Skip to main content

WELCOME TO KUNDAPUR !!!!!! - PART-III



"ಹ್ಜಬ್ದ್ಸ್ಕ್ಫ಼್ಜಒಇಗ್ತಿಎಬ್ಗ್ಕ್ಜ್ಬ್ದ್ವ್ವಿಹ್ಗಿದ್ಕ್ವ್ಶ್ದ್ಪ್ಫ಼್ವೆಒಗ್[ವ್ಪೆಗ್ಸ್ದ್ಜ್ಗ್ವ್೦ಗ್[ವ್ಜ್ಗ್ಸ್ದ್ಬ್ಲ್ವ್[ಒಸ್ರ್ಗ್"

ಏನು ?? ಅರ್ಥ ಆಗಲಿಲ್ವಾ ??ಸಂತೆಯ ಗೌಜಿ ಮಾರಾಯ್ರೆ... ನನಗೂ ಸರಿಯಾಗಿ ಕೇಳಿಸುತ್ತಿಲ್ಲ. ಸ್ವಲ್ಪ ಹತ್ತಿರ ಹೋಗಿ ಕೇಳುವುದು ಒಳ್ಳೆಯದು. ಆಮೇಲೆ ಪಕ್ಕದಲ್ಲಿ ಕುಂಬಳಕಾಯಿ ಮಾರುತ್ತಿರುವವನ ಬೆಲೆ ಕೇಳಿ ಸೇಬು ಮಾರುವವನ ಹತ್ತಿರ ಬಂದು " ಎಂತದು ??? ಈಗ ಎಂಟು ರುಪಾಯಿ ಕಿಲೋ ಅಂತ ಬೊಬ್ಬೆ ಹಾಕಿದ್ರಿ" ಎಂದೆಲ್ಲ ಹೇಳಿದರೆ ಧರ್ಮದೇಟು ಬೀಳುವುದು ಖಂಡಿತ. "ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕಂಜಿದೊದೆಂತಯ್ಯ" ಎಂದು ದಾಸರು ಬರೆಯುವಾಗ ಅವರು  ಕುಂದಾಪುರದಲ್ಲೇ ಇದ್ದರೆಂದು ಕಾಣುತ್ತದೆ. ಸಂತೆಯೊಳಗೆ ಯಶಸ್ವಿಯಾಗಿ ವ್ಯಾಪಾರ ಮಾಡಿ ಬಂದರೆ ಅವನು
ಅರಿಯದೆ ಒಂದು ಅವಧಾನ ಕಾರ್ಯಕ್ರಮ ಮಾಡಿ ಬಂದಂತೆ







ನೀವೇ ನೋಡಿ. ಒಂದು ವೇಳೆ ನಿಮಗೆ ಸೌತೇಕಾಯಿ ತೆಗೆದುಕೊಳ್ಳಬೇಕೆಂದುಕೊಳ್ಳಿ.............

ನಿಮ್ಮದು ಒಂದೇ ಪ್ರಶ್ನೆ.... ಹೋಯ್ ಸೌತೇಕಾಯ್ ಹೇಂಗ್ ಮಾರ್ರೆ..............
ಉತ್ತರಗಳು---
ಅಲ್ಲ ಲೋರಿ ಅನ್ ಲೋಡ್ ಆತಿತ್ತ ಮಾರ್ರೆ........ ಕಳ್ಸಿ ಕೊಡ್ತೆ...  (ಭಟ್ಕಳದಿಂದ ಬಂದ ಬಟಾಟೆ ವ್ಯಾಪಾರಿ ಮೊಬೈಲಿನಲ್ಲಿ )
ಮುಂದಿನ್ ವಾರ ಕೊಡ್ತೆ ಸಾವ್ಕಾರ್ರೆ... ಎಂತ ಓಡಿ ಹೋತ್ನಾ ?? ( ವ್ಯಾಪಾರ ಮುಗಿದು ದುಡ್ಡು ಕೊಡುವಾಗ ಒಂದು ನೂರು ರುಪಾಯಿ ಕಡಿಮೆ ಕೊಟ್ಟ ಗ್ರಾಹಕ ವ್ಯಾಪಾರಿಗೆ.. )
ಪೂರೈಸುದಿಲ್ದೆ.... ಎಂಭತ್ತೈದಕ್ಕೆ ನಮಗೇ ಬತ್ತಿಲ್ಲಾ...... (ಅತೀ ಚೌಕಾಶಿ ಮಾಡಿದ ಗಿರಾಕಿಗೆ ವ್ಯಾಪಾರಿಯ ಮಾತು )
ಹನ್ನೆರಡು.... ಹಾ... ಆ ಚೀಲ ಖಾಲಿ ಮಾಡಿ ಕೊಡಾ.....
ಕೊರ್ಲಾಣೆ... ಹೋಯ್... ಹೋಯ್... ಲೋಸಾತ್ತೆ... (  ಕೊರಳಿನ ಆಣೆ.. ನಷ್ಟವಾಗುತ್ತದೆ... ಕಡಿಮೆ ಹಣ ಕೊಟ್ಟು ಹೋಗಲು ಶುರು ಮಾಡಿದ ಪರಿಚಯಸ್ಥ ಗಿರಾಕಿಗೆ ವ್ಯಾಪಾರಿ )
ಚರ್ಬದೀ.... ( ಹೆದರಬೇಡಿ.. ದೂರದಲ್ಲಿ ಶರಬತ್ತು ಮಾರುತ್ತಿರುವವನ ಕೂಗು )
ಚಿಲ್ ಚಲ್ ಚಿಲ್ ಚಲ್ ಚಿಲ್ ಚಲ್ ( ಏನಿಲ್ಲ ಕಬ್ಬಿನ ರಸ ತೆಗೆಯುವ ಯಂತ್ರದ  ಸದ್ದು )
 ಈ ಇಷ್ಟು ಉತ್ತರಗಳಲ್ಲಿ ನಾಲ್ಕನೇ ಸಾಲಿನ ಮೊದಲ ಶಬ್ದ ಮಾತ್ರ ನಿಮಗೆ ಬೇಕಾಗಿದ್ದು. ಹೇಗೆ ಭಟ್ಟಿ ಇಳಿಸುತ್ತೀರೋ ನೀವೇ ನೋಡಿ.
ಅದಕ್ಕೆ ಸಂತೆಯೊಳಗೆ ಕಾಲಿಡುವಾಗ ಮೈಯೆಲ್ಲಾ ಕಿವಿಯಾಗಿರಬೇಕು.



ಕುಂದಾಪುರ ಸಂತೆ!!!! ಪ್ರತೀ ಶನಿವಾರ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ. ಇತರ ಎಲ್ಲಾ ಸಾಮಾನುಗಳು ಲಭ್ಯವಿದ್ದರೂ ಕೃಷಿ ಉತ್ಪನ್ನಗಳೇ ಮುಖ್ಯ. ಅವಿಭಜಿತ ದಕ್ಷಿಣ ಕನ್ನಡದ ಪ್ರಮುಖ ವ್ಯಾಪಾರ ಕೇಂದ್ರ ಎಂದರೂ ತಪ್ಪಲ್ಲ. ದೂರದ ಶಂಕರನಾರಾಯಣ -ಭಟ್ಕಳ- ಹೊನ್ನಾವರ-ಹೆಬ್ರಿ-ಮಂಗಳೂರಿನ ವ್ಯಾಪಾರಿಗಳೂ ಇಲ್ಲಿ ವ್ಯಾಪಾರ ನಡೆಸಲು ಬರುತ್ತಾರೆ.ಹತ್ತಿರದ ಸಂತೆಕಟ್ಟೆ- ಕಟಪಾಡಿ ಸಂತೆಗೆ ಇಲ್ಲಿಂದಲೇ ಸರಕು ರವಾನೆಯಾಗುತ್ತದೆ.ಬೆಳಿಗ್ಗೆ  ಐದು ಗಂಟೆಯೊಳಗೆ ಬಾಳೆ - ತೆಂಗು  ಬರಲು ಶುರುವಾಗುತ್ತದೆ. ಒಂಭತ್ತರಿಂದ ಸುಮಾರು ಎರಡೂವರೆ ಮೂರರ ತನಕ ಭಾರೀ ಬಿಸಿ-ಬಿರುಸಿನಲ್ಲಿ ನಡೆಯುವ  ವ್ಯಾಪಾರ ಸಂಜೆ ಸೂರ್ಯನ ಬಿಸಿಲಿನೊಡನೆ ತಂಪಾಗುತ್ತಾ ಹೋಗುತ್ತದೆ. ಒಂದು ಕಡೆ ಸರಕಿಗೆ ಒಳ್ಳೆಯ ಬೆಲೆ ಸಿಕ್ಕಿ ಲಾಭವಾದ ಖುಶಿಯಲ್ಲಿ ಕೆಲವು ವ್ಯಾಪಾರಿಗಳಿದ್ದರೆ ಸಂಜೆಯವರೆಗೂ ಕಾದು ಆಮೇಲೆ ಮಾರದಿದ್ದರೆ ವಾಪಾಸು ತೆಗೆದುಕೊಂಡು ಹೋಗುವ ಖರ್ಚು ಇನ್ನು ಹೆಚ್ಚಾದೀತೆಂದು ಕಡಿಮೆ ಲಾಭಕ್ಕೋ ನಷ್ಟಕ್ಕೊ ಮಾರಿ ಸೋತ ಮುಖದಿಂದ ನಿರ್ಗಮಿಸುವ ವ್ಯಾಪಾರಿಗಳು ಇನ್ನೊಂದು ಕಡೆ. ಇವರನ್ನು ನೋಡಿ ಮನಸ್ಸಿಗೆ ಸ್ವಲ್ಪ ನೋವಾದರೂ ಮಾರುಕಟ್ಟೆಯ ಬೇಡಿಕೆ - ಪೂರೈಕೆ ನಿಯಮಕ್ಕನುಗುಣವಾಗಿಯೇ ಇರುತ್ತದೆ. ಈಗ ಉದಾಹರಣೆಗೆ ತೆಗೆದುಕೊಳ್ಳಿ......

ಬೇಡಿಕೆ ಇಲ್ಲದಿದ್ದಾಗ ,ನಮ್ಮ ಅಪ್ಪನನ್ನು ಶೆಟ್ರೆ.... ಭಟ್ರೆ.. ಶಾನ್ಭಾಗ್ರೆ.. ಕಿಣಿಯರೆ.. ಕಾಮತ್ರೆ... ಪೈಗಳೆ... ಹೊಯ್ ಕೊಂಕಣಿಯರೆ... ಎಂಬಿತ್ಯಾದಿ ನಾಮಾವಳಿಗಳಿಂದ ಕೂಗಿ ವ್ಯಾಪಾರಕ್ಕೆ ಕರೆಯುವ ತೆಂಗಿನ ಕಾಯಿ ವ್ಯಾಪಾರಿಗಳ ಕುತ್ತಿಗೆ ವಿನಾಯಕ ಚತುರ್ಥಿಯ ಸಮಯದಲ್ಲಿ ತೆಂಗಿನ ಮರಕ್ಕಿಂತಲೂ ಸ್ವಲ್ಪ ಮೇಲೆ ಇರುತ್ತದೆ. ಮಳೆಗಾಲದಲ್ಲಿ ನೂರಕ್ಕೆ ನಲವತ್ತು ಎಂದಾಗ ನಾವು ಚೌಕಾಶಿ ಮಾಡುವ ಅಗತ್ಯವಿಲ್ಲ ಹುಬ್ಬೆರಿಸಿದರೆ ಮೂವತ್ತಕ್ಕೆ ತೆಗೆದುಕೊಳ್ಳಿ ಎಂಬುವ ನಿಂಬೆಹಣ್ಣಿನ ವ್ಯಾಪಾರಿ ಆಯುಧ ಪೂಜೆಯ ಸಮಯದಲ್ಲಿ ಅಟ್ಟದ ಮೇಲೆ ಹತ್ತಿರುತ್ತಾನೆ. ಆಗ ನಿಂಬೆಹಣ್ಣು ಬಿಡಿ pre meture delivary  ಆಗಿರುವ ಗೋಲಿಯಷ್ಟು ದೊಡ್ಡ ಎರಡು  ನಿಂಬೆಕಾಯಿ ಇರುವವನ ಬಳಿ ವ್ಯಾಪಾರ ದೂರದ ಮಾತು, ಬರೀ ಮಾತಾಡಬೇಕಾದರೂ ಜಿಲ್ಲಾಧಿಕಾರಿ ಅಥವಾ ಕನಿಷ್ಟ ತಹಸೀಲ್ದಾರರ ಒಪ್ಪಿಗೆ ಪತ್ರ ತೆಗೆದುಕೊಂಡು ಬರಬೇಕು. ಹೀಗೆ ಅರ್ಥಶಾಸ್ತ್ರದ ಬೇಡಿಕೆ-ಪೂರೈಕೆಯ ತತ್ವ ಪೂರ್ಣ ಪ್ರಮಾಣದಲ್ಲಿ ಇಲ್ಲಿ ಅನ್ವಯಿಸುತ್ತದೆ.

ರಾಸಿಗೊಂದ್ರುಪಾಯಿ.....ರಾಸಿಗೊಂದ್ರುಪಾಯಿ.......ರಾಸಿಗೊಂದ್ರುಪಾಯಿ ( ರಾಶಿಗೆ ಒಂದು ರುಪಾಯಿ ). ಒಂದು ನಿಮಿಷ ಆ ರಾಶಿ ಎಂಬ ಶಬ್ದ ಕೇಳಿ ಎಷ್ಟು ದೊಡ್ಡ ರಾಶಿಯೋ ಎಂದುಕೊಂಡು ಸುಡುವ ಬಿಸಿಲಿನಿಂದ ಕಣ್ಣನ್ನು ರಕ್ಷಿಸಲು ಕೈಯನ್ನು ಹಣೆಯ ಮೇಲಿಟ್ಟು ನಭೋಮಂಡಲದೆಡೆಗೆ ಕಣ್ಣು ಹಾಯಿಸಬೇಡಿ.ಕುತ್ತಿಗೆ ಬಗ್ಗಿಸಿ ನಿಮ್ಮ ಕಾಲ ಕಿರುಬೆರಳಿನೆಡೆ ನೋಡಿದರೆ ನಿಮ್ಮ ಒಂದು ರುಪಾಯಿಯ ರಾಶಿ ನಿಮ್ಮೆದುರಿಗೆ ಇರುತ್ತದೆ.

Photo courtesy : www.google.com


ಏನು ?? ದಂಗಾದಿರಾ ?? ಇದೇ ಮಾರಾಯ್ರೆ ನಿಮ್ಮ ರಾಶಿ .....ಕೊಟ್ಟ ಒಂದು ರುಪಾಯಿಗೆ ಪಾಪ ಅವರು ಏಳು ಮೆಣಸಿನ ಪಂಚಾಂಗದ ಮೇಲೆ ಒಂದು ಮೆಣಸುನ ಮೊದಲನೇ ಅಂತಸ್ತು ಕಟ್ಟಿಲ್ಲವೇ ?? ಅದೇ ದೊಡ್ಡದು.ಇದು ಸಂತೆಗೆ ಬಂದು ಏನೋ ಲಾಭ ಗಳಿಸುವ ಚಟವಿರುವ ಹುಡುಗರು ಹನ್ನೆರಡು ರುಪಾಯಿಗೆ ಒಂದು ಕಿಲೋ ಹಸಿಮೆಣಸು ಖರೀದಿಸಿ ಅದನ್ನು ಇಪ್ಪತ್ತು ಸಮಭಾಗ ಮಾಡಿ ಆಮೇಲೆ ಕೂಗುವ ಬೊಲೀ .ಇಷ್ಟಲ್ಲದೆ ಅವಿದ್ಯಾವಂತರೂ ಇಲ್ಲಿ ವ್ಯಾಪಾರ ಮಾಡುತ್ತಾರೆ. ಅವರೊಂದಿಗಿನ ನನ್ನ ಕೆಲವು ಅನುಭವ....... ಒಂದು ತೆಂಗಿನ ಕಾಯಿ ವ್ಯಾಪಾರಿಯನ್ನೆ ತೆಗೆದುಕೊಳ್ಳೋಣ....

ಹೋಯ್... ತೆಂಗಿನ ಕಾಯಿ ಹೆಂಗೆ ಮಾರ್ರೆ ??
ಆರು ರುಪಾಯಿ.....
ನೂರಕ್ಕೆ ಎಷ್ಟ ?? ( ಅಂದರೆ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡರೆ ಸ್ವಲ್ಪ ದರ ಕಡಿಮೆ ಮಾಡುವರೆಂಬುದು ರೂಢಿ )
ನೂರಕ್ಕಾ ?? ನೂರಕ್ಕೆ ಎಪ್ಪತೈದು!!!!! ಹೀಗೆ ಕೇಳಿದ ನಿಮಗೆ ನಗು ಬಂದರೂ ಆ ಸಂತೆಯಲ್ಲಿ ಬಂದು ವ್ಯಾಪಾರ ಮಾಡುವ ಹಣ್ಣು ಹಣ್ಣು ಮುದುಕರನ್ನು ನೋಡಿದಾಗ ಅವರ ಜೀವನ ನಡೆಸುವ ಛಲ  ನೆಗಡಿಯಾದರೆ ರಜಾ ಹಾಕಿ ಮನೆಯಲ್ಲಿ ಕೂರುವ ನಮಗೆ ದಾರಿದೀಪ ಎನ್ನಿಸುತ್ತದೆ.

ಇಷ್ಟಲ್ಲದೆ ಕೆಲವರು ಲೆಕ್ಕಾಚಾರಕ್ಕೆ ನಮ್ಮ ಅಪ್ಪನ ಸಹಕಾರ ತೆಗೆದುಕೊಳ್ಳುವುದುಂಟು.....
ಹೋಯ್ ಭಟ್ರೆ .... ಇದೊಂದ್ ಲೆಕ್ಕಾಚಾರಾ ಮಾಡಿಯೆ.....
ಹಾ ಹೇಳಿ.....
ಅರೂವರೆಗೆ ಮಾತ್ ಆಯಿತ್ತ  ಎಂಭತ್ತ್ ಕಾಯಿ ತೆಕಂಡೀರ.... ಐನೂರಾ ಐವತ್ತ ಕೊಟ್ಟೀರ... ಇನ್ನೆಷ್ಟ ಕೊಡೂದಾತ್ತ ??
ಇನ್ನ ಕೊಡೂದೆಂತ ?? ನೀವೇ ಮೂವತ್ತ ರುಪಾಯ್ ವಾಪಾಸ್ ಕೊಡ್ಕ
ಹೌದಾ ?? ಹಾಂಗಾರೆ ಅರೂಮುಕ್ಕಾಲ್ರಲ್ಲ ಲೆಕ್ಕ ಹಾಕಿ.....
ಹೀಗೆ ಐನೂರಾ ಐವತ್ತು ಟೋಟಲ್ ಬರುವ ವರೆಗೆ ಬೆಲೆ ಏರಿಸಿ ಲೆಕ್ಕ ಹಾಕುತ್ತಾ ಹೋಗಬೇಕು.....

ಹೀಗೆ ಬಿಸಿಲು ಮಳೆ ಚಳಿ ಎಲ್ಲದಕ್ಕೂ ಎದೆ ಕೊಟ್ಟು ಯಾವುದಕ್ಕೂ ಅಂಜದೇ ಪ್ರತಿ ಶನಿವಾರ ತಪ್ಪದೆ ಕುಂದಾಪುರ ಸಂತೆ ನಡೆಯುತ್ತದೆ.ನೀರು ಬೆಲ್ಲ , ವಾಲಿಬೆಲ್ಲ ಮುಂತಾದವು "ಇಲ್ಲಿ ಬಿಟ್ಟು ಬೇರೆಲ್ಲೂ ಸಿಗದು" ಎಂದರೂ ತಪ್ಪಲ್ಲ. ವ್ಯಾಪಾರಿಯು ತನ್ನ ಅಂಗಡಿ ಮುಚ್ಚಿ ವರ್ಷಗಳೇ ಕಳೆದಿದ್ದರೂ ಶನಿವಾರ ಬಂತೆಂದರೆ ಒಂದು ಕೈಚೀಲ ತೆಗೆದುಕೊಂಡು ಸಂತೆಯೊಳಗೆ ಹಾಜರಾಗುತ್ತಾರೆ.ಹೀಗೆ ಇದು ಇಲ್ಲಿನ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ.


Comments

haangaare ivattin yaapaar mugeetantaa aayeeth....!!!
Thanks!!!

what to say yar!!!

ಬಾಗ್ಲ ತೆಗುದ ತಡ
ಬೋಣಿ ಯಾಪಾರ ಕಡ!!!

Sumanth
PARAANJAPE K.N. said…
ಶಾನ್ ಭಾಗ್ರೆ, ಯಾಕೋ ಇತ್ತೀಚಿಗೆ ಏನು ಬರೀತಿಲ್ಲ ನೀವು, ಬರೀರಿ ಮಾರ್ರೆ
Anil ML said…
Sumanth ji, First time saw your blog. Its good. But u could still improve your style of writing on comic incidents( Patpataki ).

Popular posts from this blog

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ ...

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...