Skip to main content

ಸರಸ -ವಿರಸ

ನಿಮ್ಮ ಹಾಸ್ಯ ನಿಮಗೆ ಅರ್ಥವಾದರೆ ಸಾಕೆ ??
ಜೋಕು ಮಾಡುವ ಗೆಳೆಯ ಒಂದಿನಿತು ಜೋಕೆ ||
ಹಾಸ್ಯ ಶ್ರೋತೃಗಳಿಗರ್ಥವಾದರೆ ಕ್ಷೇಮ
ಅಪಾರ್ಥವಾದರೆ ಗತಿಯು ಕೋದಂಡರಾಮ ||

ಹಮ್... ಹಾಸ್ಯ ಇದೊಂದು ಬ್ರಹ್ಮಾಸ್ತ್ರ . ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಇದನ್ನು ಎಲ್ಲಿ ಬೇಕಾದರೂ ಬಳಸಬಹುದು . ಆದರೆ ಪರಿಣಾಮದಲ್ಲಿ ಇದು ಸ್ನೇಹಕ್ಕೂ ಸೈ ಸಮರಕ್ಕೂ ಜೈ .ಸಂದರ್ಭೋಚಿತ ಹಾಸ್ಯವೂ ಸೃಷ್ಟಿಯಾಗಬಹುದಾದಂತ ಉದ್ವಿಗ್ನ ವಾತಾವರಣವನ್ನು ಕ್ಷಣಮಾತ್ರದಲ್ಲಿ ತಿಳಿಗೊಳಿಸಬಹುದು ಅಂತೆಯೇ ಅಪಾರ್ಥವಾದ ಹಾಸ್ಯವೂ ಸ್ನೇಹದಲ್ಲಿ ಭಾರೀ ಬಿರುಕು ಸೃಷ್ಟಿಸಬಹುದು.ಈಗ ನೀವೇ ನೋಡಿ , call,chat,email,orkut ಎಂದು ಸದಾ ಸಂಪರ್ಕದಲ್ಲಿರುತ್ತಿದ್ದ ನನ್ನ ಕೆಲವು ಗೆಳೆಯರು ನನ್ನ ಹಾಸ್ಯದ ಬಲಿಪಶುಗಳಾಗಿ ಇಂದು ಒಂದು missed call ಕೂಡ ಕೊಡದೆ ಇರುವುದು ಕಹಿ ಸತ್ಯ . ಅದು ಬಿಡಿ ನನ್ನ ಪ್ರೇಮದಲ್ಲಿ ನನ್ನ ಹಾಸ್ಯ ಹೇಗೆ ಹೇಗೆ ಅಡ್ಡಗಾಲಾಯಿತೆಂಬ ದುರಂತ ಕತೆಯನ್ನು ಹಾಸ್ಯದ ಮುಖಾಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ .

ಹೌದು .. ನಂಬಿದ್ರೆ ನಂಬಿ ಬಿಟ್ರೆ ಬಿಡಿ , ನಾನೂ love ಮಾಡಿದ್ದೀನಿ . ಒಂದಲ್ಲ ಎರಡು ಬಾರಿ ಮತ್ತೆ ಮೂರನೇ ಬಾರಿ attempt ಕೂಡ ಮಾಡಿದ್ದೆ . ಆದರೆ ಪ್ರಥಮ ದ್ವಿತೀಯ ತೃತೀಯ ಎಲ್ಲ ಚುಂಬನದಲ್ಲೂ ದಂತಭಗ್ನವಾಗಿ " ಹಲ್ಲಿಲ್ಲದ ಸರದಾರನಾಗಿ " ಈಗ ಅಖಿಲ ಭಾರತ ಬ್ರಹ್ಮಚಾರಿಗಳ ಸಂಘ (ರಿ) ದ ಸದಸ್ಯನಾಗಿದ್ದೇನೆ . ಏನು ??? ಏನಾಯ್ತು ಎಂದು ಕೇಳುತ್ತಿದ್ದೀರಾ ??... ಆಗಿದ್ದಿಷ್ಟೆ .....ಓದಿ ಮತ್ತು ಹೀಗಾದರೆ ನಾನೇನು ಮಾಡ್ಲಿ ನೀವೇ ಹೇಳಿ ??

ಮೊದಲನೆಯವಳು ಐಶ್ವರ್ಯ . ನನ್ನ ಪಂಚಪ್ರಾಣದಲ್ಲಿ ಆರನೇಯವಳಾಗಿದ್ದಳು. ಎರಡು ಜೀವ ಒಂದು ದೇಹ .. ಕ್ಷಮಿಸಿ .. ಎರಡು ದೇಹ ಒಂದು ಜೀವ ಅನ್ನೋ ಥರ ಇದ್ವಿ . ಅವಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೆ .ಒಂದು ಸುಂದರ ಸಂಜೆ ಭೇಟಿ ಮಾಡಿದಾಗ ಲೋ.. ಸುಮ್ಮು .. ನಂಗೆ ಕಬ್ಬನ್ ಪಾರ್ಕ್ ನಲ್ಲಿ ಕಬ್ಬಿನ್ ಜ್ಯೂಸ್ ಕುಡಿಸು ರಾತ್ರಿ " ಮುಂಗಾರು ಮಳೆ " ಕರೆದುಕೊಂಡು ಹೋಗು ಅಂದಳು . ಅವಳು ಕೇಳುವ ಮೊದಲೇ ಬೆಳಿಗ್ಗೆ ರಂಜಿತ್ ಹತ್ರ ಬೈಕ್ arrange ಮಾಡಿದ್ದೆ ಹಾಗೂ ನನ್ನ ಜೇಬಿನಲ್ಲಿ ಬ್ಲಾಕ್ ನಲ್ಲಿ 250/- ಕೊಟ್ಟು ತಂದ ಎರಡು ಟಿಕೆಟ್ ಇತ್ತು . ಸುಮ್ಮನೆ ಕಾಲೆಳೆಯೋಣ ಅಂಥ " ನೋಡೇ .. ಜ್ಯೂಸ್ ಎಲ್ಲ ಕುಡಿಸಲ್ಲ ನಾನು ಕಂಜೂಸು ,,,,, ಮತ್ತೆ ಏನು ?? ಮುಂಗಾರು ಮಳೆನಾ ?? ಈಗ ಆಷಾಡಿ ಮಳೆ ಕೆಟ್ಟದಾಗಿ ಬರ್ತಾ ಇದೆ 8 ಗಂಟೆ ಬೇರೆ ಆಗಿ ಹೋಗಿದೆ . ರಿಕ್ಷಾ ದವನು ಒಂದೂವರೆ ಮೀಟರ್ ಚಾರ್ಜ್ ಕೇಳುತ್ತಾನೆ ... ಯಾಕೆ ಸುಮ್ನೆ ?? ನೋಡು ಪ್ರೀತಿಯಲ್ಲಿ ತಾಳ್ಮೆ ಇರಬೇಕು . ಇನ್ನು ಒಂದೆರಡು ತಿಂಗಳಿನಲ್ಲೇ ಉದಯ ಟೀವಿ ಯಲ್ಲಿ ಸೂಪರ್ ಹಿಟ್ ಚಲನಚಿತ್ರವಾಗಿ ಬರುತ್ತೆ ಆಗ ಒಟ್ಟಿಗೆ ಕೂತು ನೋಡೋಣ ಎಂದೆ . ಅವಳು ಏನೂ ಹೇಳಲಿಲ್ಲ ..... ಕೂಗಿದರೂ ತಿರುಗದೆ ನಾಗಮ್ಮನಂತೆ ಬುಸುಗುಡುತ್ತ ಓಡಿ ಹೋದಳು . ಮರುದಿನ ನನ್ನ ಕಪಾಳಕ್ಕೆ ಹೊಡೆದಂತೆ ಕಣ್ಣ ಮುಂದೆ ಆ ಶೆಟ್ರ ಮಗ ಸುಪ್ರೀತ್ ಜೊತೆ ಬೈಕ್ ನಲ್ಲಿ ಕೂತು ಹೋಗ್ತಾ ಇದ್ದಳು . ನಾನೇನು ಮಾಡ್ಲಿ ನೀವೇ ಹೇಳಿ??

ಇನ್ನು ಎರಡನೆಯವಳು ಶಶಿಕಲ . ಇವಳ ಬಗ್ಗೆ ಏನು ಹೇಳಲಿ ..... ಪ್ರೀತಿಯಿಂದ ನನ್ನನ್ನು 'ಸು ' ಎನ್ನುತ್ತಿದ್ದಳು ನಾನೂ ಕೂಡ ಪ್ರೀತಿಯಿಂದ 'ಶ್ಶ...' ಎಂದು ಕರೆಯುತ್ತಿದ್ದೆ . ಒಂದು ದಿನ " ಏನೋ ಸು ... ರೈಲು , ಹೋಟ್ಲು ಅಂಥ ಏನೇನೋ ಲೇಖನ ಬರೀತೀಯ . ನನ್ನ ಮೇಲೆ ಒಂದು ಕವನ ಬರೀಬಾರ್ದ ?? ಅಂದಳು . ಸರಿ ತೊಂಡೆ ಬೆಂಡೆ ಎಂದು ಒಂದು ನಾಲ್ಕು ತರಕಾರಿ ಹಾಕಿ ಕವನ ಬರೆದ್ರೆ ಆಯಿತು ಅಂದುಕೊಂಡೆ .ನೋಡು .. ಬರೆದ್ರೆ ಒಂದು ಥರಾ Different ಆಗಿ ಇರಬೇಕು ಅಂಥ Condition ಹಾಕಿದಳು .ಸರಿ 'ಶ್ಶ...' ನಾಳೆ ಕೊಡ್ತೀನಿ ಎಂದೆ . ರಾತ್ರಿಯಿಡೀ ಯೋಚಿಸಿ ಈ ಕವನ ಬರೆದೆ...

ಓ ನನ್ನ ಶನೀ.... ( ಅದು 'ಶ್ಶ.. + Honey = ಶನಿ ----> ಕಪಾಳಮೋಕ್ಷ ಸಂಧಿ )
ನಾನು ನಿನ್ನ ಪ್ರೇಮದ ಅಭಿಮಾನಿ
ಹಗಲಿರುಳೂ ಇರಲಿ ನಿನ್ನ ಒಲುಮೆ
ಅದೇ ನನ್ನ ಪಾಲಿನ ಜೀವ ವಿಮೆ ||

ನಿನ್ನ ನಡೆಯೋ ದಸರಾದ ಆನೆ |
ಕುಣಿತ ಮಂಗನಿಂದ ಕಲಿತಿದ್ದು ತಾನೆ ??
ಹಾಡಿದರೆ ಸತ್ತೆ ಓಡುವುದು ಕತ್ತೆ
ಹಾಡು ಕೇಳಿದ ಕೆಪ್ಪ ಇಂದು ನಾಪತ್ತೆ ||

ನಿನ್ನ ತುಟಿಯು ಮಟ್ಟಿಗುಳ್ಳ
ನಿನ್ನ ನಡುವೋ ಬೂದು ಗುಂಬ್ಳ ||
ಕಪ್ಪೆಯಂತೆ ನಿನ್ನ ಕಣ್ಣು
ನಿನ್ನ ಮುಖವೋ ಹಲಸಿನ ಹಣ್ಣು ||


ಮತ್ತೆ ನೋಡಿ ಆ ದಿನ ಮಾರ್ಕೆಟ್ ನಲ್ಲಿ ತೊಂಡೆಕಾಯಿ 5/- Kg ಮಟ್ಟಿಗುಳ್ಳ 30/- Kg . ಯಾಕೆ ನನ್ನವಳನ್ನು Cheap ತರಕಾರಿಗೆ ಯಾಕೆ ಹೋಲಿಸಲೆಂದು ತಮಾಷೆಗೆ ಮಟ್ಟಿಗುಳ್ಳಕ್ಕೆ ಹೋಲಿಸಿದೆನು .ಮತ್ತೆ ಮೀನಾಕ್ಷಿ ಎಂದು ಎಲ್ಲ ಕಡೆ ಕರೀತಾರೆ ಮೀನು ಮತ್ತು ಕಪ್ಪೆ ನೀರಿನಲ್ಲಿ ಅಕ್ಕ -ತಂಗಿ ಅಲ್ವಾ ?? ಅದಕ್ಕೆ ಹೀಗೆ ಬರೆದೆ .ನೀವು ಯಾರದ್ರೂ ಇಂಥ ಕವನ ಬರೆದಿದ್ರಾ ?? ಹೇಗೆ different ಆಗಿಲ್ವಾ ?? ಆದರೆ ಇಲ್ಲ .. ಮುಖ ಅರ್ಧ ಬೆಂದ ಆಲೂಗಡ್ಡೆ ಥರ ಮಾಡಿಕೊಂಡು ಅಡ್ರೆಸ್ ಕೂಡ ಕೊಡದೆ ಓಡಿ ಹೋದಳು . ನಾನೇನು ಮಾಡಲಿ ನೀವೇ ಹೇಳಿ??? .....

ಇನ್ನು ಮೂರನೆಯವಳು orkut ನಲ್ಲಿ ಸಿಕ್ಕಿದಳು . ಲತಾ ..... ಮೊದಲು ಸ್ವಲ್ಪ tragedy ಅನ್ನಿಸಿತು . ಎರಡನೇ ವಾರಕ್ಕೆ ಆಕೆಯಿಂದ "Dear" "Honey" ಸಂಬೋಧನೆ ಶುರುವಾಯಿತು . ಆಮೇಲೆ ಲವ್ ಅಂಥಾ ಏನೂ ಇಲ್ಲದಿದ್ದರೂ ಮಾತಿನಲ್ಲಿ ಸ್ವಲ್ಪ ಸಲುಗೆ ಬೆಳೆಯಿತು . ಒಮ್ಮೆ ಹೀಗೆ ಭೇಟಿ ಮಾಡೋಣ ಎಂದು ಅವಳ ಮನೆಗೆ ಹೋದೆನು . ಲತಾ .. ಬಂದಳು .... ಉಡುಪಿಯಲ್ಲಿ ರಥಬೀದಿ ತುಂಬಾ ರಂಪಾಟ ಮಾಡಿದ "ಲಕ್ಷ್ಮೀಶ " ನ ( ಆನೆ ) ಅಪರಾವತಾರದಂತಿದ್ದಳು. ಮನೆಯ ಗೋಡೆ ತುಂಬ ಇವಳ solo photo ಇತ್ತು . ಯಾಕೆ ಸರ್ ಎಲ್ಲ ಫೋಟೋ ದಲ್ಲಿ ಒಬ್ಳೇ ಇದ್ದಾಳೆ ಎಂದು ಅವಳ ಅಪ್ಪನನ್ನು ಕೇಳಿದೆ . ಇಲ್ಲಪ್ಪ ಅದು ಗ್ರೂಪ್ ಫೋಟೋ ನೆ ಆದ್ರೆ ಒಂದೇ ಫ್ರೇಮ್ ನಲ್ಲಿ ಎಲ್ಲರು ಬಂದಿಲ್ಲ , ಎಂಟು ಮಂದಿ ಅವಳ ಹಿಂದೆ ನಿಂತಿದ್ದಾರೆ ಅಂದರು . Corner ನಲ್ಲಿ ಅವಳ ಮತ್ತು ಅವಳ ತಾಯಿಯ ಫೋಟೋ ನೋಡಿ ಅದು ಹೇಗೆ ಸರ್ ... ಕೇಳಿದೆ.... ಅದಾ ?? adobe Photoshop ನಲ್ಲಿ edit ಮಾಡಿ ಪ್ರಿಂಟ್ ಹೊಡೆಸಿದ್ದು ಅಂದರು . ಇವಳ ತಾಯಿ ಗರ್ಭಿಣಿ ಇರಬೇಕಾದರೆ ಬಸ್ಸಿನಲ್ಲಿ ಒಂದೂವರೆ ಟಿಕೆಟ್ ತೆಗೊತಿದ್ರಂತೆ . ಸರಿ ಎಂದು ಅವಳ ಅಪ್ಪನಿಗೆ ಕಿಟ್ಟೆಲ್ ಡಿಕ್ಷನರಿ ಗಿಫ್ಟ್ ಕೊಟ್ಟು (ಕೂಷ್ಮಾಂಡ ಅಂಥ ಹೆಸರಿಡೋದು ಬಿಟ್ಟು ಲತಾ ಅಂಥ ಹೆಸರು ಇಟ್ಟಿದ್ದಾನೆ ) ಅವಳಿಗೆ ಮನದಲ್ಲೇ ಒಂದು ಸೌತೆಕಾಯಿ ಬೆಲ್ಲದ ಅಚ್ಚು ಮತ್ತು ಐದು ರುಪಾಯಿ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆದು ಹೊರಡಲನುವಾದೆ . ಕೂರಪ್ಪ ..... ಮೊದಲನೆ ಬಾರಿ ಬಂದಿದ್ದೀಯಾ ಮನೆಗೆ.... ಏನು ತೆಗೊತೀಯಾ ?? ಎಂದರು . ಸರ್ ನಿಮ್ಮ ಮಗಳನ್ನ ಬಿಟ್ಟು ಬೇರೆ ಏನು ಕೊಟ್ರು ತೆಗೊತೀನಿ ಎಂದು ಹೇಳಿ ಕಹಿ ಕಾಪಿ ಕುಡಿದು ಗೂಡು ಸೇರಿಕೊಂಡೆ . ನಾನೇನು ಮಾಡಲಿ ನೀವೇ ಹೇಳಿ?? .....

ಇರಲಿ ಈಗ ಫೆಬ್ರವರಿ ೧೪ ಹತ್ರ ಬರುತ್ತಿದೆ . ನನ್ನ ಜಾತಕ ನೋಡಿದ ಪುರೋಹಿತರು " ಈ ವರ್ಷ ಚಾನ್ಸ್ ಇದೆ " ಎಂದಿದ್ದಾರೆ.ಮನಸ್ಸು ಕನಸಿನ ಗೋಪುರ ಕಟ್ಟಲು ಆರಂಭಿಸಿದೆ . ಕಾತರ ಕಳವಳಗಳೊಂದಿಗೆ ಫೆಬ್ರವರಿ 14 ನ್ನು ಎದುರು ನೋಡುತ್ತಿದ್ದೇನೆ .ಸಲಹೆಗೆ ನಿಮ್ಮನ್ನು ಸಂಪರ್ಕಿಸುತ್ತೇನೆ ಆಗ ನಾನೇನು ಮಾಡ್ಲಿ ನೀವೇ ಹೇಳಿ ಹಾಗೆ ಮಾಡುತ್ತೇನೆ ಆಯ್ತಾ ??
==========================ವಿಕಟಕವಿ =======================

Comments

Anonymous said…
ಚೆನ್ನಾಗಿದೆ ಸರ್‍..

ನೀವು ದೇವದಾಸನ ಕಾದಂಬರಿ ಬರೆದರೆ ಅದರಲ್ಲಿ ಬಾರಿನಲ್ಲಿ ಬಿಯರ್ ಕುಡಿಯುವ ಸನ್ನಿವೇಶಗಳಿರಲ್ಲ.ಪ್ರೇಮ ಭಗ್ನವಾದಾಗ ಮಜವಾಗಿ ಜ್ಯೂಸ್ ಕುಡಿಯುತ್ತಾ ಶಾಸ್ತ್ರಿ ಪಾರ್ಕಿನಲ್ಲಿ ಅಡ್ಡಾಡುವ ಭಂಡಾರ್ಕರ್ಸ್ ಕಾಲೇಜಿನ ಯುವತಿಯರಿಗೆ ಲೈನ್ ಹೊಡೆಯುವ ದೃಶ್ಯಗಳಿರಬಹುದೇನೋ ಅನ್ನಿಸುತ್ತದೆ..;)
Unknown said…
good,kapalamoksha sandhi concept was too good,but never heard about "sutta aloogadde" till now
ಮಛಾ.. ಹಾಸ್ಯ ಅಂದರೇ ಏನು ಅಂಕಾ ತೋರಿಸಿದ್ದೀಯಾ. ಈ ಸಲಾ ನಿನ್ನ ಗದ್ಯದ ಜೂಡಿ ಪದ್ಯ ಸುದೇಕ್ ಅರ್ಥ ಆತು. ನಮಗ ಸಾಲಿ ಪಠ್ಯ ಪುಸ್ತಕದಾಗ ಹಿಂತಾ ಪಾಠ ಇದ್ದಿದ್ರ ಖಂಡಿತ ಕನ್ನಡಾ ಕ್ಲಾಸಿಗೇ ಓಡೋಡಿ ಹೋಗ್ತಿದ್ವಿ.

ಇದನ್ನ ಓದುಮುಂದ ನಾ ಅಂತ್ರೂ ಬಿದ್ದ ಬಿದ್ದ ನಗ್ಲಿಕತ್ತಿದ್ದೇ.

ಕಪಾಲಮೋಕ್ಷ ಸಂಧಿ ಅಂತ್ರೂ ಎಂದೂ ಮರಿಯುದಿಲ್ಲಾ. ಹಿಂಗೇ ಬರೀತಿರು ಮಛಾ.

ಇವನ್ನ ಯಾವುದರೇ ಮ್ಯಾಗಝಿನ್ ಅಥವಾ ಯಾವುದರೇ ಪತ್ರಿಕೇಗೋ ಕಳಸ್ತೀ ಏನ್ ನೋಡು. ಅಷ್ಟು ಲಾಯಕ್ ಅದ ಈ ಲೇಖನಿ.
ಥ್ಯಾಂಕ್ಸ್ ರಂಗಾ .... ಆಸ್ಕರ್ ಸಿಕ್ಕಷ್ಟು ಖುಷಿ ಆಯಿತು . ನಿಮ್ಮ ಸಲಹೆ ಹಾಗೋ ಪ್ರೋತ್ಸಾಹ ಹೀಗೆ ಇರಲೆಂದು ಕೋರಿಕೆ .
ಧನ್ಯವಾದಗಳೊಂದಿಗೆ
ವಿ . ಸುಮಂತ ಶ್ಯಾನುಭಾಗ್
Ravi K S said…
ಕಪಾಳಮೋಕ್ಷ ಸಂಧಿ !! He He He...
ಸೂಪರ್ ಆಗಿದೆ..

I second Ranga's thougths.. You should publish these in some magazine.. It should reach more people than now...

raviks.livejournal.com

Popular posts from this blog

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ