Skip to main content

WELCOME TO KUNDAPUR !!!!!! - PART-II

ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ||
ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್||

ಮನೆಗೆ ತಲುಪಿದೊಡನೆ ಅಮ್ಮ-ಅಪ್ಪನೊಂದಿಗೆ ಮೊದಲ ಸುತ್ತಿನ ಸೆಂಟಿಮೆಂಟುಗಳು ಮುಗಿದ ಮೇಲೆ ಒಮ್ಮೆ ಹೊರಬಂದು ಪ್ರಾತಃಕಾಲದ ಕುಂದಾಪುರ ದರ್ಶನ  ಮಾಡಿ ಬಂದೆನು. ಆ ದರ್ಶನದ ರನ್ನಿಂಗ್ ಕಾಮೆಂಟರಿ.........
"ಪೆಟ್ರೋಲ್ ಬಂಕ್ ನಲ್ಲಿ ಟವೆಲ್ ಉಟ್ಟು ಬಸ್ ತೊಳೆಯುತ್ತಿರುವ ಕ್ಲೀನರ್, ಅಶ್ವಥ್ಥ ಮರಕ್ಕೆ ಸುತ್ತು ಹಾಕುತ್ತಿರುವ ಜನರೇಶನ್ 3 , ನಡೆದು ಬಾರಯ್ಯಾssss ಭವಕಡಲಿಗೇsss sಪ್ರತಿದಿನ ಇದನ್ನೇ ಹಾಡುವ ಬೊಬ್ಬರ್ಯ ಕಟ್ಟೆಯ ಕ್ಯಾಸೆಟ್ಟು ,ಹತ್ತಿದ ಸೈಕಲ್ಲನ್ನು ನಿಲ್ಲಿಸದೇ.... ನೆಲಕ್ಕೆ ಕಾಲು ತಾಗಿಸದೇ ಮನೆಯ ಬಾಗಿಲ ಬುಡಕ್ಕೇ ಪೇಪರ್ ಎಸೆಯುವ ಶಾರ್ಪ್ ಶೂಟರ್ ಪೇಪರಿನವನು, ಶಾಸ್ತ್ರಿ ಪಾರ್ಕಿನಲ್ಲಿ ಮುಂಜಾನೆ ಭಟ್ಕಳ ಬೆಂಗಳೂರಿನಿಂದ ಬಂದ ಹೂವಿಗೆ ನೀರು ಚಿಮುಕಿಸುತ್ತಿರುವ ಹೂವಿನ ವ್ಯಾಪಾರಿಗಳು,ಬಿಕೋ ಎನ್ನುತ್ತಿರುವ ರೋಡು ಹಾಗೂ ಅಂಗಡಿಯಲ್ಲಿ ಕೂತಿರುವ ನನ್ನ ಡ್ಯಾಡು. ಇಷ್ಟೇ."

ಒಂದು ನಾಲ್ಕೈದು ವರ್ಷಗಳ ನಂತರ ಕುಂದಾಪುರಕ್ಕೆ ಯಾರಾದರೂ ಬಂದರೆ ಒಂದು ಬಾರಿ ತಾನು ಯಾವ ಊರಿಗೆ ಬಂದೆ ಎಂದು ಬೆಚ್ಚಿ ಬೀಳುವುದು ಸಹಜ. ಶಾಸ್ತ್ರಿ ಪಾರ್ಕಿನ ಮಧ್ಯ ಕದಲದೇ ನಿಂತಿರುವ ಶಾಸ್ತ್ರಿಗಳೊಬ್ಬರೇ ಈ ಎಲ್ಲಾ ಬದಲಾವಣೆಗಳಿಗೆ ಮೂಕ ಸಾಕ್ಷಿ. ಎಲ್ಲಿಯವರೆಗೆಂದರೆ ಶ್ರೀ ಬೊಬ್ಬರ್ಯನವರು ಕೂಡಾ ಹೊಸ RCC ಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದ ಈಜುಕೊಳಗಳಾಗಿದ್ದ ರಸ್ತೆಗಳು ಈಗ ಒನ್ ವೇ ಕಾಂಕ್ರೀಟು ರಸ್ತೆಗಳಾಗಿವೆ. ಹೊಸ ರನ್ನಿಂಗ್ ಟ್ರ್ಯಾಕ್  ಮಾಡಿರುವ ಗಾಂಧೀ ಮೈದಾನಕ್ಕೆ ಏಳು ಸುತ್ತಿನ ಕೋಟೆ ರಚಿಸಿ ಗೇಟು ಮುಚ್ಚಿ ಬೀಗ ಜಡಿದಿದ್ದಾರೆ.ಹೊಸ ಶಾಪಿಂಗ್ ಕಾಂಪ್ಲೆಕ್ಸುಗಳು ಅಂಗಡಿಗಳು ಹೀಗೆ  ಬದಲಾವಣೆಗಳ ಸರಮಾಲೆ ಒಂದೇ ಎರಡೇ?? ಇನ್ನು ಬೆಳಿಗ್ಗೆ ಗಾಂಧಿ ಮೈದಾನದ ಪಕ್ಕ ನಿಂತಿರುವ ದೊಡ್ಡ ಕಾರುಗಳು ಹಾಗು ಮೈದಾನದಲ್ಲಿ ವಾಕಿಂಗ್/ಜಾಗಿಂಗ್ ಮಾಡುತ್ತಿರುವವರ ದಂಡು ಕಂಡರೆ  ಬೆಂಗಳೂರಿನ ಯಾವುದೋ ಪ್ರಮುಖ ಬಡಾವಣೆಗೆ ಬಂದಂತೆ ಅನ್ನಿಸುವುದು ಸಹಜವೆ.

ಇನ್ನು ಸುಮಾರು ಎಂಟು ಒಂಭತ್ತು ಘಂಟೆ ಆಗುತ್ತಿದ್ದಂತೆ ಬಸ್ಸುಗಳ ಭರಾಟೆ ಶುರುವಾಗುತ್ತದೆ.ದುರ್ಗಾಂಬಾ,ಅನಂತ ಪದ್ಮನಾಭ ಮೋಟಾರ್ಸ್ ,ಅಂಬಿಕ ಇವು ಪ್ರಮುಖ ಬಸ್ಸುಗಳಾದರೆ ಇಂಗ್ಲೀಷ್ ವರ್ಣಮಾಲೆಯ ಯಾವುದೇ ಮೂರು ಅಥವಾ ನಾಲ್ಕು ಅಕ್ಷರಗಳನ್ನು  ಸೇರಿಸಿ ಕೊನೆಗೆ ಒಂದು ಮೋಟಾರ್ಸ್ ಅಥವಾ ಟ್ರಾವೆಲ್ಸ ಸೇರಿಸಿದರೆ ಆ ಹೆಸರಿನ ಬಸ್ಸು ಕುಂದಾಪುರದಲ್ಲಿದೆ. ಪ್ರತೀ ಹತ್ತು ನಿಮಿಷಕ್ಕೆ ಒಂದು ಉಡುಪಿಗೆ ಹೋಗುವ ಬಸ್ಸು ಸಿಗುತ್ತದೆ. ಬಸ್ ಸ್ಟಾಪಿನಲ್ಲಿ ಬಸ್ಸು ನಿಂತಾಗ ಉಡುಪಿ ಎನ್ನುವುದು ಬೇಡ  ಎಂದು ಉಲಿದರೆ ಸಾಕು ಅಷ್ಟೆಲ್ಲಾ ಯಾಕೆ ನಾಲ್ಕು ಜನ ಗುಂಪಿನಲ್ಲಿ ಮನೆಯ ಹೊರಗೆ ನಿಂತರೆ ಸಾಕು ಕಂಡಕ್ಟರ್ ಬಂದು ಬಾಜಾ ಬಜಂತ್ರಿ ಸಮೇತ ನಿಮ್ಮನ್ನು ಕರೆದೊಯ್ಯುವಷ್ಟು ಸ್ಪರ್ಧೆ-ಪೈಪೋಟಿ ಇದೆ. ಆದರೆ ಈ ಎಲ್ಲಾ ಪೈಪೋಟಿಯ ನಡುವೆಯೂ ಎಲ್ಲ ಬಸ್ಸುಗಳು ತುಂಬಿ ಚಲಿಸುವುದೇ ಒಂದು ಸೋಜಿಗದ ಸಂಗತಿ.!!

ಉಡುಪಿ ಎಕ್ಸಪ್ರೆಸ್...ಉಡುಪಿ ಎಕ್ಸಪ್ರೆಸ್....ಉಡುಪಿ ಎಕ್ಸಪ್ರೆಸ್ ....ಬನ್ನಿ ಅಮ್ಮ ....ಸೀಟು ಖಾಲಿ ಉಂಟು ...ಉಡುಪಿ ಎಕ್ಸಪ್ರೆಸ್ ಎಂದು ಯಮನ್ ರಾಗದಲ್ಲಿ ಪ್ರೀತಿಯಿಂದ ಕರೆಯುವಾಗ ನಿಮಗೆ ಕಾಳಾವರದಲ್ಲಿ ಕೆಲಸವಿದ್ದರೂ ಒಮ್ಮೆ ಉಡುಪಿಗೆ ಹೋಗುವ ಮನಸ್ಸಾಗುತ್ತದೆ.

ಕೋಟೇಶ್ವರ ಕುಂಭಾಶಿ ಆನೆಗುಡ್ಡೆ ತೆಕ್ಕಟ್ಟೆ ಕೋಟ ಸಾಲಿಗ್ರಾಮ ಸಾಸ್ತಾನ ಮಾಬುಕಳ ಹಂಗಾರಕಟ್ಟೆ ಬ್ರಹ್ಮಾವರ ಉಡುಪಿ ಲೈನ್ ಉಡುಪಿ ಲೈನ್ ......................

ವಿನಾಯಕಾ ಎಮ್ ಕೋಡೀ....ಕೋಡೀ....ಕೋಡೀ.............

ಕೋಣೀ ಬಸ್ರೂರು ಕಂಡ್ಲೂರು ಅಂಪಾರು ಹುಣ್ಸೆಮಕ್ಕಿ ಸಿದ್ದಾಪುರ ಶಂಕರನಾರಾಯಣ...............

ಇವು ನಮ್ಮ ಕಂಡಕ್ಟರುಗಳು ಒಂದೇ ಉಸಿರಿನಲ್ಲಿ ಕೂಗುವ ಡೈಲಾಗುಗಳು.

ಸರಕಾರೀ ಕೆಂಪು ಬಸ್ಸುಗಳು ದೂರದ ಉಡುಪಿ- ಮಂಗಳೂರು-ಧರ್ಮಸ್ಥಳ-ಸುಬ್ರಹ್ಮಣ್ಯ ಬಿಟ್ಟರೆ ಬೇರೆ ಹತ್ತಿರದ ಸ್ಥಳಗಳಿಗೆ ಇಲ್ಲ. ಇರುವ ಬಸ್ಸುಗಳು ಕೂಡ ಹೆಚ್ಚು ಕಡಿಮೆ ಖಾಲಿಯೇ ಚಲಿಸುತ್ತವೆ.ಯಾಕೆಂದರೆ ಒಂದೈದು ರುಪಾಯಿ ಹೆಚ್ಚು ಕೊಟ್ಟರೆ ಭೂಮಿಯ ಮೇಲೆ ಚಲಿಸುವ ವಿಮಾನದಂತಿರುವ ಖಾಸಗೀ ಬಸ್ಸುಗಳಿರುವಾಗ ಕೆಂಪು ಬಸ್ಸಿನಲ್ಲಿ ಯಾರು ಹೋಗುತ್ತಾರೆ ನೀವೇ ಹೇಳಿ.


ಆಹಾರ ಕ್ರಮ
==========
ದೋಸೆ ಬನ್ಸು ಪೂರಿ ಉಪ್ಪಿಟವಲಕ್ಕಿ ಇಡ್ಲಿ
ಎಲ್ಲ ಎದುರಿಗಿರಲು ನಾವು ಯಾವುದನ್ನು ಬಿಡ್ಲಿ ??
ಬೇಳೆಸಾರು ಕೋಳಿಸಾರು ಬಂಗ್ಡೆ ಮೀನಿನ್ ಗಶಿ
ಬಾಳೆ ಎಲೆಯ ಮೇಲೆ ಬಡಿಸೆ ತಿನ್ನಲೆಷ್ಟು ಖುಷಿ!!

ಪಾರಿಜಾತ ಐಸುಕ್ರೀಮು ಕಾವರ್ರಾಡಿ ಚಕ್ಲಿ
ತಿನ್ನುವಂತ ಯೋಗ ನಿಮಗೆ ಒಂದು ಸಾರಿ ಸಿಕ್ಲಿ
ರಾಗಿನೀರು ಎಳ್ಳುನೀರು ಗೋಲಿಸೋಡ ಬೊಂಡ (ಎಳನೀರು)
ಇವುಗಳೆದುರು ಪೆಪ್ಸಿ ಕೋಲಾ ಸ್ಪ್ರೈಟು ಎಲ್ಲ ದಂಡ


ಕುಂದಾಪುರದ ಆಹಾರ ಪದ್ಧತಿ ರುಚಿ ಹಾಗೂ ಪೌಷ್ಠಿಕತೆಯ ಸಮಾಗಮ ಎನ್ನಬಹುದು. ಬೆಳಿಗ್ಗೆ ಪಾವು-ಶೀರಾ-ಸಮೋಸ ಎಲ್ಲ ತಿಂದು ಹೊಟ್ಟೆಗೆ ಮೋಸ ಮಾಡಿಕೊಳ್ಳುವವರಲ್ಲ. ಇಡ್ಲಿ ದೋಸೆ ಉಪ್ಪಿಟ್ಟು ಅವಲಕ್ಕಿ ಯೊಂದಿಗೆ ಒಂದು ಚಾ ಕುಡಿದರೆ ಉಪಾಹಾರದ ಚಾಕರಿ ಮುಗಿದಂತೆ. ಮತ್ತೆ ಈ ಸಮೋಸ ವಡೆ ( ನಮ್ಮ ಭಾಷೆಯಲ್ಲಿ ಬಟಾಟಾಂಬೊಡೆ ) ಎಲ್ಲ ತಿಂಡಿ ಆದ ಮೇಲೆ ಟೈಮ್ ಪಾಸ್ ಗೆ ತಿನ್ನಲಡ್ಡಿಯಿಲ್ಲ. ಮುಂಬೈ ನಲ್ಲಿ ಸಿಗುವಂತಹ ಪಾವು ಊರಿನಲ್ಲಿ ನಾನೆಲ್ಲೂ ಕಂಡಿದ್ದಿಲ್ಲ. ಬ್ರೆಡ್ ಸಿಗುತ್ತದಾದರೂ ಅದು ಜ್ವರ ಬಂದಾಗ ಮಾತ್ರ ಅಥವ ಸ್ಯಾಂಡ್ವಿಚ್ ನಂತಹ ನಾಲಿಗೆ ರುಚಿ ತಿಂಡಿಗಳಿಗಷ್ಟೇ ಮೀಸಲು.ಚಪಾತಿ ವಾರಕ್ಕೋ ಹದಿನೈದು ದಿನಕ್ಕೊ ಒಮ್ಮೆ  ಮಾಡಿದರೆ ಆ ದಿನ ಏಕಾದಶಿಯೊ ಸಂಕಷ್ಟಹರ ಚತುರ್ಥಿಯೊ ಇರಬೇಕು. ಊಟಕ್ಕೆ ಅನ್ನ-ಸಾರು-ಪಲ್ಯ ಮಜ್ಜಿಗೆ ಅಷ್ಟೆ. ಸಸ್ಯಾಹಾರಿಗಳಿಗೆ ಅದು ಬೇಳೆ/ಕಾಳಿನ ಸಾರಾದರೆ( ತೊವ್ವೆ ) ಆದರೆ ಮಾಂಸಾಹಾರಿಗಳಿಗೆ ಮೀನು/ಕೋಳಿಯ ಸಾರು. ಮೀನು ಇಲ್ಲಿನ ಆಹಾರದಲ್ಲಿ ಅವಿಭಾಜ್ಯ ಅಂಗವಾಗಿದೆ. ಮಾಂಸಾಹಾರಿಗಳು ಅದನ್ನು ಮೀನೆಂದು ತಿಂದರೆ ಸಸ್ಯಾಹಾರಿಗಳು "ಸಮುದ್ರದ ಬಾಳೇಕಾಯಿ " ಎಂದು ತಿನ್ನುತ್ತಾರೆ. ಆದ್ದರಿಂದ ಇಲ್ಲಿ ನೀವು "ಬ್ರಾಹ್ಮಣರ ಮೀನು ಊಟದ ಹೋಟೇಲ್" ಕಂಡರೆ ಅಚ್ಚರಿಯೇನಿಲ್ಲ. :):)

Comments

aavottu horatavaru kundapurakke ivattu bandrya...

nice...:)
ಬಾಲು said…
chennaagide mahaswami nimma kundaapura nagara darshana.

allina ahara paddathi baggenu chennaagi barediddiri.
ಕಾವರಾಡಿ ನನ್ನತ್ತೆ ಮನೆ :-)
ಅದು ಚಕ್ಲಿಗೆ ಫೇಮಸ್ಸಾ?

Popular posts from this blog

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕ...

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ ...