Skip to main content

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು .


2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!.


3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!!

4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು .

5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು .


6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು .

7) ಮಾರುಕಟ್ಟೆಯಲ್ಲಿ ಎದುರು ಸಿಕ್ಕಾಗ ನೋಡಿಯೂ ನೋಡದವನಂತೆ ಮುಖ ಹೊರಳಿಸಿ ಹೋದ ಗೆಳೆಯನು ಮನೆಗೆ ಹೋಗಿ "Hi dude !!! Whatsup ??? ಎಂದು ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿದನು .

8) " ಅಲೆಲೆ .. ಮುದ್ದುಮಲೀ ಹೊತ್ತೆ ನೋವಾ ??? " ಎಂದು ತಮ್ಮ ಪಾಪುವನ್ನು ಉಪಚರಿಸಿದ ಡಾಕ್ಟರನ್ನು ಕಂಡು ಮಗುವಿನೊಂದಿಗೆ ಮಗುವಾಗಿ ನಡೆದುಕೊಳ್ಳುತ್ತಾರೆ ಎಂದು ಸಂತೋಷಪಟ್ಟ ಹೆತ್ತವರು ಕೊನೆಗೆ ಡಾಕ್ಟರು " ನಾಲ್ಕು ಗುಲಿಗೆ ಬಲೆದು ಕೊತ್ತೀನಿ .. ಬೆಳಿಗ್ಗೆ ಮತ್ತು ಲಾತ್ಲಿ ಕೊದಿ " ಎಂದಾಗ ಕಂಗಾಲಾದರು .


9) ಆತ್ಮಹತ್ಯೆಗೆ ಪ್ರಯತ್ನಿಸಿ ಕಲಬೆರಕೆ ವಿಷದಿಂದ ಸಾಯದೆ ಹೋದ ರೈತನು ಆಸ್ಪತ್ರೆಯಲ್ಲಿ ಕೊಟ್ಟೆ ಕಲಬೆರಕೆ ಔಷಧದಿಂದ ಸತ್ತ .

10) ಸೀರೆ ತರುವುದನ್ನು ಮರೆತೆ ಎಂದು ಗಂಡ ಹೇಳಿದಾಗ " ನೀವೂ ಮನುಷ್ಯರಾ ?? ಎಂದು ಗುಡುಗಿದ ಮಡದಿ , ಗಂಡ ಅಡಗಿಸಿಟ್ಟಿದ್ದ ಸೀರೆ ಹೊರ ತೆಗೆದಾಗ "ಅಲ್ಲ ದೇವರು !!! ದೇವರು !!! " ಎಂದು ವಾಕ್ಯ ಪೂರ್ತಿ ಮಾಡಿದಳು ..

12) ಉತ್ತರ ಪತ್ರಿಕೆಯ ಮೇಲೆ ಅಧ್ಯಾಪಕರ ಕೆಂಪು ಶಾಯಿಯಲ್ಲಿ ಬರೆದದ್ದು ಏನೆಂದು ತಿಳಿಯದೆ ಅವರನ್ನೇ ಹೋಗಿ ಕೇಳಿದ ಗುಂಡನಿಗೆ ಅಧ್ಯಾಪಕರು " ಅದಾ ?? ಅದು ಕೈಬರವಣಿಗೆ ಸ್ಫುಟ ಮತ್ತು ಸುಂದರವಾಗಿರಬೇಕು ಎಂದು ಬರೆದದ್ದು " ಎಂದರು .


13) ದಿನವೂ ಒಂದು ರುಪಾಯಿ ದಾನ ಮಾಡುತ್ತಿದ ಒಬ್ಬ ಭಿಕ್ಷುಕನಿಗೆ ಒಂದು ದಿನ ಕೊಡದೆ ಹೋದಾಗ ಅವನು " ಕೊಡದೆ ಇರುವ ಪುಣ್ಯಾತ್ಮರು ಹೇಗೂ ಕೊಡುವುದಿಲ್ಲ ಇವತ್ತು ಈ ಕೊಡುವ ಬ್ಯಾವರ್ಸಿಗೆ ಏನಾಯ್ತು ??? " ಎಂದು ಗೊಣಗಿದ .

14) ನನ್ನ ಒತ್ತಾಯದ ಕಾಟಾಚಾರಕ್ಕೆ ಲೇಖನ ಓದುವ ಓದುಗರು ನಂಬರ 11 ಇಲ್ಲದೆ ಇರುವುದನ್ನು ಗಮನಿಸಲೇ ಇಲ್ಲ .

Comments

Arun vasushetty said…
Nice one dude.....
Last one is very good..............
Anonymous said…
Each one is really good!
Thilak said…
2,3,4&8 good ones :)
ಪ್ರತಿಯೊಂದೂ ವಿನೋದ ಎನಿಸಿದರೂ ಕಟು ಸತ್ಯವನ್ನು ಸೂಚಿಸುವಂತಿವೆ.. ಇಷ್ಟವಾಯಿತು.
Anonymous said…
೧೧ ನಂಬರ್ ಗಮನಿಸದ್ದಕ್ಕೆ, ಕಾಟಾಚಾರಕ್ಕೆ ಓದಿದ್ದು ಅಂತ ಯಾಕೆ ಅನ್ನಬೇಕು?

ನೀವು ಬರೆಯುವ, ಪೋಸ್ಟ್ ಮಾಡುವ ಭರದಲ್ಲಿ ೧೧ ಹಾಕುವುದು ಹೇಗೆ ಮರೆತಿರೋ, ಹಾಗೆ ೪ ಪುಟದಲ್ಲಿ ಬರೆಯಿಸುವ ಕತೆಗಳನ್ನು ಒಂದೇ ವಾಕ್ಯದಲ್ಲಿ ಓದುವ ಮಗ್ನತೆಯಲ್ಲಿ ಮರೆತೆವಷ್ಟೇ!:)
ತುಂಬಾ ಚೆನ್ನಾಗಿ ಬರೆದಿದ್ದೀರ. doctor joke very good.
Pratima Prabhu said…
Good one. I liked all the nano stories but particularly the beggar one is good.
Abhishek said…
ನಮ್ಮ್ ಕೆಲ್ಸಾ ಮಾವಿನಹಣ್ಣು ತಿನ್ನೋದು ಕಾಣಿ, ಮರಾ ಯೆಣ್ಸಿ(ನ೦. ೧೧) ಹೆ೦ತಾ ಮಾಡೋದು ಮಾರಾಯ್ರೆ ????

Popular posts from this blog

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...