ್ದೂ ಒಂದು ಪಾಲು . ಆದರೆ ಗಿರೀಶ ಮಹೇಶ ಶಾರುಕ್ ಇವರಿಗೆ ಮೆಸ್ಸ್ ಕೆಲಸಕ್ಕಿಂತ Mobile RingTone ಕೆಲಸಗಳೇ ಹೆಚ್ಚು .ಇನ್ನು ಮೆಸ್ಸಿನಿಂದ ಹೊರಗೆ ಬಂದರೆ ಪ್ಲೇಟ್ ಗೋಸ್ಕರ ಕಾಯುತ್ತಿರುವವರ ದಂಡು . ದಿನಕ್ಕೊಂದು ಪ್ಲೇಟ್ ನಲ್ಲಿ ಊಟ ಮಾಡುವವರು ಕೆಲವರಾದರೆ ತಮ್ಮ ಮೊದಲ ವರ್ಷದ ಪ್ಲೇಟನ್ನೇ ಧರ್ಮಪತ್ನಿಯಂತೆ ಕಾಪಾಡಿಕೊಂಡು ಬರುವವರೂ ಇದ್ದಾರೆ . ಇವರು ತಮ್ಮ Room Number ,Address ಎಲ್ಲಾ ಕೊಟ್ಟೂ ಪ್ಲೇಟ್ ಹಿಂದಿರುಗಿ ಬರದಿದ್ದಾಗ Police Complaint/Paper Advertisement ಬಿಟ್ಟು ಬಾಕಿ ಎಲ್ಲಾ ರೀತಿಯ Enquiry ಮಾಡುತ್ತಿದ್ದರು .

ಇನ್ನು ಮೂರನೇ ವರ್ಷ ಎಲ್ಲರಿಗೂ Placement ಗರ್ಮಿ ಹತ್ತಿತ್ತು . 5 ನೇ ಸೆಮ್ ಕೊನೆಯಲ್ಲಿ mini .micro,major Project ಶುರು ಮಾಡಿದವರು ಕೆಲವರಾದರೆ CAT/CRT ಎಂದು ಟೈಮ್ ಕ್ಲಾಸಿಗೆ ಇನ್ನೊಂದು ಪಾಳಿ . Project ಶುರು ಮಾಡಿದವರು Complete ಮಾಡಿದ್ದನ್ನು ನಾನು ಇದುವರೆಗೂ ಕಂಡಿಲ್ಲ . ಮೆಸ್ಸಿನಲ್ಲಿ ನಾವೇನು Junior ಗಳನ್ನೇ ತಿನ್ನಲು ಹೋಗುತ್ತೇವೋ ಎಂಬಂತೆ ನಾಗರಾಜ್ &Co ಇವರಿಂದ Junior ಗಳಿಗೆ ಸರ್ಪಗಾವಲು . ನಾವೋ "ಮೆಸ್ಸಿಗೆ ಬಂದವನು ಡೌನ್ಸ ಗೆ ಬರದೆ ಇರ್ತಾನಾ ...?? " ಎಂದು ಮನಸ್ಸಿನಲ್ಲೇ ನಗುತ್ತಿದ್ದೆವು . ಹೀಗೆ ಜೇಸಿಯಾನ, "ಮಂಡೇಲಾ ..... ಓಹೋಹೋ ..... " "ಅಷ್ಟೆ ಅಷ್ಟೆ " ,"ಆಗ್ ಹೋಗ್ಲಿ ",ಲಕಾ ರೆ ಲಕಾ ಲಕಾ ಲಕಾ ... ಹೂ ಹಾ ಹೂ ಹಾ ..... ಕೇಕೆಗಳ ನಡುವೆ ,Trip ,Placement.Treat ಗಳೊಂದಿಗೆ 3 ನೇ ವರ್ಷವೂ ಕಳೆಯಿತು .

ಈಗ ಕೊನೆಯ ವರ್ಷ ಇಂಜಿನಿಯರಿಂಗ್ ಜೀವನದ ಸನ್ಯಾಸಾಶ್ರಮ . ಕಾಲೇಜಿನಲ್ಲಿ ಸೀನಿಯರ್ ಪಟ್ಟ . IEEE, CSI, Student Council ಗಳಲ್ಲಿ ಸ್ಥಾನ ಗಳಿಸಿ Stud ಗಳಾಗುವ ಬಯಕೆ ಕೆಲವರಿಗಾದರೆ Dream Job ನ ಕನಸಿನಲ್ಲಿ ಕೆಲವರು . ಉಳಿದವರೋ " ಏನ್ ಮಚ್ಚಾ .... 4 ವರ್ಷ ಆಯ್ತು ಇನ್ನೂ ಒಂದ್ ಹುಡುಗೀನ್ನ ಪಟಾಯ್ಸಿಲ್ಲ" ಎಂದು ನಿಟ್ಟುಸಿರಿಟ್ಟು ಯಂಪಾ ದಲ್ಲಿ ಒಂದು ಛೊಟಾ ಟೀ ಹೇಳಿ 3 ಗಂಟೆ ಅಲ್ಲೇ ಕೂತು ಅಲ್ಲಿಗೆ ಬರದೆ ಇರುವವರನ್ನು ಕಾಯುತ್ತಿದ್ದರು .

ಹೀಗೆ ನಮ್ಮ seniour ಗಳಿಗೆ ವಿದಾಯ ಹೇಳಿದ ನೆನಪು ಹಸಿರಾಗಿರುವಾಗಲೇ ನಮ್ಮ Ticket Ready ಆಗಿದೆ. ತುಂಬು ಉತ್ಸಾಹದಿಂದ ಬರೆಯಲು ಶುರುಮಾಡಿದ ನನ್ನ ಹೃದಯ ಏಕೋ ಭಾರವಾಗಿದೆ . ಗೇಟು ದಾಟಿದ ಮೇಲೆ ಒಮ್ಮೆ ಹಿಂದಿರುಗಿ ನೋಡಿದರೆ ಹಾಸ್ಟೇಲಿನ ಸಿಹಿ ನೆನಪುಗಳಿಂದಲೇ ಕಣ್ಣು ಮಂಜಾಗುವುದು . ಈ ನಾಲ್ಕು ವರ್ಷಗಳ ಕಾಲ ನಮಗೆ ಆಶ್ರಯ ನೀಡಿದ ಹಾಸ್ಟೆಲ್ ಗೂ ವಿದ್ಯೆ ನೀಡಿದ ಕಾಲೇಜು ಹಾಗೂ ಅಧ್ಯಾಪಕರಿಗೂ ಪ್ರೀತಿ -ವಿಶ್ವಾಸ ತೋರಿದ ನನ್ನ ಗೆಳೆಯ ಗೆಳತಿಯರಿಗೂ ಭಾವಪೂರ್ಣ ವಿದಾಯ ಹಾಗೂ ಎಲ್ಲರಿಗೂ ನನ್ನ Jadoo Ki Chappi .

---ವಿಕಟಕವಿ ----

Monday, October 13, 2008

ಸೌಂದರ್ಯೋಪಾಸನೆ

**********************************************************************************
ಸೈಕಲ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮನಿಸಲೇಬೇಕೆಂಬ ಹಠ ತೊಟ್ಟಿದ್ದಳೋ ಏನೋ , ಏರುದನಿಯಲ್ಲಿ ಅವಳ ಮಾತು - ನಗು ಸಾಗಿತ್ತು .ಆದರೂ ನಾನು ಗಮನಿಸದವನಂತೆ ನಿಂತಿದ್ದೆನು. ಆದರೆ ಅವಳೂ ಬಿಡದೆ ಹತ್ತಿರ ಬಂದು ಟೈಮ್ ಎಷ್ಟು ಎಂದು ಕೇಳಿದಳು .ನಾನು 4:20 ಎಂದೆನು. ಅದಕ್ಕವಳು ನಿಮ್ಮ ವಾಚ್ 10 ನಿಮಿಷ ಮುಂದಿದೆ ಸರಿಮಾಡಿಕೊಳ್ಳಿ ಎಂದು ಹೇಳಿ ಗೆಳತಿಯರೊಡನೆ ನನ್ನನ್ನು ಅಣಕಿಸುತ್ತಾ ನಡೆದಳು . ಮತ್ತೆ ಹಿಂದಿರುಗಿ " ಕ್ಷಮಿಸಿ , ನೀವು ಕವನ ಬರೆಯುತ್ತೀರಲ್ಲಾ ??" ಎಂದು ಕೇಳಿದಳು .ನಾನು ಇವಳು ಎಲ್ಲೋ ನನ್ನ ಕವನಗಳನ್ನು ಓದಿರಬೇಕೆಂದುಕೊಂಡು ಪ್ರಶಂಸೆಯನ್ನು ನಿರೀಕ್ಷಿಸುತ್ತಾ ಹೌದು ಎಂದೆನು. ಆಗ ಅವಳು " ನನ್ನ ಬಗ್ಗೆ ಕವನ ಬರೆಯುತ್ತೀರಾ ?" ಎಂದು ವ್ಯಂಗ್ಯವಾಗಿ ಅನುನಾಸಿಕದಲ್ಲಿ ಕುಹಕವಾಡುತ್ತಾ ಹೋದಳು . ಹೀಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎರಡು ಬಾರಿ ನನ್ನನ್ನು ತಬ್ಬಿಬ್ಬಾಗಿಸಿ ಹೋದಳು . ನನಗೋ ಕೆಟ್ಟ ಕೋಪ ಬಂತು . ಅವಳ ಸೊಕ್ಕನಡಗಿಸಿ ನನ್ನ ಲೇಖನಿ ಎಷ್ಟು ಹರಿತ ಎಂದು ಅವಳಿಗೆ ಮನದಟ್ಟು ಮಾಡುವ ಸಂಕಲ್ಪ ತೊಟ್ಟೆನು .
ಮರುದಿನ ಬೆಳಿಗ್ಗೆ ಎದ್ದವನೇ ದಿನಪತ್ರಿಕೆಯ ಗ್ರಹಗತಿ ಅಂಕಣದ ಮೇಲೆ ಕಣ್ಣಾಡಿಸಿದೆ . ನನ್ನ ಭವಿಷ್ಯದಲ್ಲಿ ಸುಂದರ ಸಂಜೆ ಎಂದು ಬರೆದಿತ್ತು . ಮೊದಲೇ ನನ್ನದು ಕನ್ಯಾರಾಶಿ ....... ಹೀಗೆ ಸಾವಿರ ಕನಸುಗಳ ಸ್ವಪ್ನಲೋಕದಲ್ಲಿ ತೇಲುತ್ತಾ ಕ್ಯಾಂಟೀನ್ ಕಡೆಗೆ ಹೋಗುತ್ತಿದ್ದೆನು. ಆ ಸೈಕಲ್ ಸ್ಟ್ಯಾಂಡ್ ಹುಡುಗಿ ಗೆಳತಿಯರೊಡನೆ ಬರುತ್ತಿದ್ದಳು . ಮೊದಲನೆ ಬಾರಿ ಅವಳನ್ನು ಅಷ್ಟಾಗಿ ಗಮನಿಸಿರಲಿಲ್ಲ . ಈಗ ಒಮ್ಮೆ ಆಪಾದಮಸ್ತಕ ಗಮನಿಸಿದೆನು . ಒಮ್ಮೆಲೇ ಕಣ್ಣಿಗೆ ಕತ್ತಲೆ ಕವಿದಂತಾಯಿತು . ನೆರಳಿನಲ್ಲಿ ಕುಳಿತು ಸ್ವಲ್ಪ ಸುಧಾರಿಸಿಕೊಂಡೆನು .ನಾನು ರಾಹುಕಾಲದಲ್ಲಿ ಎದ್ದೆನೋ ಅಥವಾಆ ಜ್ಯೋತಿಷಿ ಯಾವ ಡಿಫೆಕ್ಟಿವ್ ಕವಡೆ ಉರುಳಿಸಿ ಗುಣಾಕಾರ ಹಾಕಿದನೋ ತಿಳಿಯದು , ನನ್ನ ದಿನಭವಿಷ್ಯ ತಲೆಕೆಳಗಾಗಿತ್ತು . ಆಕೆಯನ್ನು ನೋಡುತ್ತಿದ್ದಂತೆ ನಮ್ಮ ಕುಲಪುರೋಹಿತ ನಾಗೇಶ ಭಟ್ಟರು ಹೇಳುತ್ತಿದ್ದ ಮಾರಿಯಮ್ಮ ಜಟಕಾ ಉಮ್ಮಲ್ತಿ ಭೂತಗಳ ಚಿತ್ರಣ ಸ್ಲೋ ಮೋಶನ್ ನಲ್ಲಿ ಸ್ಮ್ರತಿಪಟಲದಲ್ಲಿ ಹಾದುಹೋಯಿತು . ಆದರೂ..... ಅವಮಾನ .... ಸೇಡು... ಬಿಡಲಾಗುತ್ತದೆಯೇ ?? ಆಕೆಯ ಬಗ್ಗೆ ಬರೆಯಬೇಕೆಂದರೆ ಮಾಹಿತಿ ಬೇಕು . ಹಾಗೋ ಹೀಗೋ ಹುಚ್ಚು ಧೈರ್ಯ ಮಾಡಿಕೊಂಡು ಬಾಲ್ಯದಲ್ಲಿ ಅಪ್ಪನ ಒತ್ತಾಯಕ್ಕೆ ಮಣಿದು ಕಂಠಪಾಠ ಮಾಡಿದ್ದ ರಾಮರಕ್ಷಾ ಸ್ತೋತ್ರ ಪಠಿಸುತ್ತಾ ಆಕೆಯ ಬಳಿ ಹೋದೆನು .

Excuse me ...... ಎಂದೆನು .ಅದಕ್ಕವಳು Yes... What can i do for u ?? ಎಂದು ವ್ಯಂಗ್ಯವಾಗಿ ನಕ್ಕಳು . ಅವಳ ದ್ವನಿಯನ್ನು ಕೇಳಬೇಕಿತ್ತು ........ ನಾನು ಉಪಮೆಯಲ್ಲಿ ಸ್ವಲ್ಪ weak .... ಆದರೂ ಶಕ್ತಿ ಮೀರಿ ಉಪಮೆ ಕೊಡುವುದಾದರೆ 3 ದಿನ ಉಪವಾಸವಿದ್ದ ನಾಯಿಗೆ ಕಲ್ಲು ಹೊಡೆದರೆ ಅದು ಅಳುವ ದ್ವನಿಯನ್ನು ಹೋಲುತ್ತಿತ್ತು . ನಿನ್ನ ಹೆಸರೆನಮ್ಮಾ ........?? ಎಂದು ಕೇಳಿದೆನು . "ಶುಭಾಂಗಿ" ಎಂದು ಉಲಿದಳು. ಇಂತಹ ಸುಂದರ ಶಬ್ದಗಳ ಅಪಪ್ರಯೋಗದಿಂದ ಕನ್ನಡಮ್ಮನ ಮೇಲಾಗುತ್ತಿದ್ದ ಅವ್ಯಾಹತ ಶೋಷಣೆಗೆ ಮರುಗಿದೆನು . ಯಾರಮ್ಮಾ ಈ ಹೆಸರಿಟ್ಟಿದ್ದು ?? ಎಂದು ಕೇಳಿದೆನು .ಅದಕ್ಕವಳು ನನ್ನ ಹಿರಿಯಕ್ಕನ ಹೆಸರು ಶ್ವೇತಾಂಗಿ ಎರಡನೇ ಅಕ್ಕ ಲತಾಂಗಿ ಹೀಗೆ ಕರೆಯಲು ಪ್ರಾಸಬದ್ದ ಹಾಗೂ ಇಂಪಾಗಿರಲೆಂದು ನನ್ನ ಅತ್ತೆ ನನಗೆ ಶುಭಾಂಗಿ ಎಂದು ಹೆಸರಿಟ್ಟರು ಎಂದಳು . ಪ್ರಾಸದ ಅಷ್ಟೊಂದು ಹುಚ್ಚಿದ್ದರೆ "ಕೋಡಂಗಿ " ಎಂದಾದರೂ ಹೆಸರಿಡಬಹುದಾಗಿತ್ತು ಎಂದು ಯೋಚಿಸಿದೆನು .

ನಿನ್ನ ವಯಸ್ಸೆಷ್ಟು ?? ಎಂದು ಕೇಳಬಾರದ ಪ್ರಶ್ನೆಯನ್ನು ಕೇಳಿಬಿಟ್ಟೆನು . ಅವಳು ಸ್ವಲ್ಪ ದುರುಗುಟ್ಟಿ ನೋಡಿ 21 ವರ್ಷ ಕೆಲವು ತಿಂಗಳು ಮತ್ತು ಕೆಲವು ದಿನ ಎಂದಳು . ನಾನು ಇನ್ನೂ ನೇರವಾಗಿ ಎಷ್ಟು ತಿಂಗಳು ಎಷ್ಟು ದಿನ ಎಂದು ಕೇಳಿದೆನು . 37 ತಿಂಗಳು 420 ದಿನ ಎಂದು ಉತ್ತರ ಬಂದಿತು . ಇಷ್ಟು ಹೇಳಿ ಆಕೆ ನೀರು ಕುಡಿಯುವ ನೆಪದಿಂದ ಆಚೆ ಹೋದಳು .ನಾನು ಆಕೆಯ ಸ್ನೇಹಿತೆಯರಿಂದ ಈ ವಿಚಾರಗಳನ್ನು ತಿಳಿದೆನು ....

ಸೆಪ್ಟೆಂಬರ್ 11 ನೇ ತಾರೀಕು "ಕುದುರೆಮುಖ" ದಲ್ಲಿ "ಮೃಗಶಿರಾ" ನಕ್ಷತ್ರದಲ್ಲಿ ಈಕೆಯ ಜನನವಾಯಿತು .ಬ್ರಹ್ಮ ಆ ದಿನ ಕೆಟ್ಟ ಮೂಡ್ ನಲ್ಲಿದ್ದ ಎಂದು ಕಾಣುತ್ತದೆ ,ಇವಳ assembly ಯಲ್ಲಿ ತುಂಬಾ ತಪ್ಪು ಮಾಡಿಬಿಟ್ಟ. ಹೆಸರು ಕೇವಲ ಅಂಕಿತವಾಗಿದ್ದರೂ ಊರು ನಕ್ಷತ್ರಗಳು ಅನ್ವರ್ಥವಾಗಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರಿಟ್ಟೆನು . ಹಾಗೂ WTC ದುರಂತಕ್ಕೆ ಎರಡು ದಶಕಗಳ ಹಿಂದೆ ಭಾರತದಲ್ಲಾಗಿದ್ದ ಈ ದುರಂತಕ್ಕೆ ಅಷ್ಟು ಪ್ರಚಾರ ಯಾಕೆ ಸಿಗಲಿಲ್ಲವೆಂದು ಯೋಚಿಸಿದೆನು .

ಇವಳ ಜನನವಾದ ತಕ್ಷಣ ಇವಳ ತಾಯಿಯ ಶುಶ್ರೂಷೆಯಲ್ಲಿದ್ದ ನರ್ಸ್ ಕಿಟಾರೆಂದು ಕಿರುಚಿ ಪ್ರಜ್ಞಾಹೀನಳಾಗಿದ್ದಳಂತೆ . ಆಮೇಲೆ ಶಾಕ್ ಟ್ರೀಟ್ ಮೆಂಟ್ ನಿಂದ ಸರಿಪಡಿಸಿದರಂತೆ . ಮೊನ್ನೆ ಇವಳು ಬೆಂಗಳೊರಿಗೆ ಹೋದಾಗ NASA ವಿಜ್ಞಾನಿಯೊಬ್ಬ ಇವಳನ್ನು ಅನ್ಯಗ್ರಹವಾಸಿಯೆಂದು ತಿಳಿದು ಹಿಡಿಯಲು ಹೋಗಿ ಜನರಿಂದ ಧರ್ಮದೇಟು ಹೊಡೆಸಿಕೊಂಡನಂತೆ. "Koi Mil Gaya" ಸಿನೆಮಾ ನೋಡಿ ಬಂದ ಈಕೆಯ ನೆರೆಹೊರೆಯ ಮಕ್ಕಳು ಈಕೆಯನ್ನು ಜಾದೂ ...... ಎಂದು ಕರೆದು ಮಾಯ-ಮಂತ್ರ ಮಾಡಲು ಪೀಡಿಸುತ್ತಿದ್ದರಂತೆ . ಇವಳು ಒಮ್ಮೆ ಮೈಸೂರು ಮೃಗಾಲಯಕ್ಕೆ ಹೋದಾಗ ಅಲ್ಲಿದ್ದ ಗೊರಿಲ್ಲಾವೊಂದು ಇವಳು ಕಣ್ಣಿಗೆ ಕಾಣುವಷ್ಟು ಕಾಲ ಇವಳನ್ನೇ ದುರುಗುಟ್ಟಿ ನೋಡಿದ್ದಲ್ಲದೆ ಬಳಿಕ 2 ದಿನ ಇವಳ ನೆನಪಿನಲ್ಲಿ ನಿದ್ರಾಹಾರಗಳನ್ನು ತ್ಯಜಿಸಿದ್ದು ವಿಚಿತ್ರವಾದರೂ ಸತ್ಯ .

ಆಕೆಯ ಕಣ್ಣುಗಳು ಕಮಲದ ಹೂವಿನಂತೆ ಇತ್ತು . ತುಟಿ ತೊಂಡೆ ಹಣ್ಣಿನಂತೆ ಇತ್ತು ನಿಜ ... ಆದರೆ ಯಾವ ಹಣ್ಣು - ಹೂವು ತಾನೆ 25 ವರ್ಷ ತಾಜಾ ಇರುತ್ತದೆ ನೀವೇ ಹೇಳಿ ..... ಮಾತಿನ ಮಧ್ಯೆ ಅವಳೊಮ್ಮೆ ಮುಗುಳ್ನಕ್ಕಳು ನೋಡಿ ....... ನನಗೆ ಬ್ರಹ್ಮಾಂಡ ದರ್ಶನವಾಯಿತು . 5 ಜನ ದಂತವೈದ್ಯರು ಒಂದು ತಿಂಗಳ ಅಹರ್ನಿಶಿ ಕ್ಯಾಂಪ್ ಹಾಕಿ ಮಾಡುವಷ್ಟು ಕೆಲಸ ಅಲ್ಲಿತ್ತು . Asian Paint ನ ಕಲರ್ ಲ್ಯಾಬ್ ನಲ್ಲಿ ಇಲ್ಲದ ಕೆಲವು ಬಣ್ಣಗಳು ಆಕೆಯ ದಂತಪಂಕ್ತಿಯಲ್ಲಿದ್ದವು . ಒಮ್ಮೆ ಇವಳ ದಂತಚಿಕಿತ್ಸೆಗೆ ಬಂದ ವೈದ್ಯರು ತಲೆ ತಿರುಗಿ ಬಿದ್ದು ಆಮೇಲೆ ಅವರಿಗೆ ಕಣ್ಣು - ಮೂಗುಗಳಿಗೆ ಲೋಕಲ್ ಅನಸ್ತೇಷಿಯಾ ಕೊಟ್ಟು ICU ದಲ್ಲಿ admit ಮಾಡಿದ್ದರಂತೆ . ಇದರ ನಂತರ ಉಳಿದ ದಂತವೈದ್ಯರು No Risk Ceritificate ತರದೇ ಈಕೆಯ ಚಿಕಿತ್ಸೆಗೆ ಒಪ್ಪುವುದಿಲ್ಲವೆಂದು ಶಪಥ ತೊಟ್ಟಿದ್ದಲ್ಲದೆ ಈಕೆ ನಗುವುದರ ವಿರುದ್ಧ ಕೋರ್ಟ್ ನಿಂದ Stay-Order ತಂದಿದ್ದಾರಂತೆ !!! ಮೊನ್ನೆ ಇವಳು ತನ್ನ ಸಂಬಂಧಿಯೊಬ್ಬರನ್ನು ನೋಡಲು ಪೋಲೀಸ್ ಸ್ಟೇಶನ್ ಗೆ ಹೋದಾಗ ಅಲ್ಲಿ ಜೈಲಿನಲ್ಲಿದ್ದ ಭಾರಿ ಭಯೋತ್ಪಾದಕ ಸತ್ಯವನ್ನೆಲ್ಲಾ ಹೇಳಲು ಒಪ್ಪಿದನಂತೆ . ಇದನ್ನು ತಿಳಿದ ಮಾನವ ಸಂಘಟನೆಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಯಿತು .

ಇಷ್ಟರಲ್ಲಿ ಅವಳು ಪದೇ ಪದೇ ವಾಚ್ ನೋಡುತ್ತಿದ್ದುದನ್ನು ನಾನು ಗಮನಿಸಿದೆ . ಯಾಕೆ ಎಲ್ಲಾದರೂ ಹೋಗುವುದಿದೆಯಾ ?? ಎಂದು ಕೇಳಿದೆನು .ಹೌದು ಕಳೆದ ತಿಂಗಳು ತನ್ನ ನಿಶ್ಚಿತಾರ್ಥವಾಗಿದ್ದು ,ಎಪ್ರಿಲ್ 1 ರಂದು ತನ್ನ ಮದುವೆಯಿದೆ ,ಈ ದಿನ ತನ್ನ ಭಾವೀ ಪತಿಯೊಂದಿಗೆ Date Fix ಆಗಿದೆ ಎಂದಳು . ಆ ಮಹಾನುಭಾವನ ಗ್ರಹಚಾರಕ್ಕೆ ಕನಿಕರಿಸುತ್ತಾ ,ನಿನ್ನ ಭಾವೀ ಪತಿ ಏನು ಮಾಡುತ್ತಿದ್ದಾನೆ ?? ಎಂದು ಕೇಳಿದೆನು . ನಾಚಿಕೆಯಿಂದ ಓಡಿ ಹೋದಳು . ಕೆನ್ನೆಗಳು ಕೃಷ್ಣವರ್ಣದವಾಗಿದ್ದರಿಂದ ಕೆಂಪೇರಿದ್ದು ಕಾಣಿಸಲಿಲ್ಲ . ಅವಳ ಭಾವೀ ಪತಿ "ಪ್ರಾಣಿ ದಯಾ ಸಂಘದ ಅಧ್ಯಕ್ಷ " ಎಂದು ಅವಳ ಗೆಳತಿಯರಿಂದ ತಿಳಿಯಿತು . ಆದರೆ ಅವಳಿಗಾಗಿ ಬರೆದ " ಈ ಹಲಸಿನ ಹಣ್ಣಿನಂಥ ಹುಡುಗಿ ಬಂತು ನೋಡು " ಎಂಬ ಕವನದ ಬಗ್ಗೆ ಅವಳಿಗೆ ಹೇಳಲು ಮರೆತೇ ಹೋಗಿತ್ತು .


***********************************************************--ವಿಕಟಕವಿ ****

Wednesday, October 8, 2008

JCE ROCKS!!!!!

************************************************************
ಸುತ್ತ ಕವಿದಿರೆ ಅಂಧಕಾರವು
ಮತ್ತೆ ಇರದಿರೆ ಜ್ಞಾನದೀಪವು
ಬಿತ್ತಿದರು ಸುತ್ತೂರು ಸ್ವಾಮಿಗಳಿಲ್ಲಿ ಬೆಳಕನ್ನು ||
ಕತ್ತಲದು ಕಾಲ್ಕಿತ್ತು ಓಡಿತು
ಮತ್ತೆ ಹರಿಯಿತು ಜ್ಞಾನದೀಪ ಸ
ಮಸ್ತ ಲೋಕಕೆ ಬೆಳಕು ಬೀರಿದ ನಿಮಗೆ ವಂದಿಪೆವು ||

ಮಾನವನೋ ?? ಇವ ದೇವದೂತನೋ ??
ನಾನು ಅರಿಯೆನು ಇದನು ದಿಟದಿಂ
ಜ್ಞಾನಸಾಗರ ಹರಿಸಿದೀತನು ದೇವನವತಾರಿ ||
ಜ್ಞಾನಶಿಖರದ ತುತ್ತತುದಿಯಲಿ
ಮಿನುಗು ತಾರೆಯ ತೆರದಿ ಮಿನುಗುತ
ಜನರ ಮನದೊಳು ಮನೆಯ ಮಾಡಿದೆ ನಮ್ಮ ಜೆ ಸಿ ಇ ||

ನುರಿತ ಅಧ್ಯಾಪಕರ ತಂಡವು
ಸರುವಸಜ್ಜಿತ ಪ್ರಯೋಗಾಲಯ
ಗರುವದಲಿ ನಾ ಹೇಳಿಕೊಳ್ಳುವೆ ಎಲ್ಲ ಇಲ್ಲಿಹುದು ||
ಗರಡಿ ಮನೆಯಿದು ಹೊರಗೆ ತರುವುದು
ತರುಣ ಪ್ರತಿಭೆಗಳನ್ನು ವರುಷಕು
ಧರಣಿಮಂಡಲದೆಲ್ಲೆಡೆಯಲಿಹರಿದರ ಆತ್ಮಜರು ||

ಜೇಸಿ ಮಹಿಮೆಯ ಹೇಳ ಹೋದರೆ
ಮಾಸಗಳು ಹಲವಾರು ಸಾಲದು
ಮೀಸೆ ತಿರುವುತ ಹೇಳುವೆನು ನಾ ನಾನು ಜೇಸಿಯವ||
ಹಾಸು ಹೊಕ್ಕಿದೆ ಇದರಲೆಲ್ಲವು
ಪ್ಲೇಸುಮೆಂಟಾಗುವುದು ಖಚಿತವು
ಏಸು ಜನುಮದ ಪುಣ್ಯವೋ ?? ನಾನಿಲ್ಲಿ ಬಂದಿರುವೆ ||

**********************************************---ವಿಕಟಕವಿ

Tuesday, October 7, 2008

ನಂಬಿ ಕೆಟ್ಟವರು

******************************************************
ಹಣವ ಗಳಿಸಿದೆ ಬೆವರ ಸುರಿಸುತ
ರಣದ ಸೈನಿಕನಂದದಿಂ ಕಂ
ಕಣವ ತೊಟ್ಟೆನು ಮನೆಯ ಕಟ್ಟಲು ನಮ್ಮ ಊರಿನಲಿ||
ತೃಣದಿ ನಾ ಕಂಡೆನು ಸುಖವ ಚಣ
ಚಣವು ಕಷ್ಟದಿ ದುಡಿದೆ ನಾ ಕಡಿ
ವಾಣವಿಕ್ಕಿದೆ ನನ್ನ ಖರ್ಚಿಗೆ ಗುರಿಯ ಸಾಧಿಸಲು ||

ಚಲಿಸಿದೆನು ಕಾಲ್ಗಳಲಿ ನಡೆಯುತ
ಉಳಿಸಿದೆನು ಹಣವನ್ನು ವ್ಯಯಿಸದೆ
ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ||
ಮುಳುಗಿ ಹೋಯಿತು ಎಲ್ಲ ಹಣ ನಾ
ಕಳೆದುಕೊಂಡೆನು ನನ್ನ ಕನಸನು
ಹಳಿದುಕೊಂಡೆನು ಹಲುಬಿದೆನು ನಾ ನನ್ನ ದುರ್ವಿಧಿಗೆ ||

ಹರನು ಮೆಚ್ಚುವುದಿಲ್ಲ ಇವರನು
ನರರು ಚಚ್ಚದೆ ಬಿಡುವರೆನ್ ಸರ
ಕಾರ ಕಣ್ಣನು ಮುಚ್ಚಿಕೊಳ್ಳುತ ಶಿಕ್ಷೆ ಕೊಡದಿರಲು||
ಪರರ ಸೊತ್ತನು ದೋಚುತಿಹ ತಸ್
ಕರರ ನಂಬಿದ ನಾವು ಕೆಟ್ಟೆವು
ಕರುಮವೆಮ್ಮದು ಎನುತ ನಾವ್ಗಳು ಸಹಿಸಿಕೊಳಬೇಕು ||


************************************--ವಿಕಟಕವಿ