Friday, December 11, 2009

ಇಟ್ಟಿದ್ದು ಬಟ್ಟಾದರೆ ವಾಟೆಂದರೇನು ??

ಈ ವಾಕ್ಯ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ಕೇಳಿದ್ದು . ಎಲ್ಲೋ ಅಕ್ಕನಿಂದಲೋ ಅಣ್ಣನಿಂದಲೋ ಕೇಳಿ ಬಾಯಿಪಾಟ ಹೊಡೆದು ಕ್ಲಾಸಿಗೆ ಬಂದು ಸುಮಂತ್ ಇಟ್ಟಿದ್ದು ಬಟ್ಟಾದರೆ ವಾಟೆಂದರೇನು? ಎಂದು ಗೆಳೆಯರು ಕೇಳಿದಾಗ ಇಂಗ್ಲೀಷಿನ ಗಂಧಗಾಳಿ ಗೊತ್ತಿಲ್ಲದ ನಾನು ಅದೇನೆಂದು ತಿಳಿಯಲು ತಿಪ್ಪರಲಾಗ ಹಾಕಿದ್ದೆ . ಆಮೇಲೆ it=ಇದು but=ಆದರೆ what ಅಂದರೆ ಏನು? ಅಂತ ತಿಳಿದಾಗ ಅಯ್ಯೋ ಇಷ್ಟೇನಾ? ಎಂದು ನಿಟ್ಟುಸಿರಿಟ್ಟಿದ್ದೆ. ಹೀಗೆ ಯಾವುದೇ ವಿಷಯವೇ ಆಗಲೀ ತಿಳಿಯುವ ಮೊದಲು ಏನೋ ಪರ್ವತದಂತೆ ಭಾಸವಾದರೂ ತಿಳಿದಮೇಲೆ ಪೀಚು ಪೀಚೆಂದೆನಿಸುವುದು ಸಹಜವೇ . ಇತ್ತೀಚೆಗೆ ದಿನಪತ್ರಿಕೆಯಲ್ಲಿ ಶತಾವಧಾನಿ ಆರ್. ಗಣೇಶ್ ಅವರ ಚಮತ್ಕಾರ ಕವಿತ್ವ ಓದಿದಾಗ ಇಂಥವೇ ಹಲವು ಸಮಸ್ಯಾ ಪೂರ್ತಿ ಶ್ಲೋಕ /ವಾಕ್ಚಾತುರ್ಯಗಳು ನೆನಪಿಗೆ ಬಂದವು . ಅಲ್ಲದೆ ಭಾಷಾ ಜ್ಞಾನವಿಲ್ಲದೇ ಆಗುವ ಅಭಾಸಗಳು ಆ ಸಂಧರ್ಭದಲ್ಲಿ ಪೇಚಿಗೆ ಸಿಲುಕಿಸಿದರೂ ಆಮೇಲೆ ಹಾಸ್ಯಕ್ಕೆ ಒಳ್ಳೆಯ ವಿಷಯಗಳಾಗುತ್ತವೆ. ಅವುಗಳ ಸಂಗ್ರಹವೇ ಈ ಲೇಖನ .
1) ನಮ್ಮ ಊರಿನಲ್ಲಿ ಯಾರಾದರೂ " ಏನಾಯ್ತೋ dull ಇದ್ದೀಯ? " ಎಂದಾಗ ನಾವು ಹೇಳುವುದು
"ದಶರಥನ ಸುತನರಸಿಯು ನಾಸಿಕದೊಳು ಪೊಕ್ಕು ಪೀಡಿಸುತಿಹಳು" ....
ಏನಿಲ್ಲ ಶೀತಕ್ಕೆ ಕುಂದಾಪುರ ಕನ್ನಡದಲ್ಲಿ ರಾಗದಿಂದ ಸೀತು/ಸೀತ ಅನ್ನುತ್ತಾರೆ . ಅದೆ ... ದಶರಥ ಸುತ -- ರಾಮ --ಅರಸಿ --- ಸೀತಾ ಮೂಗಿನಲ್ಲಿ ಸೇರಿ ಪೀಡಿಸುತ್ತಿದ್ದಾಳೆ . ಮೂಗಿನಲ್ಲಿ ಜೋಗ ಅನ್ನುವುದೇ ಇದರ ಅರ್ಥ .
2) ಹತ್ತುತಲೇ ಕೆಂಪಾದವನ ಆರುತಲೆ ಕಪ್ಪಾದವನ ಸಖನ ಸುತನ ಒಡೆಯನ ವೈರಿಯ ತಮ್ಮನ ಆಲಂಗಿಸಿಕೊಂಡವರಾರು?
ಇದು ವಾಕ್ಚಾತುರ್ಯ ಬರೆಯುವಾಗ ತಪ್ಪಾಗಿ ಕಾಣಬಹುದು . ಎಲ್ಲರೂ ಹತ್ತುತಲೇ ಎಂದೊಡನೆ ರಾವಣ ಎಂದುಕೊಂಡು ಉಳಿದ ಯೋಚನೆಗಳಿಗೆ ಬೀಗ-ಬಿಜಾಗ್ರಿ ಹಾಕಿ ಕೂರುತ್ತಾರೆ . ಆದರೆ ಅದು ಹೊತ್ತುತಲೇ (ಹೇಳುವಾಗ ಹಾಗೆ ಹೇಳಬಹುದು ) ಕೆಂಪಾದವನ ಆರುತಲೆ ಕಪ್ಪಾದವನ ಅಂದರೆ ಹೊತ್ತಿದ ಕೂಡಲೇ ಕೆಂಪಾದವ ( ಬೆಂಕಿ ) ಆರಿದಕೂಡಲೇ ಕಪ್ಪಾದವನ ( ಇದ್ದಿಲು ) ಅಂದರೆ ಅಗ್ನಿ ಸಖನ (ಗಾಳಿ) ಸುತನ (ಹನುಮಂತ ) ಒಡೆಯನ (ರಾಮ ) ವೈರಿಯ (ರಾವಣ ) ತಮ್ಮನ (ಕುಂಭಕರ್ಣ ) ಆಲಂಗಿಸಿಕೊಂಡವರು (ನಿದ್ದೆ ) ಹೀಗೆ ನಿದ್ದೆ ಎಂಬುದು ಇದರ ಉತ್ತರ .

3) "ದನವನ್ನು ಕಡಿಕಡಿದು ಭಗವಂತನಿಗೊಪ್ಪಿಸಿದರು "ಹೌಹಾರದಿರಿ. ಇದರ ಉತ್ತರ ಅವಧಾನಿಗಳು ಹೀಗೆ ಕೊಟ್ಟರು .
ಭಕುತರೆಲ್ಲರು ಬಂದು
ಊರದೇವರ ಪೂಜೆಗೆಂದು ಚಂ
ದನವನ್ನು ಕಡಿಕಡಿದು ಭಗವಂತನಿಗೊಪ್ಪಿಸಿದರು !!!
ಅದು ಚಂದನವನ್ನು ಎಂದು ತಿಳಿದಾಗ ಇಷ್ಟೇನಾ? ಎಂದು ಅನ್ನಿಸಲಿಲ್ಲವೇ?

4) ವ್ಯಾಕರಣ ಪಾಠ ಮಾಡುವಾಗ ಒಂದು ಶಬ್ದ ಓದುವಾಗ ಅದನ್ನು ಇಡಿಯಾಗಿ ಓದಬೇಕು ಅಕ್ಷರ ಸೇರಿಸುತ್ತಾ ಮಗ್ಗಿ ಲೆಕ್ಕ ಹಾಕಿ ಓದಿದರೆ ಅರ್ಥ ಆಗುವುದಿಲ್ಲ ಅಂದು ವಿವರಿಸಿ ಈ ವಾಕ್ಯ ಹೇಳಿದರು
ಅಕಬರಸಾ
ಹೇಬರುತ
ರತರತದ
ಕೋಳಿಗಳನುಸಾ
ಕಿದ್ದರು .
(ಅಕಬರ ಸಾಹೇಬರು ತರತರದ ಕೋಳಿಗಳನ್ನು ಸಾಕಿದ್ದರು) ಅಂದಾಗ ನಮಗೆ ಅಕ್ಷರ ಕಲಿತು ಶಬ್ದ ಓದಬೇಕೆಂದು ಮನದಟ್ಟಾಯಿತು.

5) ಹಿಡಿಂಬೆಯು ಸೆರಗು ಬೀಸಿ ಮಾವನನ್ನು ಕರೆಯುತ್ತಿದ್ದಾಳೆ .
( ಇದು ಸಂಸ್ಕೃತ ಸಮಸ್ಯಾಪೂರ್ತಿ ಶ್ಲೋಕದ ಅನುವಾದ )ಮೇಲ್ನೋಟಕ್ಕೆ ಸ್ವಲ್ಪ ಅಶ್ಲೀಲ ಅನ್ನಿಸಬಹುದು ಆದರೆ ನಿಜಾರ್ಥ ಬೇರೆಯೇ ಇದೆ .ಬೇಸಗೆಯ ಸುಡು ಬಿಸಿಲಿನಲ್ಲಿ ಸೆಖೆಯನ್ನು ತಾಳಲಾಗದೆ ಹಿಡಿಂಬೆಯು ಸೆರಗು ಬೀಸಿಕೊಂಡು ಮಾವ ( ಹಿಡಿಂಬೆಯ ಗಂಡ ಭೀಮ , ಭೀಮ ವಾಯುಪುತ್ರ ) ಅಂದರೆ ಗಾಳಿಯನ್ನು ಕರೆಯುತ್ತಿದ್ದಾಳೆ . ಅಂದರೆ ಸೆರಗನ್ನು ಬೀಸಿ ಗಾಳಿ ಹಾಕಿಕೊಳ್ಳುತ್ತಿದ್ದಾಳೆ ಎಂದರ್ಥ .

ಇನ್ನು ಬನ್ನಿ ಅಪಾರ್ಥಕ್ಕೆ !!!!
ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೌ ( ಭಗವದ್ಗೀತೆ ಅಧ್ಯಾಯ ೧೫ ) ( ಎಲ್ಲರ ಹೃದಯದಲ್ಲೂ ನಾನು ನೆಲೆಸಿರುತ್ತೇನೆ ). ಎಂದು ಸ್ವಾಮಿಗಳು ಹೇಳಿ ಇದರ ಅರ್ಥ ಏನೆಂದು ಕೇಳಿದಾಗಸ್ಟವ್ ಮೇಲೆ ಮಾಡಿದ ಚಾ ಎಲ್ಲಕ್ಕಿಂತ ಒಳ್ಳೆಯದು ಎಂದು ನಮ್ಮ ಗುಂಡ ಕೂಗಿದನು .

" ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೆ " ( ನಮಗೆ ಅನೇಕ ವರಗಳನ್ನು ನೀಡಲು ಏಕದಂತ ಗಣಪತಿಯನ್ನು ಸ್ತುತಿಸುತ್ತೇನೆ" ) ಇದನ್ನು ಅನೇಕ ದಂತ ಅಂದರೆ 32 ಹಲ್ಲು ಇರುವ ಮನುಷ್ಯರು ಒಂದೇ ಹಲ್ಲಿರುವ ನಿನ್ನನ್ನು ಯಾಕೆ ಪೂಜೆ ಮಾಡುತ್ತಾರೆ? ಎಂದು ಅರ್ಥೈಸಬಹುದು .

ಹೃದಯಂಲು ಪ್ರೇಮಂ ಪೆಟ್ಕೋ ( ಹೃದಯದಲ್ಲಿ ಪ್ರೀತಿ ಇಟ್ಟುಕೊಳ್ಳಿ ) ಎಂದ ತೆಲುಗು ಭಾಷಿಗನೊಂದಿಗೆ ಕನ್ನಡದವನು " ಪ್ರೇಮಳ ಬರಿ ಬಂದರೆ ಪೆಟ್ಟು ಹೊಡೆಯುತ್ತೇನೆ" ಎಂದು ಭಾವಿಸಿ ಬಾಕ್ಸಿಂಗ್ ಗೆ ಇಳಿದರೆ?

ಕರ್ನಾಟಕದ ಜನರಲ್ಲಿ " ವಂದೇ ಮಾತರಂ " ನ ಅರ್ಥ ಏನು ಎಂದು ಕೇಳಿದರೆ ವಂದೇ ಎಂಬ ಪದವನ್ನು ನಮ್ಮ ಸಂಖ್ಯಾಶಾಸ್ತ್ರ ಪ್ರವೀಣರು ಒಂದೇ ಎಂದು ಭಾವಿಸಿ ಹತ್ತರಲ್ಲಿ ಏಳು ಮಂದಿ "ಒಬ್ಬಳೇ ತಾಯಿ " ಎಂದು ಹೇಳುತ್ತಾರೆ . ಆದರೆ ಅದು ತಾಯಿಗೆ ನಮಸ್ಕರಿಸುತ್ತೇನೆ ಎಂದರ್ಥ .

ರಾತ್ರಿ ಪಾರ್ಟಿಗೆ ಹೋಗಿ ಬಂದು ತುಂಬಾ ತಡವಾಗಿ ಮಲಗಿ ಬೇಗ ಎದ್ದು ಆಫೀಸ್ ಗೆ ಹೋದ ಮಲಯಾಳಂ ಯುವತಿ ಆಫೀಸ್ನಲ್ಲಿ ಎಲ್ಲರೂ ಯಾಕಮ್ಮ ಸುಸ್ತಾಗಿದ್ದೀಯಾ? ಎಂದಾಗ ಆಕೆ " ರಾದ್ರಿ ನಿದ್ದೆ ಇಲ್ಲೆ...... ಮಲಗುವಾಗ ಒಂದು ಗಂಡ ಏಳುವಾಗ ಐದು ಗಂಡ ( ಮಲಗುವಾಗ ಒಂದು ಗಂಟೆ ಏಳುವಾಗ ಐದು ಗಂಟೆ ) ಎಂದರೆ ಎಲ್ಲರಿಗೂ ಹೃದಯಾಘಾತ ಆಗದೆ?

ಹುಳಿ, ತೊವ್ವೆ ,ಸಾಂಬಾರು ಇತ್ಯಾದಿಗಳಲ್ಲಿ ಒಳ್ಳೆಯ ಪದಾರ್ಥ ಯಾವುದು? ಎಂದು ಕೇಳಿದಾಗ ರೀ !! ಎಲ್ಲಕ್ಕಿಂತ ಸಾರು ಒಳ್ಳೆಯದು . ನಿಮಗೆ ಗೊತ್ತಿಲ್ವ ಮೊನ್ನೆ 15 ನೇ ತಾರೀಕು TV ಯಲ್ಲಿ ಸುಮಾರು ಜನ ಹೇಳ್ತಾ ಇದ್ರು " ಸಾರೇ ಜಹಾಸೆ ಅಚ್ಚಾ" ಎಂದು ಅರ್ಧ ಹಿಂದಿ ಕಲಿತ ನನ್ನ ಶಾಂತಿ ಫರ್ಮಾಯಿಸಿದಳು .

ಇನ್ನು ಊರಿನಲ್ಲಿ ನಡೆಯುವ ಭಜನೆಗಳಲ್ಲಿ ಹಾಡುವ ಲೋಕಲ್ ಭೀಮಸೇನರು ಭಜನೆಯ ಅರ್ಥವನ್ನು ಬುಡ ಸಹಿತ ಕಿತ್ತು ಹಾಕುತ್ತಾರೆ .ಉದಾಹರಣೆಗೆ ಆಲಾಪನೆಯ ಚಟದಿಂದ ಒಬ್ಬ
" ವೈ ssssssssssssssssssss ಕುಂಟ ಪತಿಯ ಕಂಡೆನೋ ಎಂದು ಹಾಡಿದರೆ ನಮ್ಮ ವೈಕುಂಠಪತಿಯು ವೈಕುಂಠ ಬಿಟ್ಟು ಓಡಿ ಹೋಗನೆ?

ಇನೊಬ್ಬ ಚಿಂತೆಯಾತಕೋ? ಬರಿಯ ಭ್ರಾಂತಿ ಯಾತಕೋ? ದಾಸರ ಪದವನ್ನು
ಚಿಂತೆಯಾ sssssssssssssss ತಕೋ ಎಂದು ಎಂದು ಹಾಡಿದರೆ ದಾಸರು ಸ್ವರ್ಗದಿಂದ ಎದ್ದು ಬಂದು ಒದೆಯದೇ ಇರುವರೇ?

ಅಥವಾ ಅನ್ಯಭಾಷೆಯವನು ಅರ್ಥ - ಉಚ್ಚಾರ ಗೊತ್ತಿಲ್ಲದೇ
ಚಿಂದಿಯಾದಗೋ ಬರಿಯ ಬ್ರಾಂದಿಯದಗೋ? ಎಂದು ಹಾಡಿದರೆ? ಎಷ್ಟು ಸಿಟ್ಟು ಬರುವುದಿಲ್ಲ?

ಹೀಗೆ ನಿತ್ಯಜೀವನದಲ್ಲಿ ಇಂಥಹ ಹಲವಾರು ಮೋಜು / ಮುಜುಗರದ ಪ್ರಸಂಗಗಳು ನಮ್ಮೊಂದಿಗೆ ನಡೆಯುತ್ತಿರುತ್ತವೆ . ನನ್ನ ಮನಸ್ಸಿಗೆ ಬಂದ / ಓದಿದ / ಕೇಳಿದ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ .

ವಂದನೆಗಳೊಂದಿಗೆ
ವಿಕಟಕವಿ

7 comments:

ಗೋಪಾಲ್ ಮಾ ಕುಲಕರ್ಣಿ said...

ವಿಕಟಕ
ವಿಗಳೇ ತುಂಬಾದಿ
ವಸಆ...
ಯಿತು ನಿಮ್ಮಲೇ..
ಖನ ಓದಿ. ಆಗಾಗ
ಬರೀ
ತಾ
ಇರಿ ...

ತುಂಬಾಚೆನ್ನಾ
ಗಿಬರೀ
ತಿರಾ

ತುಂಬಾ ಚೆನ್ನಾಗಿದೆ... :) :) :)

ಗೋಪಾಲ್ ಮಾ ಕುಲಕರ್ಣಿ said...

ಆವಾಗ ಇವಾಗ ನಮ್ಮ ಕೆಡೆನು ಹಾಯಿರಿ ..(ಬನ್ನಿ ಸ್ವಾಗತ ಸುಸ್ವಾಗತ. ನನ್ನ ಕೊಂಡಿ(Link).
http://haalusakkare.blogspot.com/ )

Srirang (Brahmana) said...

ಹಾ.. ಹಾ... ಲೇ ಶಾನುಬಾಗ... ನಿನ್ನ ಲೇಖನ ಓದ್ಕೋತ ಆ ಗಂಗಾವತಿ ಬೀಚಿ (ಪ್ರಾಣೇಶ) ನೆನಪು ಬಂತು. ಮತ್ತ ಭಾರಿ ಬರ್ದಿ. ಚಹಾ, ಕಾಫೀ ಯಾಕೋ ನೀ ಬಿಡಂಗ ಕಾಣುದಿಲ್ಲಾ...ಇರ್ಲಿ, ಹೊಡದಾಡು ಮಛಾ..

ಬಾಲು said...

ಇಟ್ಟಿದ್ದು ಬಟ್ಟಾಗಿ ಒಂದು ಸುಂದರ ಲೇಖನ ಆಯಿತು. ವಿಕಟ ಕವಿಗಳೇ ಚೆನ್ನಾಗಿ ಬರೆದಿರುವಿರಿ.
ನಾನು ಕೂಡ ಶತಾವದಾನಿ ಗಣೇಶ್ ಅವರ ಲೇಖನ ಹಾಗು ಮಾತು ಕೇಳಿ ನಿಮ್ಮ ಹಾಗೆ ಅಂದುಕೊಂಡಿದ್ದು ಇದೆ.
ಚೆನ್ನಾಗಿದೆ ಲೇಖನ.

PARAANJAPE K.N. said...

ಶಾನುಭೋಗರೆ,
ನಿಮ್ಮ ಭೋರ್ಗರೆವ ಬ್ಲಾಗಿನ ಪರಿಚಯ ಮಿತ್ರರೊಬ್ಬರಿ೦ದ ಆಯ್ತು, ಬಹಳ ಚೆನ್ನಾಗಿದೆ
ನಿಮ್ಮನ್ನು ವಿಕಟಕವಿ ಎನ್ನಲಡ್ಡಿಯಿಲ್ಲ, ಚೆನ್ನಾಗಿದೆ, ಪುರುಸೊತ್ತು ಆದಾಗ ಎಲ್ಲ ಬರಹಗಳನ್ನು ಓದುವೆ.
ನನ್ನ ಬ್ಲಾಗ್ ಮನೆಗೂ ಬರುತ್ತಿರಿ.

Chandru said...

ಬಾಲುಗೆ ಮೊದಲ ಥ್ಯಾಂಕ್ಸ್ ನಿಮ್ಮ ಬ್ಲಾಗ್ ಪರಿಚಯಿಸಿದ್ದಕ್ಕೆ.. ತುಂಬಾ ದಿವಸವಾಗಿತ್ತು ಈ ಥರ ವಿಭಿನ್ನ ಲೇಖನ ಓದಿ.. ಕೆಲವೊಂದು ಪದಗಳನ್ನು ಸ್ವಲ್ಪ ನಿಧಾನವಾಗಿ ಅರ್ಥ ಮಾಡಿಕೊಂಡೆ.. ವಿಭಿನಾರ್ಥಗಳ ಒಂದು ವಿವೆಚಾನಯುಕ್ತ ಲೇಖನ..

Summu said...

ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು .
ತಮ್ಮ ಪ್ರೋತ್ಸಾಹಕ್ಕೆ ಚಿರಋಣಿ .
ಲೇಖನದಲ್ಲಿ ತಪ್ಪುಗಳಿದ್ದರೆ ಅಥವಾ ಇನ್ನೂ ಚೆನ್ನಾಗಿ ಬರೆಯಲು ಸಲಹೆಗಳಿದ್ದರೆ ದಯವಿಟ್ಟು ನನ್ನ ಕಿವಿ ತಿರುಚಿ ಹೇಳಿ !!!!

ನಿಮ್ಮವ
ವಿಕಟಕವಿ