Wednesday, February 25, 2009

ಅಪಾರ್ಥ ಕೋಶ

ಒಂದು 6-7 ವರ್ಷ ಹಿಂದಿನ ಮಾತು . ಅಗತ್ಯ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆ . ಅಪ್ಪನೊಂದಿಗೆ ಬಸವನಗುಡಿ ಬಳಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ರಸ್ತೆ ದಾಟಲು ಕಾಯುತ್ತಿದ್ದೆವು . ಎದುರಿನಿಂದ ಟ್ಯಾಂಕರ್ ಒಂದು ಹೋಯಿತು . ಥಟ್ಟನೆ
ನಾನು-ಅಪ್ಪ ಪರಸ್ಪರ ನೋಡಿ ನಕ್ಕೆವು . ಯಾಕೆಂದು ಕೇಳುತ್ತೀರಾ ?? ಏನಿಲ್ಲ ಆ ಟ್ಯಾಂಕರು " ನೀರು ಸರಬುರುಜು ವಾಹನ " ಆಗಿತ್ತು . ( ಅದು ನೀರು ಸರಬರಾಜು ವಾಹನ ಆಗಬೇಕಿತ್ತು ). ಅದರ ಅರ್ಥ ಏನೆಂದು ದೇವರೇ ಬಲ್ಲ . ಮುಂದೆ ಬಸ್ ನಿಲ್ದಾಣದಲ್ಲಿ ನಿಂತಾಗ ಬಸ್ ನ ಬೋರ್ಡ್ ನಲ್ಲಿ "ಕೆ . ಆರ್ ಪೇಟೆ , ಕಂ. ಬ .ನಿ " ಎಂದು ಬರೆದದ್ದು ಓದಿ ನಿಜಕ್ಕೂ ಕಂಬನಿ ಹರಿಯಿತು. (ಅದು ಕೆಂ .ಬ .ನಿ :- ಕೆಂಪೇಗೌಡ ಬಸ್ ನಿಲ್ದಾಣ ಆಗಬೇಕಿತ್ತು ) . ಆ Painter ಗೆ ಸ್ವಲ್ಪ ಕಡಿಮೆ ಹಣ ಕೊಟ್ಟಿರಬೇಕು ಅವನು ಹೀಗೆ ಸೇಡು ತೀರಿಸಿಕೊಂಡಿದ್ದ . ಇದು ಸಣ್ಣ ಅಳತೆಯ ತಪ್ಪುಗಳು "ಅಪಾರ್ಥ " ಅನ್ನುವಂತದ್ದೇನೂ ಇಲ್ಲ . ಭಾರೀ ಅಪಾರ್ಥಕ್ಕೆ ಎಡೆ ಮಾಡುವಂಥ ತಪ್ಪುಗಳನ್ನು ಗಮನಿಸಿದ್ದೇನೆ . ನೆನಪಾದಷ್ಟನ್ನು ಇಲ್ಲಿ ಬರೆದಿದ್ದೇನೆ .

ಮೊನ್ನೆ ಸುಭಾಷಿತ ಪುಸ್ತಕ ಅರ್ಥ ( ಅಪಾರ್ಥ ) ಸಮೇತ ಓದುತ್ತಿದ್ದೆ . ಅದರ ಒಂದು ಶ್ಲೋಕ ಮತ್ತು ಅದರ ಅರ್ಥ ಹೀಗೆ ಕೊಟ್ಟಿದ್ದರು .
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ||

ಸಾರಾಂಶ : ಎಲ್ಲಿ ನಾರಿಯರು ಪೂಜಿಸುತ್ತಾರೋ ಅಲ್ಲಿ ದೇವರು ನೆಲೆಸುತ್ತಾನೆ .
ಅಯ್ಯೋ ದೇವ್ರೇ ..... ದೇವರಿಗೆ ಗಂಡಸರನ್ನ ಕಂಡರೆ ಆಗುವುದಿಲ್ಲ ಎಂದು ಗೊತ್ತಿರಲಿಲ್ಲ . ಇದನ್ನು ಓದಿದರೆ ಮರುದಿನದಿಂದ ಎಲ್ಲ ಅರ್ಚಕರ ಪತ್ನಿಯರು ದೇವಸ್ಥಾನಕ್ಕೆ ದೌಡಾಯಿಸುವುದು ಖಾತ್ರಿ .
ನಿಜವಾದ ಅರ್ಥ :- ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಎಲ್ಲಿ ಅವರನ್ನು ಗೌರವಾದರಗಳೊಂದಿಗೆ ಕಾಣಲಾಗುತ್ತದೋ ಅಲ್ಲಿ ದೇವರು ನೆಲೆಸುತ್ತಾನೆ .

ಇರಲಿ.... ಇದೆಲ್ಲ ಚಿನಕುರುಳಿಗಳು . ನ್ಯೂಕ್ಲಿಯರ್ ಬಾಂಬ್ ಬೇಕೆ ??? ನೋಡಿ

1 ) ಹುಡುಗಿಯರು ಮಾರಾಟಕ್ಕೆ ಬೇಕಾಗಿದ್ದಾರೆ. ( Sales Girls required)
............... ಜಾಮೀನು ಸಿಗದ ಕೇಸ್ ಆದೀತು ಸ್ವಾಮೀ .. ಹುಷಾರ್ !!!!!!

2) ಇಲ್ಲಿ ರೆಡಿಮೇಡ್ ಮಕ್ಕಳ ಬಟ್ಟೆಗಳು ಸಿಗುತ್ತವೆ .( Ready made dress for childern available here)
................ ದೇವ್ರೇ !!!!... ಮಕ್ಕಳು ಕೂಡ ರೆಡಿಮೇಡ್ ಬರಲು ಶುರುವಾದವೇ ??

3) ಹೋಟೆಲ್
ಮೀನು ಊಟ ಪ್ರಿಯಾಂಕಾ
ತಯಾರಿದೆ

.......... ಶಾಂತಿ !!!! ಸಮಾಧಾನ !!! ತಯಾರಿರುವುದು ಮೀನು ಊಟ ....... ಪ್ರಿಯಾಂಕ ಹೋಟೆಲಿನ ಹೆಸರು ಸ್ವಾಮೀ ....

ಇನ್ನು ಒಂದು ಗ್ಯಾರೇಜಿನ ಮೇಲೆ ಬರೆದಿತ್ತು "ಇಲ್ಲಿ ಶೋಕಬ್ಸರ ಮಾಡಲಾಗುವುದು "
ಸ್ವತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ನನಗೆ ಇದು ವಾಹನದ ಯಾವ ಭಾಗ . ಯಾಕೆ ಶೋಕ ಯಾವ ಅಪ್ಸರೆ ಎಂದು ತಿಳಿಯಲಿಲ್ಲ ( ಅದು Shock Absorber ರಿಪೇರಿ ಮಾಡುವ ಗ್ಯಾರೇಜಾಗಿತ್ತು )

" ನೂತನ ಗ್ರಹ ಪ್ರವೇಶದ " ಆಮಂತ್ರಣ ಪತ್ರಿಗೆ ಸಿಕ್ಕಾಗ ಹುರ್ರೇ !!!!!!..... ನಾಳೆ ನಾನು ಹೊಸ ಗ್ರಹ ನೋಡುತ್ತೇನೆ ಎಂಬ ಖುಷಿಯಲ್ಲಿ ಸುರೇಕಾ !!!!ಸುರೇಕಾ!!!! ಎಂದು ಓಡಲೇ ?? ಅಥವಾ ಯಾವುದೀ ಸೌರವ್ಯೂಹದ ಹತ್ತನೇ ಗ್ರಹ ?? ISRO- NASA ದವರು ಮಾಡಲಾಗದ್ದನ್ನು ನಮ್ಮ ಊರಿನವರು ಮಾಡಿದರೆಂದು ಹೆಮ್ಮೆ ಪಡಲೇ ?? (ಅದು ಗೃಹ ಪ್ರವೇಶ )

"ಸಾರ್ವಜನಿಕ ಶೌಚಲಾಯ " ನೋಡಿದ್ದೀರಾ ?? ನಾನು ನೋಡಿದ್ದೇನೆ . ಆದರೆ ಅದು ಮನುಷ್ಯರಿಗೋ ಅಥವಾ ಕುದುರೆಗಳಿಗೋ ಎಂದು ತಿಳಿಯಲಿಲ್ಲ .

ಕಾರಿನ ಮೇಲೆ " SHIVA KURPA" ಎಂದು ಬರೆದದ್ದನ್ನು ನೋಡಿ ದಂಗಾದೆ . ಆಮೇಲೆ ಅದು ಕಾರಿನ ಮಾಲೀಕನ ಹೆಸರು ಮತ್ತು Surname ಆಗಿರಬೇಕೆಂದುಕೊಂಡು ಭಾವಿಸಿ ಸಮಾಧಾನ ಮಾಡಿಕೊಂಡೆ .

"ಏವರೇಸ್ಟ್ ಸ್ಟೀಲ್ ಅಂಡ್ ಹಾರ್ಡ್ ವೇರ್ " ( ಎವೆರೆಸ್ಟ್ ) ಊಫ್ ... ನಿಜವಾದ ಮೌಂಟ್ ಎವೆರೆಸ್ಟ್ ಕೂಡ ಇಷ್ಟು ಎತ್ತರ ಇರಲಿಕ್ಕಿಲ್ಲ.

ಒಮ್ಮೆ ಆಫೀಸಿನಲ್ಲಿ ಬೆಂಗಳೂರಿನ ಒಂದು ಶಾಖೆಯಿಂದ ದೂರವಾಣಿ ಕರೆ ಬಂದಿತು . ನೋಡಿ ಖುಷಿಯಾಯಿತು . ಇರಪ್ಪ ... ನಾನು attend ಮಾಡುತ್ತೇನೆ ಎಂದು ಸ್ನೇಹಿತನಿಗೆ ಹೇಳಿ ಫುಲ್ ಸ್ಟೈಲ್ ನಿಂದ " ಹಾ ಹೇಳಿ ಸರ್ ಏನಾಗಿದೆ ??" ಎಂದು ಕೇಳಿದೆ ."ಸರ್ ಮುಜೆ ಕನ್ನಡ ನಹಿ ಆತಾ ಹೈ " ಎಂಬ ಉತ್ತರ ಕೇಳಿ ಇಂಗು ತಿಂದ ಮಂಗನಂತಾದೆ . " ಜೈ ಕನ್ನಡಾಂಬೆ " ಎಂದು ಹಿಂದಿಯಲ್ಲಿ ಸಂಭಾಷಣೆ ಮುಂದುವರಿಸಿದೆ .

ಇನ್ನು ಕೆಲವೊಮ್ಮೆ ಅತಿಯಾದ ಕನ್ನಡ ಪ್ರೇಮ ಕಂಟಕ ತರುತ್ತದೆ . ನೀವೇ ನೋಡಿ .... ಸೈಕಲ್ಲಿನ " Valve Tube" ಕೊಡಪ್ಪ ಎಂದರೆ ಸುಮ್ಮನೆ ಕೊಡುವ ಅವನು "ಸ್ವಾಮೀ .. ನನಗೆ ದ್ವಿಚಕ್ರ ವಾಹನದ ಗಾಲಿಯ ಸ್ಥಿತಿಸ್ಥಾಪಕ ಗುಣದ ವಾಯುರೇಚಕ ನಳಿಗೆಯನ್ನು ಕೊಡಿ " ಅಂದರೆ ಅವನು ಬಡವನಾದರೂ ಸ್ವಂತ ಖರ್ಚಿನಲ್ಲಿ ನಿಮ್ಮನ್ನು ಕಂಕನಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಮನೋರೋಗ ಆಸ್ಪತ್ರೆಯಲ್ಲಿ ಭರ್ತಿ ಮಾಡಿಸುವುದು ಖಂಡಿತ . ಹಾಗೆಯೇ ಕನ್ನಡದಲ್ಲಿ ನಾಮಫಲಕ ಹಾಕಬೇಕೆಂದುಕೊಂಡು Medicals, Stores ನ್ನು "ಮೆಡಿಕಲ್ಸ್" " ಸ್ಟೋರ್ಸ್ " ಎಂದು ಬರೆಯುತ್ತಾರೆ ಒಳ್ಳೆಯದು ಆದರೆ ಕೆಲವೊಮ್ಮೆ ಇದು ಅತೀ ಆಗುತ್ತದೆ . XYZ Brothers ನ್ನು ಇಂಗ್ಲೀಷಿನಲ್ಲಿ XYZ Bros ಎಂದು ಬರೆಯುತ್ತಾರೆ ಹಾಗೆಂದು ಅದನ್ನೇ ಕನ್ನಡೀಕರಿಸಿ "ಬ್ರೋಸ್ " ಎಂದು ಬರೆದರೆ ಅಥವಾ "Bhaskar & co" ಎಂಬ ಫಲಕವನ್ನು ಪಂಡಿತರು ತಮ್ಮ ವಾಙ್ಮಯ ಜ್ಞಾನವನ್ನೆಲ್ಲಾ ಧಾರೆ ಒತ್ತಿ "ಭಾಸ್ಕರ ಅಂಡ್ ಕೋ" ಎಂದು ಬರೆದರೆ ಹಿಂಸೆ ಆಗುವುದಿಲ್ಲವೇ ?? ಕುಂದಾಪುರದ ಯಾವುದೇ ಭಾಸ್ಕರನು ಇದನ್ನು ಓದಿದಲ್ಲಿ ಅವನು ಹೆದರಿ ಅಡಗಿ ಕೂತಾನು .( ಕುಂದಾಪ್ರ ಕನ್ನಡದಲ್ಲಿ ಅಂಡ್ ಕೋ ಅಂದರೆ ಅಡಗಿಕೋ ಎಂದರ್ಥ ). ಮತ್ತು "Bright Power Laundry" ಯನ್ನು " ಬ್ರಾಯಿಟ ಪವರ ಲಾಂಡರಿ " ಎಂದು ಬರೆದರೆ ಮೈಯೆಲ್ಲಾ ಪರಚಿಕೊಳ್ಳುವಂತಾಗುತ್ತದೆ .

ಇನ್ನು ಅಪ್ಪಟ ಕನ್ನಡ ಪ್ರೇಮಿಗಳನ್ನು ನೋಡಬೇಕೇ ?? ನಮ್ಮ ಊರಿಗೆ ಬನ್ನಿ . ಬೇಸಗೆಯ ಒಂದು ಶನಿವಾರ - ಭಾನುವಾರದಂದು ಗಣಪಯ್ಯನವರ ಗದ್ದೆಯಲ್ಲಿ , "ಗಿರಿಜಾ ಫ್ಲವರ್ ಸ್ಟಾಲ್ " ಮತ್ತು "ಗಣಪತಿ ವೆಲ್ಡಿಂಗ್ ವರ್ಕ್ಸ್ " ನವರ ಜಂಟಿ ಪ್ರಾಯೋಜಕತ್ವದಲ್ಲಿ ನಡೆಯುವ ಮೂವತ್ತು ಗಜಗಳ ( ಸೀರೆ ಅಳತೆ ಮಾಡುತ್ತಿಲ್ಲ ಸ್ವಾಮೀ ಇದು 30 Yards ) ಕ್ರಿಕೆಟ್ ಪಂದ್ಯಾಟ "ರೀಗಲ್ ಕಪ್ " ನೋಡಬೇಕು ಮತ್ತು ಆಗ ಇಲ್ಲಿನ ಲೋಕಲ್ ರವಿಶಾಸ್ತ್ರಿಗಳ ಕಾಮೆಂಟ್ರಿ ಕೇಳಬೇಕು .ಆಹಾ ... ಕೆಲವು Terminology ಗಳನ್ನು ವಿವರಿಸುತ್ತೇನೆ .
1) Wide ball = ಅಗಲವಾದ ಎಸೆತ . ( ಬೇಕಾದರೆ ಹೋಗಿ ಅಳತೆ ಮಾಡಿ )
2) No ball = ಇಲ್ಲದ ಎಸೆತ (ಇಂಗ್ಲೀಶ್ ವ್ಯಾಕರಣದಲ್ಲಿ ಇವನಿಗೆ 100% ಅಂಕ )
3) dot ball = ಚುಕ್ಕೆ ಎಸೆತ ( ಬೇಕಾದರೆ ರಂಗೋಲಿ ಹಾಕಿಕೊಳ್ಳಿ )
4)Batsman = ದಾಂಡಿಗ ( ಏನು ?? ಇದು ಕ್ರಿಕೆಟೋ ??ಕುಸ್ತಿನೋ ?? ಎಂದು ಕೇಳಬೇಡಿ )
5)fielder,keeper = ಕ್ಷೇತ್ರರಕ್ಷಕ , ಗೂಟ ರಕ್ಷಕ .. ( ಆಟದ ಮೈದಾನವನ್ನು ಕಾಯುವ ಗ್ರಾಮದೈವ ಮತ್ತದರ ಪರಿವಾರ ಗಣ )

ಬನ್ನಿ ಒಂದು Typical commetry ಹೇಳುತ್ತೇನೆ
" ಈ ಬಾರಿ ಮತ್ತೊಮ್ಮೆ ಅಂಕಣದ ಒಳಭಾಗದಲ್ಲಿ "ಗಿರಿಜಾ ಫ್ಲವರ್ ಸ್ಟಾಲ್ " ಮತ್ತು "ಗಣಪತಿ ವೆಲ್ಡಿಂಗ್ ವರ್ಕ್ಸ್ " ಈ ಒಂದು ಜಾಹೀರಾತು ಫಲಕದ ತುದಿಯಿಂದ ಮನೋಜ್ ಅವರು ಪ್ರಕಾಶ್ ಅವರಿಗೆ ನಾಲ್ಕೈದು ಹೆಜ್ಜೆ ಓಡಿ ಬಂದು ಎಸೆದಂತಹ ಎಸೆತ ಊತ್ತಮವಾದಂತ ( ಅದು ಉತ್ತಮ ಅಲ್ಲ ಊತ್ತಮ !!!!) ಆದರೆ ಆಫ್ ಸ್ಟಂಪ್ ನ ಹೊರ ಅಂಚನ್ನು ದಾಟಿದ ಎಸೆತಕ್ಕೆ ಅಗಲವಾದಂತಹ ಎಸೆತ ಎಂಬ ಸೂಚನೆ ಹದ್ದಿನ ಕಣ್ಣಿನ ತೀರ್ಮಾನಕಾರಕ ಗುರು ಅವರಿಂದ . ಚೆಂಡಿಗೆ ಒಳ ತಿರುವನ್ನು ಕೊಡುವಲ್ಲಿ ಎಸೆತಗಾರ ಮನೋಜ್ ವಿಫಲತೆಯನ್ನು ಕಂಡಿದ್ರು .... ಚೆಂಡು ಗೂಟರಕ್ಷಕ ಅಮೃತ ಹಸ್ತಗಳಲ್ಲಿ .

ಈ ಬಾರಿ ಮತ್ತೊಮ್ಮೆ ಎಸೆತಗಾರ ಮನೋಜ್ ಅವರು ಪ್ರಕಾಶ್ ಅವರಿಗೆ ನಾಲ್ಕೈದು ಹೆಜ್ಜೆ ಓಡಿ ಬಂದು ಎಸೆದಂತಹ ಎಸೆತ ಊತ್ತಮವಾದಂತಹ ಎಸೆತ ತಟ್ಟಿ ಮುಟ್ಟಿ ಓಡುವ ಯತ್ನ ಪ್ರಕಾಶ್ ಅವರಿಂದ.... ಕ್ಷೇತ್ರ ರಕ್ಷಣೆಯಲ್ಲಿ ಕೊಂಚ ಗಲಿಬಿಲಿ . ಈ ಮೂಲಕ ತಂಡದ ಖಾತೆಯಲ್ಲಿ ಒಂದು ಓಟದ ಹೆಚ್ಚಳ ಕಾಣುತ್ತ ಇದ್ದೇವೆ . ತಂಡದ ಮೊತ್ತ 36 ಇನ್ನು ಉಳಿದಿರುವ 3 ಓವರ್ ಗಳಲ್ಲಿ ಜೈ ಗಣೇಶ್ ಬಸ್ರೂರು ತಂಡ ಅದೆಷ್ಟು ಓಟಗಳನ್ನು ಕಲೆ ಹಾಕುತ್ತದೆ ಅಂದು ಕಾದು ನೋಡೋಣ . ಈ ಸಮಯದಲ್ಲಿ ನಮ್ಮೊಂದಿಗಿದ್ದಾರೆ ಕುಂದಾಪುರದ ಹೆಸರಾಂತ ಉದ್ಯಮಿ ಲಕ್ಷ್ಮೀಪತಿ ಉರಾಳ . Sir ನಿಮ್ಮ ಇರುವಿಕೆಯನ್ನು ಗಮನಿಸುತ್ತಿದ್ದೇವೆ . ಈ ನಡುವೆ ಸತತ 3 ಒಡ್ಡಿ ಸಂಪಾದಿಸಿದ ( hat trick fours) ದಾಂಡಿಗನಿಗೆ ಗಣೇಶ್ ಶೆಟ್ಟಿ ಅವರು 100/- ಬಹುಮಾನ ಘೋಷಿಸಿದ್ದಾರೆ . ಮುಂದೆ ಆಂಗ್ಲ ಭಾಷೆಯಲ್ಲಿ ವೀಕ್ಷಕ ವಿವರಣೆ ಕೊಡಲು ಬರುತ್ತಿದ್ದಾರೆ ಪ್ರಖ್ಯಾತ ವೀಕ್ಷಕ ವಿವರಣೆಕಾರ ರೋಹಿತ್ ಪಿಂಟೋ ....ಹೀಗೆ ಇದು ಮುಂದುವರೆಯುತ್ತದೆ .......

ಹೀಗೆ ನಿತ್ಯಜೀವನದಲ್ಲಿ ಅಲ್ಲಿಲ್ಲಿ ತಿರುಗುವಾಗ ಇಂಥ ಹಲವಾರು ದೋಷಗಳು ಕಂಡು ಬರುತ್ತವೆ . ಈಗ ನನ್ನ ಈ ಲೇಖನದಲ್ಲಿ ತಪ್ಪು ಹುಡುಕಿ ಯಾರಾದರೂ ಹೊಸ ಲೇಖನ ಬರೆಯಲೂ ಸಾಧ್ಯ . ಅದರ ಅಪಾರ್ಥವು ಅರ್ಥವಾದಲ್ಲಿ ಬಿಟ್ಟಿ ಮನರಂಜನೆಯಂತೂ ಸಿಗುತ್ತದೆ . ಅದರೊಂದಿಗೆ ಕನ್ನಡಮ್ಮನ ಮೇಲಾಗುವ ಶೋಷಣೆ ನೋಡಿ ಬೇಸರವೂ ಆಗುತ್ತದೆ .
ಇಲ್ಲಿಗೆ ನನ್ನ ಲೇಖನ ಮುಗಿಸುತ್ತಿದ್ದೇನೆ . ನೀವೇ ಹೇಳಿ ಹೇಗಿದೆ ಈ ಆರ್ಟಿ "ಕಲ್ಲು " ??

********************************************* ವಿಕಟಕವಿ ************************

7 comments:

Bala said...

ನಿಮ್ಮ 'arti'ಕಲ್ಲು ಸೂಪರ್ರಾಗಿದೆ ಮಾರಾಯ್ರೆ, ನಕ್ಕು ನಕ್ಕು ಸುಸ್ತಾಯಿತು.

ಶ್ರೀಹರ್ಷ Salimath said...

ಚೆನ್ನಾಗಿದೆ!!! ಇನ್ನೂ ಬರಲಿ.

Summu said...

ಧನ್ಯವಾದ ಹರ್ಷ , ಬಾಲಕೃಷ್ಣ ಸರ್ ... ತಮ್ಮ ಪ್ರೋತ್ಸಾಹಕ್ಕೆ ಚಿರಋಣಿ

ranjith said...

ನಿಮ್ಮ ಈ ಆರ್ಟಿಕಲ್ಲು ನೀವು ಬರೆದಿದ್ದರಲ್ಲೆ ಬೆಸ್ಟು.

(ಕಲ್ಲು ತಾಕಿ) ಬಿದ್ದು ಬಿದ್ದು ನಕ್ಕಿದ್ದಾಯ್ತು.

ಇದು ನಿಜವಾಗ್ಯೂ ನಡೆಯಬಹುದಂತಾದ್ದರಿಂದ ಫೋಟೋಸ್ ಇದ್ದಿದ್ರೆ ಇನ್ನೂ ಚೆನಾಗಿತ್ತು.( ನಿಮ್ಮ ಮೇಲೆ ನಂಬಿಕೆ ಇಲ್ಲ ಅಂತಲ್ಲ!)

ಖುಷಿಯಾಯ್ತು ಓದಿ. ಹೀಗೇ ಬರೀತಿರಿ.

-ರಂಜಿತ್

shanthala said...

r t kall is superb do not be GARADI BADIDAVA on looking at my comment, ha ha!! just joking, never mind, keep the good work going on

Anonymous said...

ನಮಸ್ತೆ.. ನಾಡಿದ್ದು 8-03-2009 ರಂದು ನಡೆಯುವ ಅಮ್ಮನ ಹಬ್ಬಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ. ನೀವು ಬಂದರೆ ತುಂಬಾ ಸಂತೋಷ ಆಗುತ್ತೆ.

ಶುಭವಾಗಲಿ,
- ಶಮ, ನಂದಿಬೆಟ್ಟ

Ravi K S said...

Ha Ha... I have some similar experiences too which I have posted in my blog.. ಲಿಂಕ್ ಹುಡುಕಲಿಕ್ಕೆ ಬೇಜಾರು ಈಗ.. ಅದಿಕ್ಕೆ ಇಲ್ಲೇ ಒಂದೆರಡು cases ಬರೀತೀನಿ..

1) Talking about the boards on Bus..
Majestic ಇಂದ N.R Colony [ NArasimha RAja Colony] ge allot ಮಾಡಿರೋ ಬಸ್ಸಿನ ಬೋರ್ಡ್ ಹೀಗೆ "ಕೆಂಬನಿ ಇಂದ ನರಕ" [ ನರಕಕ್ಕೆ ಕರೆದೊಯ್ಯುವ ವಾಹನ ]


2)
ಬಳ್ಳಾರಿಯ ಒಂದು ಹೋಟೆಲ್ ನ ಹೆಸರು "ಕನಕ ಲಂಚ ಹೋಮ" [ Kanaka Lunch Home ]

-raviks.livejournal.com