Skip to main content

WELCOME TO KUNDAPUR !!!!!! - PART-II

ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ||
ಉತ್ತಿಷ್ಟ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್||

ಮನೆಗೆ ತಲುಪಿದೊಡನೆ ಅಮ್ಮ-ಅಪ್ಪನೊಂದಿಗೆ ಮೊದಲ ಸುತ್ತಿನ ಸೆಂಟಿಮೆಂಟುಗಳು ಮುಗಿದ ಮೇಲೆ ಒಮ್ಮೆ ಹೊರಬಂದು ಪ್ರಾತಃಕಾಲದ ಕುಂದಾಪುರ ದರ್ಶನ  ಮಾಡಿ ಬಂದೆನು. ಆ ದರ್ಶನದ ರನ್ನಿಂಗ್ ಕಾಮೆಂಟರಿ.........
"ಪೆಟ್ರೋಲ್ ಬಂಕ್ ನಲ್ಲಿ ಟವೆಲ್ ಉಟ್ಟು ಬಸ್ ತೊಳೆಯುತ್ತಿರುವ ಕ್ಲೀನರ್, ಅಶ್ವಥ್ಥ ಮರಕ್ಕೆ ಸುತ್ತು ಹಾಕುತ್ತಿರುವ ಜನರೇಶನ್ 3 , ನಡೆದು ಬಾರಯ್ಯಾssss ಭವಕಡಲಿಗೇsss sಪ್ರತಿದಿನ ಇದನ್ನೇ ಹಾಡುವ ಬೊಬ್ಬರ್ಯ ಕಟ್ಟೆಯ ಕ್ಯಾಸೆಟ್ಟು ,ಹತ್ತಿದ ಸೈಕಲ್ಲನ್ನು ನಿಲ್ಲಿಸದೇ.... ನೆಲಕ್ಕೆ ಕಾಲು ತಾಗಿಸದೇ ಮನೆಯ ಬಾಗಿಲ ಬುಡಕ್ಕೇ ಪೇಪರ್ ಎಸೆಯುವ ಶಾರ್ಪ್ ಶೂಟರ್ ಪೇಪರಿನವನು, ಶಾಸ್ತ್ರಿ ಪಾರ್ಕಿನಲ್ಲಿ ಮುಂಜಾನೆ ಭಟ್ಕಳ ಬೆಂಗಳೂರಿನಿಂದ ಬಂದ ಹೂವಿಗೆ ನೀರು ಚಿಮುಕಿಸುತ್ತಿರುವ ಹೂವಿನ ವ್ಯಾಪಾರಿಗಳು,ಬಿಕೋ ಎನ್ನುತ್ತಿರುವ ರೋಡು ಹಾಗೂ ಅಂಗಡಿಯಲ್ಲಿ ಕೂತಿರುವ ನನ್ನ ಡ್ಯಾಡು. ಇಷ್ಟೇ."

ಒಂದು ನಾಲ್ಕೈದು ವರ್ಷಗಳ ನಂತರ ಕುಂದಾಪುರಕ್ಕೆ ಯಾರಾದರೂ ಬಂದರೆ ಒಂದು ಬಾರಿ ತಾನು ಯಾವ ಊರಿಗೆ ಬಂದೆ ಎಂದು ಬೆಚ್ಚಿ ಬೀಳುವುದು ಸಹಜ. ಶಾಸ್ತ್ರಿ ಪಾರ್ಕಿನ ಮಧ್ಯ ಕದಲದೇ ನಿಂತಿರುವ ಶಾಸ್ತ್ರಿಗಳೊಬ್ಬರೇ ಈ ಎಲ್ಲಾ ಬದಲಾವಣೆಗಳಿಗೆ ಮೂಕ ಸಾಕ್ಷಿ. ಎಲ್ಲಿಯವರೆಗೆಂದರೆ ಶ್ರೀ ಬೊಬ್ಬರ್ಯನವರು ಕೂಡಾ ಹೊಸ RCC ಮನೆ ಕಟ್ಟಿಕೊಂಡಿದ್ದಾರೆ. ಮಳೆಗಾಲದ ಈಜುಕೊಳಗಳಾಗಿದ್ದ ರಸ್ತೆಗಳು ಈಗ ಒನ್ ವೇ ಕಾಂಕ್ರೀಟು ರಸ್ತೆಗಳಾಗಿವೆ. ಹೊಸ ರನ್ನಿಂಗ್ ಟ್ರ್ಯಾಕ್  ಮಾಡಿರುವ ಗಾಂಧೀ ಮೈದಾನಕ್ಕೆ ಏಳು ಸುತ್ತಿನ ಕೋಟೆ ರಚಿಸಿ ಗೇಟು ಮುಚ್ಚಿ ಬೀಗ ಜಡಿದಿದ್ದಾರೆ.ಹೊಸ ಶಾಪಿಂಗ್ ಕಾಂಪ್ಲೆಕ್ಸುಗಳು ಅಂಗಡಿಗಳು ಹೀಗೆ  ಬದಲಾವಣೆಗಳ ಸರಮಾಲೆ ಒಂದೇ ಎರಡೇ?? ಇನ್ನು ಬೆಳಿಗ್ಗೆ ಗಾಂಧಿ ಮೈದಾನದ ಪಕ್ಕ ನಿಂತಿರುವ ದೊಡ್ಡ ಕಾರುಗಳು ಹಾಗು ಮೈದಾನದಲ್ಲಿ ವಾಕಿಂಗ್/ಜಾಗಿಂಗ್ ಮಾಡುತ್ತಿರುವವರ ದಂಡು ಕಂಡರೆ  ಬೆಂಗಳೂರಿನ ಯಾವುದೋ ಪ್ರಮುಖ ಬಡಾವಣೆಗೆ ಬಂದಂತೆ ಅನ್ನಿಸುವುದು ಸಹಜವೆ.

ಇನ್ನು ಸುಮಾರು ಎಂಟು ಒಂಭತ್ತು ಘಂಟೆ ಆಗುತ್ತಿದ್ದಂತೆ ಬಸ್ಸುಗಳ ಭರಾಟೆ ಶುರುವಾಗುತ್ತದೆ.ದುರ್ಗಾಂಬಾ,ಅನಂತ ಪದ್ಮನಾಭ ಮೋಟಾರ್ಸ್ ,ಅಂಬಿಕ ಇವು ಪ್ರಮುಖ ಬಸ್ಸುಗಳಾದರೆ ಇಂಗ್ಲೀಷ್ ವರ್ಣಮಾಲೆಯ ಯಾವುದೇ ಮೂರು ಅಥವಾ ನಾಲ್ಕು ಅಕ್ಷರಗಳನ್ನು  ಸೇರಿಸಿ ಕೊನೆಗೆ ಒಂದು ಮೋಟಾರ್ಸ್ ಅಥವಾ ಟ್ರಾವೆಲ್ಸ ಸೇರಿಸಿದರೆ ಆ ಹೆಸರಿನ ಬಸ್ಸು ಕುಂದಾಪುರದಲ್ಲಿದೆ. ಪ್ರತೀ ಹತ್ತು ನಿಮಿಷಕ್ಕೆ ಒಂದು ಉಡುಪಿಗೆ ಹೋಗುವ ಬಸ್ಸು ಸಿಗುತ್ತದೆ. ಬಸ್ ಸ್ಟಾಪಿನಲ್ಲಿ ಬಸ್ಸು ನಿಂತಾಗ ಉಡುಪಿ ಎನ್ನುವುದು ಬೇಡ  ಎಂದು ಉಲಿದರೆ ಸಾಕು ಅಷ್ಟೆಲ್ಲಾ ಯಾಕೆ ನಾಲ್ಕು ಜನ ಗುಂಪಿನಲ್ಲಿ ಮನೆಯ ಹೊರಗೆ ನಿಂತರೆ ಸಾಕು ಕಂಡಕ್ಟರ್ ಬಂದು ಬಾಜಾ ಬಜಂತ್ರಿ ಸಮೇತ ನಿಮ್ಮನ್ನು ಕರೆದೊಯ್ಯುವಷ್ಟು ಸ್ಪರ್ಧೆ-ಪೈಪೋಟಿ ಇದೆ. ಆದರೆ ಈ ಎಲ್ಲಾ ಪೈಪೋಟಿಯ ನಡುವೆಯೂ ಎಲ್ಲ ಬಸ್ಸುಗಳು ತುಂಬಿ ಚಲಿಸುವುದೇ ಒಂದು ಸೋಜಿಗದ ಸಂಗತಿ.!!

ಉಡುಪಿ ಎಕ್ಸಪ್ರೆಸ್...ಉಡುಪಿ ಎಕ್ಸಪ್ರೆಸ್....ಉಡುಪಿ ಎಕ್ಸಪ್ರೆಸ್ ....ಬನ್ನಿ ಅಮ್ಮ ....ಸೀಟು ಖಾಲಿ ಉಂಟು ...ಉಡುಪಿ ಎಕ್ಸಪ್ರೆಸ್ ಎಂದು ಯಮನ್ ರಾಗದಲ್ಲಿ ಪ್ರೀತಿಯಿಂದ ಕರೆಯುವಾಗ ನಿಮಗೆ ಕಾಳಾವರದಲ್ಲಿ ಕೆಲಸವಿದ್ದರೂ ಒಮ್ಮೆ ಉಡುಪಿಗೆ ಹೋಗುವ ಮನಸ್ಸಾಗುತ್ತದೆ.

ಕೋಟೇಶ್ವರ ಕುಂಭಾಶಿ ಆನೆಗುಡ್ಡೆ ತೆಕ್ಕಟ್ಟೆ ಕೋಟ ಸಾಲಿಗ್ರಾಮ ಸಾಸ್ತಾನ ಮಾಬುಕಳ ಹಂಗಾರಕಟ್ಟೆ ಬ್ರಹ್ಮಾವರ ಉಡುಪಿ ಲೈನ್ ಉಡುಪಿ ಲೈನ್ ......................

ವಿನಾಯಕಾ ಎಮ್ ಕೋಡೀ....ಕೋಡೀ....ಕೋಡೀ.............

ಕೋಣೀ ಬಸ್ರೂರು ಕಂಡ್ಲೂರು ಅಂಪಾರು ಹುಣ್ಸೆಮಕ್ಕಿ ಸಿದ್ದಾಪುರ ಶಂಕರನಾರಾಯಣ...............

ಇವು ನಮ್ಮ ಕಂಡಕ್ಟರುಗಳು ಒಂದೇ ಉಸಿರಿನಲ್ಲಿ ಕೂಗುವ ಡೈಲಾಗುಗಳು.

ಸರಕಾರೀ ಕೆಂಪು ಬಸ್ಸುಗಳು ದೂರದ ಉಡುಪಿ- ಮಂಗಳೂರು-ಧರ್ಮಸ್ಥಳ-ಸುಬ್ರಹ್ಮಣ್ಯ ಬಿಟ್ಟರೆ ಬೇರೆ ಹತ್ತಿರದ ಸ್ಥಳಗಳಿಗೆ ಇಲ್ಲ. ಇರುವ ಬಸ್ಸುಗಳು ಕೂಡ ಹೆಚ್ಚು ಕಡಿಮೆ ಖಾಲಿಯೇ ಚಲಿಸುತ್ತವೆ.ಯಾಕೆಂದರೆ ಒಂದೈದು ರುಪಾಯಿ ಹೆಚ್ಚು ಕೊಟ್ಟರೆ ಭೂಮಿಯ ಮೇಲೆ ಚಲಿಸುವ ವಿಮಾನದಂತಿರುವ ಖಾಸಗೀ ಬಸ್ಸುಗಳಿರುವಾಗ ಕೆಂಪು ಬಸ್ಸಿನಲ್ಲಿ ಯಾರು ಹೋಗುತ್ತಾರೆ ನೀವೇ ಹೇಳಿ.


ಆಹಾರ ಕ್ರಮ
==========
ದೋಸೆ ಬನ್ಸು ಪೂರಿ ಉಪ್ಪಿಟವಲಕ್ಕಿ ಇಡ್ಲಿ
ಎಲ್ಲ ಎದುರಿಗಿರಲು ನಾವು ಯಾವುದನ್ನು ಬಿಡ್ಲಿ ??
ಬೇಳೆಸಾರು ಕೋಳಿಸಾರು ಬಂಗ್ಡೆ ಮೀನಿನ್ ಗಶಿ
ಬಾಳೆ ಎಲೆಯ ಮೇಲೆ ಬಡಿಸೆ ತಿನ್ನಲೆಷ್ಟು ಖುಷಿ!!

ಪಾರಿಜಾತ ಐಸುಕ್ರೀಮು ಕಾವರ್ರಾಡಿ ಚಕ್ಲಿ
ತಿನ್ನುವಂತ ಯೋಗ ನಿಮಗೆ ಒಂದು ಸಾರಿ ಸಿಕ್ಲಿ
ರಾಗಿನೀರು ಎಳ್ಳುನೀರು ಗೋಲಿಸೋಡ ಬೊಂಡ (ಎಳನೀರು)
ಇವುಗಳೆದುರು ಪೆಪ್ಸಿ ಕೋಲಾ ಸ್ಪ್ರೈಟು ಎಲ್ಲ ದಂಡ


ಕುಂದಾಪುರದ ಆಹಾರ ಪದ್ಧತಿ ರುಚಿ ಹಾಗೂ ಪೌಷ್ಠಿಕತೆಯ ಸಮಾಗಮ ಎನ್ನಬಹುದು. ಬೆಳಿಗ್ಗೆ ಪಾವು-ಶೀರಾ-ಸಮೋಸ ಎಲ್ಲ ತಿಂದು ಹೊಟ್ಟೆಗೆ ಮೋಸ ಮಾಡಿಕೊಳ್ಳುವವರಲ್ಲ. ಇಡ್ಲಿ ದೋಸೆ ಉಪ್ಪಿಟ್ಟು ಅವಲಕ್ಕಿ ಯೊಂದಿಗೆ ಒಂದು ಚಾ ಕುಡಿದರೆ ಉಪಾಹಾರದ ಚಾಕರಿ ಮುಗಿದಂತೆ. ಮತ್ತೆ ಈ ಸಮೋಸ ವಡೆ ( ನಮ್ಮ ಭಾಷೆಯಲ್ಲಿ ಬಟಾಟಾಂಬೊಡೆ ) ಎಲ್ಲ ತಿಂಡಿ ಆದ ಮೇಲೆ ಟೈಮ್ ಪಾಸ್ ಗೆ ತಿನ್ನಲಡ್ಡಿಯಿಲ್ಲ. ಮುಂಬೈ ನಲ್ಲಿ ಸಿಗುವಂತಹ ಪಾವು ಊರಿನಲ್ಲಿ ನಾನೆಲ್ಲೂ ಕಂಡಿದ್ದಿಲ್ಲ. ಬ್ರೆಡ್ ಸಿಗುತ್ತದಾದರೂ ಅದು ಜ್ವರ ಬಂದಾಗ ಮಾತ್ರ ಅಥವ ಸ್ಯಾಂಡ್ವಿಚ್ ನಂತಹ ನಾಲಿಗೆ ರುಚಿ ತಿಂಡಿಗಳಿಗಷ್ಟೇ ಮೀಸಲು.ಚಪಾತಿ ವಾರಕ್ಕೋ ಹದಿನೈದು ದಿನಕ್ಕೊ ಒಮ್ಮೆ  ಮಾಡಿದರೆ ಆ ದಿನ ಏಕಾದಶಿಯೊ ಸಂಕಷ್ಟಹರ ಚತುರ್ಥಿಯೊ ಇರಬೇಕು. ಊಟಕ್ಕೆ ಅನ್ನ-ಸಾರು-ಪಲ್ಯ ಮಜ್ಜಿಗೆ ಅಷ್ಟೆ. ಸಸ್ಯಾಹಾರಿಗಳಿಗೆ ಅದು ಬೇಳೆ/ಕಾಳಿನ ಸಾರಾದರೆ( ತೊವ್ವೆ ) ಆದರೆ ಮಾಂಸಾಹಾರಿಗಳಿಗೆ ಮೀನು/ಕೋಳಿಯ ಸಾರು. ಮೀನು ಇಲ್ಲಿನ ಆಹಾರದಲ್ಲಿ ಅವಿಭಾಜ್ಯ ಅಂಗವಾಗಿದೆ. ಮಾಂಸಾಹಾರಿಗಳು ಅದನ್ನು ಮೀನೆಂದು ತಿಂದರೆ ಸಸ್ಯಾಹಾರಿಗಳು "ಸಮುದ್ರದ ಬಾಳೇಕಾಯಿ " ಎಂದು ತಿನ್ನುತ್ತಾರೆ. ಆದ್ದರಿಂದ ಇಲ್ಲಿ ನೀವು "ಬ್ರಾಹ್ಮಣರ ಮೀನು ಊಟದ ಹೋಟೇಲ್" ಕಂಡರೆ ಅಚ್ಚರಿಯೇನಿಲ್ಲ. :):)

Comments

aavottu horatavaru kundapurakke ivattu bandrya...

nice...:)
ಬಾಲು said…
chennaagide mahaswami nimma kundaapura nagara darshana.

allina ahara paddathi baggenu chennaagi barediddiri.
ಕಾವರಾಡಿ ನನ್ನತ್ತೆ ಮನೆ :-)
ಅದು ಚಕ್ಲಿಗೆ ಫೇಮಸ್ಸಾ?

Popular posts from this blog

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ...

ನಾನು ನನ್ನ ಸಂಸಾರ

ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . " ರೀ ... ಇವತ್ತು ಉಪ್ಪಿಟ್ಟು ಮಾಡುತ್ತೇನೆ ... ಅಡುಗೆ ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . "ಏನೋ ..... ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು ... ಹೌದು ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ ನನ್ನವಳ "ಹಸ್ತಗುಣದ" ಬಲಿಪಶುವಾಗಿದ್ದ ರಮೇಶಣ್ಣ ... ಲೋ Insurance Premium ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ . ಒಹ್ ..... ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಸುಶಾಂತಿ . ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ "ಪಾರ್ವತಿಯ " ತರಹ ಇವಳು ಕೂಡ "ಮುದ್ದಿನ ಮನೆಮಗಳು ". " ಆ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...