Skip to main content

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ?
ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ

ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ
"ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು .


ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ . ರಾಮರಾಜ್ಯದಲ್ಲಿ ಇದು ನ್ಯಾಯವೇ ?? ಎಂದು ಕೇಳಿದಾಗ ರಾಮ ಹೇಳಿದ "ಎಲೈ ಸಂಜೀವಿನಿಯೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ ತಮ್ಮನ ಪ್ರಾಣ ಉಳಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ ಎಂದು ಹರಸಿದ . ಅದರ ಅವತಾರವೇ ನಮ್ಮ ಕಲಿಯುಗದ ಚಹಾ .

ಇನ್ನೂ ಸಂಶಯವೇ ??? ನೋಡಿ ಈಗಲೂ ಅಷ್ಟೇ ..... ರಾತ್ರಿಯಿಡೀ ಮೂರ್ಛೆ ತಪ್ಪಿದವರಂತೆ ನಿದ್ದೆ ಬಿದ್ದಿರುವ ನಾವು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿದು ಕ್ರಿಯಾಶೀಲರಾಗುವುದಿಲ್ಲವೇ ?? ಅದರ ಕರ್ಮಫಲ ಇನ್ನೊ ಬಿಟ್ಟಿಲ್ಲವೋ ಎಂಬಂತೆ ಚಹಾ ಮಾಡಿದ ಬಳಿಕ ಅದರ ಸೊಪ್ಪನ್ನು ಮರದ ಬೇರಿನಡಿ ಬಿಸಾಡುವುದಿಲ್ಲವೇ ?? ಅಷ್ಟೇ ಅಲ್ಲ ಸಂಜೀವಿನಿಯನ್ನು ತಂದವನು ಹನುಮಂತ ಯಾವ ಮೂಲಿಕೆ ಎಂದು ತಿಳಿಯದಿದ್ದರೂ "ದೂರ ದೃಷ್ಟಿಯಿಂದ " ಇಡೀ ಪರ್ವತ ಹೊತ್ತು ತಂದ ಹಾಗೆ ಭಾರತಕ್ಕೆ ಚಹಾ ತಂದವರು ಜೇಮ್ ಶೆಡ್ ಜೀ ಟಾಟಾ ಅವರು ಫಾರಸೀ ಆಗಿದ್ದರು. ನೋಡಿದಿರಾ ?? FAR = ದೂರ SEE = ದೃಷ್ಟಿ . ಹೀಗೆ ಇವರು ಕೂಡ ದೂರ ದೃಷ್ಟಿ ಯಿಂದಲೇ ಚಹಾವನ್ನು ಭಾರತಕ್ಕೆ ತಂದರು . ಅಲ್ಲದೆ ರಾಮನು ಕಾಡಿನಲ್ಲಿ ಈ ಸೊಪ್ಪಿಗೆ ವರದಾನ ಕೊಟ್ಟಿದ್ದರಿಂದ ಅವರು ತಂದ ಚಹಾಕ್ಕೆ "ಕಾನನ ದೇವನ ಚಹಾ " ( Kannan Devan Tea ) ಅಂದರೆ ಕಾಡಿಗೆ ಹೋಗಿ ಬಂದ ದೇವರನ್ನು ಬದುಕಿಸಿದ ಸೊಪ್ಪು ಎಂಬರ್ಥದಿಂದ ಈ ಹೆಸರು ಕೊಟ್ಟರು.

ಇದು ಚಹಾದ ಪುರಾಣವಾದರೆ ಕಾಪಿ ಇದಕ್ಕೂ ಹಳೆಯದು . ಸಮುದ್ರಮಥನ ಕಾಲದಲ್ಲಿ ಸುರಾಸುರ ಯಕ್ಷ ಗಂಧರ್ವರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿದರು. ಅದರಲ್ಲಿ ಹುಟ್ಟಿದ ಪದಾರ್ಥವನ್ನೆಲ್ಲ ಪರಸ್ಪರ ಹಂಚಿಕೊಂಡರು. ನಡುವೆ "ಕಾಲಕೂಟ" ವೆಂಬ ಖತರ್ನಾಕ್ ವಿಷ ಬರಲು ಈಶ್ವರ ಅದನ್ನು bottoms up ಮಾಡಿ ಕುಡಿದ. ನಂತರ ಪೀಯುಷ ( ಅಮೃತ ) ಹುಟ್ಟಿಕೊಂಡಿತು . ಅಸುರರಿಗೆ ಮೊಹಿನಿಯಿಂದ ಮಂಕುಬೂದಿ ಎರಚಿ ಇನ್ನೇನು ಪೀಯುಷವನ್ನು ಸ್ವರ್ಗಲೋಕಕ್ಕೆ ತೆಗೆದುಕೊಂಡು ಹೋದರು ಎನ್ನುವಷ್ಟರಲ್ಲಿ "Hello Excuse me Boss " ಎಂಬ ಸ್ವರ ಕೇಳಿಸಿತು ತಿರುಗಿ ನೋಡಿದರೆ ಮಾನವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನಾಯ್ತು ಎಂದು ಕೇಳಿದರೆ ಏನು ?? ನಮ್ಮ ಭೂಮಿಗೆ ಬಂದು , ಸಮುದ್ರ ಮಥಿಸಿ ಸಿಕ್ಕಿದ್ದನ್ನೆಲೆ ದೋಚಿ ಹೋಗ್ತಾ ಇದ್ದೀರಾ ?? ನಮ್ಮ ಭೂಮಿ ಬಳಸಿದ್ದರ ಬಾಡಿಗೆ ಯಾರು ಕೊಡ್ತಾರೆ ?? ನಮಗೂ ಅಮೃತದಲ್ಲಿ ಪಾಲು ಬೇಕು ಎಂದು ಎಲ್ಲರೂ ಜಗಳ ಶುರು ಮಾಡಿದರು . ಆಗ ದೇವರು ಓಹೋ .... ಅಮೃತ ಬೇಕಾ ?? ಕಾಲಕೂಟ ಕೂಡ ಅಲ್ಲಿಂದಾನೆ ಬಂದಿದ್ದು ಅದನ್ನೂ ನೀವು ತೆಗೆದುಕೊಳ್ಳಬೇಕು ಎಂದು ವಾದ ಮಾಡಿದರು . ಮನುಷ್ಯರು ಕಾಲಕೂಟದಿಂದ ಹೆದರಿಕೊಂಡರೂ ಪಾಲು ಸಿಗದೇ ಹೋಗಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು .

ಆಮೇಲೆ ದೇವಗುರು ಬೃಹಸ್ಪತಿ , ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮಾಸ್ಟರು ಕುಳಿತು ಒಂದು ಸಂಧಾನಕ್ಕೆ ಬಂದು " ಕಾಲಕೂಟದಿಂದ " "ಕಾ" ತೆಗೆದು "ಪೀಯೂಷದಿಂದ" "ಪೀ " ತೆಗೆದು "ಕಾಪಿ " ಮಾಡಿ ಮಾನವರಿಗೆ ಕೊಟ್ಟರು . ಈ ಸಂಧಾನದಲ್ಲಿ ಬೃಹಸ್ಪತಿಗಳು ಸ್ವಲ್ಪ ಮಾನವರ Favour ನಲ್ಲಿ ಮಾತನಾಡಿದ್ದರಿಂದ ಅವರ ಸ್ಮರಣಾರ್ಥ ಅವರ ಹೆಸರಿನ ಮೊದಲ ಮೂರು ಅಕ್ಷರ "BRU" ಎಂದು ಇದಕ್ಕೆ ನಾಮಕರಣ ಮಾಡಲಾಯಿತು . ಇದನ್ನು ಕುಡಿದು ಮನುಷ್ಯರಿಗೆ ನಶೆ ಏರಿದ್ದರಿಂದ ಅವರು ಅದನ್ನು "ನಶಾಕಾಪಿ " ಎಂದರು. ಅದೇ ಕಲಿಯುಗದ NESCAFE ಆಯಿತು.ಹೀಗೆ ಸುರ - ಅಸುರರ ಸಹಕಾರದಿಂದ ಕಾಪಿ ಭೂಮಿಗೆ ಬಂದಿದ್ದರಿಂದ ಇಂದಿಗೂ ಅದನ್ನು ಕುಡಿಯುವಾಗ ನಾವು "ಸುರ್ರ್ ರ್ರ್ ರ್ರ್ " ಎಂದು ಶಬ್ದ ಮಾಡುತ್ತಾ ಅವರನ್ನು ನೆನೆಯುತ್ತೇವೆ.

ಉಳಿದ ಪುರಾಣಗಳಲ್ಲಿ ಪೆಪ್ಸಿ ಕೋಲಾ ಗಳ ಉಲ್ಲೇಖ ಇದೆಯೋ ಎಂದು ಹುಡುಕುತ್ತಿದ್ದೇನೆ . ನಿಮಗೆಲ್ಲಾದರೂ ಏನಾದರೂ ಮಾಹಿತಿ ಸಿಕ್ಕಿದರೆ ತಿಳಿಸಿರಿ .
-------------------ಅಥ ಶ್ರೀ ತಲೆಹರಟೆ ಪುರಾಣಂ ಸಂಪೂರ್ಣಂ ----------------------

-------------------------------------------------------ವಿಕಟಕವಿ ---------------

Comments

Ashwin said…
hey good post, thanks for educating me :)
ನಿನ್ನ ಕಲ್ಪನೆಗೆ ಮಿತಿ ಅನ್ನೋದು ಇಲ್ವೇ ಇಲ್ಲಾ ಅಂತಾ ಎತ್ತಿ ಹೇಳ್ತಾ ಇದೆ ಈ ಲೇಖನ. ದಿನ-ದಿನವೂ ಲೆಕ್ಕವಿಲ್ಲದ ಮಟ್ಟಿಗೆ ಜನರ ಹೊಟ್ಟೆಯಲ್ಲಿ ಹೋಗುತ್ತಿರುವ ಈ ಚಹಾ-ಕಾಪಿ ಗಳ ಹಿಂದೆ ಇಷ್ಟೆಲ್ಲಾ ಇತಿಹಾಸ ಇದೆ ಅಂತ ತಿಳಿದುಕೊಂಡು ಜ್ಞಾನೋದಯವಾದಂತಾಯಿತು. :P

ಹೀಗೆ ಹೊಡದಾಡು.

ಹರಿ ಓಂ.
ಈಗ ತಾನೇ, ನನ್ನ ಸ್ನೇಹಿತ, ಶ್ರೀರಂಗ, ನಿಮ್ಮ ಬ್ಲಾಗ್ ತೋರಿಸಿದೆ. ನಿಮ್ಮ ಕಲ್ಪನೆ ಸೂಪರ್...ಸೂಪರ್ ಸುಪ್ರೀಂ... ನನಗೆ ಕಾಫಿ ಮತ್ತು ಚಹಾದ ಪುರಾಣ ಗೊತ್ತೇ ಇರಲಿಲ್ಲ, ಅದರಲ್ಲೂ "ಬೃಹಸ್ಪತಿಗೆ ವಿಶೇಷವಾದ ಮನ್ನಣೆ ಸಲ್ಲಲಾಗುತ್ತಿದೆ" ಎಂಬುದನ್ನು ತಿಳಿದ ಮೇಲೆ, ಕಾಪಿಯ ರುಚಿ ನೋಡಬೇಕು ಅಂತ ಇದ್ದೀನಿ.

ನನ್ನಿ,ಸುನಿಲ.
shridhar said…
Super machaaaaa!!
ವಿಕಟಕವಿಗಳೆ:
ನಿಮ್ಮ ಹಾಸ್ಯಬರಹಗಳಲ್ಲಿ ಉತ್ತಮ ಪರಿಣತಿಯಿದೆ.
ಹೆಚ್ಚು ಹೆಚ್ಚು ಬರಹಗಳನ್ನು ಬರೆಯಿರಿ ಮತ್ತು ಮುದ್ರಣ ಮಾಧ್ಯಮದಲ್ಲೂ ಪ್ರಕಟಿಸಲು ಯತ್ನಿಸಿ. (ಉದಾ: ಆಯ್ದ ಶಾಂತಿ ಸರಣಿಯ ಲೇಖನಗಳು)
ಕನ್ನಡ ಓದುಗರ ಲೋಕದಲ್ಲಿ ನಿಮ್ಮಾನ್ನು ಚಿರಪರಿಚಿತ ಹಾಸ್ಯ ಲೇಖಕರನ್ನಾಗಿಸುವ ಬಲ ನಿಮ್ಮ ಹಾಸ್ಯಕ್ಕಿದೆ.
ನಿಮ್ಮ ಈ "ಕಾಪಿ / ಚಾ ಪುರಾಣ"ಕ್ಕೆ ಸಿಕ್ಕ ಪ್ರಚಾರ ಮತ್ತು ಪ್ರೋತ್ಸಾಹದಿಂದ ನಿಮಗೆ ಈಗಾಗಲೆ ಇದು ಅರಿವಾಗಿರಬಹುದು ಅನ್ನಿಸುತ್ತೆ.
ಇತೀ, ಉಉನಾಶೆ
ವಿಕಟಕವಿಗಳೆ:
ನಿಮ್ಮ ಹಾಸ್ಯಬರಹಗಳಲ್ಲಿ ಉತ್ತಮ ಪರಿಣತಿಯಿದೆ.
ಹೆಚ್ಚು ಹೆಚ್ಚು ಬರಹಗಳನ್ನು ಬರೆಯಿರಿ ಮತ್ತು ಮುದ್ರಣ ಮಾಧ್ಯಮದಲ್ಲೂ ಪ್ರಕಟಿಸಲು ಯತ್ನಿಸಿ. (ಉದಾ: ಆಯ್ದ ಶಾಂತಿ ಸರಣಿಯ ಲೇಖನಗಳು)
ಕನ್ನಡ ಓದುಗರ ಲೋಕದಲ್ಲಿ ನಿಮ್ಮಾನ್ನು ಚಿರಪರಿಚಿತ ಹಾಸ್ಯ ಲೇಖಕರನ್ನಾಗಿಸುವ ಬಲ ನಿಮ್ಮ ಹಾಸ್ಯಕ್ಕಿದೆ.
ನಿಮ್ಮ ಈ "ಕಾಪಿ / ಚಾ ಪುರಾಣ"ಕ್ಕೆ ಸಿಕ್ಕ ಪ್ರಚಾರ ಮತ್ತು ಪ್ರೋತ್ಸಾಹದಿಂದ ನಿಮಗೆ ಈಗಾಗಲೆ ಇದು ಅರಿವಾಗಿರಬಹುದು ಅನ್ನಿಸುತ್ತೆ.
ಇತೀ, ಉಉನಾಶೆ
ಧನ್ಯವಾದಗಳು
ತಮ್ಮ ಪ್ರೋತ್ಸಾಹಕ್ಕೆ ಕೃತಜ್ಞ .
ತಮ್ಮ ಪರಿಚಯ ಸಿಕ್ಕಿಲ್ಲ . ಉ ಉ ನಾಶೆ ಏನೆಂದು ಗೊತ್ತಾಗಲಿಲ್ಲ :)

ವಂದನೆಗಳೊಂದಿಗೆ
ವಿಕಟಕವಿ
shridhar said…
ಸುಮಂತ ಅವರೆ,
ಮಿಂಚಂಚೆಯಲ್ಲಿ ಬಂದ ಪತ್ರ ಹಾಸ್ಯಮಯವಾಗಿದೆಯೆಂದು ನನ್ನ ಬ್ಲೊಗನಲ್ಲಿ ಮೂಲ ಲೇಖಕರ ಕ್ಷಮೆಯಾಚಿಸಿ
ಪ್ರಕಟಿಸಿದ್ದೆ , ತದನಂತರ ಆ ಬರಹ ತಮ್ಮದೆಂದು ತಿಳಿಯಿತು , ತಮ್ಮ ಬ್ಲೊಗ್ ವೀಕ್ಷಿಸಿದೆ,
ತುಂಬ ಹಾಸ್ಯಮಯ ಬರಹಗಳು. ತಾವು ವಿಕಟಕವಿಯೆ ಸರಿ.
ತಮ್ಮ ಅಪ್ಪಣೆಯಿಲ್ಲದೆ ಬರಹವನ್ನು ಪ್ರಕಟಿಸಿದಕ್ಕೆ ಮತ್ತೊಮ್ಮೆ ಕ್ಷಮೆಯಿರಲಿ.
ನಮ್ಮ ಬ್ಲೊಗಗೆ ಒಮ್ಮೆ ಭೇಟಿ ಕೋಡಿ.

ಶ್ರೀಧರ ಭಟ್ಟ.

Popular posts from this blog

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕ...

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...