Wednesday, May 19, 2010

WELCOME TO KUNDAPUR !!!!!! .


*********************************************************************************
ಕೋಟೇಶ್ವರ ಕುಂಭಕಾಶಿ ಕೋಟ ಕೋಡಿ ಕೋಣಿ
ನಮ್ಮ ಊರು ಕುಂದಾಪ್ರ ಎಷ್ಟು ಚಂದ ಕಾಣಿ
ಹೊಯ್ಕ ಬರ್ಕ್ ಭಾಷೆ ಕೇಂಡ್ರೆ ಕಿಮಿಗೆಷ್ಟ ಖುಶಿ
ಅರ್ಥ ಆಗದಿದ್ರೆ ಮಾಡ್ಕಬೇಡಿ ಮಂಡೆಬಿಶಿ||

ಹೋಯ್ ಹೇಂಗಿದ್ರಿ ಮಾರ್ರೆ ???ಬನಿ ಕೂಕಣಿ..... ಉಂಡ್ರಿಯಾ ??ಒಂದೈದ್ನಿಮಿಷ ಅಡ್ಡ ಒರಗಿ... ದಣು ಹೊಯ್ಲಿ  ಆಮೇಲೆ ನಾನ ಚೊರೆ ಮಾಡುಕ್ಕೆ ಶುರು ಮಾಡ್ತೆ ಅಕಾ ?? ಅಲ್ದೆ ಕುಂದಾಪುರದ್ ವಿಷಯ ಬರುದ್ ಅಂದ್ರೆ ಸಾನ್ ಸುಮಾರಾ  ??
ಎಂತಿಲ್ಲ ಅಂದ್ರೂ ಒಂದೆರಡ್ ಒಪ್ಪತ್ತಾರೂ ಬೇಕಾ ಬೇಡ್ದಾ ??

ಕಾಣಿ ..... ಬೋರ್ಡ್ ಸಮಾ ಕಾಣಿ ಖುಶಿ ಆತ್ತಾ ಇಲ್ದಾ ?? "ನಮ್ಮೂರೇ ನಮಗೆ ಸವಿಬೆಲ್ಲ" ಅಂದ ಹಾಂಗೆ ಯಾರಿಗೇ ಆಯ್ಲಿ ಅವರ ಊರಿನ ಬೋರ್ಡ್,ಊರಿಗೆ ಹೋಪು ಬಸ್ಸ ಕಂಡ್ರೆ  ಅಷ್ಟೆಲ್ಲ ಎಂತಕ್ಕೆ ದೊಡ್ಡ ದರೋಡೆ ಆಯಿತ್ತ ಅಂತ ಹೇಳಿ ಉದಯ ವಾರ್ತೆಯಲ್ಲಿ ನಮ್ಮೂರಿನ ಒಂದ್ ಓಣಿ ತೋರ್ಸಿದ್ರೂ ಬೇಜಾರಿನ್ ಮಧ್ಯಾನೂ ಸ್ವಲ್ಪ ಖುಷಿ ಆಯಿಯೇ ಆತ್ತ . ಊರಲ್ಲಿಪ್ಪತ್ತಿಗೆ ಮೇಳಿ ತಿರ್ಸಿ ಕಾಣ್ದಿರೂ ಬೇರೆ ಊರಿಗೆ ಹೋದಾಗಳಿಕೆ ನಮ್ಮೂರಿನ ಜನ್ರನ್ನ ಕಂಡ್ರೆ ಒಂದ್ ಥರಾ ಮನ್ಸಿಗೆ ಸಮಾಧಾನ. "ನಮ್ ಜನ" ಎಂಬ ಪ್ರೀತಿ ಬಳ್ಕಂಡ ಬತತ್ತ ಹೌದಾ ಅಲ್ದಾ ?

 ಮತ್ಸ್ಯಗಂಧಾ ಎಕ್ಸಪ್ರೆಸ್ಸ ನಲ್ಲಿ  ಪನ್ವೇಲ್ನಲ್ಲಿ ಕುಳಿತೊಡನೆ ಹದಿಮೂರು ಘಂಟೆ ಹೇಗೆ ಕಳೆಯಲೆಂಬ ಚಿಂತೆ.ರತ್ನಗಿರಿ ಬಂದೊಡನೆ ಹದಿಮೂರರಲ್ಲಿ ಎಷ್ಟು ಘಂಟೆ ಕಳೆಯಿತೆಂಬ ಲೆಕ್ಕ.ಗೋವಾ ಬಂದೊಡನೆ ಕುಂದಾಪುರ ತಲುಪಲು ಎಷ್ಟು ಸಮಯ ಉಳಿಯಿತೆಂಬ ಗುಣಾಕಾರ. ಗೋವಾ ಹೋದ ಮೇಲೆ ಕರ್ನಾಟಕ ಪಾದಾರ್ಪಣೆಯ ಸಂಭ್ರಮ.ಗೋಕರ್ಣ - ಕುಮಟಾದಲ್ಲಿ ಇನ್ನೂ ಯಾಕೆ ಕುಂದಾಪುರ ಬಂದಿಲ್ಲವೆಂಬ ತವಕ. ಭಟ್ಕಳ ದಾಟಿ ಗಂಗೊಳ್ಳಿ ಜೀವನದಿಯ ಬ್ರಿಜ್ ದಾಟುತ್ತಿರಬೇಕಾದರೆ ಸ್ವಲ್ಪ ಸಮಾಧಾನ. ಮುಂದಡಿಯಿಟ್ಟು ಬೋರ್ಡನ್ನು ಕಂಡೊಡನೆ ಮನಸ್ಸಿನಲ್ಲಿ ಡಿಂಗ್ಚಾಕ್ ಡಿಚಾಕ್!!!ಡಿಂಗ್ಚಾಕ್ ಡಿಚಾಕ್!!!.

ಬೆಳಿಗ್ಗೆ ನಾಲ್ಕು ಘಂಟೆಗೆ ಕುಂದಾಪುರಕ್ಕೆ ತಲುಪಿದ ನಾನು  ರಿಕ್ಷಾದವರು ಬಲುಪ್ರೀತಿಯಿಂದ ಕರೆದರೂ ಹೋಗದೇ ತಂದೆಯ ಬರುವಿಕೆಗೆ ಕಾಯತೊಡಗಿದೆ.ಕನ್ನಡ-ಹಿಂದಿ-ಇಂಗ್ಲೀಷ್-ತುಳು-ತೆಲುಗು-ತಮಿಳು ಯಾವ ಭಾಷೆಯಲ್ಲಿ ಮಾತನಾಡಿದರೂ ಪರ ಊರಿನವರೆಂದು ಮೋಸ ಮಾಡುವ ಜಾಯಮಾನದವರಲ್ಲ ನಮ್ಮೂರಿನ ರಿಕ್ಷಾದವರು. ಎಲ್ಲೇ ಇರಲಿ ಮೊದಲೇ ದರ ಹೇಳುತ್ತಾರೆಅಲ್ಲಿಗಾರೆ ಇಷ್ಟ್ ಆತ್ತ ಕಾಣಿ ಮಾರ್ರೆ ಎಂದು. ಬೇರೆ ಊರಿನವರಾದರೂ ಸನ್ನೆ-ನಟನೆ-ಏಕಪಾತ್ರಾಭಿನಯ -ಮೂಕಾಭಿನಯ ಹರಕು ಭಾಷೆ ಏನಾದರೂ ಮಾಡಿ ಜಾಗಕ್ಕೆ ಹಣ ಎಷ್ಟಾಗುತ್ತದೆ ಎಂದು ಕರಾರುವಾಕ್ಕಾಗಿ ಹೇಳುವಷ್ಟು ಪ್ರತಿಭಾವಂತರು ಇವರು. ಯಾಕೆಂದರೆ ನಾವು ಬಟ್ಟೆ ಅಂಗಡಿ ಬಿಟ್ಟರೆ ಬೇರೆ ಎಲ್ಲೂಮೀಟರ್ ಬಳಸುವವರಲ್ಲ. ಅದಕ್ಕೆ ಪ್ರೀ ಪೇಯ್ಡ್ ಪದ್ಧತಿ. ಇಷ್ಟಲ್ಲದೆ ಲಗೇಜ್ ತುಂಬಾ ಇದ್ದರೆ ಅದನ್ನು ಲೋಡ್ ಮಾಡುವುದರಲ್ಲೂ ಸಹಾಯಹಸ್ತ ಚಾಚುವ ಉದಾರ ಮನೋಭಾವದವರು.ಹೀಗೆ ರಿಕ್ಷಾದಲ್ಲಿ ಒಬ್ಬೊಬ್ಬರೆ ಹೋಗುತ್ತಿರಲು ದೂರದಲ್ಲಿ ವೋಲ್ಟೇಜಿಗಾಗಿ ಪರಿತಪಿಸುತ್ತಿರುವ ಒಂದು ಸ್ಕೂಟರ ಹೆಡ್ ಲೈಟ್ ಕಾಣಿಸಿತು. ನನ್ನ ನಿರೀಕ್ಷೆಯನ್ನು ಹುಸಿಮಾಡದೆ ಸ್ಕೂಟರ್ ನಮ್ಮ ಶ್ಯಾನುಭೋಗರನ್ನು ಕರೆತಂದಿತು ಹಾಗೂ ಮನೆಯತ್ತ ನನ್ನ ಪ್ರಯಾಣ ಮೊದಲುಗೊಂಡಿತು.

ಕಳೆದ ಬಾರಿ ರಸ್ತೆಯಲ್ಲಿ ಹೋಗಿ ಮನೆಗೆ ತಲುಪುವಷ್ಟರಲ್ಲಿ ಶರೀರದ ಇನ್ನೂರ ಆರು ಮೂಳೆಗಳ ಸ್ಥಾನಪಲ್ಲಟವಾಗಿತ್ತು. ಅದನ್ನೇ ನೆನಪಿಸಿಕೊಂಡು ಅಮ್ಮನಿಗೆ ಫೊನ್ ಮಾಡಿ ಅಮೃತಾಂಜನ್ ಝಂಡುಬಾಮ್ ತೆಗೆದಿಡಲು ಹೇಳೋಣ ಎಂದುಕೊಂಡರೆ ನಾನು ನೋಡಿದ್ದೇನು ??
ಕಳೆದ ಬಾರಿ ರಸ್ತೆ ತುಂಬ ಹೊಂಡ ದಿಣ್ಣೆ ಹಳ್ಳ
ಈಗ ಆಗಿ ಇಹುದು ನೋಡಿ ಕತ್ರಿನಾಳ ಗಲ್ಲ||
ರಸ್ತೆ ಪಕ್ಕ ಇತ್ತು ಮೊದಲು ಹಚ್ಚ ಹಸಿರು  ಗದ್ದೆ
ಈಗ ಕಾರುಬಾರು ಕಾಂಕರೀಟು ಮನೆಗಳದ್ದೆ.

ಕುಂದಾಪುರ!!! ಬೆಂಗಳೂರಿನಿಂದ ೪೫೦ ಕಿಲೋಮೀಟರ್ ಮಂಗಳೂರಿನಿಂದ ನೂರು ಕಿಲೋಮೀಟರ್ ದೂರದಲ್ಲಿರುವ ಸುಂದರ ಕರಾವಳಿ ಪ್ರದೇಶ. ಕುಂದವರ್ಮನೆಂಬ ರಾಜ ಇಲ್ಲಿ ಆಳ್ವಿಕೆ ನಡೆಸಿದ್ದರಿಂದ ಊರಿಗೆ ಕುಂದಾಪುರವೆಂಬ ಹೆಸರು ಬಂದಿತೆಂದು ಒಂದು ಪ್ರತೀತಿಯಾದರೆ ಕುಂದೇಶ್ವರ ದೇವಾಲಯದಿಂದ ಹೆಸರು ಬಂದಿತೆಂದು ಇನ್ನು ಕೆಲವರ ಅಂಬೋಣ. ಶಿರೂರು ಉತ್ತರದ ಗಡಿಯಾದರೆ ದಕ್ಷಿಣದಲ್ಲಿ ತೆಕ್ಕಟ್ಟೆ. ಪೂರ್ವದಲ್ಲಿ ಬೆಳ್ವೆ-ಹೊಸಂಗಡಿ ತನಕ ನಮ್ಮ ಕುಂದಾಪುರ ಹಬ್ಬಿದ್ದರೆ ಪಶ್ಚಿಮದಲ್ಲಿ ಆಫ್ರಿಕಾದವರೆಗಿನ ಸಮುದ್ರ ನಮ್ಮದೇ.ಇಲ್ಲಿನವರ ಆಡುಭಾಷೆ "ಕುಂದಾಪುರ ಕನ್ನಡ" ತನ್ನದೇ ಆದ ವಿಶಿಷ್ಟ ಛಾಪನ್ನು ಹೊಂದಿದೆ.ಸಂಧಿ ಸಮಾಸ ಛಂದೋಪಾದಿಯಾಗಿ ಸಕಲ ವ್ಯಾಕರಣ ಬೀಜ ಮಾತ್ರೆಗಳನ್ನು ಕರತಲಾಮಲಕ ಮಾಡಿಕೊಂಡಿರುವ ಪ್ರಗಲ್ಫ ಪಂಡಿತರಿಗೂ ಬೆವರಿಳಿಸುವ ಭಾಷೆ ಇದು. ಅಂತಹ ಪಂಡಿತರು ಇಲ್ಲಿಗೆ ಬಂದಾಗ ಅವರ ಪ್ರತಿಭೆಗೆ ಮೆಚ್ಚಿ ನೀವು "ಮಹಾ ಸಮರ್ಥರಿದ್ದೀರಾ!!" ಎಂದು ಯಾರಾದರು ಕುಂದಾಪುರ ಕನ್ನಡದಲ್ಲಿ ಮೆಚ್ಚುಗೆಯ ಮಾತನ್ನಾಡಿದರೆ ಅವರಿಗೆ ಅದು "ನೀವು ಮಾಂಸ ಮಾರ್ತಿದ್ದೀರಾ ??? ಎಂದು ಕೇಳಿಸಿ ಸಿಟ್ಟು ಬಂದರೆ ಅಚ್ಚರಿಯೇನಿಲ್ಲ. ಹೀಗೆ ಗೊತ್ತಿಲ್ಲದವರು ಗತ್ತಿನಿಂದ ಮಾತನಾಡಲು ಹೋದರೆ ಅಭಾಸವಾಗಿ ಮರ್ಯಾದೆಗೆ ಕುತ್ತು ಬರುವುದು ಖಂಡಿತ.

ಕೆಲಕಾಲ ಹಿಂದೆ "ಇನ್ನೂ ನಗರದ ಹವೆ ತಟ್ಟಿಲ್ಲ"  ,"ಆಧುನಿಕ ಪ್ರಪಂಚದ ಬಿಸಿ ಮುಟ್ಟಿಲ್ಲ" ಎಂಬಂತ್ತಿದ್ದ ಕುಂದಾಪುರ ಕಳೆದ ಐದಾರು ವರ್ಷಗಳಲ್ಲಿ ಸಾಮಾಜಿಕವಾಗಿ,ಆರ್ಥಿಕವಾಗಿ,ಶೈಕ್ಷಣಿಕವಾಗಿ ವ್ಯಾಪಾರ ವಹಿವಾಟುಗಳಲ್ಲಿ ಭಾರೀ ಅಭಿವೃದ್ಧಿಯನ್ನು ಸಾಧಿಸಿದೆ.ತಾಲ್ಲೂಕು ಕೇಂದ್ರವಾಗಿರುವ ಇದು ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವೂ ಹೌದು. ಕಾರವಾರ ಭಟ್ಕಳ ಮಂಗಳೂರು ಸಿದ್ದಾಪುರ ಶಂಕರನಾರಾಯಣ ಮುಂತಾದ ದೂರದ ಪ್ರದೇಶದಿಂದ ಶನಿವಾರ ಸಂತೆಗೆಂದು ಬರುವ ವ್ಯಾಪಾರಿಗಳೇ ಇದಕ್ಕೆ ಸಾಕ್ಷಿ. ಸಂಜೆ ಹೊತ್ತಿನಲ್ಲಿ ಗಿಜಿಗುಟ್ಟುವ ಶಾಸ್ತ್ರಿ ಪಾರ್ಕು, ತಲೆ ಎತ್ತಿ ನಿಂತಿರುವ ಶೋರೂಮ್-ಶಾಪಿಂಗ್ ಮಾಲ್ ಗಳು ಅರೆಘಳಿಗೆಯೂ ಪುರುಸೊತ್ತಿಲ್ಲದ ಅಂಗಡಿಗಳು ತುಂಬಿ ಚಲಿಸುವ ಬಸ್ಸುಗಳು ಮುಂದುವರಿಯುತ್ತಿರುವ ಪ್ರಪಂಚದೊಂದಿಗೆ ಕುಂದಾಪುರವೂ ರಿದಂ ನಲ್ಲಿದೆ ಎಂಬ ಸತ್ಯವನ್ನು ಸಾರಿ ಹೇಳುತ್ತವೆ. ಸಾಮಾಜಿಕ ಪ್ರಗತಿಗೆ ಸಮಾನಾಂತರವಾಗಿ ಜನರ ಯೋಚನಾಲಹರಿಯಲ್ಲೂ ಬೆಳವಣಿಗೆ/ಬದಲಾವಣೆ ಕಾಣಿಸುತ್ತಿದೆ. ಕಾಲೇಜು ವ್ಯಾಸಂಗಕ್ಕೆ ಬರುವ ಹುಡುಗಿಯರು ಎನ್ನುವುದಕ್ಕಿಂತ ಅವರ ವಸ್ತ್ರ ವಿನ್ಯಾಸವೇ ಮಾನಸಿಕ ಬದಲಾವಣೆಗೆ ನಿದರ್ಶನ ಎನ್ನುವುದು ಹೆಚ್ಚು ಸಮಂಜಸ. ಸೊಂಟದ ಸುತ್ತಳತೆಗಿಂತ ಅರ್ಧ ಇಂಚು ಕಡಿಮೆ ಸುತ್ತಳತೆ ಇರುವ, ಡ್ರಾಗನ್-ಹಾವು-ಚೇಳು ಮುಂತಾದ ವಿಷಜಂತುಗಳ ಕಸೂತಿ ಹೊಂದಿರುವ ಜೀನ್ಸ್ ಪ್ಯಾಂಟ್ ಹಾಕಿರುವ ಎಲ್ ಕೆ ಜಿ ಪೋರನು ಮಾನಸಿಕ ಬದಲಾವಣೆಯ ಕೂಸಲ್ಲದೆ ಮತ್ತೇನು ??

ಹೀಗೆ ಭಾಷೆ ಜನರ ಜೀವನಕ್ರಮ ಎಲ್ಲದರಲ್ಲೂ ವೈವಿಧ್ಯ ಹೊಂದಿರುವ ಊರೇ ಕುಂದಾಪುರ. ಹಿಂದೂ - ಮುಸ್ಲಿಂ- ಕ್ರೈಸ್ತ ಎಲ್ಲ ಮತದ ಜನರನ್ನು ಹೊಂದಿರುವ ಎಲ್ಲರಲ್ಲೂ ಸಾಮರಸ್ಯ ಕಾಣಬಹುದಾದ ಊರು ಕುಂದಾಪುರ. ಆನೆಗುಡ್ಡೆ ವಿನಾಯಕ ಕೊಲ್ಲೂರು ಮೂಕಾಂಬಿಕೆ ಕೋಟಿಲಿಂಗೇಶ್ವರ ಮುಂತಾದ ದೇವರಿಂದ ಬೊಬ್ಬರ್ಯ ಜಟಕಾ ಹಾಯ್ಗುಳಿ ಮುಂತಾದ ದೈವಗಳಿಂದ ಅನುಗ್ರಹಿಸಲ್ಪಟ್ಟ, ಯೇಸು - ಅಲ್ಲಾ ಎಲ್ಲರಿಂದಲೂ ಆಶೀರ್ವಾದ ಪಡೆದಿರುವ ಪುಣ್ಯಭೂಮಿ ಕುಂದಾಪುರ.
                            
ಕೋಟಿಲಿಂಗ ಆನೆಗುಡ್ಡೆ ಕೋಟೆ ಆಂಜನೇಯ
ಕುಂದೇಶ್ವರ ಮೂಕಾಂಬಿಕೆ ವಿಠಲ ದತ್ತಾತ್ರೇಯ||
ಬೊಬ್ಬರ್ಯ ಕಲ್ಲುಕುಟಿಕ ಜಟಕಾ ಚರ್ಚು ದರ್ಗಾ
ಎಲ್ಲ ಇಲ್ಲೇ ಇರುವ ಇದುವೆ ಭೂಮಿಗಿಳಿದ ಸ್ವರ್ಗ||

ಮುಂದಿನ ಕೆಲವು ಲೇಖನಗಳಲ್ಲಿ ನಿಮಗೆ ಸ್ವರ್ಗದ ದರ್ಶನ ಮಾಡಿಸುತ್ತೇನೆ. ನಮ್ಮೂರ ಸವಿಬೆಲ್ಲದ ರುಚಿಯನ್ನು ಆಸ್ವಾದಿಸಲು ನೀವೂ ಬರುತ್ತೀರಿ ತಾನೇ?? ಒಬ್ಬ ಕುಂದಾಪುರದವನಾಗಿ ಸಮಸ್ತ ಕುಂದಾಪುರದ ಜನತೆಯ ಪರವಾಗಿ ನಿಮಗೆ ನಮ್ಮೂರಿಗೆ ತುಂಬು ಹೃದಯದ ಸ್ವಾಗತವನ್ನು ಕೋರುತ್ತೇನೆ.
"ನಿಮಗೆಲ್ಲರಿಗೂ  WELCOME TO KUNDAPUR"7 comments:

Avinash said...

ಲಾಯಕ್ಕಿತ್ತು ಮರ್ರೆ..............

PARAANJAPE K.N. said...

ಚಾಂಗ್ ಆಸ್ರೆ ?

Sumantha Shanubhag V said...

ಥ್ಯಾಂಕ್ಸ್ ಮಾಮ್ಮಾ

Sumantha Shanubhag V said...

@avinash

Thanks sir

PaLa said...

ಕುಂದಾಪ್ರ ಹತ್ರ ಇಪ್ಪು ಕುದ್ರುಗಳ ಬಗ್ಗೆ ಹೇಳ್ಲೇ ಇಲ್ಲ ಕಾಣಿ

Vishwanath said...

I had very cute and finest friend in Kundapura.

Vishwanath Belve said...

ಹೋಯ್ ಚಂದಾ ಮಾಡಿ ಬರ್ದಿರಿ ಮರ್ರೆ... ಪುರ್ಸೊತ್ ಇದ್ದಲ್ ಓದುಕ್ ಖುಷಿ ಆತ್