Friday, July 2, 2010

WELCOME TO KUNDAPUR !!!!!! - PART-III"ಹ್ಜಬ್ದ್ಸ್ಕ್ಫ಼್ಜಒಇಗ್ತಿಎಬ್ಗ್ಕ್ಜ್ಬ್ದ್ವ್ವಿಹ್ಗಿದ್ಕ್ವ್ಶ್ದ್ಪ್ಫ಼್ವೆಒಗ್[ವ್ಪೆಗ್ಸ್ದ್ಜ್ಗ್ವ್೦ಗ್[ವ್ಜ್ಗ್ಸ್ದ್ಬ್ಲ್ವ್[ಒಸ್ರ್ಗ್"

ಏನು ?? ಅರ್ಥ ಆಗಲಿಲ್ವಾ ??ಸಂತೆಯ ಗೌಜಿ ಮಾರಾಯ್ರೆ... ನನಗೂ ಸರಿಯಾಗಿ ಕೇಳಿಸುತ್ತಿಲ್ಲ. ಸ್ವಲ್ಪ ಹತ್ತಿರ ಹೋಗಿ ಕೇಳುವುದು ಒಳ್ಳೆಯದು. ಆಮೇಲೆ ಪಕ್ಕದಲ್ಲಿ ಕುಂಬಳಕಾಯಿ ಮಾರುತ್ತಿರುವವನ ಬೆಲೆ ಕೇಳಿ ಸೇಬು ಮಾರುವವನ ಹತ್ತಿರ ಬಂದು " ಎಂತದು ??? ಈಗ ಎಂಟು ರುಪಾಯಿ ಕಿಲೋ ಅಂತ ಬೊಬ್ಬೆ ಹಾಕಿದ್ರಿ" ಎಂದೆಲ್ಲ ಹೇಳಿದರೆ ಧರ್ಮದೇಟು ಬೀಳುವುದು ಖಂಡಿತ. "ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕಂಜಿದೊದೆಂತಯ್ಯ" ಎಂದು ದಾಸರು ಬರೆಯುವಾಗ ಅವರು  ಕುಂದಾಪುರದಲ್ಲೇ ಇದ್ದರೆಂದು ಕಾಣುತ್ತದೆ. ಸಂತೆಯೊಳಗೆ ಯಶಸ್ವಿಯಾಗಿ ವ್ಯಾಪಾರ ಮಾಡಿ ಬಂದರೆ ಅವನು
ಅರಿಯದೆ ಒಂದು ಅವಧಾನ ಕಾರ್ಯಕ್ರಮ ಮಾಡಿ ಬಂದಂತೆನೀವೇ ನೋಡಿ. ಒಂದು ವೇಳೆ ನಿಮಗೆ ಸೌತೇಕಾಯಿ ತೆಗೆದುಕೊಳ್ಳಬೇಕೆಂದುಕೊಳ್ಳಿ.............

ನಿಮ್ಮದು ಒಂದೇ ಪ್ರಶ್ನೆ.... ಹೋಯ್ ಸೌತೇಕಾಯ್ ಹೇಂಗ್ ಮಾರ್ರೆ..............
ಉತ್ತರಗಳು---
ಅಲ್ಲ ಲೋರಿ ಅನ್ ಲೋಡ್ ಆತಿತ್ತ ಮಾರ್ರೆ........ ಕಳ್ಸಿ ಕೊಡ್ತೆ...  (ಭಟ್ಕಳದಿಂದ ಬಂದ ಬಟಾಟೆ ವ್ಯಾಪಾರಿ ಮೊಬೈಲಿನಲ್ಲಿ )
ಮುಂದಿನ್ ವಾರ ಕೊಡ್ತೆ ಸಾವ್ಕಾರ್ರೆ... ಎಂತ ಓಡಿ ಹೋತ್ನಾ ?? ( ವ್ಯಾಪಾರ ಮುಗಿದು ದುಡ್ಡು ಕೊಡುವಾಗ ಒಂದು ನೂರು ರುಪಾಯಿ ಕಡಿಮೆ ಕೊಟ್ಟ ಗ್ರಾಹಕ ವ್ಯಾಪಾರಿಗೆ.. )
ಪೂರೈಸುದಿಲ್ದೆ.... ಎಂಭತ್ತೈದಕ್ಕೆ ನಮಗೇ ಬತ್ತಿಲ್ಲಾ...... (ಅತೀ ಚೌಕಾಶಿ ಮಾಡಿದ ಗಿರಾಕಿಗೆ ವ್ಯಾಪಾರಿಯ ಮಾತು )
ಹನ್ನೆರಡು.... ಹಾ... ಆ ಚೀಲ ಖಾಲಿ ಮಾಡಿ ಕೊಡಾ.....
ಕೊರ್ಲಾಣೆ... ಹೋಯ್... ಹೋಯ್... ಲೋಸಾತ್ತೆ... (  ಕೊರಳಿನ ಆಣೆ.. ನಷ್ಟವಾಗುತ್ತದೆ... ಕಡಿಮೆ ಹಣ ಕೊಟ್ಟು ಹೋಗಲು ಶುರು ಮಾಡಿದ ಪರಿಚಯಸ್ಥ ಗಿರಾಕಿಗೆ ವ್ಯಾಪಾರಿ )
ಚರ್ಬದೀ.... ( ಹೆದರಬೇಡಿ.. ದೂರದಲ್ಲಿ ಶರಬತ್ತು ಮಾರುತ್ತಿರುವವನ ಕೂಗು )
ಚಿಲ್ ಚಲ್ ಚಿಲ್ ಚಲ್ ಚಿಲ್ ಚಲ್ ( ಏನಿಲ್ಲ ಕಬ್ಬಿನ ರಸ ತೆಗೆಯುವ ಯಂತ್ರದ  ಸದ್ದು )
 ಈ ಇಷ್ಟು ಉತ್ತರಗಳಲ್ಲಿ ನಾಲ್ಕನೇ ಸಾಲಿನ ಮೊದಲ ಶಬ್ದ ಮಾತ್ರ ನಿಮಗೆ ಬೇಕಾಗಿದ್ದು. ಹೇಗೆ ಭಟ್ಟಿ ಇಳಿಸುತ್ತೀರೋ ನೀವೇ ನೋಡಿ.
ಅದಕ್ಕೆ ಸಂತೆಯೊಳಗೆ ಕಾಲಿಡುವಾಗ ಮೈಯೆಲ್ಲಾ ಕಿವಿಯಾಗಿರಬೇಕು.ಕುಂದಾಪುರ ಸಂತೆ!!!! ಪ್ರತೀ ಶನಿವಾರ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ. ಇತರ ಎಲ್ಲಾ ಸಾಮಾನುಗಳು ಲಭ್ಯವಿದ್ದರೂ ಕೃಷಿ ಉತ್ಪನ್ನಗಳೇ ಮುಖ್ಯ. ಅವಿಭಜಿತ ದಕ್ಷಿಣ ಕನ್ನಡದ ಪ್ರಮುಖ ವ್ಯಾಪಾರ ಕೇಂದ್ರ ಎಂದರೂ ತಪ್ಪಲ್ಲ. ದೂರದ ಶಂಕರನಾರಾಯಣ -ಭಟ್ಕಳ- ಹೊನ್ನಾವರ-ಹೆಬ್ರಿ-ಮಂಗಳೂರಿನ ವ್ಯಾಪಾರಿಗಳೂ ಇಲ್ಲಿ ವ್ಯಾಪಾರ ನಡೆಸಲು ಬರುತ್ತಾರೆ.ಹತ್ತಿರದ ಸಂತೆಕಟ್ಟೆ- ಕಟಪಾಡಿ ಸಂತೆಗೆ ಇಲ್ಲಿಂದಲೇ ಸರಕು ರವಾನೆಯಾಗುತ್ತದೆ.ಬೆಳಿಗ್ಗೆ  ಐದು ಗಂಟೆಯೊಳಗೆ ಬಾಳೆ - ತೆಂಗು  ಬರಲು ಶುರುವಾಗುತ್ತದೆ. ಒಂಭತ್ತರಿಂದ ಸುಮಾರು ಎರಡೂವರೆ ಮೂರರ ತನಕ ಭಾರೀ ಬಿಸಿ-ಬಿರುಸಿನಲ್ಲಿ ನಡೆಯುವ  ವ್ಯಾಪಾರ ಸಂಜೆ ಸೂರ್ಯನ ಬಿಸಿಲಿನೊಡನೆ ತಂಪಾಗುತ್ತಾ ಹೋಗುತ್ತದೆ. ಒಂದು ಕಡೆ ಸರಕಿಗೆ ಒಳ್ಳೆಯ ಬೆಲೆ ಸಿಕ್ಕಿ ಲಾಭವಾದ ಖುಶಿಯಲ್ಲಿ ಕೆಲವು ವ್ಯಾಪಾರಿಗಳಿದ್ದರೆ ಸಂಜೆಯವರೆಗೂ ಕಾದು ಆಮೇಲೆ ಮಾರದಿದ್ದರೆ ವಾಪಾಸು ತೆಗೆದುಕೊಂಡು ಹೋಗುವ ಖರ್ಚು ಇನ್ನು ಹೆಚ್ಚಾದೀತೆಂದು ಕಡಿಮೆ ಲಾಭಕ್ಕೋ ನಷ್ಟಕ್ಕೊ ಮಾರಿ ಸೋತ ಮುಖದಿಂದ ನಿರ್ಗಮಿಸುವ ವ್ಯಾಪಾರಿಗಳು ಇನ್ನೊಂದು ಕಡೆ. ಇವರನ್ನು ನೋಡಿ ಮನಸ್ಸಿಗೆ ಸ್ವಲ್ಪ ನೋವಾದರೂ ಮಾರುಕಟ್ಟೆಯ ಬೇಡಿಕೆ - ಪೂರೈಕೆ ನಿಯಮಕ್ಕನುಗುಣವಾಗಿಯೇ ಇರುತ್ತದೆ. ಈಗ ಉದಾಹರಣೆಗೆ ತೆಗೆದುಕೊಳ್ಳಿ......

ಬೇಡಿಕೆ ಇಲ್ಲದಿದ್ದಾಗ ,ನಮ್ಮ ಅಪ್ಪನನ್ನು ಶೆಟ್ರೆ.... ಭಟ್ರೆ.. ಶಾನ್ಭಾಗ್ರೆ.. ಕಿಣಿಯರೆ.. ಕಾಮತ್ರೆ... ಪೈಗಳೆ... ಹೊಯ್ ಕೊಂಕಣಿಯರೆ... ಎಂಬಿತ್ಯಾದಿ ನಾಮಾವಳಿಗಳಿಂದ ಕೂಗಿ ವ್ಯಾಪಾರಕ್ಕೆ ಕರೆಯುವ ತೆಂಗಿನ ಕಾಯಿ ವ್ಯಾಪಾರಿಗಳ ಕುತ್ತಿಗೆ ವಿನಾಯಕ ಚತುರ್ಥಿಯ ಸಮಯದಲ್ಲಿ ತೆಂಗಿನ ಮರಕ್ಕಿಂತಲೂ ಸ್ವಲ್ಪ ಮೇಲೆ ಇರುತ್ತದೆ. ಮಳೆಗಾಲದಲ್ಲಿ ನೂರಕ್ಕೆ ನಲವತ್ತು ಎಂದಾಗ ನಾವು ಚೌಕಾಶಿ ಮಾಡುವ ಅಗತ್ಯವಿಲ್ಲ ಹುಬ್ಬೆರಿಸಿದರೆ ಮೂವತ್ತಕ್ಕೆ ತೆಗೆದುಕೊಳ್ಳಿ ಎಂಬುವ ನಿಂಬೆಹಣ್ಣಿನ ವ್ಯಾಪಾರಿ ಆಯುಧ ಪೂಜೆಯ ಸಮಯದಲ್ಲಿ ಅಟ್ಟದ ಮೇಲೆ ಹತ್ತಿರುತ್ತಾನೆ. ಆಗ ನಿಂಬೆಹಣ್ಣು ಬಿಡಿ pre meture delivary  ಆಗಿರುವ ಗೋಲಿಯಷ್ಟು ದೊಡ್ಡ ಎರಡು  ನಿಂಬೆಕಾಯಿ ಇರುವವನ ಬಳಿ ವ್ಯಾಪಾರ ದೂರದ ಮಾತು, ಬರೀ ಮಾತಾಡಬೇಕಾದರೂ ಜಿಲ್ಲಾಧಿಕಾರಿ ಅಥವಾ ಕನಿಷ್ಟ ತಹಸೀಲ್ದಾರರ ಒಪ್ಪಿಗೆ ಪತ್ರ ತೆಗೆದುಕೊಂಡು ಬರಬೇಕು. ಹೀಗೆ ಅರ್ಥಶಾಸ್ತ್ರದ ಬೇಡಿಕೆ-ಪೂರೈಕೆಯ ತತ್ವ ಪೂರ್ಣ ಪ್ರಮಾಣದಲ್ಲಿ ಇಲ್ಲಿ ಅನ್ವಯಿಸುತ್ತದೆ.

ರಾಸಿಗೊಂದ್ರುಪಾಯಿ.....ರಾಸಿಗೊಂದ್ರುಪಾಯಿ.......ರಾಸಿಗೊಂದ್ರುಪಾಯಿ ( ರಾಶಿಗೆ ಒಂದು ರುಪಾಯಿ ). ಒಂದು ನಿಮಿಷ ಆ ರಾಶಿ ಎಂಬ ಶಬ್ದ ಕೇಳಿ ಎಷ್ಟು ದೊಡ್ಡ ರಾಶಿಯೋ ಎಂದುಕೊಂಡು ಸುಡುವ ಬಿಸಿಲಿನಿಂದ ಕಣ್ಣನ್ನು ರಕ್ಷಿಸಲು ಕೈಯನ್ನು ಹಣೆಯ ಮೇಲಿಟ್ಟು ನಭೋಮಂಡಲದೆಡೆಗೆ ಕಣ್ಣು ಹಾಯಿಸಬೇಡಿ.ಕುತ್ತಿಗೆ ಬಗ್ಗಿಸಿ ನಿಮ್ಮ ಕಾಲ ಕಿರುಬೆರಳಿನೆಡೆ ನೋಡಿದರೆ ನಿಮ್ಮ ಒಂದು ರುಪಾಯಿಯ ರಾಶಿ ನಿಮ್ಮೆದುರಿಗೆ ಇರುತ್ತದೆ.

Photo courtesy : www.google.com


ಏನು ?? ದಂಗಾದಿರಾ ?? ಇದೇ ಮಾರಾಯ್ರೆ ನಿಮ್ಮ ರಾಶಿ .....ಕೊಟ್ಟ ಒಂದು ರುಪಾಯಿಗೆ ಪಾಪ ಅವರು ಏಳು ಮೆಣಸಿನ ಪಂಚಾಂಗದ ಮೇಲೆ ಒಂದು ಮೆಣಸುನ ಮೊದಲನೇ ಅಂತಸ್ತು ಕಟ್ಟಿಲ್ಲವೇ ?? ಅದೇ ದೊಡ್ಡದು.ಇದು ಸಂತೆಗೆ ಬಂದು ಏನೋ ಲಾಭ ಗಳಿಸುವ ಚಟವಿರುವ ಹುಡುಗರು ಹನ್ನೆರಡು ರುಪಾಯಿಗೆ ಒಂದು ಕಿಲೋ ಹಸಿಮೆಣಸು ಖರೀದಿಸಿ ಅದನ್ನು ಇಪ್ಪತ್ತು ಸಮಭಾಗ ಮಾಡಿ ಆಮೇಲೆ ಕೂಗುವ ಬೊಲೀ .ಇಷ್ಟಲ್ಲದೆ ಅವಿದ್ಯಾವಂತರೂ ಇಲ್ಲಿ ವ್ಯಾಪಾರ ಮಾಡುತ್ತಾರೆ. ಅವರೊಂದಿಗಿನ ನನ್ನ ಕೆಲವು ಅನುಭವ....... ಒಂದು ತೆಂಗಿನ ಕಾಯಿ ವ್ಯಾಪಾರಿಯನ್ನೆ ತೆಗೆದುಕೊಳ್ಳೋಣ....

ಹೋಯ್... ತೆಂಗಿನ ಕಾಯಿ ಹೆಂಗೆ ಮಾರ್ರೆ ??
ಆರು ರುಪಾಯಿ.....
ನೂರಕ್ಕೆ ಎಷ್ಟ ?? ( ಅಂದರೆ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡರೆ ಸ್ವಲ್ಪ ದರ ಕಡಿಮೆ ಮಾಡುವರೆಂಬುದು ರೂಢಿ )
ನೂರಕ್ಕಾ ?? ನೂರಕ್ಕೆ ಎಪ್ಪತೈದು!!!!! ಹೀಗೆ ಕೇಳಿದ ನಿಮಗೆ ನಗು ಬಂದರೂ ಆ ಸಂತೆಯಲ್ಲಿ ಬಂದು ವ್ಯಾಪಾರ ಮಾಡುವ ಹಣ್ಣು ಹಣ್ಣು ಮುದುಕರನ್ನು ನೋಡಿದಾಗ ಅವರ ಜೀವನ ನಡೆಸುವ ಛಲ  ನೆಗಡಿಯಾದರೆ ರಜಾ ಹಾಕಿ ಮನೆಯಲ್ಲಿ ಕೂರುವ ನಮಗೆ ದಾರಿದೀಪ ಎನ್ನಿಸುತ್ತದೆ.

ಇಷ್ಟಲ್ಲದೆ ಕೆಲವರು ಲೆಕ್ಕಾಚಾರಕ್ಕೆ ನಮ್ಮ ಅಪ್ಪನ ಸಹಕಾರ ತೆಗೆದುಕೊಳ್ಳುವುದುಂಟು.....
ಹೋಯ್ ಭಟ್ರೆ .... ಇದೊಂದ್ ಲೆಕ್ಕಾಚಾರಾ ಮಾಡಿಯೆ.....
ಹಾ ಹೇಳಿ.....
ಅರೂವರೆಗೆ ಮಾತ್ ಆಯಿತ್ತ  ಎಂಭತ್ತ್ ಕಾಯಿ ತೆಕಂಡೀರ.... ಐನೂರಾ ಐವತ್ತ ಕೊಟ್ಟೀರ... ಇನ್ನೆಷ್ಟ ಕೊಡೂದಾತ್ತ ??
ಇನ್ನ ಕೊಡೂದೆಂತ ?? ನೀವೇ ಮೂವತ್ತ ರುಪಾಯ್ ವಾಪಾಸ್ ಕೊಡ್ಕ
ಹೌದಾ ?? ಹಾಂಗಾರೆ ಅರೂಮುಕ್ಕಾಲ್ರಲ್ಲ ಲೆಕ್ಕ ಹಾಕಿ.....
ಹೀಗೆ ಐನೂರಾ ಐವತ್ತು ಟೋಟಲ್ ಬರುವ ವರೆಗೆ ಬೆಲೆ ಏರಿಸಿ ಲೆಕ್ಕ ಹಾಕುತ್ತಾ ಹೋಗಬೇಕು.....

ಹೀಗೆ ಬಿಸಿಲು ಮಳೆ ಚಳಿ ಎಲ್ಲದಕ್ಕೂ ಎದೆ ಕೊಟ್ಟು ಯಾವುದಕ್ಕೂ ಅಂಜದೇ ಪ್ರತಿ ಶನಿವಾರ ತಪ್ಪದೆ ಕುಂದಾಪುರ ಸಂತೆ ನಡೆಯುತ್ತದೆ.ನೀರು ಬೆಲ್ಲ , ವಾಲಿಬೆಲ್ಲ ಮುಂತಾದವು "ಇಲ್ಲಿ ಬಿಟ್ಟು ಬೇರೆಲ್ಲೂ ಸಿಗದು" ಎಂದರೂ ತಪ್ಪಲ್ಲ. ವ್ಯಾಪಾರಿಯು ತನ್ನ ಅಂಗಡಿ ಮುಚ್ಚಿ ವರ್ಷಗಳೇ ಕಳೆದಿದ್ದರೂ ಶನಿವಾರ ಬಂತೆಂದರೆ ಒಂದು ಕೈಚೀಲ ತೆಗೆದುಕೊಂಡು ಸಂತೆಯೊಳಗೆ ಹಾಜರಾಗುತ್ತಾರೆ.ಹೀಗೆ ಇದು ಇಲ್ಲಿನ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ.


WELCOME TO KUNDAPUR !!!!!! - PART-II

ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ||
ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್||

ಮನೆಗೆ ತಲುಪಿದೊಡನೆ ಅಮ್ಮ-ಅಪ್ಪನೊಂದಿಗೆ ಮೊದಲ ಸುತ್ತಿನ ಸೆಂಟಿಮೆಂಟುಗಳು ಮುಗಿದ ಮೇಲೆ ಒಮ್ಮೆ ಹೊರಬಂದು ಪ್ರಾತಃಕಾಲದ ಕುಂದಾಪುರ ದರ್ಶನ  ಮಾಡಿ ಬಂದೆನು. ಆ ದರ್ಶನದ ರನ್ನಿಂಗ್ ಕಾಮೆಂಟರಿ.........
"ಪೆಟ್ರೋಲ್ ಬಂಕ್ ನಲ್ಲಿ ಟವೆಲ್ ಉಟ್ಟು ಬಸ್ ತೊಳೆಯುತ್ತಿರುವ ಕ್ಲೀನರ್, ಅಶ್ವಥ್ಥ ಮರಕ್ಕೆ ಸುತ್ತು ಹಾಕುತ್ತಿರುವ ಜನರೇಶನ್ 3 , ನಡೆದು ಬಾರಯ್ಯಾssss ಭವಕಡಲಿಗೇsss sಪ್ರತಿದಿನ ಇದನ್ನೇ ಹಾಡುವ ಬೊಬ್ಬರ್ಯ ಕಟ್ಟೆಯ ಕ್ಯಾಸೆಟ್ಟು ,ಹತ್ತಿದ ಸೈಕಲ್ಲನ್ನು ನಿಲ್ಲಿಸದೇ.... ನೆಲಕ್ಕೆ ಕಾಲು ತಾಗಿಸದೇ ಮನೆಯ ಬಾಗಿಲ ಬುಡಕ್ಕೇ ಪೇಪರ್ ಎಸೆಯುವ ಶಾರ್ಪ್ ಶೂಟರ್ ಪೇಪರಿನವನು, ಶಾಸ್ತ್ರಿ ಪಾರ್ಕಿನಲ್ಲಿ ಮುಂಜಾನೆ ಭಟ್ಕಳ ಬೆಂಗಳೂರಿನಿಂದ ಬಂದ ಹೂವಿಗೆ ನೀರು ಚಿಮುಕಿಸುತ್ತಿರುವ ಹೂವಿನ ವ್ಯಾಪಾರಿಗಳು,ಬಿಕೋ ಎನ್ನುತ್ತಿರುವ ರೋಡು ಹಾಗೂ ಅಂಗಡಿಯಲ್ಲಿ ಕೂತಿರುವ ನನ್ನ ಡ್ಯಾಡು. ಇಷ್ಟೇ."

ಒಂದು ನಾಲ್ಕೈದು ವರ್ಷಗಳ ನಂತರ ಕುಂದಾಪುರಕ್ಕೆ ಯಾರಾದರೂ ಬಂದರೆ ಒಂದು ಬಾರಿ ತಾನು ಯಾವ ಊರಿಗೆ ಬಂದೆ ಎಂದು ಬೆಚ್ಚಿ ಬೀಳುವುದು ಸಹಜ. ಶಾಸ್ತ್ರಿ ಪಾರ್ಕಿನ ಮಧ್ಯ ಕದಲದೇ ನಿಂತಿರುವ ಶಾಸ್ತ್ರಿಗಳೊಬ್ಬರೇ ಈ ಎಲ್ಲಾ ಬದಲಾವಣೆಗಳಿಗೆ ಮೂಕ ಸಾಕ್ಷಿ. ಎಲ್ಲಿಯವರೆಗೆಂದರೆ ಶ್ರೀ ಬೊಬ್ಬರ್ಯನವರು ಕೂಡಾ ಹೊಸ RCC ಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದ ಈಜುಕೊಳಗಳಾಗಿದ್ದ ರಸ್ತೆಗಳು ಈಗ ಒನ್ ವೇ ಕಾಂಕ್ರೀಟು ರಸ್ತೆಗಳಾಗಿವೆ. ಹೊಸ ರನ್ನಿಂಗ್ ಟ್ರ್ಯಾಕ್  ಮಾಡಿರುವ ಗಾಂಧೀ ಮೈದಾನಕ್ಕೆ ಏಳು ಸುತ್ತಿನ ಕೋಟೆ ರಚಿಸಿ ಗೇಟು ಮುಚ್ಚಿ ಬೀಗ ಜಡಿದಿದ್ದಾರೆ.ಹೊಸ ಶಾಪಿಂಗ್ ಕಾಂಪ್ಲೆಕ್ಸುಗಳು ಅಂಗಡಿಗಳು ಹೀಗೆ  ಬದಲಾವಣೆಗಳ ಸರಮಾಲೆ ಒಂದೇ ಎರಡೇ?? ಇನ್ನು ಬೆಳಿಗ್ಗೆ ಗಾಂಧಿ ಮೈದಾನದ ಪಕ್ಕ ನಿಂತಿರುವ ದೊಡ್ಡ ಕಾರುಗಳು ಹಾಗು ಮೈದಾನದಲ್ಲಿ ವಾಕಿಂಗ್/ಜಾಗಿಂಗ್ ಮಾಡುತ್ತಿರುವವರ ದಂಡು ಕಂಡರೆ  ಬೆಂಗಳೂರಿನ ಯಾವುದೋ ಪ್ರಮುಖ ಬಡಾವಣೆಗೆ ಬಂದಂತೆ ಅನ್ನಿಸುವುದು ಸಹಜವೆ.

ಇನ್ನು ಸುಮಾರು ಎಂಟು ಒಂಭತ್ತು ಘಂಟೆ ಆಗುತ್ತಿದ್ದಂತೆ ಬಸ್ಸುಗಳ ಭರಾಟೆ ಶುರುವಾಗುತ್ತದೆ.ದುರ್ಗಾಂಬಾ,ಅನಂತ ಪದ್ಮನಾಭ ಮೋಟಾರ್ಸ್ ,ಅಂಬಿಕ ಇವು ಪ್ರಮುಖ ಬಸ್ಸುಗಳಾದರೆ ಇಂಗ್ಲೀಷ್ ವರ್ಣಮಾಲೆಯ ಯಾವುದೇ ಮೂರು ಅಥವಾ ನಾಲ್ಕು ಅಕ್ಷರಗಳನ್ನು  ಸೇರಿಸಿ ಕೊನೆಗೆ ಒಂದು ಮೋಟಾರ್ಸ್ ಅಥವಾ ಟ್ರಾವೆಲ್ಸ ಸೇರಿಸಿದರೆ ಆ ಹೆಸರಿನ ಬಸ್ಸು ಕುಂದಾಪುರದಲ್ಲಿದೆ. ಪ್ರತೀ ಹತ್ತು ನಿಮಿಷಕ್ಕೆ ಒಂದು ಉಡುಪಿಗೆ ಹೋಗುವ ಬಸ್ಸು ಸಿಗುತ್ತದೆ. ಬಸ್ ಸ್ಟಾಪಿನಲ್ಲಿ ಬಸ್ಸು ನಿಂತಾಗ ಉಡುಪಿ ಎನ್ನುವುದು ಬೇಡ  ಎಂದು ಉಲಿದರೆ ಸಾಕು ಅಷ್ಟೆಲ್ಲಾ ಯಾಕೆ ನಾಲ್ಕು ಜನ ಗುಂಪಿನಲ್ಲಿ ಮನೆಯ ಹೊರಗೆ ನಿಂತರೆ ಸಾಕು ಕಂಡಕ್ಟರ್ ಬಂದು ಬಾಜಾ ಬಜಂತ್ರಿ ಸಮೇತ ನಿಮ್ಮನ್ನು ಕರೆದೊಯ್ಯುವಷ್ಟು ಸ್ಪರ್ಧೆ-ಪೈಪೋಟಿ ಇದೆ. ಆದರೆ ಈ ಎಲ್ಲಾ ಪೈಪೋಟಿಯ ನಡುವೆಯೂ ಎಲ್ಲ ಬಸ್ಸುಗಳು ತುಂಬಿ ಚಲಿಸುವುದೇ ಒಂದು ಸೋಜಿಗದ ಸಂಗತಿ.!!

ಉಡುಪಿ ಎಕ್ಸಪ್ರೆಸ್...ಉಡುಪಿ ಎಕ್ಸಪ್ರೆಸ್....ಉಡುಪಿ ಎಕ್ಸಪ್ರೆಸ್ ....ಬನ್ನಿ ಅಮ್ಮ ....ಸೀಟು ಖಾಲಿ ಉಂಟು ...ಉಡುಪಿ ಎಕ್ಸಪ್ರೆಸ್ ಎಂದು ಯಮನ್ ರಾಗದಲ್ಲಿ ಪ್ರೀತಿಯಿಂದ ಕರೆಯುವಾಗ ನಿಮಗೆ ಕಾಳಾವರದಲ್ಲಿ ಕೆಲಸವಿದ್ದರೂ ಒಮ್ಮೆ ಉಡುಪಿಗೆ ಹೋಗುವ ಮನಸ್ಸಾಗುತ್ತದೆ.

ಕೋಟೇಶ್ವರ ಕುಂಭಾಶಿ ಆನೆಗುಡ್ಡೆ ತೆಕ್ಕಟ್ಟೆ ಕೋಟ ಸಾಲಿಗ್ರಾಮ ಸಾಸ್ತಾನ ಮಾಬುಕಳ ಹಂಗಾರಕಟ್ಟೆ ಬ್ರಹ್ಮಾವರ ಉಡುಪಿ ಲೈನ್ ಉಡುಪಿ ಲೈನ್ ......................

ವಿನಾಯಕಾ ಎಮ್ ಕೋಡೀ....ಕೋಡೀ....ಕೋಡೀ.............

ಕೋಣೀ ಬಸ್ರೂರು ಕಂಡ್ಲೂರು ಅಂಪಾರು ಹುಣ್ಸೆಮಕ್ಕಿ ಸಿದ್ದಾಪುರ ಶಂಕರನಾರಾಯಣ...............

ಇವು ನಮ್ಮ ಕಂಡಕ್ಟರುಗಳು ಒಂದೇ ಉಸಿರಿನಲ್ಲಿ ಕೂಗುವ ಡೈಲಾಗುಗಳು.

ಸರಕಾರೀ ಕೆಂಪು ಬಸ್ಸುಗಳು ದೂರದ ಉಡುಪಿ- ಮಂಗಳೂರು-ಧರ್ಮಸ್ಥಳ-ಸುಬ್ರಹ್ಮಣ್ಯ ಬಿಟ್ಟರೆ ಬೇರೆ ಹತ್ತಿರದ ಸ್ಥಳಗಳಿಗೆ ಇಲ್ಲ. ಇರುವ ಬಸ್ಸುಗಳು ಕೂಡ ಹೆಚ್ಚು ಕಡಿಮೆ ಖಾಲಿಯೇ ಚಲಿಸುತ್ತವೆ.ಯಾಕೆಂದರೆ ಒಂದೈದು ರುಪಾಯಿ ಹೆಚ್ಚು ಕೊಟ್ಟರೆ ಭೂಮಿಯ ಮೇಲೆ ಚಲಿಸುವ ವಿಮಾನದಂತಿರುವ ಖಾಸಗೀ ಬಸ್ಸುಗಳಿರುವಾಗ ಕೆಂಪು ಬಸ್ಸಿನಲ್ಲಿ ಯಾರು ಹೋಗುತ್ತಾರೆ ನೀವೇ ಹೇಳಿ.


ಆಹಾರ ಕ್ರಮ
==========
ದೋಸೆ ಬನ್ಸು ಪೂರಿ ಉಪ್ಪಿಟವಲಕ್ಕಿ ಇಡ್ಲಿ
ಎಲ್ಲ ಎದುರಿಗಿರಲು ನಾವು ಯಾವುದನ್ನು ಬಿಡ್ಲಿ ??
ಬೇಳೆಸಾರು ಕೋಳಿಸಾರು ಬಂಗ್ಡೆ ಮೀನಿನ್ ಗಶಿ
ಬಾಳೆ ಎಲೆಯ ಮೇಲೆ ಬಡಿಸೆ ತಿನ್ನಲೆಷ್ಟು ಖುಷಿ!!

ಪಾರಿಜಾತ ಐಸುಕ್ರೀಮು ಕಾವರ್ರಾಡಿ ಚಕ್ಲಿ
ತಿನ್ನುವಂತ ಯೋಗ ನಿಮಗೆ ಒಂದು ಸಾರಿ ಸಿಕ್ಲಿ
ರಾಗಿನೀರು ಎಳ್ಳುನೀರು ಗೋಲಿಸೋಡ ಬೊಂಡ (ಎಳನೀರು)
ಇವುಗಳೆದುರು ಪೆಪ್ಸಿ ಕೋಲಾ ಸ್ಪ್ರೈಟು ಎಲ್ಲ ದಂಡ


ಕುಂದಾಪುರದ ಆಹಾರ ಪದ್ಧತಿ ರುಚಿ ಹಾಗೂ ಪೌಷ್ಠಿಕತೆಯ ಸಮಾಗಮ ಎನ್ನಬಹುದು. ಬೆಳಿಗ್ಗೆ ಪಾವು-ಶೀರಾ-ಸಮೋಸ ಎಲ್ಲ ತಿಂದು ಹೊಟ್ಟೆಗೆ ಮೋಸ ಮಾಡಿಕೊಳ್ಳುವವರಲ್ಲ. ಇಡ್ಲಿ ದೋಸೆ ಉಪ್ಪಿಟ್ಟು ಅವಲಕ್ಕಿ ಯೊಂದಿಗೆ ಒಂದು ಚಾ ಕುಡಿದರೆ ಉಪಾಹಾರದ ಚಾಕರಿ ಮುಗಿದಂತೆ. ಮತ್ತೆ ಈ ಸಮೋಸ ವಡೆ ( ನಮ್ಮ ಭಾಷೆಯಲ್ಲಿ ಬಟಾಟಾಂಬೊಡೆ ) ಎಲ್ಲ ತಿಂಡಿ ಆದ ಮೇಲೆ ಟೈಮ್ ಪಾಸ್ ಗೆ ತಿನ್ನಲಡ್ಡಿಯಿಲ್ಲ. ಮುಂಬೈ ನಲ್ಲಿ ಸಿಗುವಂತಹ ಪಾವು ಊರಿನಲ್ಲಿ ನಾನೆಲ್ಲೂ ಕಂಡಿದ್ದಿಲ್ಲ. ಬ್ರೆಡ್ ಸಿಗುತ್ತದಾದರೂ ಅದು ಜ್ವರ ಬಂದಾಗ ಮಾತ್ರ ಅಥವ ಸ್ಯಾಂಡ್ವಿಚ್ ನಂತಹ ನಾಲಿಗೆ ರುಚಿ ತಿಂಡಿಗಳಿಗಷ್ಟೇ ಮೀಸಲು.ಚಪಾತಿ ವಾರಕ್ಕೋ ಹದಿನೈದು ದಿನಕ್ಕೊ ಒಮ್ಮೆ  ಮಾಡಿದರೆ ಆ ದಿನ ಏಕಾದಶಿಯೊ ಸಂಕಷ್ಟಹರ ಚತುರ್ಥಿಯೊ ಇರಬೇಕು. ಊಟಕ್ಕೆ ಅನ್ನ-ಸಾರು-ಪಲ್ಯ ಮಜ್ಜಿಗೆ ಅಷ್ಟೆ. ಸಸ್ಯಾಹಾರಿಗಳಿಗೆ ಅದು ಬೇಳೆ/ಕಾಳಿನ ಸಾರಾದರೆ( ತೊವ್ವೆ ) ಆದರೆ ಮಾಂಸಾಹಾರಿಗಳಿಗೆ ಮೀನು/ಕೋಳಿಯ ಸಾರು. ಮೀನು ಇಲ್ಲಿನ ಆಹಾರದಲ್ಲಿ ಅವಿಭಾಜ್ಯ ಅಂಗವಾಗಿದೆ. ಮಾಂಸಾಹಾರಿಗಳು ಅದನ್ನು ಮೀನೆಂದು ತಿಂದರೆ ಸಸ್ಯಾಹಾರಿಗಳು "ಸಮುದ್ರದ ಬಾಳೇಕಾಯಿ " ಎಂದು ತಿನ್ನುತ್ತಾರೆ. ಆದ್ದರಿಂದ ಇಲ್ಲಿ ನೀವು "ಬ್ರಾಹ್ಮಣರ ಮೀನು ಊಟದ ಹೋಟೇಲ್" ಕಂಡರೆ ಅಚ್ಚರಿಯೇನಿಲ್ಲ. :):)