========================================
ನೋಡೀ... ಸ್ವಾಮೀ.... ನಾವಿರೋದೆ ಹೀಗೆ
========================================
ನಾನು ಯಾರು ? ಹೇಗೆ ? ಯಾಕೆ ?? ನೂರು ಪ್ರಶ್ನೆ ಎಸೆದೆ
ಬಂದ ಉತ್ತರಗಳ ಕೂಡಿ ಕವನವೊಂದ ಹೊಸೆದೆ|
ಬರೆಯುತಿರುವೆ ಈ ಕವನದಿ ನಾನು ನನ್ನ ಬಗ್ಗೆ
ನೋಡೀ... ಸ್ವಾಮೀ.... ನಾವಿರೋದೆ ಹೀಗೆ||
ಎಂಜಿನಿಯರಿಂಗ್ ಓದಿ ಟೀಸಿಯೆಸ್ಸಿನಲ್ಲಿ ದುಡಿಮೆ
ಕೃಷ್ಣವರ್ಣ ತಲೆಯ ಮೇಲೆ ಕೂದ್ಲು ಸ್ವಲ್ಪ ಕಡಿಮೆ
ಕುಂದಾಪುರದವನು ಇರುವೆ ಬೆಂಗಳೂರಿನಾಗೆ
ಹೋಯ್ ಮಾರಾಯ್ರೆ... ನಾವಿಪ್ಪುದೇ ಹೀಂಗೆ!!
ಇಹುದು ನನಗೆ ಕವಿತೆ ಕವನ ಬರೆಯುವಂತ ಹುಚ್ಚು
ಮೌನ ಕೂಡಿ ಬರದು ನನಗೆ ಮಾತು ಸ್ವಲ್ಪ ಹೆಚ್ಚು
ಮನದ ಮಾತ ಹಾಕಿ ಬಿಡುವೆ ಪೇಪರಲ್ಲಿ ಗೀಚಿ
ಪಳೆಯಾಚಿ ಮಾಮ್ಮಾ... ಹಾವೆ ಆಸುಚೆ ಅಶೀಚಿ
ಇಡ್ಲಿ ಚಟ್ನಿ ದೋಸೆಯಂತು ನನ್ನ ಫೇವರಿಟ್ಟು
ಊರು ಬಿಟ್ಟು ಓಡಿ ಬಿಡುವೆ ಕಂಡರೆ ಉಪ್ಪಿಟ್ಟು
ಬ್ರೆಡ್ಡು ಬನ್ನು ಆಗೋದಿಲ್ಲ ಇಷ್ಟ ಪೂರಿ - ಬಾಜಿ
देखिये... मै ऐसाहि हू माजि.....॥
ಬೇಳೆ ಸಾರು ಹಪ್ಪಳವಿರೆ ಅದುವೇ ಮೃಷ್ಟಾನ್ನ
ಉಪ್ಪಿನಕಾಯ್ ಮಜ್ಜಿಗೆಯಿರಲೂಟವೆಷ್ಟು ಚೆನ್ನ!
ಆಲೂಗಡ್ಡೆ ಪರಮಮಿತ್ರ ಇಷ್ಟ ಬಸಳೆ ನುಗ್ಗೆ
ನೋಡೀ... ಸ್ವಾಮೀ.... ನಾವಿರೋದೆ ಹೀಗೆ
ಚಾಕಲೇಟು ಬರ್ಫಿ ನೋಡೆ ಇರುವೆಯಾಗಿ ಬಿಡುವೆ
ಜಾಮೂನನು ತಂದವರಿಗೆ ಒಲಿದು ವರವ ಕೊಡುವೆ
ಹಣ್ಣಿನಲ್ಲಿ ಇಷ್ಟವೆನಗೆ ಮಾವು ಮೋಸಂಬಿ
ಪಾರಂಙ್ ಪಾ ನಾನ್ ಇಪ್ಪಡಿತಾನ್ ತಂಬಿ
ಪಿಜ್ಝಾ ಕೋಕು ಬೇಡವೆನಗೆ ಸಾಕು ನಿಂಬೆ ಜ್ಯೂಸು
ಮಿತವ್ಯಯಿ ಸ್ವಾಮಿ ನಾನು ಅಲ್ಲಾ ರೀ ಕಂಜೂಸು
ಕಾಫಿಯಲ್ಲಿ ಇರೋ ಸುಖವು ಗೊತ್ತಿದೆಯೇ ನಿಮಗೆ ??
ನೋಡೀ... ಸ್ವಾಮೀ.... ನಾವಿರೋದೆ ಹೀಗೆ
ಮದುವೆಯಾಗಲಿಲ್ಲ ನನಗೆ ಇನ್ನೂ ಬ್ರಹ್ಮಚಾರಿ
ದುಶ್ಚಟಗಳಿಗೆ ಹೇಳಿರುವೆನು I AM VERY SORRY!
ಬಹುದಿನಗಳ ಆಸೆ ಕಲಿಯಬೇಕೆಂದು ತಬಲಾ
ಚೂಡನ್ನಯ್ಯಾ.... ಮೇವುನ್ನದೇ ಇಲಾ .....
ಹಸ್ತಾ ನಕ್ಷತ್ರವೆನದು ಇರುವೆನು ನಗುನಗುತ
ನಾನಿರಲು ತಪ್ಪದೆಂದು ನಿಮ್ಮಯ ಕಾಲೆಳೆತ
ಸದಾ ಕಾಲ ಮಾಡುತಿರುವೆ ಗೆಳೆಯರನ್ನು ಗೇಲಿ
LOOK BOSS!!!.... I AM LIKE THIS ONLY!!
ಅಪ್ಪ ಅಮ್ಮ ಅಕ್ಕ ಅಣ್ಣ ನಾನೇ ಕೊನೆಯ ಪುತ್ರ
ತುಂಟಾಟಿಕೆ ಲೂಟಿಗೆಲ್ಲ ಪ್ರೀತಿಯೇ ಇವರುತ್ರ
ಇವರೇ ದೇವರೆನಗೆ ಕೊಟ್ಟ ವರವು ಬಾಳಿನಾಗೆ
ನೋಡೀ... ಸ್ವಾಮೀ.... ನಾವಿರೋದೆ ಹೀಗೆ
ಗೆಳೆಯರೊಡನೆ ಇರಲು ನಾನೇ ವೀರ ಆಂಜನೇಯ
ಅಪ್ಪ ಅಮ್ಮ ಪಕ್ಕದಲಿರೆ ಬರುವ ಧರ್ಮರಾಯ
ತಾಳವನ್ನು ಹಾಕುವೆ ಕಾಲಕ್ಕೆ ತಕ್ಕ ಹಾಗೆ
ನೋಡೀ... ಸ್ವಾಮೀ.... ನಾವಿರೋದೆ ಹೀಗೆ
ನೂರು ತಪ್ಪು ಮಾಡಿರುವೆನು ನಾನು ಜೀವನದಲಿ
ನಿಮಗೆ ನೋವು ಕೊಟ್ಟಿದ್ದರೆ ಅದಕೆ ಕ್ಷಮೆಯು ಇರಲಿ
ಕ್ಷಮಿಸಿದಂತೆ ಬಂದರೆ ಕಿರುನಗುವು ಮುಖದ ಮ್ಯಾಗೆ
ನೋಡೀ... ಸ್ವಾಮೀ.... ನಾವಿರೋದೆ ಹೀಗೆ
ಸುಳ್ಳು ಹೇಳಲಿಲ್ಲ ನಾನು ನನ್ನ ಕವನದಲ್ಲಿ
ಮಂಥನವನು ಮಾಡಿ ನೋಡಿ ನೀವು ಮನಸಿನಲ್ಲಿ
ತಮ್ಮ ಭಾವನೆಗಳ ತಿಳಿಸಿ MAIL/CALL ನಾಗೆ
ಈಗ ನೀವು ಹೇಳಿ... ನಾನು ಹೀಗೆ ?? ಹಾಗೆ .... ಅಥವ ಹೇಗೆ ??
======================================= ವಿಕಟಕವಿ ===========
Comments