Skip to main content

ಕರ್ಣಕುಂಡಲ

ಸುಮಾರು ಹತ್ತು ತಿಂಗಳು ಹಿಂದಿನ ಮಾತು . ಅಣ್ಣ ಕೊಟ್ಟ ಐಪೋಡನ್ನು ಕಿವಿಗೆ ಸಿಕ್ಕಿಸಿಕೊಂಡು ದೊಡ್ಡ ವೋಲ್ಯುಂ ನಲ್ಲಿ ಹಾಡು ಕೇಳುತ್ತಾ ಆಫೀಸಿಗೆ ತೆರಳುವುದು ನನ್ನ ಅಭ್ಯಾಸ . ಒಂದು ದಿನ ಎಡ ಕಿವಿಯ ಇಯರ್ ಪೋನ್ ನಲ್ಲಿ ಕಡಿಮೆ ಬಲ ಕಿವಿಯಲ್ಲಿ ಹೆಚ್ಚು ವೋಲ್ಯುಂ ಕೇಳಿಸತೊಡಗಿದಾಗ 4000/- ನ ಐಪೋಡ ನ ಮೇಲೆ ಎಳ್ಳಷ್ಟು ಸಂಶಯಪಡದೆ ನನ್ನ ಒಂದು ಕಿವಿ ಸ್ವಲ್ಪ ಡಮಾರ್ ಆಗಿದೆ ಎಂದು ಚಿಂತಿಸುತ್ತಿದ್ದೆ . ಹೇಳಿದರೆ ಕೆಪ್ಪ ಎನ್ನುತ್ತಾರೆ ಎಂದು ಹೆದರಿ ಯಾರಲ್ಲೂ ಹೇಳಿರಲಿಲ್ಲ . ಆಮೇಲೆ ಒಂದು ದಿನ ಅದರಲ್ಲಿ ಹಾಡು ಕೇಳಿದ ನನ್ನ ರೂಂ ಮೇಟ್ ಸುಮಂತ್ .. ಇದರ ಎಡ ಇಯರ್ ಫೋನ್ ಹಾಳಾಗಿದೆ ಅಂದಾಗ ನಾನು ಪಟ್ಟ ಸಂಭ್ರಮ ಅಷ್ಟಿಷ್ಟಲ್ಲ .ನನ್ನ ಕರ್ಣದ್ವಯಗಳು ಸರಿಯಾಗಿವೆ ಎಂದು ಬೀಗುತ್ತಿದ್ದೆ . ಆದರೆ ಯಾವತ್ತೂ ಗೋಡೆಗೂ ಕಿವಿ ಇರುತ್ತೆ ಎಂದು ತುಂಬಾ ಜಾಗ್ರತೆಯಿಂದ ಇರುತ್ತಿದ್ದ ನನಗೆ ನನ್ನ ಅಕ್ಕಪಕ್ಕ ಎರಡು ಇರುವುದು ಮರೆತೇ ಹೋಗಿತ್ತು . ನಾನು ಹೆಮ್ಮೆ ಪಟ್ಟುಕೊಂಡಿದ್ದು ಅದಕ್ಕೆ ಕೇಳಿಸಿತೋ ಏನೋ. ಈಗೀಗ ಸ್ವಲ್ಪ ನಖರಾ ಮಾಡತೊಡಗಿದೆ.

ಸುಮಾರು 15 ದಿನ ಹಿಂದಿನಿಂದ ಈ ಕಿವಿ ನೋವಿ ಶುರು ಆಗಿದೆ. ಮೊದಲಿಗೆ ಇದು ಮಾಮೂಲಿ ಶೀತ ಎಂದುಕೊಂಡು ನಮ್ಮ "ಮಾತ್ರೆ ರಾಜನ " ಬಳಿ ಹೋದೆ .ಮಾತ್ರೆರಾಜ ಹೆಸರು ಯಾಕೆ ಎಂದು ಕೇಳಿದಿರಾ ?? ಏನಿಲ್ಲ ನೀವು ಅವರ clinic ನ ಒಳಗೆ ಹೋಗಿ ಹೊರಬರುವಷ್ಟರಲ್ಲಿ ನಿಮ್ಮ ತೂಕ 1/2kg ಮಾತ್ರೆಗಳಿಂದ ಹೆಚ್ಚಾಗಿರುತ್ತದೆ . ಕಂದು, ಬಿಳಿ ಕೆಂಪು ನೀಲಿ ಬಣ್ಣದ ನಾಲ್ಕು ಮಾತ್ರೆಗಳು ಪಕ್ಕ ಪರಿಸ್ಥಿತಿಯ ಸೂಕ್ಷ್ಮವನ್ನರಿತು ಹಸಿರು ಬಣ್ಣದ ಮಾತ್ರೆ ಬರಬಹುದು ಇಲ್ಲದೆ ಇರಬಹುದು . ಹೀಗೆ ಅವರ ಬಳಿ ಹೋಗಿ ಅವರು ಕೇಳುವ ಮೊದಲೇ ಆ ಆ ಆ ..... ಎಂದು ಬಾಯಿ ತೆರೆದು ನಿಂತೆ. ಆಮೇಲೆ ನೀವು ಕಷ್ಟ ತೆಗೊಬೇಡಿ ಸರ್ .. ನನಗೆ ಗೊತ್ತು .. ಮಾತ್ರೆ ನಾನೇ ತೆಗೊತೀನಿ ಅಂದರೂ ಕೇಳದೆ ನನ್ನ ನಿರೀಕ್ಷೆಯನ್ನು ಹುಸಿಮಾಡದೆ ಅರ್ಧ ಕಿಲೋ ರಂಗುರಂಗಿನ ಮಾತ್ರೆಗಳನ್ನು ಕೊಟ್ಟರು . 2 ದಿನದಲ್ಲಿ ಅದನ್ನು ಖಾಲಿ ಮಾಡಿದೆ . ಆದರೆ ಕಿವಿ ನೋವು ನಿಲ್ಲಲಿಲ್ಲ . ಮತ್ತೆ ಅವರ ಬಳಿ ಹೋದೆ ಈ ಬಾರಿ ಸ್ವಲ್ಪ ಬದಲಾವಣೆ ಎಂಬಂತೆ medicals ನ ಮಾತ್ರೆ ಬರೆದು ಕೊಟ್ಟರು . ಇವಿಷ್ಟರಲ್ಲಿ ಆರು ನೂರು ರೂಪಾಯಿಗಳಿಗೆ ಗ್ರಹಣ ಹಿಡಿದಿತ್ತು.

ಸತ್ಯವಾಗಿಯೂ ಹಣದ ಯೋಚನೆ ಇರಲೇ ಇಲ್ಲ . ಆದರೆ ಇದರ ಬಳಿಕವೂ ಕಿವಿನೋವು ಒಳ್ಳೆ ಷೇರು ಮಾರುಕಟ್ಟೆಯಂತೆ ನೋವಿನ ಸೂಚ್ಯಂಕ ಏರಿಳಿತ ಪಡೆಯುತ್ತಿತ್ತು . ನಮ್ಮಮ್ಮನ ಬೆಳ್ಳುಳ್ಳಿ ಎಣ್ಣೆ , ತುಳಸಿ ರಸ ಮುಂತಾದ Home made ಆಯುರ್ವೇದದ ಪ್ರಸ್ತಾಪಕ್ಕೆ ನಕಾರವಿತ್ತೆ . ಬಿಟ್ಟಿದ್ದರೆ castrol ,petrol ಕೂಡ ಹಾಕುತ್ತಿದ್ದರೋ ಏನೋ. ಅಂತೂ ಕೊನೆಗೆ ಕಿವಿ ಗಂಟಲು ಮೂಗು (ENT) ತಜ್ಞರ ಶರಣು ಹೋಗಲು ನಿರ್ಧರಿಸಿದೆ.

ಮರುದಿನ ಒಬ್ಬ ENT specialist ಹೋದೆ . ಸರ್ ಕಿವಿ ನೋವು ಎಂದೇನು . ಆ .. ಏನು ?? ಎಂದು ಕೇಳಿದರು . ಸ್ವಲ್ಪ ಜೋರಾಗಿ "ಸರ್ ಕಿವಿ ನೋಯ್ತಾ ಇದೆ ಒಂದು ವಾರದಿಂದ " ಪುನರುಚ್ಚರಿಸಿದೆ . ಆ ಆ ... ಏನು ?? ಎಂದರು . ಈ ಕೆಪ್ಪನ ಬಳಿ ಏನು treatment ಪಡೆಯುವುದು ಎಂದು ಅಲ್ಲಿಂದ ಪಲಾಯನ ಮಾಡಿದೆ . ಮತ್ತೊಬ್ಬರ ಬಳಿ ತೆರಳಿದೆ . 10-12 ಜನರ queue ಇತ್ತು . ಇರಲಿ ಒಳ್ಳೆ ವೈದ್ಯರಿರಬೇಕೆಂದುಕೊಂಡು ಸರದಿ ಬರುವವರೆಗೆ ಕಾಯುತ್ತ ಕುಳಿತು ಆಮೇಲೆ ವೈದ್ಯರನ್ನು ಭೇಟಿ ಮಾಡಿದೆನು .

ಏನಾಗಿದೆ ?? ಎಂದರು . ಸರ್ ಕಿವಿ ನೋವು ಎಂದರು . ಹ್ಮ.... ಎಷ್ಟು ದಿನದಿಂದ ಎನ್ನುತ್ತಾ ನನ್ನ ಮೂಗು ಮೇಲೆ ಮಾಡಿ ನೋಡತೊಡಗಿದರು . ಸರ್ ಇದು ಮೂಗು ... ಕಿವಿ ಇಲ್ಲಿ ಸೈಡ್ ನಲ್ಲಿ ಇದೆ ನೋಡಿ ..... ಎಂದೆನು. ಗೊತ್ತಪ್ಪಾ .... ಅದೆಲ್ಲ ಲಿಂಕ್ ಇರ್ತಾವೆ ಎಂದು . ಏಯ್ .. ಮೀನಾಕ್ಷಿ .. ನನ್ನ ಪೆನ್ ಎಲ್ಲಿ ಹೋಯ್ತು ಎಂದು ನರ್ಸನ್ನು ಕರೆದರು . ಮತ್ತೆ ಕಿವಿಯನ್ನು ಮೇಲೆ ಕೆಳಗೆ ಆಚೆ ಈಚೆ ಎಲ್ಲ ಎಳೆದು ಒಳಗೆ ಟಾರ್ಚ್ ಹೊಡೆದು ನೋಡತೊಡಗಿದರು . ಸರ್ ಖಂಡಿತವಾಗಿತೂ ನಿಮ್ಮ ಪೆನ್ ನನ್ನ ಕಿವಿಯ ಒಳಗೆ ಇಲ್ಲ ಎಂದೆನು . ಕೆಮ್ಮಿ ... ಎಂದರು ಒಮ್ಮೆ ಕೆಮ್ಮಿದೆನು . ಹ್ಮಂ ... ಎಂದು ಏನೋ ಕಂಡುಹಿಡಿದವರಂತೆ ಬರೆಯಲಾರಂಭಿಸಿದರು . ಒಂದು ಪುಟ ಮುಗಿಸಿ ಕೆಳಗಡೆ PTO ಎಂದು ಬರೆದು ಹಿಂದಿನ ಪುಟದಲ್ಲಿ ಬರೆಯಲಾರಂಭಿಸಿದರು . ಒಮ್ಮೆ ನಿಲ್ಲಿಸಿದರು ಅಬ್ಬ !!! ಮುಗಿಯಿತು ಎಂದುಕೊಂಡರೆ ಕೈ ಬೆರಳಿನ ನಟಿಕೆ ಮುರಿದು ಮತ್ತೆ ಬರೆಯಲು ಶುರು ಮಾಡುವುದೇ ?? ತಬ್ಬಿಬ್ಬಾದೆ .... ಸರ್ ಒಂದು typist appoint ಮಾಡಿಕೊಲ್ಲಬಹುದಲ್ಲ ಎನ್ನೋಣವೆಂದುಕೊಂಡೆ . ಆಮೇಲೆ ಒಂದು ಮೊದಲು ಹೆಸರು ಎಲ್ಲ ಬರೆದು 5-6 ಪ್ರಕಾರದ ಮಾತ್ರೆ ಬರೆದು ಕೊಟ್ಟರು .

ನಾನ್ನೂರು ರುಪಾಯಿ ಎಂದರು . ಪುಣ್ಯ !!!! ಅವರು ಕೆಮ್ಮಿ ... ಅಂದಾಗ ನಾನು ಒಂದೇ ಸಲ ಕೆಮ್ಮಿದೆ . ಎರಡು ಸಲ ಕೆಮ್ಮಿದ್ದಲ್ಲಿ 800 ಹೇಳುತ್ತಿದ್ದರೋ ಏನೋ ಎಂದು ನನ್ನ ಜಾಣ್ಮೆಗೆ ಶಹಬ್ಬಾಸ್ ಹೇಳಿದೆ . ಮತ್ತೆ ದೇವರಿಗೆ ಒಂದು ನಮಸ್ಕಾರ ಹಾಕಿದೆ . ಪುಣ್ಯಕ್ಕೆ ಅವನು ಮನುಷ್ಯರಿಗೆ ಎರಡೇ ಕಿವಿ ಕೊಟ್ಟಿದ್ದಾನೆ . ಹಲ್ಲಿನ ತರಹ 32 ಕೊಟ್ಟಿದ್ದರೆ ನಾನು ICICI ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಅಪ್ಲೈ ಮಾಡಬೇಕಾಗುತ್ತಿತ್ತು .

ಈಗ ಕಳೆದ ಹತ್ತು ದಿನಗಳಿಂದ ಅನ್ನಕ್ಕಿಂತ ಹೆಚ್ಚು ಮಾತ್ರೆ ತಿನ್ನುತ್ತಿದ್ದೇನೆ . ಕಿವಿ ನೋವು ಇನ್ನೂ ಹತೋಟಿಗೆ ಬಂದಿಲ್ಲ . ಇಂದು ಹೋಗಿ X-ray scanning ಮಾಡಿಸಿಕೊಂಡು ಬಂದಿದ್ದೇನೆ .ನೋಡೋಣ ಇನ್ನೊ ಸ್ವಲ್ಪ ದಿನದಲ್ಲಿ ಸರಿ ಹೋಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ . ಮುಂದೆನಾಗುತ್ತೆಂದು ಕಾದು ನೋಡಿ ...

**************************************ವಿಕಟಕವಿ *****

Comments

Anonymous said…
ವಿಕಟ ಕವಿಗಳೇ,
ನೋವಿನಲ್ಲೂ ಹಾಸ್ಯವನ್ನು ಕಾಣುವ ನಿಮ್ಮ ಹಾಸ್ಯ ಪ್ರಜ್ಞೆ ಮೆಚ್ಚತಕ್ಕದ್ದೇ, ನಿಮ್ಮ ಕಿವಿ ನೋವು ಬೇಗ ಗುಣವಾಗಲಿ ಎಂದು ಹಾರೈಸುತ್ತೇನೆ.
-ಬಾಲ
Anonymous said…
ವಿಕಟಕವಿಗಳೆ,

"ಕಂದು, ಬಿಳಿ ಕೆಂಪು ನೀಲಿ ಬಣ್ಣದ ನಾಲ್ಕು ಮಾತ್ರೆಗಳು" ಅನ್ನೊದು ಓದಿದ ಕೂಡ್ಲೆ ಒಂಥರಾ ಖುಷಿ ಆಯ್ತು, ನಮ್ಮೂರಲ್ಲಷ್ಟೆ ಅಲ್ಲ ಬೇರೆ ಕಡೆನೂ ಹೀಗೆ ಅಂತ, ಆದ್ರೆ ನಿಮ್ಮ ಪ್ರೋಫೈಲ ಓದಿ ಬೆಜಾರಾಯ್ತು, ನಾನು ಮುಂಬಯಿಯಲ್ಲೆ ಇರೋದು (ನವಿಮುಂಬಯಿ) ಮತ್ತು ಟಿ.ಸಿ.ಎಸ್ಸ.ಲ್ಲೆ...!!!!

ಸಿಗೋಣ.

-ಶೆಟ್ಟರು
ಕಿವಿ ನೋವು ಸರಿ ಆಯ್ತಾ?
ಬಾಲು said…
ವಿಕಟ ಕವಿ ಮಹಾಶಯರೇ,
ಭರ್ಜರಿ ಬರವಣಿಗೆ.

ನಿಮ್ಮ ಕಾಪಿ ಪುರಾಣ ನಂಗೆ ಮೇಲ್ ಮೂಲಕ ತಲುಪಿ, ಆಮೇಲೆ ನನ್ನಿಂದ ಹಲವಾರು ಕಾಪಿ ಪ್ರೀಯರ inbox ಸೇರಿದ ಮೇಲೆ ನನಗೆ ನಿಮ್ಮ ಬ್ಲಾಗು ಕಂಡು ಹಿಡಿಯುವ ಮನಸ್ಸಾಯಿತು. ತಡ ಮಾಡದೆ ಗೂಗಲ್ ಮೊರೆ ಹೋದೆ. ಯಾವ ದೇವರ ಕೃಪೆಯೋ , ಹೋದ ಜನ್ಮ ದ ಪುಣ್ಯವೋ etc etc ... ನನಗೆ ನಿಮ್ಮ ಬ್ಲಾಗು ಸಿಕ್ಕಿತು.

ನಾಲ್ಕು ಕಾಪ್ಪು ಕಾಫಿ ಮತ್ತೆ ಟೀ ಸೇರಿಸಿ ಕುಡಿದರೆ ಕಿವಿ ನೋವು ಹೋಗುವುದು ಅಂತ ಅಶ್ವಿನಿ ದೇವತೆಗಳು, ಮಹಾಭಾರತ ಯುದ್ದದ ಸಮಯದಲ್ಲಿ ಅರ್ಜುನ ನಿಗೆ ಹೇಳಿದ್ದರಂತೆ. ನೀವು ಯಾಕೆ ಒಮ್ಮೆ ಪ್ರಯತ್ನಿಸಬಾರದು?

ಚಂದದ ಬರಹ.

Popular posts from this blog

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ ...