Skip to main content

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ?
ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ

ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ
"ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು .


ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ . ರಾಮರಾಜ್ಯದಲ್ಲಿ ಇದು ನ್ಯಾಯವೇ ?? ಎಂದು ಕೇಳಿದಾಗ ರಾಮ ಹೇಳಿದ "ಎಲೈ ಸಂಜೀವಿನಿಯೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ ತಮ್ಮನ ಪ್ರಾಣ ಉಳಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ ಎಂದು ಹರಸಿದ . ಅದರ ಅವತಾರವೇ ನಮ್ಮ ಕಲಿಯುಗದ ಚಹಾ .

ಇನ್ನೂ ಸಂಶಯವೇ ??? ನೋಡಿ ಈಗಲೂ ಅಷ್ಟೇ ..... ರಾತ್ರಿಯಿಡೀ ಮೂರ್ಛೆ ತಪ್ಪಿದವರಂತೆ ನಿದ್ದೆ ಬಿದ್ದಿರುವ ನಾವು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿದು ಕ್ರಿಯಾಶೀಲರಾಗುವುದಿಲ್ಲವೇ ?? ಅದರ ಕರ್ಮಫಲ ಇನ್ನೊ ಬಿಟ್ಟಿಲ್ಲವೋ ಎಂಬಂತೆ ಚಹಾ ಮಾಡಿದ ಬಳಿಕ ಅದರ ಸೊಪ್ಪನ್ನು ಮರದ ಬೇರಿನಡಿ ಬಿಸಾಡುವುದಿಲ್ಲವೇ ?? ಅಷ್ಟೇ ಅಲ್ಲ ಸಂಜೀವಿನಿಯನ್ನು ತಂದವನು ಹನುಮಂತ ಯಾವ ಮೂಲಿಕೆ ಎಂದು ತಿಳಿಯದಿದ್ದರೂ "ದೂರ ದೃಷ್ಟಿಯಿಂದ " ಇಡೀ ಪರ್ವತ ಹೊತ್ತು ತಂದ ಹಾಗೆ ಭಾರತಕ್ಕೆ ಚಹಾ ತಂದವರು ಜೇಮ್ ಶೆಡ್ ಜೀ ಟಾಟಾ ಅವರು ಫಾರಸೀ ಆಗಿದ್ದರು. ನೋಡಿದಿರಾ ?? FAR = ದೂರ SEE = ದೃಷ್ಟಿ . ಹೀಗೆ ಇವರು ಕೂಡ ದೂರ ದೃಷ್ಟಿ ಯಿಂದಲೇ ಚಹಾವನ್ನು ಭಾರತಕ್ಕೆ ತಂದರು . ಅಲ್ಲದೆ ರಾಮನು ಕಾಡಿನಲ್ಲಿ ಈ ಸೊಪ್ಪಿಗೆ ವರದಾನ ಕೊಟ್ಟಿದ್ದರಿಂದ ಅವರು ತಂದ ಚಹಾಕ್ಕೆ "ಕಾನನ ದೇವನ ಚಹಾ " ( Kannan Devan Tea ) ಅಂದರೆ ಕಾಡಿಗೆ ಹೋಗಿ ಬಂದ ದೇವರನ್ನು ಬದುಕಿಸಿದ ಸೊಪ್ಪು ಎಂಬರ್ಥದಿಂದ ಈ ಹೆಸರು ಕೊಟ್ಟರು.

ಇದು ಚಹಾದ ಪುರಾಣವಾದರೆ ಕಾಪಿ ಇದಕ್ಕೂ ಹಳೆಯದು . ಸಮುದ್ರಮಥನ ಕಾಲದಲ್ಲಿ ಸುರಾಸುರ ಯಕ್ಷ ಗಂಧರ್ವರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿದರು. ಅದರಲ್ಲಿ ಹುಟ್ಟಿದ ಪದಾರ್ಥವನ್ನೆಲ್ಲ ಪರಸ್ಪರ ಹಂಚಿಕೊಂಡರು. ನಡುವೆ "ಕಾಲಕೂಟ" ವೆಂಬ ಖತರ್ನಾಕ್ ವಿಷ ಬರಲು ಈಶ್ವರ ಅದನ್ನು bottoms up ಮಾಡಿ ಕುಡಿದ. ನಂತರ ಪೀಯುಷ ( ಅಮೃತ ) ಹುಟ್ಟಿಕೊಂಡಿತು . ಅಸುರರಿಗೆ ಮೊಹಿನಿಯಿಂದ ಮಂಕುಬೂದಿ ಎರಚಿ ಇನ್ನೇನು ಪೀಯುಷವನ್ನು ಸ್ವರ್ಗಲೋಕಕ್ಕೆ ತೆಗೆದುಕೊಂಡು ಹೋದರು ಎನ್ನುವಷ್ಟರಲ್ಲಿ "Hello Excuse me Boss " ಎಂಬ ಸ್ವರ ಕೇಳಿಸಿತು ತಿರುಗಿ ನೋಡಿದರೆ ಮಾನವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನಾಯ್ತು ಎಂದು ಕೇಳಿದರೆ ಏನು ?? ನಮ್ಮ ಭೂಮಿಗೆ ಬಂದು , ಸಮುದ್ರ ಮಥಿಸಿ ಸಿಕ್ಕಿದ್ದನ್ನೆಲೆ ದೋಚಿ ಹೋಗ್ತಾ ಇದ್ದೀರಾ ?? ನಮ್ಮ ಭೂಮಿ ಬಳಸಿದ್ದರ ಬಾಡಿಗೆ ಯಾರು ಕೊಡ್ತಾರೆ ?? ನಮಗೂ ಅಮೃತದಲ್ಲಿ ಪಾಲು ಬೇಕು ಎಂದು ಎಲ್ಲರೂ ಜಗಳ ಶುರು ಮಾಡಿದರು . ಆಗ ದೇವರು ಓಹೋ .... ಅಮೃತ ಬೇಕಾ ?? ಕಾಲಕೂಟ ಕೂಡ ಅಲ್ಲಿಂದಾನೆ ಬಂದಿದ್ದು ಅದನ್ನೂ ನೀವು ತೆಗೆದುಕೊಳ್ಳಬೇಕು ಎಂದು ವಾದ ಮಾಡಿದರು . ಮನುಷ್ಯರು ಕಾಲಕೂಟದಿಂದ ಹೆದರಿಕೊಂಡರೂ ಪಾಲು ಸಿಗದೇ ಹೋಗಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು .

ಆಮೇಲೆ ದೇವಗುರು ಬೃಹಸ್ಪತಿ , ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮಾಸ್ಟರು ಕುಳಿತು ಒಂದು ಸಂಧಾನಕ್ಕೆ ಬಂದು " ಕಾಲಕೂಟದಿಂದ " "ಕಾ" ತೆಗೆದು "ಪೀಯೂಷದಿಂದ" "ಪೀ " ತೆಗೆದು "ಕಾಪಿ " ಮಾಡಿ ಮಾನವರಿಗೆ ಕೊಟ್ಟರು . ಈ ಸಂಧಾನದಲ್ಲಿ ಬೃಹಸ್ಪತಿಗಳು ಸ್ವಲ್ಪ ಮಾನವರ Favour ನಲ್ಲಿ ಮಾತನಾಡಿದ್ದರಿಂದ ಅವರ ಸ್ಮರಣಾರ್ಥ ಅವರ ಹೆಸರಿನ ಮೊದಲ ಮೂರು ಅಕ್ಷರ "BRU" ಎಂದು ಇದಕ್ಕೆ ನಾಮಕರಣ ಮಾಡಲಾಯಿತು . ಇದನ್ನು ಕುಡಿದು ಮನುಷ್ಯರಿಗೆ ನಶೆ ಏರಿದ್ದರಿಂದ ಅವರು ಅದನ್ನು "ನಶಾಕಾಪಿ " ಎಂದರು. ಅದೇ ಕಲಿಯುಗದ NESCAFE ಆಯಿತು.ಹೀಗೆ ಸುರ - ಅಸುರರ ಸಹಕಾರದಿಂದ ಕಾಪಿ ಭೂಮಿಗೆ ಬಂದಿದ್ದರಿಂದ ಇಂದಿಗೂ ಅದನ್ನು ಕುಡಿಯುವಾಗ ನಾವು "ಸುರ್ರ್ ರ್ರ್ ರ್ರ್ " ಎಂದು ಶಬ್ದ ಮಾಡುತ್ತಾ ಅವರನ್ನು ನೆನೆಯುತ್ತೇವೆ.

ಉಳಿದ ಪುರಾಣಗಳಲ್ಲಿ ಪೆಪ್ಸಿ ಕೋಲಾ ಗಳ ಉಲ್ಲೇಖ ಇದೆಯೋ ಎಂದು ಹುಡುಕುತ್ತಿದ್ದೇನೆ . ನಿಮಗೆಲ್ಲಾದರೂ ಏನಾದರೂ ಮಾಹಿತಿ ಸಿಕ್ಕಿದರೆ ತಿಳಿಸಿರಿ .
-------------------ಅಥ ಶ್ರೀ ತಲೆಹರಟೆ ಪುರಾಣಂ ಸಂಪೂರ್ಣಂ ----------------------

-------------------------------------------------------ವಿಕಟಕವಿ ---------------

Comments

Ashwin said…
hey good post, thanks for educating me :)
ನಿನ್ನ ಕಲ್ಪನೆಗೆ ಮಿತಿ ಅನ್ನೋದು ಇಲ್ವೇ ಇಲ್ಲಾ ಅಂತಾ ಎತ್ತಿ ಹೇಳ್ತಾ ಇದೆ ಈ ಲೇಖನ. ದಿನ-ದಿನವೂ ಲೆಕ್ಕವಿಲ್ಲದ ಮಟ್ಟಿಗೆ ಜನರ ಹೊಟ್ಟೆಯಲ್ಲಿ ಹೋಗುತ್ತಿರುವ ಈ ಚಹಾ-ಕಾಪಿ ಗಳ ಹಿಂದೆ ಇಷ್ಟೆಲ್ಲಾ ಇತಿಹಾಸ ಇದೆ ಅಂತ ತಿಳಿದುಕೊಂಡು ಜ್ಞಾನೋದಯವಾದಂತಾಯಿತು. :P

ಹೀಗೆ ಹೊಡದಾಡು.

ಹರಿ ಓಂ.
ಈಗ ತಾನೇ, ನನ್ನ ಸ್ನೇಹಿತ, ಶ್ರೀರಂಗ, ನಿಮ್ಮ ಬ್ಲಾಗ್ ತೋರಿಸಿದೆ. ನಿಮ್ಮ ಕಲ್ಪನೆ ಸೂಪರ್...ಸೂಪರ್ ಸುಪ್ರೀಂ... ನನಗೆ ಕಾಫಿ ಮತ್ತು ಚಹಾದ ಪುರಾಣ ಗೊತ್ತೇ ಇರಲಿಲ್ಲ, ಅದರಲ್ಲೂ "ಬೃಹಸ್ಪತಿಗೆ ವಿಶೇಷವಾದ ಮನ್ನಣೆ ಸಲ್ಲಲಾಗುತ್ತಿದೆ" ಎಂಬುದನ್ನು ತಿಳಿದ ಮೇಲೆ, ಕಾಪಿಯ ರುಚಿ ನೋಡಬೇಕು ಅಂತ ಇದ್ದೀನಿ.

ನನ್ನಿ,ಸುನಿಲ.
shridhar said…
Super machaaaaa!!
ವಿಕಟಕವಿಗಳೆ:
ನಿಮ್ಮ ಹಾಸ್ಯಬರಹಗಳಲ್ಲಿ ಉತ್ತಮ ಪರಿಣತಿಯಿದೆ.
ಹೆಚ್ಚು ಹೆಚ್ಚು ಬರಹಗಳನ್ನು ಬರೆಯಿರಿ ಮತ್ತು ಮುದ್ರಣ ಮಾಧ್ಯಮದಲ್ಲೂ ಪ್ರಕಟಿಸಲು ಯತ್ನಿಸಿ. (ಉದಾ: ಆಯ್ದ ಶಾಂತಿ ಸರಣಿಯ ಲೇಖನಗಳು)
ಕನ್ನಡ ಓದುಗರ ಲೋಕದಲ್ಲಿ ನಿಮ್ಮಾನ್ನು ಚಿರಪರಿಚಿತ ಹಾಸ್ಯ ಲೇಖಕರನ್ನಾಗಿಸುವ ಬಲ ನಿಮ್ಮ ಹಾಸ್ಯಕ್ಕಿದೆ.
ನಿಮ್ಮ ಈ "ಕಾಪಿ / ಚಾ ಪುರಾಣ"ಕ್ಕೆ ಸಿಕ್ಕ ಪ್ರಚಾರ ಮತ್ತು ಪ್ರೋತ್ಸಾಹದಿಂದ ನಿಮಗೆ ಈಗಾಗಲೆ ಇದು ಅರಿವಾಗಿರಬಹುದು ಅನ್ನಿಸುತ್ತೆ.
ಇತೀ, ಉಉನಾಶೆ
ವಿಕಟಕವಿಗಳೆ:
ನಿಮ್ಮ ಹಾಸ್ಯಬರಹಗಳಲ್ಲಿ ಉತ್ತಮ ಪರಿಣತಿಯಿದೆ.
ಹೆಚ್ಚು ಹೆಚ್ಚು ಬರಹಗಳನ್ನು ಬರೆಯಿರಿ ಮತ್ತು ಮುದ್ರಣ ಮಾಧ್ಯಮದಲ್ಲೂ ಪ್ರಕಟಿಸಲು ಯತ್ನಿಸಿ. (ಉದಾ: ಆಯ್ದ ಶಾಂತಿ ಸರಣಿಯ ಲೇಖನಗಳು)
ಕನ್ನಡ ಓದುಗರ ಲೋಕದಲ್ಲಿ ನಿಮ್ಮಾನ್ನು ಚಿರಪರಿಚಿತ ಹಾಸ್ಯ ಲೇಖಕರನ್ನಾಗಿಸುವ ಬಲ ನಿಮ್ಮ ಹಾಸ್ಯಕ್ಕಿದೆ.
ನಿಮ್ಮ ಈ "ಕಾಪಿ / ಚಾ ಪುರಾಣ"ಕ್ಕೆ ಸಿಕ್ಕ ಪ್ರಚಾರ ಮತ್ತು ಪ್ರೋತ್ಸಾಹದಿಂದ ನಿಮಗೆ ಈಗಾಗಲೆ ಇದು ಅರಿವಾಗಿರಬಹುದು ಅನ್ನಿಸುತ್ತೆ.
ಇತೀ, ಉಉನಾಶೆ
ಧನ್ಯವಾದಗಳು
ತಮ್ಮ ಪ್ರೋತ್ಸಾಹಕ್ಕೆ ಕೃತಜ್ಞ .
ತಮ್ಮ ಪರಿಚಯ ಸಿಕ್ಕಿಲ್ಲ . ಉ ಉ ನಾಶೆ ಏನೆಂದು ಗೊತ್ತಾಗಲಿಲ್ಲ :)

ವಂದನೆಗಳೊಂದಿಗೆ
ವಿಕಟಕವಿ
shridhar said…
ಸುಮಂತ ಅವರೆ,
ಮಿಂಚಂಚೆಯಲ್ಲಿ ಬಂದ ಪತ್ರ ಹಾಸ್ಯಮಯವಾಗಿದೆಯೆಂದು ನನ್ನ ಬ್ಲೊಗನಲ್ಲಿ ಮೂಲ ಲೇಖಕರ ಕ್ಷಮೆಯಾಚಿಸಿ
ಪ್ರಕಟಿಸಿದ್ದೆ , ತದನಂತರ ಆ ಬರಹ ತಮ್ಮದೆಂದು ತಿಳಿಯಿತು , ತಮ್ಮ ಬ್ಲೊಗ್ ವೀಕ್ಷಿಸಿದೆ,
ತುಂಬ ಹಾಸ್ಯಮಯ ಬರಹಗಳು. ತಾವು ವಿಕಟಕವಿಯೆ ಸರಿ.
ತಮ್ಮ ಅಪ್ಪಣೆಯಿಲ್ಲದೆ ಬರಹವನ್ನು ಪ್ರಕಟಿಸಿದಕ್ಕೆ ಮತ್ತೊಮ್ಮೆ ಕ್ಷಮೆಯಿರಲಿ.
ನಮ್ಮ ಬ್ಲೊಗಗೆ ಒಮ್ಮೆ ಭೇಟಿ ಕೋಡಿ.

ಶ್ರೀಧರ ಭಟ್ಟ.

Popular posts from this blog

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ...

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...

ದಿಬ್ಬಣ

ಕೇಳಿದಳು ಕನಸಿನಲಿ ಕತ್ರಿನಾ ಕೈಫು ಆಗಲೇ ಸುಮಂತಾ ನಾ ನಿನ್ನ ವೈಫು ಹೇಳಿದೆನು ನೀನೊಂದು ಕೆಲಸವನು ಮಾಡು ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು|| ಸೈಫ ಅಲಿ ಖಾನಲ್ಲಿ ಇಲ್ಲವೊ ದಮ್ಮು ನನ್ನವನಾಗೋ ಓ  ನನ್ನ ಸುಮ್ಮು!!!! ಬೇಡುತ್ತ ನಿಂತಿಹಳು ನೋಡು ಕರೀನಾ ಬಕರಾ ಆಗಲು ನಾನೇನು ಕುರಿ ನಾ ?? ಬಹುಕಾಲದಿಂದ ನಾ ಮೆಚ್ಚಿಹೆನು ನಿನ್ನ ತಪ್ಪು ಮಾಡಿದೆ ವರಿಸಿ ಸಣ್ಣ ’ಬಚ್ಚಾ’ನನ್ನ ( SMALL  ' B' ) ಓಡಿ ಬರುವೆ ನಾ ಹಿಡಿದು ನಿನ್ನ ಕೈ ತುದಿಗಾಲ ಮೇಲಿಹಳು ಐಶ್ವರ್ಯ ರೈ|| ನಮ್ಮೂರ ಗಂಡಿವನು ನನಗೆ ಪ್ರಿಫರೆನ್ಸು ಕ್ವೀನು ನಾನು ನೀನೇ ನನ್ನ ಪ್ರಿನ್ಸು ಇಲ್ಲ ಅಂದರೆ ನಿನಗೆ ನನ್ನ ಮೇಲಾಣೆ ಹಕ್ಕು ಚಲಾಯಿಸುತ್ತಿಹಳು ಪಡುಕೋಣೆ|| ಸೌತ್  ಇಂಡಿಯನ್ನರದ್ದು ಸಪರೇಟು ಸಾಲು ನಾನೇ ಬೇಕೆಂದು ಎಲ್ಲರದು ಗೋಳು ಒಲ್ಲೆನೆಂದರೆ ನಾನು  ಕುಡಿಯುವೆನು ವಿಷ ಎಂದು ಬೆದರಿಸುತ್ತಿದ್ದಾಳೆ ತ್ರಿಷಾ ಜಾನ್ ಹೈ ತು ಎನ್ನುತ್ತಾಳೆ  ಜೆನಿಲಿಯಾ ಛತ್ರ 'ಪತಿ' ಯಾಗೋ ಎಂದೆನುವ ಶ್ರೀಯಾ ನನ್ನೊಳಗೆ ನೀನು ನಿನ್ನೊಳಗೆ ನಾನು ಲಲ್ಲೆಗರೆಯುತ್ತಿರುವಳು ಆಸೀನು|| ಬಿಪಾಷಾ ಮಲ್ಲಿಕಾರನ್ನು ಮಾಡಿದೆ ಅವೈಡು ರಾಖೀ ಸಾವಂತು ಡಿಸ್ ಕ್ವಾಲಿಫೈಡು ಬೋಲ್ಡು ಮಾಡಲು ಎಸೆದಿಹಳು ಬಾಲನ್ನು ವಿದ್ಯಾ ಪ್ರಿಯಾಂಕ ಬರೆದು ಕಳಿಸಿರುವಳು ಪ್ರೇಮ ಪದ್ಯ || ಓದಿ ಕವನವ ಶಾಂತಿಗೆ ನೆತ್ತಿಗೇರಿತು ಪಿತ್ತ ಹುಡುಕಿದಳು ...