Skip to main content

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ.
ಹ್ಮ್ ಸರಿ ಎಂದೆನು.
ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ??
ಹಸಿವಿಲ್ಲ ಬಿಡೇ...
ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು.....

ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು.
ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು.

ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................

 ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ.

ರೀssssssssss......... ಮತ್ತೊಮ್ಮೆ
ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು.
ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹೆಂಡತಿಯ ಹುಟ್ಟಿದ ದಿನ ಅವಳಿಗೆ ದೊಡ್ಡ ಕಾರ್ ಗಿಫ್ಟ್ ಮಾಡಿದ ಅಂತೆ.....

ಅದೇ ಪೇಪರ್ ನ ಎಂಟನೇ ಪುಟ ಓದಿದ್ಯಾ ನೀನು?? ಪೇಟೆಯಿಂದ ಅರ್ಧ ಕಿಲೋ ಟೊಮೇಟೊ ತನ್ನಿ ಅಂದಿದ್ದಕ್ಕೆ ಒಬ್ಬ ಅವನ ಹೆಂಡತಿಯ ಕುತ್ತಿಗೆ ಹಿಸುಕಿ ಸಾಯಿಸಿದ್ನಂತೆ...............

ರೀ...ರೀ ..... ನಮ್ ಮದ್ವೆ ಆಗಿ ಮೂರು ವರ್ಷ ಆಯಿತು.ಇಲ್ಲಿವರ್ಗೂ ನಾನು ನಿಮ್ಮನ್ನ ಏನಾದ್ರೂ ಬೇಕು ಅಂತಾ ಕೇಳಿದ್ದೀನಾ ??
ಲೇ.. ಲೇ.. ಯಾಕೆ  ಹೀಗೆ ಸುಳ್ಳು ಹೇಳ್ತೀಯಾ ?? ಮೊನ್ನೆ ತಾನೇ ದೀಪಾವಳಿಗೆ ಐದು ಸಾವಿರದ ಸೀರೆ ತೆಗೊಂಡ್ಯಲ್ಲೇ..........
ಬಿಡ್ರೀ.. ಹಬ್ಬಕ್ಕೆ ಅಂತಾ ಒಂದು ಸೀರೆ ತೆಗೊಂಡ್ರೆ ಅದೂ ನಿಮ್ಮ ಕಣ್ಣಿಗೆ ಬಿತ್ತಾ ....??
ಮತ್ತೆ ಅದಕ್ಕೂ ಮೊದ್ಲು ಅಕ್ಷಯ ತದಿಗೆಗೆ ಚಿನ್ನದ ಸರ ಮಾಡಿಸಿಕೊಂಡ್ಯಲ್ಲೇ.....
ಏನ್ರೀ ನೀವು ಅದು ಇರೋ ಸರಾನ ಕೊಟ್ಟು ಹೊಸಾದು ಮಾಡ್ಸಿದ್ದಲ್ವೇನ್ರಿ......
ಅಯ್ಯೋ ಶಿವನೇ.....ಒಳ್ಳೆ ಕರೀನಾ ಕಪೂರ್ ಹಾಗೆ ಸ್ಲಿಮ್ ಆಗಿದ್ದ ಸರಾ ಕೊಟ್ಟು ದಸರಾ ಆನೆ ತರದ ಸರ ಮಾಡಿಸಿಕೊಂಡು ಬಂದಿದ್ದಾಳೆ .ಇದ್ರ ಮಧ್ಯದ ಚಿನ್ನ ಆ ಅಕ್ಕಸಾಲಿ ಹಾಕಿದ್ನೇನೆ ??ರಾಟೆ ಹಾಕಿದ್ರೆ ಒಂದೆರಡು ಕೊಡ ನೀರು ಸೇದಬಹುದು ಆ ಸರದಿಂದ...
ಹೀಗೆ  ಹಳೆಯ ದಿನಗಳಿಗೆ ಹೋಗಿ ಅವಳ ಖರೀದಿಯ ಬಗ್ಗೆ ಹೇಳಿದರೆ ಅದು ದೀಪಾವಳಿದು ಬಿಡಿ ಇದು ಸಂಕ್ರಾಂತಿದು ಬಿಡಿ....ಹೀಗೆ ಎಲ್ಲವನ್ನು ಬಿಡಿಸಿ ಅವಳು ಏನೂ ತೆಗೆದುಕೊಂಡಿಲ್ಲವೆಂದು ಸಾಧಿಸಿದಳು.

ಸರಿ ಏನೀವಾಗ ಏನ್ ಬೇಕು ?? ಎಂದೆನು
ರೀ ಒಂದು ಅವಲಕ್ಕಿ ಸರ ಮಾಡಿಸ್ಕೊಬೇಕು..............
ಸೂರ್ಯ ಚಂದ್ರ ನಕ್ಷತ್ರಗಳೊಳಗೂಡಿ ನವಗ್ರಹಗಳು ತಲೆಯ ಸುತ್ತ ತಿರುಗಿ ಸ್ವಲ್ಪ ಕತ್ತಲೆ ಕವಿದಂತಾಯಿತು. ಹಣೆಯ ಮೇಲೆ ಬೆವರ ಸಾಲು ಮೂಡಿತು.

ಆ ಪಕ್ಕದ ಮನೆ ವಿಶಾಲಾಕ್ಷಿ ಆಂಟಿ ಮಾಡ್ಸಿಕೊಂಡಿದ್ದಾಳೆ ಎಷ್ಟು ಚೆನ್ನಾಗಿದೆ ಗೊತ್ತಾ... ರಾಗ ಎಳೆದಳು
ಅವಳ ಗಂಡ 25 ವರ್ಷದಿಂದ ದೊಡ್ಡ ಕಂಪನಿಯಲ್ಲಿ ಒಳ್ಳೆ ಹುದ್ದೆಯಲ್ಲಿ ಇದ್ದಾನೆ. ನಾನು ಇನ್ನೂ ಕರಿಯರ್ ಶುರು ಮಾಡಿದ್ದೀನಷ್ಟೆ ಕಣೇ..... ತಿಂಗಳ ಕೊನೆಯಲ್ಲಿ ಸೌತೆಕಾಯಿ ತೆಗೊಳ್ಳೋದಕ್ಕೂ ಹಣ ಇರಲ್ಲ ಇನ್ನು ನಿನಗೆ ಅವಲಕ್ಕಿ ಸರಾನಾ ??ಎಂದೆನು.

ಅಷ್ಟೇನೂ ಖರ್ಚು ಆಗಲ್ಲಾರೀ.. ಒಂದು ಹದಿನೈದು ಇಪ್ಪತ್ತು ಸಾವಿರ ಅಷ್ಟೆ ಎಂದಳು.

ಅಮ್ಮಣ್ಣಿssssssssss.. ನಿನ್ನ ಗಣಿತ ವೀಕ್ ಅಂತಾ ನನಗೆ ಗೊತ್ತು. ಮೊನ್ನೆ ದೀಪಾವಳಿಗೆ ಕರೆದುಕೊಂಡು ಹೋಗುವಾಗ ಹೆಚ್ಚೇನಿಲ್ರಿ ಐನೂರು ರೂಪಾಯಿಯ ಕಾಟನ್ ಸೀರೆ ಅಂದವಳು ಬಟ್ಟೆ ಅಂಗಡಿ ಒಳಗೆ ಹೋದ  ಮರುಘಳಿಗೆಯಲ್ಲಿ ನಾಗವಲ್ಲಿಯಾಗಿ ಬದಲಾಗಿ ಐನೂರಕ್ಕೆ ಪಕ್ಕ ಒಂದು ಸೊನ್ನೆ ಸೇರಿಸಿ ಶಾಪಿಂಗ್ ಮಾಡಿ ಆಮೇಲೆ ಬಿಲ್ ಬಂದಾಗ ಹಣ ಸಾಲದೆ ನಾನು ಫೊನ್ ಬಂದ ನೆಪ ಮಾಡಿ ಹೊರಗೆ ಬಂದು ಎ.ಟಿ.ಎಂ ನಿಂದ ಹಣ ತೆಗೆದುಕೊಂಡು ಹೋಗಿ ಹಣ ಕೊಟ್ಟು ಅವರು ಫ್ರೀಯಾಗಿ ಕೊಟ್ಟ ಕರ್ಚೀಪಿನಿಂದ ಬೆವರು ಒರೆಸಿಕೊಂಡ ನೆನಪು ಇನ್ನೂ ಹಸಿರಾಗಿದೆ

ನೋಡೇ... ಅವರ ಹತ್ರ ಇದೆ ಇವರ ಹತ್ರ ಇದೆ ಅಂತಾ ಅದಕ್ಕೆ ಬೇಕು ಅಂದ್ರೆ ಹೇಗೆ ಬಂಗಾರೀ??... ನೀನೇ ಚಿನ್ನ ಮತ್ತೆ ನಿನಗೆ ಯಾಕೆ ಬೇಕು ಈ ಅವಲಕ್ಕಿ ಸರ ತೊಗ್ರಿಬೇಳೆ ಸರ ಎಲ್ಲಾ ?? ಒಲಿಸಲು ಯತ್ನಿಸಿದೆ.

 ಉಹೂಂ... ಸಾಮೋಪಾಯ ಕೆಲಸ ಮಾಡಲಿಲ್ಲ.

ರೀ ನಿಮ್ಮ ಈ ಹಳೇ ಕನ್ನಡ ಸಿನೆಮಾ ಡೈಲೊಗ್ ನಿಮ್ ಹತ್ರಾನೆ ಇಟ್ಕೊಳ್ಳಿ.. ನಂಗೆ ಬೇಕು ಅಂದ್ರೆ ಬೇಕು.. ಅಷ್ಟೆ...

ನನಗೂ ರೇಗಿತು
ಹೌದೇ.. ಆ ವಿಶಾಲಾಕ್ಷಮ್ಮಂಗೆ ಮದ್ವೆ ಸಮಯದಲ್ಲಿ ಅವ್ರಪ್ಪ ಐವತ್ತು ತೊಲೆ ಬಂಗಾರ ಕೊಟ್ಟು ಕಳ್ಸಿದ್ದ... ನಿಮ್ಮಪ್ಪ ಕೊಟ್ಟಿಲ್ವೇ.. ಅಂದೆ.

ನೋಡಿ ನಮ್ ಅಪ್ಪನ್ ಸುದ್ದಿಗೆ ಹೋದ್ರೆ ಚೆನ್ನಾಗಿರಲ್ಲಾ... ಶಾಂತಿ ಘರ್ಜಿಸಿದಳು.

ಯಾಕೋ ನನಗೂ ಸ್ವಲ್ಪ ಅತಿಯಾಯಿತು ಅನ್ನಿಸಿತು ಸಿಟ್ಟನ್ನು ಹತೋಟಿಗೆ ತಂದು ಸುಮ್ಮನಾದೆ. ಐದು ನಿಮಿಷ ಬರೀ ಮೌನ.

ರೀ.. ನಾನೇನು ಈಗಿಂದೀಗ್ಲೇ ಬೇಕು ಅಂತಿಲ್ಲಾ ........................ನನ್ನವಳು ಮೌನ ಮುರಿದಳು

ಹಮ್ಮಯ್ಯ... ಉಸಿರಾಟಕ್ಕೆ ಸ್ವಲ್ಪ ಜಾಗ ಸಿಕ್ಕಿತು. ಇನ್ನೊಂದು ಎರಡು - ಮೂರು ತಿಂಗಳು ಬಿಟ್ರೆ  ಮಾರ್ಚ್ ನಲ್ಲಿ ಬೋನಸ್ ಸಿಗುತ್ತೆ ಹಾಗೇ ನನ್ನ ಪ್ರೊಮೋಶನ್ ಕೂಡಾ ಆಗಬಹುದು ಆಗ ಯೋಚಿಸೋಣ ಎಂದುಕೊಂಡರೆ

ನಾನೇನು ಈಗಿಂದೀಗ್ಲೇ ಬೇಕು ಅಂತಿಲ್ಲಾ ............... ನಾಡಿದ್ದು ಶುಕ್ರವಾರದೊಳಗೆ ಮಾಡಿಸಿದ್ರೆ ಸಾಕು ಎಂದು ಅವಳ ಹಳೆಯ ಅಪೂರ್ಣ ವಾಕ್ಯ ಪೂರ್ತಿ ಮಾಡಿದಳು.

ಅಷ್ಟು ಬೇಗ ಎಲ್ಲಾ ಆಗಲ್ಲ... ಒಂದು ಎರಡು ತಿಂಗಳ ನೋಟೀಸ್ ಪೀರಿಯಡ್ ಕೊಡು . ನಂಗೆ ಆಫೀಸ್ ಗೆ ಹೊತ್ತಾಯ್ತು ..ಈ ಹಣೆಬರಹ ಆಮೇಲೆ ನೊಡ್ಕೊಳ್ಳೋಣ. ಎಂದು ಆಫೀಸಿಗೆ ಹೋದೆನು. ಅವಳು ಬುಸುಗುಡುತ್ತಾ ಒಳನಡೆದಳು.

ದಿನಾ ಒಂದೂವರೆಗೆಲ್ಲಾ ಊಟ ಆಯಿತಾ ಎಂದು ಫೊನ್ ಮಾಡುವವಳು ಆ ದಿನ ಫೊನ್ ಇಲ್ಲ. ರಾತ್ರಿ ಮನೆಗೆ ಬಂದರೆ ಮನೆಯಲ್ಲಿ ಲೈಟ್ ಒಂದೂ ಹೊತ್ತಿಸಿಲ್ಲ.ಕೋಪಗೃಹ ಸೇರಿಕೊಂಡ ಇವಳನ್ನು ಎಬ್ಬಿಸಿ ಊಟಕ್ಕೆ ಕರೆದೆ.
ಸಾರಿಗೆ ಉಪ್ಪಿಲ್ಲ. ಅದ್ಯಾರೋ ಮಹಾನುಭಾವ "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ " ಎಂದು ಹೇಳಿದ ನೆನಪಾಯಿತು. ಬೆಳಿಗ್ಗೆ ಸರಿ ಹೋದಾಳೆಂದು ಉಪ್ಪಿಲ್ಲದ ಸಾರನ್ನೇ ತಿಂದು ಮಲಗಿದೆ. ಬೆಳಿಗ್ಗೆ ಎದ್ದು ನೋಡಿದರೆ ಚಹಾದಲ್ಲಿ ಸಕ್ಕರೆ ಇಲ್ಲ . " ಟಿಫಿನ್ ಬೊಕ್ಸ್ ಮಾಡಿಲ್ಲ. ಕ್ಯಾಂಟೀನ್ ನಲ್ಲಿ ತಿನ್ನಿ " ಎಂದು ರೀ.. ಏನೂಂದ್ರೆ.. ಎಂಬ ಯಾವುದೇ ಸಂಬೋಧನೆ ಇಲ್ಲದೆ ನನ್ನನ್ನು ಥರ್ಡ್ ಪಾರ್ಟಿಯಲ್ಲಿಟ್ಟು ಮಾತನಾಡಿಸಿದಳು. ಇದ್ಯಾಕೋ ಅವಲಕ್ಕಿ (ಸರ) ಬರೋ ತನಕ ಇವಳು ಮನೆಯಲ್ಲಿ ಉಪ್ಪಿಟ್ಟು ಮಾಡೋಲ್ಲ ಎಂದು ಅನ್ನಿಸಿತು. LUCKY ಗೆ ವಿರೋಧ ಪದ UNLUCKY ಅಲ್ಲ ಅವಲಕ್ಕಿ ಆಗಬೇಕು ಎಂದು ಅನಿಸಿತು. ಇನ್ನೇನು ಮಾಡುವುದು ಇನ್ಶ್ಯೂರೆನ್ಸ್ ಮಾಡಿಸೋಣ ಎಂದುಕೊಂಡಿದ್ದ ಹಣವನ್ನು ಸ(ಬ)ರ ಪರಿಹಾರ ನಿಧಿಗೆ ಹಾಕಲು ನಿರ್ಣಯಿಸಿದೆ.

ಸರಿ ಶುಕ್ರವಾರ ಹೊಗೋಣ .....ಎಂದು ಬಾಯಿ ಮುಚ್ಚಲಿಲ್ಲ. ರೀ ಒಂದು ಐದು ನಿಮಿಷ ಇರಿ ಉಪ್ಪಿಟ್ಟು ಮಾಡಿ ಬಾಕ್ಸಿಗೆ ಹಾಕಿ ಕೊಡ್ತೀನಿ.............
ಅಮ್ಮೋssssssssss ಈ ಸರದ ಮಹಿಮೆಯೇ!!!!.. ಭಕ್ತರೆಲ್ಲರೂ ಗಣಪತಿಗೆ ನೂರೊಂದು ಕಾಯಿ ಇಪ್ಪತ್ತೊಂದು ಕಡುಬಿನಂತಾ ಸಣ್ಣ ಬಜೆಟ್ ಹರಕೆ ಹೊತ್ತು ಮೂಕಾಂಬಿಕೆ ಅನ್ನಪೂರ್ಣೇಶ್ವರಿಗೆಲ್ಲ ಚಿನ್ನದ ಸರ ವಜ್ರದ ಕಿರೀಟ ಬೆಳ್ಳಿಯ ಬಾಜೂಬಂಧಿ ಗಳ ಹರಕೆ ಯಾಕೆ ಹೊತ್ತುಕೊಳ್ಳುತ್ತಾರೆಂದು ಆಗ ಅರ್ಥವಾಯಿತು.

ಇಲ್ಲಾ ನಂಗೆ ಹೊತ್ತಾಯ್ತು ಎಂದು ಆಫೀಸಿಗೆ ಹೊರಟೆ. ಹನ್ನೆರಡೂವರೆಗೆಲ್ಲಾ ಫೊನು. ರೀ.. ಕ್ಯಾಂಟೀನ್ ಅನ್ನದಲ್ಲಿ ಸೋಡಾ ಹಾಕ್ತಾರೆ. ನಾನು ಊಟ ತಗೊಂಡು ಆಫೀಸ್ ಗೆ ಬರ್ಲಾ ?? ಆಮೇಲೆ ನಿಮ್ಮ ಆರೋಗ್ಯ ಕೆಟ್ರೆ .........
ಒಹ್ ಸರಿ..... ಏನೋ ಸರದ ವಿಷಯದಲ್ಲಿ ಮನಸ್ತಾಪ - ಮಾತು ಬೆಳೆಯಿತು.... ಇಲ್ಲದಿದ್ರೆ ನಾನಂದ್ರೆ ನನ್ ಶಾಂತಿಗೆ ಪ್ರಾಣ ಎಂದು ಖುಷಿಯಾದರೆ........
ಆಮೇಲೆ ನಿಮ್ಮ ಆರೋಗ್ಯ ಕೆಟ್ರೆ ........ಶುಕ್ರವಾರ ಜ್ಯುವೆಲ್ಲರ್ಸ್ ಗೆ ಹೇಗೆ ಹೋಗೋದು ?? ಎಂದು ಹಳೇ ವಾಕ್ಯ ಪೂರ್ತಿ ಮಾದಿದಳು.

ಆ ಕ್ಷಣವೇ ನಿರ್ಧರಿಸಿದೆ. ಇನ್ನು ಮುಂದೆ ಮನಸ್ಸಿನ ಮಂಡಿಗೆ ತಿನ್ನುವ ಮೊದಲು ಇವಳ ಮಾತಿಗೆ ಪೂರ್ಣವಿರಾಮದ ಒಗ್ಗರಣೆ ಬಿದ್ದಿದೆಯೋ ಇಲ್ಲವೋ ತಿಳಿದುಕೊಳ್ಳಬೇಕು ಎಂದು .

ಬುಧವಾರ- ಗುರುವಾರ  ನನಗೆ ಮನೆಯಲ್ಲಿ ಸಿಕ್ಕಿದ ರಾಜೋಪಚಾರವನ್ನು ಹೇಗೆ ವರ್ಣಿಸಲಿ.

ಶುಕ್ರವಾರ ಬೆಳಿಗ್ಗೆ ನನ್ನವಳು "ಏನೂಂದ್ರೆ ಬೆಳಿಗ್ಗೆ ಹನ್ನೊಂದೂವರೆಗೆ ಚಿನ್ನ ಖರೀದಿಗೆ ಒಳ್ಳೆ ಮುಹೂರ್ತವಂತೆ. ಇವತ್ತು ರಜಾ ಹಾಕ್ರಿ..." ಎಂದಳು.
ಇವಳು ಈ ವಿಚಾರದಲ್ಲಿ ಸ್ವಲ್ಪ ಹೆಚ್ಚೇ ರೀಸರ್ಚ್ ಮಾಡಿದ್ದಾಳೆ ಹಾಗೂ ಈ ಸರವ ವಿಷಯದಲ್ಲಿ ಗ್ರಹತಾರೆಗಳ ಕೈವಾಡ ಇದೆ ಎಂದು ಆವಾಗ ತಿಳಿಯಿತು.

ಆಗೊಲ್ವೇ... ಮೊದ್ಲೇ ಹಿಂದಿನ ತಿಂಗಳ ಕೆಲ್ಸ ಬಾಕಿ ಇದೆ. ಎನಿದ್ರೂ ಸಂಜೆ ಐದೂವರೆ ಮೇಲೇನೆ ಎಂದು ಆಫೀಸಿಗೆ ಹೋದೆ.

ಇವಳಿಗೆ ಸರ್ ಪ್ರೈಸ್ ಕೊಡೋಣ ಎಂದುಕೊಂಡು.ತಲೆನೋವಿನ ನೆಪ ಮಾಡಿ ಯಾವತ್ತೂ ಸಿಕ್ಕದ ಸಿಕ್ಕ ಲೀವ್ (SICK LEAVE) ಹಾಕಿ ಮನೆಗೆ ಹೋದೆ.

 ಏನೋ ಕಡಿದು ಹಾಕೋ ಕೆಲ್ಸ ಅಂದ್ರಿ.. ಯಾಕೆ ಬೇಗ ಬಂದ್ರಿ ?? ಶಾಂತಿ ಹುಸಿಕೋಪ ತೋರಿದಳು.

ಇವಳಿಗೋಸ್ಕರ ಬಂದೆ ಅಂದರೆ ಸಿಹಿಮಾತುಗಳಿಂದ ಡಯಾಬಿಟಿಸ್ ತರಿಸುತ್ತಾಳೆ ಎಂದು "ಬಾಸ್ ಎಲ್ಲರಿಗೂ ಬೇಗ ಕಳ್ಸಿದ್ರು" ಎಂದೆ.

ನೀವು ಹೀಗೇನೇ... ನಾನು ಅಷ್ಟು ಪ್ರೀತಿಯಿಂದ ಹೇಳಿದ್ರೆ ಕೇಳಲಿಲ್ಲ ಆ ಬಾಸ್ ಹೇಳಿದ್ರೆ ಓಡೋಡಿ ಬಂದ್ರಿ... ಅದೇನೊ ಹೇಳ್ತಾರಲ್ಲ... ಸೊಂಟದಿಂದ ಬಂದ್ರೇನೇ ತೀರ್ಥ ಅಂತ ಹಾಗೇನೆ....

ಲೇ ಗೊತ್ತಿಲ್ದಿದ್ರೆ ಬಾಯಿ ಮುಚ್ಕೊಂಡು ಸುಮ್ನಿರು.. ಅದು ಶಂಖದಿಂದ ಬಂದ್ರೇನೆ ತೀರ್ಥ ಅಂತ ...

ಅದೇ ಅದೇ,.. ನಾನೂ ಅದನ್ನೇ ಹೇಳಿದ್ದು.... ನಿಮಗೆ ಏನು ಕೇಳಿಸ್ತು ??

ಇದು ಇವಳ ಹಳೇ ಟ್ರಿಕ್ಕು... ವಾದದಿಂದ ಪ್ರಯೋಜನ ಇಲ್ಲ ಎಂಬುದು ನಾನು ಕಂಡುಕೊಂಡ ಸತ್ಯ. ಅದಕ್ಕೆ ಸುಮ್ಮನಾದೆ.

ಬೇಗ ಹೊರಡು.. ರಿಕ್ಷಾ ಕರೀತೀನಿ ಎಂದೆ.

ಯಾಕ್ರೀ ರಿಕ್ಷಾ ?? ಎಡವಿ ಬಿದ್ರೆ ಜ್ಯುವೆಲ್ಲರ್ಸ್ ಬರುತ್ತೆ.. ಮಾತಾಡ್ಕೋತಾ ನಡ್ಕೊಂಡೇ ಹೋಗೋಣಾ...........

ಪರ್ವಾಗಿಲ್ವೇ....ಸರ ತುಂಬಾನೆ ಪವರ್ ಫ಼ುಲ್ ಇದೆ. ಮನೆಯ ಒಳಗೆ ರಿಕ್ಷಾ ಬರಲ್ಲ ಪುಣ್ಯಕ್ಕೆ!!! ಇಲ್ದಿದ್ರೆ ಹಾಲ್ ನಿಂದ ಅಡುಗೆ ಮನೆಗೂ ರಿಕ್ಷಾ ಕರೆಯುತ್ತಿದ್ದ ಇವಳಿಗೆ ಒಂದೂವರೆ ಕಿಲೋಮೀಟರ್ ದೂರದ ಜ್ಯುವೆಲ್ಲರಿ ಅಂಗಡಿ ಎಡವಿ ಬಿದ್ದರೆ ಸಿಗೋವಷ್ಟು ಹತ್ತಿರ ಬಂದುಬಿಟ್ಟಿದೆ...

ಸರಿ ಎಂದು ನಡೆದುಕೊಂಡೆ ಹೊರಟೆವು. ದಾರಿಯುದ್ದಕ್ಕೂ ಇವಳ ಬೋರ್ಡ್ ವಾಚನ ನಡೆದಿತ್ತು.
ಸಹಕಾರಿ  ಬ್ಯಾಂಕಿಗೆ ಸರಕಾರಿ ಬ್ಯಾಂಕ್ ಎಂದಳು
ರಮಣ್ ಎಲೆಕ್ಟ್ರಿಕಲ್ಸ್ ಗೆ ರಾವಣ್ ಎಲೆಕ್ಟ್ರಿಕಲ್ಸ್ ಎಂದು ಓದಿ ಛೀ!!!! ಎನ್ರೀ ರಾಕ್ಷಸರ ಹೆಸ್ರಿಟ್ಟಿದ್ದಾರೆ ಎಂದಳು.
ಹೇಳಿ ಪ್ರಯೋಜನವಿಲ್ಲ ಎಂದು ಹೂಂಗುಟ್ಟಿದೆನು...
ಸ್ವಲ್ಪ ಮುಂದೆ ಹೊದ ಕೂಡಲೇ ಸೆರಗಿನಿಂದ ಮೂಗು ಮುಚ್ಚಿಕೊಂಡಳು.
ಏನಾಯ್ತೇ ನಿಂಗೆ ಎಂದು ಕೇಳಿದರೆ.... ಥೂ.!!!!.. ನೋಡಿ ಅಲ್ಲಿ.. ಸಾರ್ವಜನಿಕ ಮೂತ್ರಾಲಯ.... ಗಬ್ಬು ನಾತ... ಎಂದಳು.
ನನಗೋ ಪಿತ್ತ ನೆತ್ತಿಗೇರಿತು .... ಲೇ.. ಅದು ಸಾರ್ವಜನಿಕ ಗ್ರಂಥಾಲಯ.. ನೀನು ಬಾಯ್ಮುಚ್ಕೊಂಡು ಬಾ ಎಂದೆನು.

ಹಾಗೋ ಹೀಗೊ ಜ್ಯುವೆಲ್ಲರ್ಸ್ ಸೇರಿದೆವು...
ಅವಲಕ್ಕಿ ಸರ ತೋರಿಸಪ್ಪಾ..... ಸ್ವಲ್ಪ ತೆಳು ಅವಲಕ್ಕೀದೆ ತೊರ್ಸು... ದಪ್ಪ ಅವಲಕ್ಕಿ ನನಗೆ ಆಗಲ್ಲ  ಎಂದೆನು.
ಇವಳು ಖುರ್ಚಿಯ ಅಡಿಯಿಂದ ಚಿವುಟಿದಳು.
ಆಮೇಲೇ ಒಂದೆರಡು ಗಂಟೆ  ಇವಳ ಆಯ್ಕೆ ಕಾರ್ಯ ನಡೆಯಿತು.ಅಂಗಡಿಯವನು ನನ್ನತ್ತ ಕರುಣೆಯಿಂದ ನೋಡಿದನು.
ಅಂತೂ ಇಂತೂ ಇವಳ ಕತ್ತಿಗೆ ಅವಲಕ್ಕಿ ಸರ ಬಿದ್ದಿತು ನನ್ನ ಕಿಸೆಗೆ  ಇಪ್ಪತೈದು ಸಾವಿರಕ್ಕೆ ಕತ್ತರಿ ಬಿದ್ದಿತು.
ಜ್ಯುವೆಲ್ಲರ್ಸ್ ನಿಂದ ಹೊರಗೆ ಬಂದವಳೇ " ಕಾಲು ನೋಯ್ತಾ ಇದೆ ರಿಕ್ಷಾದಲ್ಲಿ ಹೋಗೋಣ ಎಂದಳು."
ಸರದ ಅಮಲು ಇಳಿಯಿತೆಂದು ಅರಿವಾಯಿತು.

ಮನೆಗೆ ಬಂದು ಸ್ವಲ್ಪ ಹೊತ್ತಿನ ಮೇಲೆ... ಏನ್ರೀssssssssss ......ಎಂದಳು
ನೋಡು....ಇನ್ನೆರಡು ತಿಂಗಳು ಏನೂ ಕೇಳ್ಬೇಡ ಎಂದೆ.
ಅದಲ್ಲ... ಮತ್ತೇssssssssss.... ಮತ್ತೇssssssssss.... ಮೊನ್ನೆ ಬೇಜಾರಾಯ್ತೇನ್ರಿ ?? ಕ್ಷಮಿಸಿ..... ಎಂದಳು.
ಹ್ಮ್ .... ಇದಕ್ಕೇನೂ ಕಡ್ಮೆ ಇಲ್ಲಾ.... ದೊಣ್ಣೆಯಿಂದ ಹೊಡೆದು ಆಮೇಲೆ ಬೆಣ್ಣೆ ಸವರುವುದು.... ಸರಿ ಸರಿ ಬಿಡು  ಎಂದೆನು.
ಮತ್ತೇನು  ನೀವು.. ಯಾವಾಗ್ ನೋಡಿದ್ರೂ ನಮ್ಮಪ್ಪ, ನಮ್ಮಮ್ಮ ಎಲ್ರಿಗೂ ಬೈತಾ ಇರ್ತೀರಾ... ಏನು ನಮ್ಮ ಕಡೆ ಒಳ್ಳೆಯವರು ಯಾರೂ ಇಲ್ವಾ ?? ಎಂದಳು.

ತಪ್ಪಾಯ್ತು.. ಬಿಟ್ ಬಿಡೇ... ಸರಿ ತಗೊ.. ನನ್ನ ಅತ್ತೆ ಮಾವನಿಗಿಂತ ನಿನ್ನ ಅತ್ತೆ ಮಾವಾನೆ ಒಳ್ಳೆಯವರು ಸಾಕಾ ?? ಈಗಾ   ಸಂತೋಷಾನಾ ?? ಎಂದೆನು.

ಅರ್ಥ ಮಾಡಿಕೊಳ್ಳದ ಇವಳು   " ನೀವೂ ಒಮ್ಮೊಮ್ಮೆ..... ಎಂದು ನವಿರಾಗಿ ಚಿವುಟಿ  ಇರಿ ಕಾಫಿ ಮಾಡಿ ತರ್ತೀನಿ ಎಂದು ಒಳಗೆ ಹೋದಳು. ನಾನು ಮೀಸೆಯಡಿಯಲ್ಲೇ ನಕ್ಕೆನು.

==============ವಿ. ಸುಮಂತ ಶ್ಯಾನುಭಾಗ್===============================

Comments

ಬಾಲು said…
ee bhaaariya rasaayana thumbaa chennagittu. :) :) :)
Pratima Prabhu said…
Sorry to say but I do not appreciate this kind of writing where you make a joke out of a woman. I am not a feminist but given the fact that a woman faces a lot compared to a man.........I am totally against these kind of things....even if it is in lighter vein...Believe me this is one the bad effects of cinema on youth :)
Anonymous said…
Haha..wonderfully written. Nimma pratibhe estu hoGalidaru Saaladu. Pls post frequently. Don't get bogged down by comments from people who doesn't have an ear for humor and or heart for joy in life.
Anonymous said…
thumbha chennagidey..realistic..
Thanks to all of you for ur coments
Dear anonymous(s) i will be happy if add ur names at the end of ur comment so that even i will come to know who is commenting.

Thanks and regards
Sumanth
ESSKAY said…
ವಿ.ಸು.ಶ್ಯಾ ಅವರೇ,

ರಸಾಯನ ಸಿಹಿ - ಒಗರು ರುಚಿಯಿಂದ ಕೂಡಿದೆ.

ಧನ್ಯವಾದಗಳು
hahahaha had a good laugh. Great Humor.just doing some random browsing!!!
:-)
malathi S

Popular posts from this blog

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...