ನೂರಾರು ಮತವಿಹುದು ಲೋಕದುಗ್ರಾಣದಲಿ ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ಎಂದು ಮಂಕುತಿಮ್ಮನ ಕಗ್ಗದಲ್ಲಿ ಶ್ರೀ ಡಿ . ವಿ ಗುಂಡಪ್ಪನವರು ಹೇಳಿದ್ದಾರೆ. ಈ ಪ್ರಪಂಚದಲ್ಲಿ ನಮಗೆ ಬೇಕಾದ ವಿಚಾರಗಳನ್ನು ನಾವು ಅನುಸರಿಸಬಹುದು. ಹಾಗೆಯೇ ಸಾಹಿತ್ಯಲೋಕದಲ್ಲಿ ಇರುವ ನೂರಾರು ಪ್ರಾಕಾರಗಳಲ್ಲಿ ನಮಗೆ ಬೇಕಾದ ಮಾರ್ಗವನ್ನು ನಾವು ಅನುಸರಿಸಬಹುದು. ಪ್ರಾಸ-ಛಂದಸ್ಸು-ಅನುಭವ-ಹಾಸ್ಯ-ಅನುವಾದ-ಕವಿತೆ-ಕವನ-ಹನಿ-ಮಿನಿ ಒಂದೇ ?? ಎರಡೆ ?? .ಆದರೆ ಯಾವುದೇ ಶೈಲಿಯಲ್ಲಿ ಬರೆದರೂ ಅದು ಮನದ ಮಾತನ್ನು ಅಕ್ಷರದ ಮೂಲಕ ಓದುಗನಿಗೆ ತಲಿಪಿಸಬೇಕು. ನನ್ನ ಹಲವು ಮಿತ್ರರು ನನಗೆ ಆಂಗ್ಲಭಾಷೆಯಲ್ಲಿ ಬರೆಯಲು ಹೇಳಿದ್ದಾರೆ. ಆದರೆ ನನಗೆ ಅದು ಅಸಾಧ್ಯ.ಯಾವುದೇ ಲೇಖನ ಬರೆಯುವಾಗ ಮನಸ್ಸಿನಲ್ಲಿ ಏನೊ ಒಂದು ವಿಷಯ ಬಂದರೆ ಅದು ಬರಹಕ್ಕೆ ಇಳಿಸುವಾಗ ಶಬ್ದಗಳಿಗೆ ತಡಕಾಡಬಾರದು ಅದು ಮುಕ್ತವಾಗಿ ಹರಿಯಬೇಕು ಆಗ ಮಾತ್ರ ಬರೆಯುವುದು ಬರಹಗಾರನಿಗೆ ಸಂತೋಷ ಕೊಡುತ್ತದೆ. ನನಗೆ ಆಂಗ್ಲಭಾಷೆಯಲ್ಲಿ ಅಷ್ಟು ಹಿಡಿತವಿಲ್ಲ. ಈಗ ನನಗೆ ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿ ಇಲ್ಲ ಎಂದು ಬರೆಯಬೇಕೆಂದುಕೊಳ್ಳಿ. ಕನ್ನಡದಲ್ಲಿ ಬರೆದರೆ ಅದಕ್ಕೆ "ಅಮ್ಮಾ... ಎಂದರೆ ಆ ಶಬ್ದ ಗಂಟಲಿನಿಂದ ಹೊರಡುವುದಿಲ್ಲ ಹೃದಯದಿಂದ ಬರುತ್ತದೆ ಎಂದೋ ಪ್ರಪಂಚದಲ್ಲಿ ಸಾಗರಕ್ಕಿಂತ ಆಳವಾದುದು ಪರ್ವತಕ್ಕಿಂತ ದೊಡ್ಡದು ಯಾವುದು ಎಂದರೆ ಅದು ತಾಯಿಯ ಪ್ರೀತಿ ಎಂದು ಕೊಂಬು ಬಾಲ ಸೇರಿಸಿ ಬರೆಯಬಹುದು. ಅದೇ ಆಂಗ್ಲ ಭಾಷೆ...
ಇದರಲ್ಲಿ ಬರೆದ ಲೇಖನಗಳಲ್ಲಿ ಕೆಲವು ನನ್ನ ಕಲ್ಪನೆಯ ಕೂಸಾದರೆ ಕೆಲವು ಅನುಭವದ ಬರಹಗಳು . ಒಟ್ಟಿನಲ್ಲಿ ಪ್ರತಿ ಲೇಖನದ ಕೊನೆಯಲ್ಲಿ ಓದುಗರ ತುಟಿಯಂಚಿನಲ್ಲಿ ಸ್ವಲ್ಪ ಮುಗುಳ್ನಗೆ ಉಳಿದದ್ದೇ ಹೌದಾದರೆ ನನ್ನ ಪ್ರಯತ್ನ ಸಾರ್ಥಕ . ಅದೇ ನನಗೆ ಸಲ್ಲುವ ಪ್ರಶಸ್ತಿ. ========================ವಿಕಟಕವಿ ==================