Skip to main content

ಸೌಂಡ್... ಆಕ್ಷನ್ .... ಕಟ್ ....!!!!!



ಏನೋ ರಾಶಿ !!!!!...................

ಅಶರೀರವಾಣಿ.................
ನನ್ನ ಗೆಳೆಯ ಕೂಗಿದಂತಾಯಿತು. ಸರಿಯಾಗಿ ಪೂರ್ತಿ ವಾಕ್ಯ ಕೇಳಿಸಲಿಲ್ಲ. ಒಂದು  ಕ್ಷಣ ಹುಚ್ಚು ಮನಸ್ಸು ಕಲ್ಪನೆಯ ಕುದುರೆಯ ಮೇಲೆ ಮೂರ್ಲೋಕ ಸಂಚಾರ ಮಾಡಿ ಬಂದರೂ ಮರುಕ್ಷಣವೇ ನನ್ನ ಕರ್ಣದ್ವಯಗಳ ಮೇಲೆ ಅನುಮಾನ ಬಂದಿತು. ಯಾವತ್ತೂ ನನ್ನ ಸ್ನೇಹಿತರ "ಎಷ್ಟು ಕೊರೀತೀಯೊ"!!!..........  " ಯಾಕೋ ನನ್ ಬಟ್ಟೆ ಹರೀತಿಯೋ????  " ದಮ್ಮಯ್ಯ..... ಬಿಟ್ ಬಿಡೊ!!!  " ಎಂಬಿತ್ಯಾದಿ ಪ್ರತಿಕ್ರಿಯೆಗಳಿಗೆ ಒಗ್ಗಿ ಹೊಗಿದ್ದ ಕಿವಿಗಳು ನನ್ನನ್ನು "ರಾಶಿ" (ಡಾ|| ಎಂ ಶಿವರಾಂ..... ಪ್ರಖ್ಯಾತ ಹಾಸ್ಯಬರಹಗಾರರು ) ಅವರಿಗೆ ಹೋಲಿಸಿದಾಗ ನನಗೆ ಬಂದ ಅನುಮಾನ ಸಹಜ. ಮತ್ತೊಮ್ಮೆ ದೃಢೀಕರಿಸಲು  " ಏನ್ ಹೇಳಿದೆಯೋ ಸುಬ್ಬೂ ...?? " ಎಂದು ಕೇಳಿದೆ. "ಅಲ್ವೋ ಆಫೀಸಲ್ಲಿ ಬಿಟ್ಟಿ ಸಿಗುತ್ತೆ ಅಂತ ಮನೆಗೆ ತೆಗೊಂಡು ಬಂದು ಕೆಲ್ಸಕ್ಕೆ ಬಾರದಿದ್ದೆಲ್ಲ ಗೀಚಿ ರಾಶಿ ಹಾಕಿದ್ಯಲ್ಲ ಈ ಖಾಲಿ ಪೇಪರು... ಇದನ್ನ ಕ್ಲೀನ್ ಮಾಡೋದಕ್ಕೆ ನಿಮ್ಮಜ್ಜ ಬರ್ತಾರಾ ?? ಎಂದಾಗ ಆ ಕಲ್ಪನೆಯ ಕುದುರೆಯ ಕಾಲಿನ ಕೀಲು ಮುರಿದು ದೊಪ್ಪೆಂದು ವಾಸ್ತವ ಲೋಕಕ್ಕೆ ಬಿದ್ದೆನು. "ಲೋ ಆ ಪೇಪರ್ ಎಲ್ಲ ಕಟ್ಟಿ ಗುಜರಿಯವನಿಗೆ ಮಾರಿದರೆ ಕೇಜಿಗೆ ಮೂರು ರೂಪಾಯಿ ಪ್ರಕಾರ ಒಂದು ಹದಿನೈದು ರೂಪಾಯಿ ಸಿಗುತ್ತೆ ....ಸಂಜೆ ಚಾ ಖರ್ಚಿಗೆ ಆಗುತ್ತೆ "  ಸುಬ್ಬು ಮುಂದುವರಿಸಿದ. ಉಕ್ಕಿ ಬಂದ ಸಿಟ್ಟಿನ ಹೆಡೆಮೆಟ್ಟಿ ನಿಂತು ತಾಳ್ಮೆಯಿಂದ " ಈವಾಗ ಆಡ್ಕೊಳ್ಳೊ...... ಒಂದು ದಿನ ಈ ಪೇಪರ್ ಮೇಲಿರುವ ಕಥೆಯ ಮೇಲೆ ಒಂದು ಸಿನೆಮಾ ಚಿತ್ರೀಕರಣವಾಗುತ್ತದಲ್ಲ ಆ ದಿನ ನಾನು ಮಾತಾಡ್ತೀನಿ...... ಎಂದು ಹೇಳಿದೆ. ಅಲ್ವೋ... ಮೊನ್ನೆ ಏನೋ ಡೈರೆಕ್ಟರ್ ಅವ್ರನ್ನ ಭೇಟಿ ಮಾಡ್ತೀನಿ ಅಂತ ಸೂರ್ಯ ಹುಟ್ಟೋಕೂ ಮುಂಚೆ ಎದ್ದು ಹೋಗಿದ್ಯಲ್ಲ ಏನಾಯ್ತು ?? ಎಂದು ಸುಬ್ಬು ಕೇಳಿದ. ಹ್ಮ್.... ನೀನೊಬ್ಬ ಉಳಿದಿದ್ದೆ ಸಮಾಧಾನ ಹೇಳೋದಕ್ಕೆ!!!  ಎಂದು ಆ ದಿನದ ಕಥೆ ಹೇಳಲಾರಂಭಿಸಿದೆ. ನೀವೂ ಕೇಳಿ.........

ಸುಮಾರು ಎರಡು ತಿಂಗಳು ಹಿಂದಿನ ವಿಷಯ. ಬೆನ್ನು ಬಿಡದ ಬೇತಾಳನಂತೆ ಹಿಂದೆ ಬಿದ್ದು ಟೆಲಿಫೊನ್ ಬೂತಿನ ಕಾಯಿನ್ ಬೋಕ್ಸ್ ಗೆ ನೂರಾರು ರುಪಾಯಿ ದಕ್ಷಿಣೆ ಹಾಕಿದ ಮೇಲೆ ಸಿನೆಮಾ ನಿರ್ದೇಶಕರೊಂದಿಗೆ ಅಪಾಯಿಂಟ್ಮೆಂಟ್ ಸಿಕ್ಕಿತು. ಗುರುವಾರ ಬೆಳಿಗ್ಗೆ ಹತ್ತೂವರೆಗೆ ಸ್ಟುಡಿಯೋ ಗೆ ಬರಲು ಹೇಳಿದ್ದರೆ ಬುಧವಾರ ಸಂಜೆಯಿಂದಲೇ ನನ್ನ ಎದೆಯಲ್ಲಿ ಅವಲಕ್ಕಿ ಕುಟ್ಟಲು ಆರಂಭ. ಮಗ್ಗುಲು ಬದಲಿಸುವುದರಲ್ಲೇ ಇಡೀ ರಾತ್ರಿ ಕಳೆದೆನು. ಗಡಿಯಾರದಲ್ಲಿ ಐದೂವರೆ ಕಂಡೊಡನೆ ಬಲ ಮಗ್ಗುಲಿಂದ ಎದ್ದು ಗೋಡೆಗೆ ನೇತಾಡುತ್ತಿದ್ದ ಪೇಟೆ ಆಂಜನೇಯನಿಗೆ ಮನದಲ್ಲೇ ನಮಸ್ಕರಿಸಿ ಹಾಸಿಗೆ ಬಿಟ್ಟೆನು. ಸ್ನಾನ-ಸಂಧ್ಯಾವಂದನೆ-ತಿಂಡಿ ಎಲ್ಲ ಮುಗಿಸಿ ಎಂಟೂವರೆಗೆ ಸ್ಟುಡಿಯೋ ತಲುಪಿದೆನು. ಅಲ್ಲಿದ್ದ ದಿನಪತ್ರಿಕೆಯನ್ನು ನಾಲ್ಕು ಬಾರಿ ತಿರುವಿ ಹಾಕಿದ ನಂತರ ಒಂಭತ್ತೂವರೆಗೆ ಒಬ್ಬಳು ಯುವತಿ ಬಂದಳು.ಅಲಂಕಾರ-ವೇಷ-ಭೂಷಣಗಳನ್ನು ನೋಡಿ ಯಾವುದೋ ಪೌರಾಣಿಕ ಚಿತ್ರದಲ್ಲಿ ಇವಳ ಪಾತ್ರ ಇರಬೇಕೆಂದುಕೊಂಡು  "ಏನಮ್ಮಾ ನಿನ್ನದು ಮೋಹಿನಿಯ ಪಾತ್ರಾನಾ ?? ಸರಿಯಾಗಿ ಒಪ್ಪುತ್ತಮ್ಮಾ ನಿನಗೆ ಎಂದೆನು. ರೀ ಮಿಸ್ಟರ್ .... ನಾನು ನಟಿಸಲು ಬಂದಿಲ್ಲ .ನಾನು ಇಲ್ಲಿ ರಿಸೆಪ್ಷನಿಸ್ಟು ನೀವು ಯಾರು ?? ಎಂದು ಕೇಳಿದಳು. ಇವತ್ತು ಹತ್ತೂವರೆಗೆ ಡೈರೆಕ್ಟರ್ ಜೊತೆಗೆ ನನ್ನ ಮೀಟಿಂಗ್ ಇದೆ ಎಂದೆನು.ಹತ್ತೂವರೆಗೆ ಕರೆದ್ರೆ ಒಂಭತ್ತಕ್ಕೆ ಬಂದು ಕೂತಿದ್ದೀರ.. ಎಂಟು ಗಂಟೆಗೆ ಕರೆದಿದ್ರೆ ರಾತ್ರಿ ಇಲ್ಲೇ ಚಾಪೆ ಹಾಸಿ ಮಲಗ್ತಿದ್ರೊ ಎನೋ.... ಹ್ಮ್ .....ಸರಿ ಕೂತ್ಕೊಳ್ಳಿ ಎಂದಳು.

ಪ್ರತಿ ನಿಮಿಷವೂ ದಿನವಾದಂತೆ ಭಾಸವಾಗುತ್ತಿತ್ತು. ಹೊರಗಡೆ ಹೋಗೋಣವೆಂದರೆ ಹೊಟ್ಟೆಯಲ್ಲಿ ಅದೇನೋ ತಳಮಳ.ಡೈರೆಕ್ಟರ್ ಏನೇನು ಪ್ರಶ್ನೆ ಕೇಳಬಹುದು ಅದಕ್ಕೆ ಏನು ಉತ್ತರ ಕೊಡುವುದು ಎಂದು ಗುಣಾಕಾರ ಹಾಕುತ್ತ ಕೂತೆ. ಈ ನಡುವೆ  ನಮ್ಮ ನಿರ್ದೇಶಕರು ಎಲ್ಲಾದರೂ ತನಗೆ ನಾಯಕಿಯ ಪಾತ್ರ ಕೊಟ್ಟಾರೆಂಬ ಆಶಯದಿಂದ ಹತ್ತು ನಿಮಿಷಕ್ಕೆ ಒಂದರಂತೆ ನಮ್ಮ "ಮೋಹಿನಿಯ" ಲಿಪ್ ಸ್ಟಿಕ್ಕು ಹಚ್ಚುವ ಕಾರ್ಯಕ್ರಮ ಭರದಿಂದ ಸಾಗಿತ್ತು. ಕೈವಾರ ಕೋನಮಾಪಕ ಬಿಟ್ಟು ಉಳಿದ ಎಲ್ಲ ರೇಖಾಗಣಿತದ ಉಪಕರಣಗಳು ಆಕೆಯ ಮಾಯಾಚೀಲದಲ್ಲಿತ್ತು. ಪೆನ್ಸಿಲ್ಲಿನಿಂದ ರೆಪ್ಪೆಯ ಹತ್ತಿರ ಅದೇನೊ ಗೀಚಿಕೊಂಡಳು.ತಪ್ಪಾಯಿತೆಂದು ಕಾಣುತ್ತದೆ  ಉಜ್ಜಿಕೊಂಡಳು. ಇದ್ದ ಒಂದಿಂಚಿನ ಕನ್ನಡಿಯಿಂದ "ಇಂಟಿಗ್ರೇಶನ್ ಬೈ ಪಾರ್ಟ್ಸ್ " ಮಾಡಿದಂತೆ ಹಂತ ಹಂತವಾಗಿ ಕಣ್ಣು - ಕಿವಿ - ಮೂಗು ಎಲ್ಲಾ ನೊಡಿಕೊಂಡಳು. ಗಂಟೆ ಹನ್ನೊಂದಾಯಿತು ನಮ್ಮ ನಿರ್ದೇಶಕರ ಆಗಮನವಾಗಲಿಲ್ಲ. ಸುಮಾರು ಹನ್ನೊಂದುವರೆಗೆ ಬಂದರು. ಅವರದ್ದು ಎದ್ದು ಕಾಣುವ ವ್ಯಕ್ತಿತ್ವ ಎಂದು ಕಂಡೊಡನೆ ತಿಳಿಯಿತು. ಅಮ್ಮೋ...... ಪಾಪ ಅವರಿಗೆ "ಎದೆ" ಎಂಬ ಪೊರ್ಶನ್ ಇರಲೇ ಇಲ್ಲ ಕುತ್ತಿಗೆ ಮುಗಿದ ಕೂಡಲೆ ಹೊಟ್ಟೆ ಶುರು ಆಗಿತ್ತು. ಲಕ್ಷ ಜನರ ನಡುವೆಯೂ ಎದ್ದು ಕಾಣುತ್ತಿದ್ದರು. ನವಗ್ರಹ- ಅಷ್ಟ ದಿಕ್ಪಾಲಕ - ತ್ರಿಮೂರ್ತಿ ಎಲ್ಲರ ಅನುಗ್ರಹಕ್ಕೊಸ್ಕರ ಹತ್ತು ಬೆರಳಿನಲ್ಲಿ  ಛಪ್ಪನ್ನೈವತ್ತಾರು ಉಂಗುರಗಳು . ಬಂದು ಇನ್ ಕಮ್ಮಿಂಗು - ಔಟ್ ಗೊಯಿಂಗು - ಮಿಸ್ಸೆಡ್ ಕಾಲ್ - ಮೆಸೇಜು ಎಲ್ಲದರ ಬಗ್ಗೆ ರಿಸೆಪ್ಷನಿಸ್ಟ್ ಳಿಂದ ತಿಳಿದುಕೊಂಡು ಹನ್ನೆರಡಕ್ಕೆ ನನ್ನನ್ನು ಕರೆದರು.

ಏನಪ್ಪಾ..... ಯಾರು ನೀನು ಏಕೆ ಬಂದಿದ್ದೀಯಾ ?? ಎಂದು ಕೇಳಿದರು. ಸಾರ್ ನನ್ನ ಹೆಸರು ಸುಮಂತ . ಎಂ. ಎ ಓದಿದ್ದೀನಿ  ಕನ್ನಡ ಮೇಜರ್ . ಒಬ್ಬ ಲೇಖಕ ಸರ್ ನಾನು. ನಿಮ್ಮ ಯಾವುದಾದರೂ ಒಂದು ಸಿನೆಮಾದಲ್ಲಿ ಒಂದು ಅವಕಾಶ ಕೊಡಬೇಕು. ಡೈಲಾಗು,ಕವನ, ಏನ್ ಬೇಕಾದ್ರೂ ಬರೀತೀನಿ ಸರ್..... ನೋಡಿ ನಾನು ಬರೆದಿರೋ ಲೇಖನಗಳು ಎಂದು ನನ್ನ ಲೇಖನಗಳ ಫ಼ೈಲ್ ಅವರ ಮುಂದಿಟ್ಟೆ. ಪುಟ್ಟಾ... ಈ ಸಣ್ಣ ಪುಟ್ಟ ಲೇಖನ ಎಲ್ಲ ಬದಿಗಿಡು. ಈಗಿನ್ ಕಾಲದಲ್ಲಿ ಎಮ್ಮೆಗಳೂ  ಎಂ.ಎ ಮಾಡುತ್ತಾವೆ ಅದೇನೂ ದೊಡ್ಡದಲ್ಲ. ನಿನ್ನಲ್ಲಿ ಅಂಥಾದ್ದೆನು ವಿಶೇಷ ?? ನೀನು ಒಳ್ಳೆಯ ಲೇಖಕ ಅಂಥ ಹೇಗಯ್ಯ ನಂಬಲಿ ?? ಏನು ಪ್ರೂಫ಼ು?? ಎಂದು ಕೇಳಿದರು. ನಾನು ತಲೆ ತಗ್ಗಿಸಿದೆ. " ಯಾಕ್ಲಾ ?? ಇಷ್ಟಕ್ಕೆ ತಲೆ ತಗ್ಗಿಸಿದ್ಯಾ ?? ಎಂದರು. ನಾನು "ಅದಲ್ಲ ಸರ್... ಇಲ್ಲಿ ನೊಡಿ ನನ್ನ ತಲೆ.... ಒಂದಾದ್ರೂ ಕೂದ್ಲು ಇದೆಯಾ ?? ಇಪ್ಪತ್ನಾಲ್ಕು ಸರ್ ನನ್ನ ಪ್ರಾಯ.... ಇಷ್ಟು ಬೇಗ ಹೀಗಾಗಿದೆ ಅಂದರೆ ನಾನು ಬುದ್ದಿಜೀವಿ ಅಲ್ವಾ ಸರ್?? ಒಂದು ಅವಕಾಶ ಕೊಟ್ಟು ನೊಡಿ ಸರ್.. ತುಂಬಾ ಕಷ್ಟಪಟ್ಟು ಕೆಲಸ ಮಾಡ್ತೀನಿ ಸರ್ .... ಬೇಕಾದ್ರೆ ಈಗ್ಲೆ ಪರೀಕ್ಷೆ ಮಾಡಿ ಸರ್ ಎಂದೆನು.

ಸರೀನಪ್ಪಾ... ನಿನಗೆ ಒಂದು ಸಂದರ್ಭ ಹೇಳ್ತೀನಿ ಅದಕ್ಕೆ ಸರಿಯಾಗಿ ಡೈಲಾಗ್ ಬರ್ದು ತೊರಿಸು ನೋಡೋಣ ಎಂದು ..... ನೋಡು ನೀನು ಮದ್ವೆ ಮಾಡ್ಕೊಬೇಕು ಅಂದುಕೊಂಡಿರೋ ಹುಡುಗೀನ ವಿಲ್ಲನ್ ಕಿಡ್ನಾಪ್ ಮಾಡಿ ಎಲ್ಲೋ ಅಡಗಿಸಿ ಇಟ್ಟಿದ್ದಾನೆ. ಆ ವಿಲ್ಲನ್ ನಿನಗೆ ಹೆದರಿಸುತ್ತಿರಬೇಕಾದರೆ  ಯಾವುದೇ ಪರಿಸ್ಥಿತಿಯಲ್ಲೂ ನಾಳೆಯೊಳಗೆ ನೀನು ಅವಳನ್ನು ಪತ್ತೆ ಹಚ್ಚಿ ಕರೆದುಕೊಂಡು ಹೊಗುತ್ತೇನೆ ಎಂದು ಹೇಳಬೇಕು. ಬರಿಯಪ್ಪಾ ಸಂಭಾಷಣೆ ಎಂದರು. ನಾನು ಇದರಲ್ಲಿ ಪ್ರೀತಿ ರೋಷ ಸಾಹಸ ಇದೆಲ್ಲ ರಸಗಳಿರಬೇಕು ಎಂದುಕೊಂಡು ಪ್ರಣಯರಾಜ ಶ್ರೀನಾಥ್, ಸಾಹಸಸಿಂಹ ವಿಷ್ಣುವರ್ಧನ್, ಬಬ್ರುವಾಹನದ ರಾಜ್ ಕುಮಾರ್ ಎಲ್ಲರನ್ನೂ ನನ್ನೊಳಗೆ ಆವಾಹನಿಸಿಕೊಂಡು.... "ಎಲೈ ದುಷ್ಟಾ....  ನನ್ನ ಉಸಿರಿನಲ್ಲಿ ಉಸಿರಾಗಿರುವ ನನ್ನ ಪ್ರೀತಿಯನ್ನು ನೀನು ಕಾಲಗರ್ಭದಲ್ಲೆ ಅಡಗಿಸಿಟ್ಟಿರು. ನಾಳೆ ಸೂರ್ಯಾಸ್ತದೊಳಗೆ ಅವಳನ್ನು ನಿನ್ನ ಕಪಿಮುಷ್ಟಿಯಿಂದ ಬಿಡಿಸಿ ಕರೆದೊಯ್ಯುತ್ತೇನೆ. ಸುರಾಸುರ ಯಕ್ಷ ಗಂಧರ್ವರೆ ಇದಕ್ಕೆ ಅಡ್ಡ ಬಂದರೂ ಎಲ್ಲರ ಹುಟ್ಟಡಗಿಸಿ ನಿನ್ನ ಅಟ್ಟಹಾಸವನ್ನು ಮೆಟ್ಟಿ ನಿಲ್ಲುತ್ತೇನೆ . ಇದಕ್ಕೆ ಆ ಅಷ್ಟದಿಕ್ಪಾಲಕರೇ ಸಾಕ್ಷಿ " ಎಂದು ಹೇಳಿದೆನು.

ಐದು ನಿಮಿಷ ದಿಟ್ಟಿಸಿ ನೋಡಿದರು. ನೀನು ಒಂದು ಇಪ್ಪತ್ತೈದು ವರ್ಷ ಮೊದಲು ಹುಟ್ಟಿದ್ರೆ ಇವತ್ತು ಎಲ್ಲೋ ಇರ್ತಿದ್ದೆ. ನಿಮ್ಮಜ್ಜ ನಮ್ಮಜ್ಜ ಎಲ್ಲ ಈ ಡೈಲೊಗ್ ಕೇಳಿ ಶಿಳ್ಳೆ ಹೊಡೀತಿದ್ರು. ಏನೋ ಇದು ?? ಒಂದು ಪಿಕ್ಚರನ್ನ ಎರಡೂವರೆ ಗಂಟೆಯಲ್ಲಿ ಮುಗಿಸಬೇಕು ಗೊತ್ತ ?? ಹುಡುಗೀನ ಕರೆದುಕೊಂಡು ಹೊಗ್ತೀನಿ ಅನ್ನೋದನ್ನ ಹೇಳೊದಕ್ಕೆ ಇಷ್ಟು ದೊಡ್ಡ ಡೈಲೊಗಾ ?? ನಿನ್ನ ಡೈಲೊಗ್ ಐದು ನಿಮಿಷ, ಅದಕ್ಕೆ ನಮ್ಮ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಎರಡು ನಿಮಿಷ ಒಟ್ಟೂ ಏಳು ನಿಮಿಷ. ಹೀಗಾದ್ರೆ ಸಿನೆಮಾ ಮುಗಿಯೊದಿಕ್ಕೆ ಒಂದು ಸಪ್ತಾಹ ತೆಗೊಳ್ಳೊತ್ತೆ. ಅಷ್ಟೆ ಅಲ್ಲ ನೀನು ಸೂರ್ಯೋದಯ ಸೂರ್ಯಾಸ್ತ ಅಂತ ಜ್ಯೋತಿಷ್ಯ ಮಾತಾಡಿದ್ರೆ ಅದನ್ನ ಕಂಡು ಹಿಡಿದು ನೀನು ಯಾವಾಗ ಬರ್ತೀಯಾ ಅಂತ ತಿಳಿಯೊಕ್ಕೆ ಆ ವಿಲ್ಲನ್ ಏನು ಪಂಚಾಂಗ ಕಂಕುಳಲ್ಲಿ ಇಟ್ಕೊಂಡು ತಿರುಗುತ್ತಾನಾ ?? ಇಂಥಾ ಹೈ - ಫ಼ೈ ಶಬ್ದ ಈಗಿನ ಯುವಜನತೆಗೆ ಅರ್ಥ ಆಗಲ್ಲ ಹಿಡಿಸೋದೂ ಇಲ್ಲ. ಏನೇ ಇದ್ರೂ  STRAIGHT-FORWARD ಆಗಿ ಹೇಳ್ಬೇಕು. ನೋಡು ಈಗ ನಾನು ಹೇಳ್ತೀನಿ ಹ್ಮ್.... ಎಂದು ಸ್ವಲ್ಪ ಯೋಚಿಸಿ  ಹಾ.. ಅದನ್ನೇ "ಏಯ್ ನಾಳೆ ಸಂಜೆ ಐದುವರೆಗೆ ನನ್ ಡವ್ವನ್ನ ನಾನು ಎತ್ತಾಕ್ಕೊಂಡು ಹೊಗ್ತೀನಿ ಅದೇನ್ ಕಿಸೀತಿಯೊ ಕಿಸಿ " ಎಂದು ಬರೆದ್ರೆ SHORT and SWEET ಆಗಿರಲ್ವಾ ?? ಹಾ... ಆ ಡೈಲೊಗ್ ನ ಪಂಚ್ ಕೂಡ ಗಮನಿಸು ..... YOUNG GENERATION LIKES IT u KNOW.... ಎಂದರು. ನನಗೊ ನಾನು ಉಲ್ಲೇಖಿಸಿದ ಸುರಾಸುರ ಗಂಧರ್ವ ದಿಕ್ಪಾಲಕರೆಲ್ಲರೂ ಒಮ್ಮೆಲೇ ಎದೆಗೆ ಒದ್ದಂತಾಯಿತು . ಸ್ವಲ್ಪ ಹೊತ್ತಿನ ನಂತರ ಅವರು ನನ್ನ ಫ಼ೈಲ್ ನೋಡುತ್ತಾ  ಹ್ಮ್... ಕವನ ಏನೋ ಸ್ವಲ್ಪ ಚೆನ್ನಾಗಿ ಬರೆದಿದ್ದೀಯ... ಅಲ್ಲಿ ಸೀದಾ ಹೋದ್ರೆ ನಮ್ಮ ಮ್ಯೂಸಿಕ್ ಡೈರೆಕ್ಟರ್ ಮತ್ತು ಲಿರಿಸಿಸ್ಟ್ ಇದ್ದಾರೆ ಅವ್ರನ್ನ ಒಮ್ಮೆ ಮಾತಾಡಿಸಿ ಹೋಗು ಎಂದರು.

ಅಲ್ಲೇನು ಕಾದಿದೆಯೊ ನೋಡಿಯೇ ಬಿಡೋಣ ಎಂದು ಅವರ ಬಳಿ ಹೋಗಿ ಬಂದ ವಿಷಯ ಪ್ರಸ್ತಾಪಿಸಿದೆ. ಅವರೂ ನನ್ನ ಕವನಗಳನ್ನು ನೋಡಿ ಆ ಲಿರಿಸಿಸ್ಟ್ , " ಸರೀನಪ್ಪ.... ಸಿನೆಮಾ ಅಂದರೆ ಮನಸ್ಸಿಗೆ ಬಂದ ಕವನ ಹಾಕಲು ಆಗಲ್ಲ. ಅದಕ್ಕೊಂದು ಕಥೆ ಇರುತ್ತೆ ಆ ಕಥೆಗೆ ತಕ್ಕಂತೆ ಪದ್ಯ ಬರೆದು ಆಮೇಲೆ ಹಾಡಬೇಕು " ಎಂದರು.ಸರಿ ಸರ್ ನೀವು SITUATION ಹೇಳಿ ಸರ್ ಅದಕ್ಕೆ ತಕ್ಕ ಹಾಗೆ ಪ್ರೇಮಗೀತೆ ಶೋಕಗೀತೆ ಏನು ಬೇಕಾದ್ರೂ ಬರೀತಿನಿ ಸರ್ ಎಂದೆನು. ಸರಿ ನಿನಗೂ ನಿನ್ನ ಲವ್ವರ್ ಗೂ ಜಗಳ ಆಗಿದೆ ನೀವಿಬ್ರೂ ಪರಸ್ಪರ ಮಾತನಾಡುತ್ತಿಲ್ಲ. ಈಗ ನೀನು ಈಗ ಅವಳನ್ನು ರಮಿಸಬೇಕು..... ಬರಿ ಪದ್ಯ ಎಂದರು. ಎನ್ಸಾರ್ ... ಈಗಿಂದೀಗ್ಲೆ ಬರಿ ಅಂದ್ರೆ ಹೇಗೆ?? ಸ್ವಲ್ಪ ಟೈಮ್ ಕೊಡಿ ಸರ್ ಎಂದೆನು. ಹ್ಮ್ .. ಹತ್ತು ನಿಮಿಷ ಕೊಟ್ಟಿದ್ದೀನಿ... ಇಲ್ಲೇ ಇರು ಬರ್ತೀನಿ ಎಂದು "ಏಯ್ ಚಂದ್ರು ಚಾ ಕುಡಿಯೋಣ " ಎಂದು ಹೊರಗೆ ಹೋದರು.

ನಾನು ಇಲ್ಲಿ ಯೋಚಿಸತೊಡಗಿದೆ. ಬೆಳಿಗ್ಗೆ ರೇಡಿಯೊದಲ್ಲಿ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ.... ನಿಂತು ಸೋತೆ.....
ಸೋತು ಕವಿಯಾಗಿ ಕವಿತೆ ಹಾಡಿದೆ.
 ಈ ಹಾಡನ್ನು ಕೇಳಿ ವಾಹ್!!!!!ಎಂಥಾ ಅದ್ಭುತ ಕಲ್ಪನೆ ಎಂದು ಆ ಹಾಡಿಗೆ ಮನಸೋತಿದ್ದೆ. ಅದೇ ಧಾಟಿಯಲ್ಲಿ

ತಂಗಾಳಿಯಂತೆ ಎದೆಗೆ ತಂಪೆರೆಯುತಿದ್ದೆ
ಬಿರುಗಾಳಿಯಾಗಿ ಯಾಕೆ ಹೃದಯ ಛಿದ್ರ ಮಾಡಿದೆ ??
ಉರಿಬಿಸಿಲಿನಂತೆ ಸುಡದಿರು ನನ್ನುಸಿರೆ
ನನ್ನೆದೆಯಲಿ ಕೆತ್ತಿಹೆನು ನಿನ್ನಯಾ ಹೆಸರೇ
ಬೆಳದಿಂಗಳಾಗಿ ಬಂದು ಮನದಂಗಳದಿ ನೆಲೆಸು
ವಿರಹದಿ ಬೇಯುತಿಹ ನನ್ನ ಪ್ರಾಣವನು ಉಳಿಸು.....
.
ಎಂದು ಬರೆಯುವಷ್ಟರಲ್ಲಿ ಅವರು ವಾಪಾಸ್ ಬಂದರು. ನೋಡಿ ಸರ್... ಎಂದು ತೋರಿಸಿದೆ. ಓದಿದರು. ಏನೋ ಜೋಗುಳ ಬರ್ದಿದ್ದೀಯಾ ?? ಪಿಕ್ಚರ್ ನೋಡೋಕ್ಕೆ ಬಂದವರು ಹಾಗೆ ನಿದ್ದೆ ಮಾಡಿ ಬಿಡ್ತಾರೆ. ಅಲ್ಲ... ಈ ಸಾಲುಗಳಿಗೆ ಮ್ಯೂಸಿಕ್ ಕಂಪೊಸ್ ಹೇಗೊ ಮಾಡೋದು ?? ಬರೀ ಪಿಟೀಲು ಮತ್ತು  ಹಾರ್ಮೊನಿಯಮ್ ಬಾರಿಸ್ಬೇಕು. ಈಗ Distortion guitar , 3D sound effect ಇಲ್ಲದ ಹಾಡು ಯಾರಾದ್ರೂ ಕೇಳ್ತಾರಾ ?? ಎಂದರು. ಸರ್ ಹಾಗಂತ ಭಾವನೆಗಳನ್ನು ಬಲಿ ಕೊಟ್ಟು ಬರೀ TUNE ಗಾಗಿ ಮಾತ್ರ  ಹಾಡು ಬರೆದ್ರೆ ಅದು ಮೋಸ ಅಲ್ವ ಸರ್ ?? ಎಂದೆನು. ಹ್ಹಹ್ಹ.. ಅದು ಹಾಗಲ್ಲ ಪುಟ್ಟ... ಭಾವನೆಗಳೂ ಬರಬೇಕು ಆದ್ರೆ ಇದೆಲ್ಲ ಮೊಡರ್ನ್ ಸ್ಟೈಲ್ ನಲ್ಲಿ .... ಹಾಡಲ್ಲಿ ಒಂದು ಕಿಕ್ ಇರ್ಬೇಕು.... ಎಂದರು. ಇಂತಾ ವಿರಹ ವೇದನೆಯ ಸಂದರ್ಭದಲ್ಲಿ ಬರುವ ಹಾಡಿನಲ್ಲಿ ಮನದ ಭಾವನೆಗಳನ್ನು ಹೇಳುವಾಗ ಕಿಕ್ಕು- ಪಂಚು ಎಲ್ಲ ಹೇಗೆ ಬರುತ್ತೆ ಸರ್ ನೀವೇ ಹೇಳಿ ಎಂದೆನು. ಅದನ್ನೇ ಕಣೊ ಅನುಭವ ಅನ್ನೋದು!!!!!  ಈಗ ನಾನು ಪದ್ಯ ಬರೀತೀನಿ ನೋಡು SAME SITUATION SAME CONTEXT... ಹೇಗೆ ಪಂಚು ಬರುತ್ತೆ ನೋಡು ಎಂದು ...

SHAKE SHAKE SHAKE BABY
ಸಿಟ್ಟು-ನಖರಾ ಎಲ್ಲ ಯಾಕೆ ??
ಓಡಿ ಬಂದು ನನ್ನನಪ್ಪಿ
ಲಿಪ್ಪಿನಿಂದ ಕೊಡೆ ಪಪ್ಪಿ...............

ಎಂದು ಹಾಡಿದರು. ಇಷ್ಟಲ್ಲದೆ ಇದಕ್ಕೆ ಆ ಮ್ಯೂಸಿಕ್ ಡೈರೆಕ್ಟರ್ ನ "ಲಕಚಿಕಪಕಚಿಕ ..... ಯೋ.... ಯೋ.. ಯೋ.. " ಎಂಬಿತ್ಯಾದಿ ಸೌಂಡ್ ಎಫ಼ೆಕ್ಟು ಶುರುವಾಯಿತು. ಕೇಳಿದ ನನಗೆ ಮೂರ್ಛೆ ತಪ್ಪಿತೋ , ತಲೆ ತಿರುಗಿತೊ,ಬಾಯೊಣಗಿತೊ ಗೊತ್ತಿಲ್ಲ ಮುಂದಿನ ಐದು ನಿಮಿಷ ನಾನು ಈ ಲೋಕದಲ್ಲಿರಲಿಲ್ಲ . ಆಮೇಲೆ ಸುಧಾರಿಸಿಕೊಂಡು ಎದ್ದು ಸರೀ ಸರ್..... ಬರ್ತೀನಿ....ನಾನು ಕಲಿಯೋದು ಇನ್ನು ತುಂಬಾ ಇದೆ... ಎಂದು ಹೇಳಿ ಎಲ್ಲರಿಗೂ ಸಾಷ್ಟಾಂಗ ನಮಸ್ಕಾರ ಹಾಕಿ 420 ನಂಬ್ರದ ಬಸ್ ಹತ್ತಿ ಮನೆಗೆ ಬಂದು ಮುಸುಕು ಹಾಕಿಕೊಂಡು ಮಲಗಿದೆನು.
==================================ವಿಕಟಕವಿ======================

Comments

ಹ್ಹ...ಹ್ಹ..ಹ್ಹಾ...
ಈ ಸಿನಿಮಾ ಹಾಡುಗಳ ಸ೦ಸ್ಕಾರದಿ೦ದ ಯಾವ್ಯಾವ ರೀತಿಯಲ್ಲಿ ಏನೇನಾಗುತ್ತೆ ಅನ್ನುವ ಬಗ್ಗೆ ಕೆಲವು ದಿನಗಳ ಮೊದಲು ನಾನೂ೦ದು ಲೇಖನ ಬರೆದಿದ್ದೆ ನನ್ನ ಬ್ಲಾಗ್ ನಲ್ಲಿ. ಸಮಯವಿದ್ದಾಗ ಭೇಟಿ ಕೊಡಿ.

ನಿಮ್ಮ ಛ೦ದಸ್ಸು, ಷಟ್ಪದಿ ಯಾರು ಕೇಳುತ್ತಾರೆ.ಮತ್ತು ಯಾರಿಗೆ ಗೊತ್ತಾಗುತ್ತೆ...?
ಈಗೆಲ್ಲಾ ಕಾಲ್ಬದ್ಲ್ಲಾಗಿದೆ.[ಎಡಗಾಲು ಬಲ್ಗಾಲು... ಬಲಗಾಲು ಎಡ್ಗಾಲಾಗಿ.....! ]
ಧನ್ಯವಾದಗಳು
ಕೇಳಲು ಯೋಗ್ಯ ಹಾಡುಗಳು ಅಲ್ಲೊಂದು ಇಲ್ಲೊಂದು ಸಿಗುತ್ತೆ ಅಷ್ಟೇ
ಹಾಡಿಗೊಂದು ಅರ್ಥ ಇರಲ್ಲ ಬರೀ ಬೀಟ್ಸು ಸೌಂಡ್ ಎಫ್ಫೆಕ್ಟು :):)

Popular posts from this blog

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಪಟ್ ಪಟ್ ಪಟಾಕಿ !!!

1)ಶರ್ಟಿಗೆ ಎರಡು ಮೀಟರ್ ಬಟ್ಟೆ ಯಾಕ್ರಿ ?? ಪಕ್ಕದ ಓಣಿ ಟೈಲರ್ ಒಂದೂವರೆ ಮೀಟರ್ ಸಾಕು ಎಂದ !!! ಎಂದು ಟೈಲರ್ ನನ್ನು ದಬಾಯಿಸಿದಾಗ ಅವರು ಹೇಳಿದ್ದು ಸರಿ ಆದರೆ ಅವರ ಮಗ ಎರಡನೇ ಕ್ಲಾಸ್ ನನ್ನ ಮಗ ಎಂಟನೆ ಕ್ಲಾಸ್ ಎಂದು ಟೈಲರ್ ಶಾಂತವಾಗಿ ಉತ್ತರಿಸಿದನು. 2)ನಿನಗೋಸ್ಕರ ಚಂದ್ರ - ತಾರೆ - ಚುಕ್ಕೆಗಳನ್ನು ಹೆಕ್ಕಿ ತರಲೇ?? ಎಂದ ಪ್ರಿಯತಮನಿಗೆ "ಅದೆಲ್ಲಾ ಬೇಡಾ  ಮಾರಾಯ ಬಾಯಾರಿಕೆ ಆತಿತ್ತ ಒಂದ್ ಬೊಂಡ (ಎಳನೀರು) ತೆಗೆದುಕೊಡು" ಎಂದಾಗ ಅವನು  "ಮರ ಸುಮಾರು ದೊಡ್ದುಂಟು ಮಾರಾಯ್ತಿ !!!!" ಎಂದು ತಬ್ಬಿಬ್ಬಾದನು. 3)ಸರಸದಲ್ಲಿರಲು ಏನೋ ತಮಾಷೆಗೆ  ನಾನು  "You are so Sweet" ಎಂದು ಹೇಳಿದ್ದನ್ನೇ ನನ್ನ ಶಾಂತಿ ಸೀರಿಯಸ್ಸಾಗಿ ತೆಗೆದುಕೊಂಡು ತಾನು ಕುಳಿತ ಜಾಗದ ಸುತ್ತ ಡಿಡಿಟಿಯ ರಂಗೋಲಿ ಹಾಕಿಕೊಂಡಳು. 4)ಕನ್ನಡದಿಂದ - ಚೈನೀಸ್ ಅನುವಾದ ಭಾಷೆಯ ಪುಸ್ತಕದಿಂದ ಉರು ಹೊಡೆದು ಬೀಜಿಂಗ್ ನ ತರಕಾರಿ ಮಾರುಕಟ್ಟೆಗೆ ಹೋಗಿ "ಸ್ಯಾನ್ ವೊಕ್ಯೊಸ್ಜ್  2kg" ಎಂದು ಕೇಳಿದೊಡನೆ "ಏಯ್ ಮಾಣಿ ಎರ್ಡ್ ಕೇಜೀ ಗುಂಬ್ಳಕಾಯಿ ತೆಕಬಾರಾ " ಎಂದು ಅಂಗಡಿಯ ಮಾಲಿಕನಾದ ಕುಂದಾಪುರದ ಶೀನಣ್ಣ ಬೊಬ್ಬೆ ಹೊಡೆದನು. 5)ಯಕ್ಷಗಾನ ದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾಗ ಅಭ್ಯಾಸಬಲದಿಂದ "ದುಷ್ಟಾ.. ನಿನ್ನ ಎರಡೂ ಕೈಗಳನ್ನು CUT ಮಾಡಿಬಿಡುತ್ತೇನೆ ಎಂದು ಅಬ್ಬರಿಸಿದ ಪಾತ್ರಧಾರಿಗೆ ತಾನು ಆಂಗ್ಲ ಭಾಷಾಪ್ರಯೋಗ ...

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...